ತುಮರಿ,ಸೆ.೩೦: ಜಗದ ಕತ್ತಲನ್ನು ತೊಲಗಿಸಲು ನಾರಾಯಣ ಗುರುಗಳು ಮಾಡಿದ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಚಳವಳಿ ಇಂದು ಶೋಷಿತ ಸಮುದಾಯಕ್ಕೆ ಬೆಳಕಿನ ದಾರಿಯಾಗಿದೆ ಎಂದು ಮಾಜಿ ಸಚಿವ ದೇವರಾಜು ಅರಸು ಪ್ರಶಸ್ತಿ ಪುರಸ್ಕೃತರಾದ ಕಾಗೋಡು ತಿಮ್ಮಪ್ಪ ಅಭಿಪ್ರಾಯ ಪಟ್ಟರು.
ಶ್ರೀ ಕ್ಷೇತ್ರ ಸಿಗಂದೂರಲ್ಲಿ ಶನಿವಾರ ನಾರಾಯಣ ಗುರುಗಳ ೧೬೯ ನೇ ಜಯಂತಿ ಉದ್ಘಾಟಿಸಿದ ಬಳಿಕ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನಾರಾಯಣಗುರುಗಳ ಚಿಂತನೆಗಳು ಶೋಷಿತ ಸಮುದಾಯಕ್ಕೆ ನಕ್ಷತ್ರವಿದ್ದಂತೆ, ಆ ಕಾಲದಲ್ಲಿ ಮೇಲ್ವರ್ಗದವರ ಶೋಷಣೆಯನ್ನು ಎದುರಿಸಲು ಗುರುಗಳು ಕಂಡುಕೊಂಡ ಮಾರ್ಗ ಮಾದರಿಯಾಗಿದೆ. ಶೂದ್ರ ಶಿವನನ್ನೇ ಸೃಷ್ಟಿ ಮಾಡಿದ ಅವರು, ನಿಮ್ಮ ಶಿವನನ್ನು ನಾವು ಪೂಜಿಸುವುದಿಲ್ಲ ಎಂದು ಹೇಳುವ ಮೂಲಕ ಧಾರ್ಮಿಕ ಕ್ರಾಂತಿಯನ್ನೇ ಮಾಡಿದರು. ಅಂದು ಅವರು ಬಿತ್ತಿದ ಬೀಜ ಇಂದು ಸಮಾಜದಲ್ಲಿ ಸಾಕಷ್ಟು ಸುಧಾರಣೆ ತಂದಿದೆ ಮತ್ತು ಧ್ವನಿ ಇಲ್ಲದವರಿಗೆ ಸ್ವಾಭಿಮಾನ ನೀಡಿದೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
ಸಿಗಂದೂರು ಕ್ಷೇತ್ರದ ಬಗ್ಗೆ ಮಾತನಾಡಿದ ತಿಮ್ಮಪ್ಪ, ಸೀಗೆ ಕಣಿವೆಯಲ್ಲಿ ಶಿಲೆಯಾಗಿದ್ದ ವನದೇವತೆಯನ್ನು ನಾಡಿನ ಮನೆ ದೇವತೆಯಾಗಿ ಪ್ರಚಾರ ಪಡಿಸುವಲ್ಲಿ ಡಾ. ರಾಮಪ್ಪನವರ ಶ್ರಮ ಮತ್ತು ತಾಳ್ಮೆ, ತ್ಯಾಗ ನಮ್ಮೆಲ್ಲರಿಗೂ ಮಾದರಿಯಾಗಿದೆ. ಅಲ್ಲದೇ ಹಿಂದುಳಿದ ಸಮುದಾಯದ ಸಿಗಂದೂರು ದೇವಾಲಯವು ನಾಡಿನೆಲ್ಲೆಡೆ ಮನೆಮಾತಾಗಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.
ಧರ್ಮದರ್ಶಿ ಡಾ. ಎಸ್ ರಾಮಪ್ಪ ಮಾತನಾಡಿ, ಸಮಾಜವಾದಿ ಚಿಂತನೆಯ ಹಿಂದುಳಿದ ವರ್ಗಗಳ ಮತ್ತು ಶೋಷಿತರ ಬದುಕಿನ ಆಶಾ ಕಿರಣವಾದ ಕಾಗೋಡು ತಿಮ್ಮಪ್ಪ ರವರು ಲೋಹಿಯ ಗೋಪಾಲಗೌಡ ಮತ್ತು ದೇವರಾಜು ಅರಸುರವರ ಚಿಂತನೆಯ ಸಾಕಾರ ಮೂರ್ತಿಯಾಗಿದ್ದಾರೆ. ಊಳುವವನೆ ಹೊಲದೊಡೆಯ ಎಂಬ ಕಾನೂನು ರೂಪಿಸುವ ಮೂಲಕ ಭೂ ರಹಿತರ ಪಾಲಿನ ಅನ್ನ ದೇವರು ಎಂದರು.
ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಹಾಗೂ ಪ್ರಾಧ್ಯಾಪಕ ಡಾ. ಮೋಹನ ಚಂದ್ರಗುತ್ತಿಯವರು ಮಾತನಾಡಿ, ದೇವಾಲಯಗಳನ್ನು ಸಾಮಾಜಿಕ ಬದಲಾವಣೆಯ ಸಾಧನವನ್ನಾಗಿಸಿ ಶಿಕ್ಷಣದ ಮೂಲಕ ಯುವಕರನ್ನು ಸ್ವಾವಲಂಬಿಯಾಗಿಸಿದವರು ನಾರಾಯಣಗುರುಗಳು. ದೇವಸ್ಥಾನಗಳು ವ್ಯಾಪಾರಿ ಕೇಂದ್ರಗಳಾಗದೆ ಉದ್ಯಾನ, ವಾಚನಾಲಯಗಳನ್ನು ಒಳಗೊಂಡ ಪ್ರಾರ್ಥನ ಮಂದಿರಗಳಾಗಬೇಕೆಂಬುದು ಗುರುಗಳ ಚಿಂತನೆಯಾಗಿತ್ತು. ಶಿಕ್ಷಣವೆಂಬುವುದು ಪದವಿ ಮಾತ್ರವಾಗಿರದೆ ಬದುಕಿನ ವಿವೇಕವಾಗಿಬೇಕು ಎಂಬ ಕನಸು ಕಂಡವರು ನಾರಾಯಣಗುರುಗಳು.
ಕರೂರು ಹೋಬಳಿಯ ಮೊದಲ ಮಹಿಳಾ ಸೈನಿಕೆಯಾಗಿ ಆಯ್ಕೆಯಾದ ಭಾರತಿ ಪಡಬೀಡು ಇವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮೊದಲು ನಾರಾಯಣ ಗುರು ಜಯಂತಿ ಪ್ರಯುಕ್ತ ಸಸಿಗೊಳ್ಳಿಯಿಂದ ಬ್ಯಾಕೋಡು ಮಾರ್ಗವಾಗಿ ಸಿಗಂದೂರಿನ ವರೆಗೂ ಸುಮಾರು ೨೦ ಕಿಲೋ ಬೈಕ್ ರ್‍ಯಾಲಿ ನಡೆಸಲಾಯಿತು. ಊರಿನ ಹಿರಿಯ ಮುಖಂಡರಾದ ಹುರುಳಿ ಮಂಜಪ್ಪನವರು ಮೆರವಣಿಗೆ ರಥಕ್ಕೆ ಚಾಲನೆ ನೀಡಿದರು.
ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷರಾದ ಶ್ರೀಧರ ಹುಲ್ತಿಕೊಪ್ಪ, ತಿಮ್ಮಪ್ಪ ಕಮಗಾರು, ಸುಧಾಕರ್ ಸಸಿಗೊಳ್ಳಿ, ಕುದರೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ ಗಣಪತಿ, ಚನ್ನಗೊಂಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗರಾಜ್ ಯಮಗಳಲೆ, ದೇವರಾಜ್ ಕಪ್ಪದೂರು, ಚೌಡಮ್ಮ ದೇವಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ನಾರಾಯಣ ಗುರು ವಿಚಾರವೇದಿಕೆ, , ಕರೂರು ಹೋಬಳಿಯ ಈಡಿಗ ಸಂಘ, ಕರೂರು ಹೋಬಳಿ ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ವೇದಿಕೆಯ ಪದಾಧಿಕಾರಿಗಳು,ಸದಸ್ಯರು, ,ಕರೂರು ಸೀಮೆ ಪ್ರಮುಖರು ಭಾಗವಹಿಸಿದ್ದರು.
ನಾರಾಯಣಗುರುಗಳ ಚಿಂತನೆಗಳು ಶೋಷಿತ ಸಮುದಾಯಕ್ಕೆ ನಕ್ಷತ್ರವಿದ್ದಂತೆ, ಆ ಕಾಲದಲ್ಲಿ ಮೇಲ್ವರ್ಗದವರ ಶೋಷಣೆಯನ್ನು ಎದುರಿಸಲು ಗುರುಗಳು ಕಂಡುಕೊಂಡ ಮಾರ್ಗ ಮಾದರಿಯಾಗಿದೆ. ಶೂದ್ರ ಶಿವನನ್ನೇ ಸೃಷ್ಟಿ ಮಾಡಿದ ಅವರು, ನಿಮ್ಮ ಶಿವನನ್ನು ನಾವು ಪೂಜಿಸುವುದಿಲ್ಲ ಎಂದು ಹೇಳುವ ಮೂಲಕ ಧಾರ್ಮಿಕ ಕ್ರಾಂತಿಯನ್ನೇ ಮಾಡಿದರು.
ಕಾಗೋಡು ತಿಮ್ಮಪ್ಪ
ದೇವಾಲಯಗಳನ್ನು ಸಾಮಾಜಿಕ ಬದಲಾವಣೆಯ ಸಾಧನವನ್ನಾಗಿಸಿ ಶಿಕ್ಷಣದ ಮೂಲಕ ಯುವಕರನ್ನು ಸ್ವಾವಲಂಬಿಯಾಗಿಸಿದವರು ನಾರಾಯಣಗುರುಗಳು. ದೇವಸ್ಥಾನಗಳು ವ್ಯಾಪಾರಿ ಕೇಂದ್ರಗಳಾಗದೆ ಉದ್ಯಾನ, ವಾಚನಾಲಯಗಳನ್ನು ಒಳಗೊಂಡ ಪ್ರಾರ್ಥನ ಮಂದಿರಗಳಾಗಬೇಕೆಂಬುದು ಗುರುಗಳ ಚಿಂತನೆಯಾಗಿತ್ತು.
ಡಾ. ಮೋಹನ ಚಂದ್ರಗುತ್ತಿ