Malenadu Mitra
ರಾಜ್ಯ ಶಿವಮೊಗ್ಗ

ಗಲ್ಲಿ ಹುಡುಗರ ವೈಷಮ್ಯ ಗಲಭೆ ರೂಪ ಪಡೆಯಿತೆ ?, ರಾಗಿಗುಡ್ಡ ಕಲ್ಲುತೂರಾಟ, ಪ್ರಕ್ಷುಬ್ಧತೆ ಹಿಂದಿನ ಅಸಲಿಯತ್ತೇನು ಗೊತ್ತೇ ?

ಶಿವಮೊಗ್ಗ,ಅ.೪: ಈದ್ ಮಿಲಾದ್ ಮೆರವಣಿಗೆ ವೇಳೆ ರಾಗಿಗುಡ್ಡದಲ್ಲಿನ ಕಲ್ಲುತೂರಾಟ ಮತ್ತು ಆ ಬಳಿಕ ನಡೆದ ಕೋಮುದ್ವೇಷದ ಹಲ್ಲೆಯನ್ನು ರಾಷ್ಟ್ರೀಯ ವಿಷಯದಂತೆ ಬಿಂಬಿಸುತ್ತಿರುವ ಮಾಧ್ಯಮ ಮತ್ತು ರಾಜಕೀಯ ಪಕ್ಷಗಳು ಶಿವಮೊಗ್ಗದ ಹೆಸರಿಗೇ ಕಳಂಕ ತರುತ್ತಿವೆ. ಆದರೆ ರಾಗಿಗುಡ್ಡದ ಗಲ್ಲಿಹುಡುಗರ ನಡುವೆ ಇದ್ದ ವೈಷಮ್ಯವೇ ಗಲಭೆ ರೂಪ ಪಡೆಯಿತೇ ಎಂಬ ಅನುಮಾನ ಈಗ ದಟ್ಟವಾಗುತ್ತಿದೆ.

ರಾಗಿಗುಡ್ಡ ಮತ್ತು ಶಾಂತಿನಗರ ಏರಿಯಾದಲ್ಲಿ ಹಿಂದೂ ಹಾಗೂ ಮುಸ್ಲಿಂರ ಜನಸಂಖ್ಯೆ ಹೆಚ್ಚುಕಮ್ಮಿ ಸರಿಸಮ ಇದೆ. ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶ ಕೋಮು ಸೂಕ್ಷ್ಮ ಎಂಬುದು ಪೊಲೀಸರ ನಜರಿನಲ್ಲಿಯೂ ಇದೆ. ಕ್ರಿಕೆಟ್ ಆಟ, ಕುಡಿಯುವ ನೀರು ದೇವರ ಉತ್ಸವ ಸಂದರ್ಭಗಳಲ್ಲಿ ಆಗಿರುವ ಸಣ್ಣಪುಟ್ಟ ಘಟನೆಗಳು ಇದನ್ನು ಪುಷ್ಟೀಕರಿಸುತ್ತವೆ.
ಈ ಬಾರಿಯ ಗಣಪತಿ ಹಬ್ಬದ ಸಂದರ್ಭ ಇಡೀ ಏರಿಯಾವನ್ನು ಕೇಸರಿಮಯ ಮಾಡಲಾಗಿತ್ತು. ಅಂತೆಯೇ ಈದ್ ಮೆರವಣಿಗೆ ಸಂದರ್ಭದಲ್ಲಿ ಇಡೀ ಏರಿಯಾವನ್ನು ಹಸಿರು ಮಯಮಾಡಲಾಗಿತ್ತು. ಇದೇ ಏರಿಯಾದ ಪ್ರವೇಶ ದ್ವಾರದಲ್ಲಿ ಔರಂಗಜೇಬ್ ವ್ಯಕ್ತಿಯೊಬ್ಬನನ್ನು ಕೊಲ್ಲುವ ಚಿತ್ರ ಇರುವ ಕಟೌಟ್‌ಗಾಗಿ ಅ.೧ ರಂದು ಬೆಳಗ್ಗೆಯೇ ವಾಗ್ವಾದ ನಡೆದಿತ್ತು. ಪೋಲಿಸರ ಮಧ್ಯಪ್ರವೇಶದಿಂದಾಗಿ ಕಟೌಟ್‌ಗೆ ಬಿಳಿ ಬಣ್ಣ ಬಳಿಯಲಾಗಿತ್ತು.

ಸ್ಥಳೀಯವಾಗಿ ಎರಡೂ ಧರ್ಮಗಳ ನಡುವೆ ಒಂದಲ್ಲ ಒಂದು ವಿಚಾರವಾಗಿ ವೈಷಮ್ಯಗಳು ಇದ್ದವು. ಈ ವೈಷಮ್ಯವೇ ಈದ್ ಮೆರವಣಿಗೆ ವೇಳೆ ಕಲ್ಲುತೂರಾಟಕ್ಕೆ ಕಾರಣವಾಗಿದೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳುತ್ತಾರೆ.
ಈ ನಡುವೆ ಶಾಂತಿ ಸೌಹಾರ್ದಕ್ಕೆ ಹೆಸರಾಗಿರುವ ಕುವೆಂಪು ನಾಡಿನಲ್ಲಿ ಕೋಮುದ್ವೇಷದ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಪೊಲೀಸರ ತನಿಖೆಯ ನಡುವೆಯೇ ಭಾರತೀಯ ಜನತಾ ಪಕ್ಷದ ನಾಯಕರು ಬೆಂಕಿಯುಗುಳುತ್ತಿರುವುದು. ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ನೋಡಿದರೆ ಶಿವಮೊಗ್ಗದ ಘಟನೆಯನ್ನು ಇಲ್ಲಿಗೇ ಬಿಡುವ ಲಕ್ಷಣಗಳು ಕಾಣುತಿಲ್ಲ. ಈ ನಡುವೆ ಬಿಜೆಪಿಯ ಸತ್ಯಶೋಧನಾ ತಂಡ ಭೇಟಿ ನೀಡುತಿದ್ದು, ಪ್ರಕರಣದ ಕಾವನ್ನು ತಟಸ್ಥವಾಗಿಡಲು ಮುಂದಾಗಿದೆ.

ಶಿವಮೊಗ್ಗ ನಗರದಲ್ಲಿ ಧಗಧಗ ಅಥವಾ ಕೊತಕೊತ ಎಂಬಂತಹ ಸನ್ನಿವೇಶ ಇಲ್ಲ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್ ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಆದರೆ ರಾಜಧಾನಿಯಲ್ಲಿ ಕುಳಿತ ಹಲವರು ಕಲ್ಲುತೂರಾಟವನ್ನು ರಾಷ್ಟ್ರೀಯ ವಿದ್ಯಾಮಾನ ಎಂಬಂತೆ ಬಿಂಬಿಸುತ್ತಿದ್ದಾರೆ.

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ೩೫ ವಾರ್ಡುಗಳಿದ್ದು, ಒಂದು ವಾರ್ಡಿನ ಎರಡು ಕ್ರಾಸ್‌ಗಳಲ್ಲಿ ಮಾತ್ರ ಗಲಾಟೆ ನಡೆದದ್ದು, ಬಳಿಕ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಸಂಜೆ ಗಲಾಟೆ ನಡೆದಿದ್ದರೂ ತಡ ರಾತ್ರಿವರೆಗೆ ಈದ್ ಮೆರವಣಿಗೆ ಶಾಂತಿಯುತವಾಗಿ ನಡೆದಿದೆ. ಈ ಬೆಳವಣಿಗೆಯನ್ನು ನೋಡಿದರೆ ಇದೊಂದು ಕೆಲವೇ ಕಿಡಿಗೇಡಿಗಳ ನಡುವಿನ ಈರ್ಷೆ ಎಂದೇ ಹೇಳಬಹುದು.


ಪ್ರತೀಕಾರದ ಸನ್ನಿವೇಶ ನಿರ್ಮಾಣವಾಗಿದ್ದು ಹೇಗೆ


ಹಿಂದೂ ಮಹಾಸಭಾ ಸಮಿತಿಯವರು ನಗರದಲ್ಲಿ ಅಲಂಕಾರ ಮಾಡಿದ್ದು, ಇಡೀ ನಗರವನ್ನು ಬಂಟಿಂಗ್ಸ್ ಮತ್ತು ಕಟೌಟ್‌ಗಳಿಂದ ಕೇಸರಿಮಯ ಮಾಡಲಾಗಿತ್ತು. ಮಾತ್ರವಲ್ಲದೆ, ಜ್ಞಾನವ್ಯಾಪಿ ಶಿವನ ಮಹಾದ್ವಾರ, ಬಿಲ್ಲುಧಾರಿ ಶ್ರೀರಾಮಚಂದ್ರರ ಮಹಾದ್ವಾರ, ಸಾವರ್ಕರ್ ಸಾಮ್ರಾಜ್ಯ ಎಂಬ ಮಹಾದ್ವಾರಗಳನ್ನು ನಿರ್ಮಾಣ ಮಾಡಲಾಗಿತ್ತು. ಉಗ್ರನರಸಿಂಹ ಹಿರಣ್ಯಕಶ್ಯಪುವಿನ ಹತ್ಯೆ ಮಾಡುವ ಸ್ತಬ್ದಚಿತ್ರವನ್ನು ನಿರ್ಮಾಣ ಮಾಡಲಾಗಿತ್ತು. ಪುರಾಣದ ಒಂದು ದೃಶ್ಯಾಂತವನ್ನು ಬಿಂಬಿಸುವಾಗ ಹಿರಣ್ಯಕಶ್ಯಪು ಕಟೌಟ್‌ನಲ್ಲಿ ಹಸಿರು ಬಟ್ಟೆ ತೊಡಿಸಿದ್ದಲ್ಲದೆ ಗಡ್ಡವನ್ನು ಚಿತ್ರಿಸಲಾಗಿತ್ತು. ಗಣಪತಿ ಮೆರವಣಿಗೆಗೆ ಶ್ರೀರಾಮ, ಉಗ್ರನರಸಿಂಹರು ಯಾಕೆ ಬಂದರು ಎಂಬ ಬಗ್ಗೆ ಎದ್ದಿದ್ದ ಪ್ರಶ್ನೆ ಹಾಗೆಯೇ ತಣ್ಣಗಾಗಿತ್ತು.

ಹಿಂದೂ ಮಹಾಸಭಾದ ಈ ಅಲಂಕಾರಕ್ಕೆ ಪ್ರತಿಕಾರ ಎಂಬಂತೆ ಪ್ರವಾದಿ ಮಹಮದ್ ಅವರ ಜಯಂತಿ ಆಚರಣೆಯನ್ನು ಸಂಭ್ರಮಿಸುವ ಮುಸ್ಲಿಮರು ಮೊಘಲ್‌ದೊರೆ ಔರಂಗಜೇಬ್, ಟಿಪ್ಪು ಸುಲ್ತಾನ್ ಪ್ರತಿಕೃತಿಗಳನ್ನು ರಚಿಸಿದ್ದರು. ಔರಂಗಜೇಬ್ ಪ್ರತಿಕೃತಿಯಲ್ಲಿ ವ್ಯಕ್ತಿಯೊಬ್ಬನನ್ನು ಇರಿದು ಕೊಲ್ಲುವ ರಕ್ತಸಿಕ್ತ ಕಟೌಟ್ ನಿರ್ಮಾಣ ಮಾಡಿದ್ದು, ಹಿಂಸೆಯನ್ನು ಪ್ರಚೋದಿಸಿದ್ದು ಸುಳ್ಳಲ್ಲ. ಇಷ್ಟು ಮಾತ್ರವಲ್ಲದೆ ವೃತ್ತದಲ್ಲಿ ಖಡ್ಗದ ಪ್ರತಿಕೃತಿಯನ್ನು ಮಾಡಲಾಗಿತ್ತು. ಸಾಲದೆಂಬಂತೆ ಮೆರವಣಿಗೆಯಲ್ಲಿ ತಲವಾರ್ ಮಾದರಿಯ ಕೃತಕ ಅಸ್ತ್ರಗಳನ್ನು ಕಿಡಿಗೇಡಿಗಳು ಪ್ರದರ್ಶನ ಮಾಡಿದ್ದರು. ಹಲವು ಕಡೆ ಟಿಪ್ಪುಸುಲ್ತಾನ್ ಸಾಮ್ರಾಜ್ಯ ಮಹಾದ್ವಾರಗಳನ್ನು ನಿರ್ಮಾಣ ಮಾಡಲಾಗಿತ್ತು.


ಈ ರೀತಿಯ ಪ್ರತಿಕಾರದ ಸನ್ನಿವೇಶಗಳೂ ಗಲಭೆಗೆ ಪ್ರೇರಣೆ ನೀಡಿದ್ದವು. ಇದರಿಂದ ಶಿವಮೊಗ್ಗ ಎಂದರೆ ಕೋಮುಗಲಭೆಗೆ ಕುಖ್ಯಾತಿ ಎಂಬಂತಾಗಿದೆ. ಇದನ್ನೇ ಬಳಸಿಕೊಂಡು ಟಿವಿ ಪ್ಯಾನಲ್ ಚರ್ಚೆಯಲ್ಲಿ ಅನಗತ್ಯವಾಗಿ ಹಲವು ಮಂದಿ ಗಂಟಲು ಹರಿದುಕೊಂಡು ಇಷ್ಟಬಂದಂತೆ ವಿಚಾರ ಲಹರಿಯನ್ನು ಹರಿದು ಬಿಟ್ಟಿದ್ದಾರೆ.


ಪೋಲೀಸರಿಗೆ ಮಾಹಿತಿಯಿದೆ:


ಶಿವಮೊಗ್ಗ ಗಲಭೆ ಹೇಗಾಯಿತು, ಯಾರು ಕಲ್ಲು ಹೊಡೆದರು ಅದಕ್ಕೆ ಯಾರು ಪ್ರತಿಕ್ರಿಯೆ ಕೊಟ್ಟರು ಯಾವ ಕೋಮಿನ ಎಷ್ಟು ಮನೆಗಳಿಗೆ ಹಾನಿಯಾಗಿದೆ. ನಿರ್ದಿಷ್ಟ ಕೋಮಿನ ಎಲ್ಲಾ ಮನೆಗಳಿಗೂ ಕಲ್ಲುಹೊಡೆಯದೆ ಆಯ್ದ ಮನೆಗಳಿಗೆ ಮಾತ್ರ ಕಲ್ಲು ತೂರಲಾಗಿದೆ ಎಂಬ ಮಾಹಿತಿ ಪೊಲೀಸರಲ್ಲಿದೆ. ಕಲ್ಲು ಹೊಡೆದವರಲ್ಲಿ ಕ್ರಿಶ್ಚಿಯನ್ ಸೇರಿದಂತೆ ಮೂರೂ ಧರ್ಮದ ಯುವಕರು ಬಂಧನಕ್ಕೊಳಗಾಗಿದ್ದಾರೆ. ಇಡೀ ಮೆರವಣಿಗೆಯನ್ನು ಪೊಲೀಸರು ಚಿತ್ರೀಕರಿಸಿದ್ದು, ಎಲ್ಲರ ಆಟಾಟೋಪಗಳು ಪೊಲೀಸರ ಕ್ಯಾಮೆರಾ ಕಣ್ಣಿಗೆ ಸಿಕ್ಕಿವೆ. ಇದರ ಆಧಾರದ ಮೇಲೆಯೇ ಹಲವರನ್ನು ವಶಕ್ಕೆ ಪಡೆಯಲಾಗಿದೆ. ರಾಗಿಗುಡ್ಡದ ಗಲ್ಲಿಹುಡುಗರ ವೈಷಮ್ಯ ಮತ್ತು ಧರ್ಮಾಂಧ ಮನಸ್ಥಿತಿಯಿಂದ ರಾಜಕೀಯ ನಾಯಕರುಗಳ ಮತಶಿಕಾರಿಗೆ ಶಿವಮೊಗ್ಗದ ಹೆಸರು ಬಲಿಯಾಗಬೇಕಾಗಿದೆ.

Ad Widget

Related posts

ನಾವು ಬದುಕಿದ್ದೇವೆ ಅಂದವರ ಬಳಿ ಸ್ಫೋಟದ ಸತ್ಯವಿದೆ

Malenadu Mirror Desk

ಶಿವಮೊಗ್ಗದಲ್ಲಿ ಗಲಾಟೆ ಮಾಡ್ಸೋದೆ ಈಶ್ವರಪ್ಪ: ಸಿದ್ದರಾಮಯ್ಯ ಆರೋಪ

Malenadu Mirror Desk

ಪುನೀತ ದರ್ಶನಕ್ಕೆ ಜನಸಾಗರ, ಮಲೆನಾಡಿನೊಂದಿಗೆ ಮಧುರ ಬಾಂಧವ್ಯ ಹೊಂದಿದ್ದ ಅಪ್ಪು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.