ಶಿವಮೊಗ್ಗ,ಅ.೧೨: ರಾಗಿಗುಡ್ಡ ಗಲಭೆಯಲ್ಲಿ ಭಾಗಿಯಾದವರ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಸರ್ಕಾರ ಎನ್ ಐ ಎ ತನಿಖೆಗೆ ವಹಿಸಬೇಕು ಎಂದು ಸಂಸದ ಬಿ.ವೈ ರಾಘವೇಂದ್ರ ಒತ್ತಾಯಿಸಿದರು.
ನಗರದಲ್ಲಿ ಜಿಲ್ಲಾ ಬಿಜೆಪಿವತಿಯಿಂದ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸರ್ಕಾರದ ಹಿಂದೂ ಧೋರಣೆಯನ್ನು ಖಂಡಿಸಿ ಬೃಹತ್ ಪ್ರತಿಟಭನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ಮದ ಏರಿದೆ. ರಾಗಿಗುಡ್ಡದಲ್ಲಿ ನಡೆದ ಗಲಭೆ ಸಣ್ಣದಿದ್ದರೂ ಇದರ ಹಿಂದೆ ದುರಾಲೋಚನೆ ಇದೆ. ಲೋಕಸಭಾ ಚುನಾವಣೆ ನಂತರ ಸರ್ಕಾರ ಬದಲಾವಣೆ ಆಗಲಿದೆ.ಬಿಜೆಪಿ ಪಕ್ಷ ಮುಸ್ಲಿಂ ವಿರೋಧಿ ಅಲ್ಲ. ನಮಗೆ ಹಿಂದೂ ಮುಸ್ಲಿಂ ಒಂದೇ. ಕೆಲವು ಕಾಂಗ್ರೆಸ್ ಪುಢಾರಿಗಳು ಕಾನೂನು ಸುವ್ಯವಸ್ಥೆ ಕಾಪಾಡಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಅಮಾನತು ಮಾಡಲು ಶಿಫಾರಸು ಮಾಡಿರುವುದು ಸರಿಯಲ್ಲ ಎಂದು ಹೇಳಿದರು.
ಶಾಸಕ ಎಸ್.ಎನ್ ಚನ್ನಬಸಪ್ಪ ಮಾತನಾಡಿ, ಮುಸಲ್ಮಾನ ತುಷ್ಟೀಕರಣ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ. ಆತಂಕವಾದಿಗಳಿಂದ ಶಿವಮೊಗ್ಗದ ಮೇಲೆ ದಾಳಿ ನಡೆಯುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರವಿದ್ದಾಗ ಎನ್ ಐ ಎ ತನಿಖೆ ಮೂಲಕ ಆತಂಕವಾದಿಗಳ ಸದೆಬಡಿಯುವ ಕೆಲಸವನ್ನು ಮಾಡಲಾಗಿತ್ತು. ಮುಸಲ್ಮಾನರ ಮಾನಸಿಕತೆ ಅರ್ಥ ಮಾಡಿಕೊಳ್ಳಬೇಕು. ರಾಗಿಗುಡ್ಡ ಗಲಭೆಯಲ್ಲಿ ನಿಷೇಧಿತ ಪಿಎಫ್ ಐ ಸಂಘಟನೆಯ ಕಾರ್ಯಕರ್ತರ ಕೈವಾಡವಿದೆ ಎಂದು ದೂರಿದರು.
ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಅಶಾಂತಿ ಸೃಷ್ಟಿ ಮಾಡುವವರ ವಿರುದ್ದ ಸಮಯ ಸಂದರ್ಭ ಬಂದಾಗ ಪೊಲೀಸರು ಕಾನೂನಿನ ಪ್ರಕಾರ ಲಾಠಿ, ಕೋವಿಯ ರುಚಿ ತೋರಿಸಬೇಕು. ದೂರು ಪ್ರತಿದೂರು ದಾಖಲಿಸಲು ಜಿಲ್ಲಾಧಿಕಾರಿಗಳು, ಎಸ್ಪಿಗಳು ಬೇಕಾ. ಒಳ್ಳೆಯವರಾದರೆ ಸಾಲದು. ದಕ್ಷತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಕಾಂಗ್ರೆಸ್ ನಾಯಕರನ್ನು ಗಡಿಪಾರು ಮಾಡಬೇಕು
ಶಾಸಕ ಬಿ.ವೈ ವಿಜಯೇಂದ್ರ ಮಾತನಾಡಿ,ರಾಗಿಗುಡ್ಡದ ಘಟನೆಯನ್ನು ರಾಜ್ಯದ ಜನ ಗಮನಿಸಿದ್ದಾರೆ.ರಾಜ್ಯದಲ್ಲಿರುವ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ತುಷ್ಟೀಕರಿಸುತ್ತಿದೆ.ರಾಜ್ಯ ಸರ್ಕಾರವನ್ನು ಎಚ್ಚರಿಸುವ ಕೆಲಸ ಆಗಬೇಕಿದೆ ಎಂದರು.
ಜವಾಬ್ದಾರಿಯುತ ಸ್ಥಾನದಲ್ಲಿರುವ ಮಂತ್ರಿಗಳು ಹಗುರವಾದ ಹೇಳಿಕೆ ನೀಡಿದ್ದಾರೆ.ಕಾಂಗ್ರೆಸ್ ಪಕ್ಷದ ನಡವಳಿಕೆ ಇಂದು ನಿನ್ನೆಯದು ಅಲ್ಲ ಇದು. ದೇಶದ್ರೋಹಿ ಚಟುವಟಿಕೆಗಳನ್ನು ನಡೆಸುತ್ತಿರುವವರನ್ನು ಗಡಿಪಾರು ಮಾಡಿದರೆ ಸಾಲದು ಅವರ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್ ನಾಯಕರನ್ನು ಗಡಿಪಾರು ಮಾಡಬೇಕು.ಆಗ್ರಹಿಸಿದರು.
ನಾವು ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಶಿವಮೊಗ್ಗ ಶಾಂತಿಯುತವಾಗಿದೆ ಎಂದರೆ ಅದು ಹಿಂದೂಗಳ ದೌರ್ಬಲ್ಯ ಅಂದುಕೊಳ್ಳಬಾರದು.ಕಾಂಗ್ರೆಸ್ ಪಕ್ಷದವರು ತಮ್ಮ ನಡವಳಿಕೆ ಬದಲಾವಣೆ ಮಾಡಿಕೊಳ್ಳದಿದ್ದರೆ ಹಿಂದೂಗಳು ಬಡಿಗೆ ಹಿದಿದುಕೊಂಡು ಹೊಡೆಯುತ್ತಾರೆ ಎಂದರು.
ವೇದಿಕೆಯಲ್ಲಿ ಶಾಸಕರಾದ ಭಾರತಿ ಶೆಟ್ಟಿ,ಡಿ.ಎಸ್ ಅರುಣ್,ವಿಭಾಗದ ಪ್ರಭಾರಿ ಗಿರೀಶ್ ಪಟೇಲ್, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ ಸಿದ್ದರಾಮಣ್ಣ, ಜಿಲ್ಲಾ ಪ್ರಬಾರಿ ಮೋನಪ್ಪ ಭಂಡಾರಿ,ಪ್ರಮುಖರಾದ ಎಸ್.ಎಸ್ ಜ್ಯೋತಿ ಪ್ರಕಾಶ್, ಎಸ್ ದತ್ತಾತ್ರಿ, ಸತೀಶ್ ಬೇಗುವಳ್ಳಿ, ಬಿ.ಕೆ ಶ್ರೀನಾಥ್ ಮೊದಲಾದವರಿದ್ದರು.
ಹಿಂದೂಗಳ ಜೀವನಕ್ಕೆ ಆಡಚಣೆ ಉಂಟಾದರೆ ಅವರ ರಕ್ಷಣೆಗೆ ಬಿಜೆಪಿ ಸದಾ ಸಿದ್ದವಾಗಿದೆ. ರಾಗಿಗುಡ್ಡದ ಗಲಭೆಯ ಉದ್ದೇಶ ಏನು, ಗಲಭೆಯ ಹಿಂದಿನ ಶಕ್ತಿ ಯಾವುದು.ಜಿಲ್ಲೆಯ ಜನರಿಗೆ ಗೊತ್ತಾಗಬೇಕು. ಕೃತಕ ಕಥೆಗಳನ್ನು ಹೆಣೆದು ಹಿಂದೂಗಳ ಮೇಲೆ ಆಗಾಗ ಹಲ್ಲೆಗಳು ನಡೆಯುತ್ತಿವೆ.
ಟಿ.ಡಿ ಮೇಘರಾಜ್, ಜಿಲ್ಲಾಧ್ಯಕ್ಷರು, ಬಿಜೆಪಿ
ಮತ್ತೊಮ್ಮೆ ರಾಘಣ್ಣ ಸಂಸದರಾಗುತ್ತಾರೆ. ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆ. ಹಿಂದೂ ಸಮಾಜ ರಕ್ಷಣೆ ಮಾಡುವ ಸರ್ಕಾರ ಬರುತ್ತದೆ. ಪ್ರತಿಬೂತ್ ನಲ್ಲಿ ಪ್ರಧಾನಿ ನೆನಪು ಮಾಡಬೇಕು. ರಾಘವೇಂದ್ರ ಎಂಪಿ ಆಗುವ ಮುಂಚೆ ಶಿವಮೊಗ್ಗ ಹೇಗಿತ್ತು, ಈಗ ಹೇಗಿದೆ ಎಂಬುದನ್ನು ನೋಡಿ. ನಮ್ಮ ಜಿಲ್ಲೆ ಅಭಿವೃದ್ಧಿ ಹೇಗಾಗಿದೆ ಎಂದು ಅವರ ಪಕ್ಷದವರೇ ಹೇಳುತ್ತಾರೆ. ಅಖಂಡ ಭಾರತ ಜೊತೆಗೆ ಕೇಸರಿ ಭಾರತ ಮಾಡೋಣ.
-ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ