Malenadu Mitra
ರಾಜ್ಯ ಶಿವಮೊಗ್ಗ

ಮಲೆನಾಡಿನಲ್ಲಿ ಸಂಭ್ರಮದ ಭೂಮಿಹುಣ್ಣಿಮೆ ಹಬ್ಬ, ಭೂತಾಯಿಯ ಬಯಕೆ ತೀರಿಸಿದ ಕೃಷಿಕರು. ಗದ್ದೆ ತೋಟದಲ್ಲಿ ಪೂಜೆ

ಭೂ ತಾಯಿಯ ಬಯಕೆ ತೀರಿಸುವ ಹಬ್ಬ ಭೂಮಿ ಹುಣ್ಣಿಮೆಯನ್ನು ಶನಿವಾರ ಮಲೆನಾಡಿನ ರೈತರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಹೊಲದಲ್ಲಿ ಬೆಳೆದು ನಿಂತ ಫಸಲಿಗೆ ಪೂಜೆ ಸಲ್ಲಿಸಿ, ಉತ್ತಮ ಬೆಳೆಗಾಗಿ ಪ್ರಾರ್ಥಿಸಿದರು.
ತುಂಬು ಗರ್ಭಿಣಿಗೆ ಸೀಮಂತ ಶಾಸ್ತ್ರ ಮಾಡುವಂತೆ ಭೂಮಿ ತಾಯಿಗೆ ಪೂಜೆ ಸಲ್ಲಿಸಲಾಗುತ್ತದೆ. ವಿಶೇಷ ಖಾದ್ಯಗಳನ್ನು ತಯಾರಿಸಿ, ಭೂಮಣ್ಣಿ ಬುಟ್ಟಿಗಳಲ್ಲಿ ಕೊಂಡೊಯ್ದು ಎಡೆ ಇಡಲಾಗುತ್ತದೆ. ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ಹಬ್ಬದ ಅಡುಗೆಯನ್ನು (ಚರಗ) ಎಲ್ಲೆಡೆ ಬೀರಲಾಗುತ್ತದೆ. ಮನೆಯವರೆಲ್ಲ ಹೊಲದಲ್ಲೇ ಕುಳಿತು ಊಟ ಮಾಡಿ ಮನೆಗೆ ಮರಳುತ್ತಾರೆ. ಅನ್ನದಾತರು ಶ್ರದ್ಧಾ ಭಕ್ತಿಯಿಂದ ಈ ಪೂಜೆ ಸಲ್ಲಿಸುತ್ತಾರೆ. ಭೂಮಿ ತಾಯಿಗೆ ವಿಶೇಷ ಗೌರವ ಸಲ್ಲಿಸುವ ಆಚರಣೆ ಇದಾಗಿದೆ.

ಭೂಮಿ ಹುಣ್ಣಿಮೆಯಲ್ಲಿ ಭೂಮಣ್ಣಿ ಬುಟ್ಟಿಗೆ ವಿಶೇಷ ಸ್ಥಾನ. ಬುಟ್ಟಿಗೆ ಸಗಣಿ, ಕೆಮ್ಮಣ್ಣು ಹಚ್ಚಲಾಗುತ್ತದೆ. ಅದರ ಮೇಲೆ ಅಕ್ಕಿ ಹಿಟ್ಟಿನಲ್ಲಿ ಹಸೆ ಚಿತ್ತಾರಗಳನ್ನು ಬಿಡಿಸಲಾಗುತ್ತದೆ. ಒಂದು ದೊಡ್ಡ ಬುಟ್ಟಿ, ಮತ್ತೊಂದು ಚಿಕ್ಕ ಬುಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಎರಡು ಬುಟ್ಟಿಗಳಿಗೆ ಮಹಿಳೆಯರು ಅಲಂಕಾರ ಮಾಡುತ್ತಾರೆ. ದಸರಾ ಹಬ್ಬ ಮುಗಿಯುತ್ತಿದ್ದಂತೆ ಭೂಮಣ್ಣಿ ಬುಟ್ಟಿ ಸಿದ್ಧತಾ ಕಾರ್ಯ ಶುರುವಾಗಲಿದೆ.


ಇಡೀ ರಾತ್ರಿ ಅಡುಗೆ ಸಂಭ್ರಮ:


ಭೂಮಿ ಹುಣ್ಣಿಮೆ ಪೂಜೆ ಹಿನ್ನೆಲೆ ಮಹಿಳೆಯರು ರಾತ್ರಿ ಪೂರ್ತಿ ಅಡುಗೆ ಮಾಡುತ್ತಾರೆ. ಹಲವು ಬಗೆಯ ಖಾದ್ಯಗಳನ್ನು ತಯಾರಿಸುತ್ತಾರೆ. ಹಲವು ತರಕಾರಿಗಳು, ಸೊಪ್ಪುಗಳನ್ನು ಹಾಕಿ ಬೇಯಿಸಿ ಹಚ್ಚಂಬಲಿ ತಯಾರಿ ಮಾಡುತ್ತಾರೆ. ಹಚ್ಚಂಬಲಿಯನ್ನು ಬುಟ್ಟಿಯಲ್ಲಿ ಇರಿಸಿಕೊಂಡು, ಪೂಜೆಯಾದ ಬಳಿಕ ಗದ್ದೆಯ ತುಂಬೆಲ್ಲ ಬೀರಲಾಗುತ್ತದೆ. ‘ಹಚ್ಚಂಬಲಿ.. ಹಾಲಂಬಲಿ.. ಗುಡ್ಡದ ಮೇಲಿನ ನೂರೊಂದು ಕುಡಿ ಭೂ ತಾಯಿ ಬಂದು ಉಂಡೋಗಲಿ’ ಎಂದು ಹಾಡುತ್ತ ಹಚ್ಚಂಬಲಿಯನ್ನು ಬೀರಲಾಯಿತು.
ಪೂಜೆ ಹೇಗೆ
ಬೆಳೆದು ನಿಂತ ಫಸಲಿಗೆ ಒಂದು ಕಡೆಯಲ್ಲಿ ಪುಟ್ಟ ಮಂಟಪ ನಿರ್ಮಿಸಿ, ಹೂವು ಕಟ್ಟಿ, ಬಾಳೆಗೊನೆಯನ್ನು ನಿಲ್ಲಿಸಿ ಪೂಜೆ ಸಲ್ಲಿಸಲಾಗುತ್ತದೆ. ಈ ವೇಳೆ ಫಸಲಿಗೆ ಮಂಗಳಸೂತ್ರ ಕಟ್ಟಲಾಗುತ್ತದೆ. ಕೆಲವು ಕಡೆ ಮಹಿಳೆಯರು ತಮ್ಮದೇ ತಾಳಿಯನ್ನು ತೆಗೆದು ಭೂಮಿ ತಾಯಿಗೆ ಕಟ್ಟುತ್ತಾರೆ. ಉಳಿದ ಕಡೆಯಲ್ಲಿ ದೇವರ ಮನೆಯಲ್ಲಿರಿಸಿದ ತಾಳಿಯನ್ನು ಫಸಲಿಗೆ ಕಟ್ಟಲಾಗುತ್ತದೆ.
ಭೂಮಿ ಹುಣ್ಣಿಮೆಯಂದು ರೈತರು ಕಾಗೆಗಳನ್ನು ಹಿರಿಯರೆಂದು ಭಾವಿಸುವ ರೈತರು ಭೂಮಿ ಹುಣ್ಣಿಮೆಯ ದಿನದಂದು ಹಿರಿಯರನ್ನು ಸ್ಮರಿಸಿ ಕಾಗೆಗೆ ಎಡೆ ಅರ್ಪಿಸುತ್ತಾರೆ, ಕಾಗೆಗಳು ಎಡೆ ಮುಟ್ಟಿದರೆ ಪ್ರಾತಃಸ್ಮರಣೀಯರು ತೃಪ್ತರಾದರೆಂಬುದು ಅವರ ನಂಬಿಕೆ.

ಒಗ್ಗೂಡಿ ಊಟ ಮಾಡುತ್ತಾರೆ:
ಭೂಮಿ ಹುಣ್ಣೆಮೆಯನ್ನು ರೈತ ಕುಟುಂಬಗಳು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ದೂರದೂರುಗಳಲ್ಲಿ ಇರುವ ಕುಟುಂಬದ ಸದಸ್ಯರು ಪೂಜೆಗಾಗಿ ಊರಿಗೆ ಮರಳುತ್ತಾರೆ. ಎಲ್ಲರೂ ಒಗ್ಗೂಡಿ ಹೊಲಗಳಿಗೆ ತೆರಳಿ ಪೂಜೆ ಸಲ್ಲಿಸಿ, ಒಟ್ಟಿ ಕುಳಿತು ಹೊಲದಲ್ಲಿ ಊಟ ಮಾಡುತ್ತಾರೆ. ಉತ್ತಮ ಬೆಳೆ ನೀಡುವಂತೆ ಎಲ್ಲರೂ ಭೂಮಿ ತಾಯಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.
ಕೃಷಿ ಚಟುವಟಿಕೆ ಮತ್ತು ನಿಸರ್ಗಕ್ಕೆ ಪೂಜನೀಯ ಸ್ಥಾನ ನೀಡಿ, ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಆಧುನಿಕತೆಯ ಅಬ್ಬರದ ನಡುವೆಯು, ಭೂಮಿ ಪೂಜೆ ಸಂಪ್ರದಾಯ ಮುಂದುವರೆಯುತ್ತಿದೆ. ಹೆಚ್ಚು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ.

Ad Widget

Related posts

ತೀರ್ಥಹಳ್ಳಿಗೆ ‘ಕೈ’ ಕಲಿ ಯಾರಾಗುವರು ?, ಜ್ಞಾನೇಂದ್ರಣ್ಣ ಯಾರನ್ನೂ ಬೆಳಸ್ಲೇ ಇಲ್ಲಂತೆ ಹೌದನ್ರೀ…

Malenadu Mirror Desk

ಅರಣ್ಯ ರಕ್ಷಕರ ಸೇವೆ ಅನನ್ಯ, ವನ್ಯಸಂಪತ್ತು ರಕ್ಷಿಸುವವರಿಗೂ ಸೂಕ್ತ ಗೌರವ ಸಿಗಬೇಕು, ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ನ್ಯಾಯಾಧೀಶರಾದ ಮಂಜುನಾಥನಾಯಕ್ ಅಭಿಮತ

Malenadu Mirror Desk

ಗೆದ್ದವರ ಅಬ್ಬರ ಹಾರ ತುರಾಯಿ ಸಂಭ್ರಮ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.