ಶಿವಮೊಗ್ಗ: ಅವೈಜ್ಞಾನಿಕವಾಗಿರುವ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು ಎಂದು ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಶಾಸಕ ಕೆ.ಬಿ. ಅಶೋಕ್ ನಾಯ್ಕ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಾಶಿವ ಆಯೋಗ ಒಂದು ಮುಗಿದ ಕತೆ. ಅದು ಈಗಾಗಲೇ ಕೇಂದ್ರದಿಂದಲೂ ತಿರಸ್ಕರಿಸಲ್ಪಟ್ಟಿದೆ. ಇಂತಹ ವರದಿಯನ್ನು ರಾಜ್ಯ ಸರ್ಕಾರ ಮತ್ತೆ ಜಾರಿಗೆ ತರಲು ಹೊರಟಿರುವುದು ಸರಿಯಲ್ಲ. ಈಗಾಗಲೇ ಈ ವರದಿ ಸೋರಿಕೆ ಕೂಡ ಆಗಿದೆ. ಅಪ್ರಸ್ತುತವಾಗಿರುವ ಅಂಕಿ ಅಂಶಗಳಿಂದ ಕೂಡಿರುವ ಈ ವರದಿಯನ್ನು ಸಚಿವ ಸಂಪುಟ ಉಪ ಸಮಿತಿ ತಿರಸ್ಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿತ್ತು ಎಂದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದನ್ನು ವಿರೋಧಿಸುತ್ತಲೇ ಬಂದಿತ್ತು. ಈಗ ಏಕಾಏಕಿ ಜಾರಿ ಮಾಡಲು ಹೊರಟಿದೆ. ಸಂವಿಧಾನದಲ್ಲಿ ಒಳ ಮೀಸಲಾತಿಗೆ ಎಲ್ಲಿಯೂ ಅವಕಾಶವಿಲ್ಲ. ಸುಪ್ರೀಂ ಕೋರ್ಟ್ ಕೂಡ ಇದನ್ನು ಒಪ್ಪುವುದಿಲ್ಲ. ಆದರೂ ಈ ವರದಿಯನ್ನು ಜಾರಿಗೆ ತರುವ ಜರೂರತ್ತು ಕೂಡ ಇಲ್ಲ ಎಂದರು.
ಸಚಿವ ಕೆ.ಹೆಚ್. ಮುನಿಯಪ್ಪ ಅವರು ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ತಮ್ಮ ಸ್ವಜಾತಿಯವರನ್ನು ಎತ್ತಿ ಕಟ್ಟಿ ಪ್ರತಿಭಟನೆ ಮಾಡಿಸುತ್ತಿದ್ದಾರೆ. ಸಂವಿಧಾನಬದ್ಧವಾಗಿ ಪ್ರಮಾಣವಚನ ಸ್ವೀಕರಿಸಿದ ಅವರು ಒಂದು ಜಾತಿಯವರ ಪರ ನಿಂತಿರುವುದು ಸರಿಯಲ್ಲ. ಕೂಡಲೇ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಸದಾಶಿವ ಆಯೋಗ ಪರಿಶಿಷ್ಟರಲ್ಲಿನ ತಳ ಸಮುದಾಯಗಳ ಒಗ್ಗಟ್ಟನ್ನು ಛಿದ್ರಗೊಳಿಸುವ ಮತ್ತು ಒಡೆದು ಹಾಳು ಮಾಡುವ ರಾಜಕೀಯ ಹುನ್ನಾರವಾಗಿದೆ. ಈಗಾಗಲೇ ತಿರಸ್ಕಾರಗೊಂಡಿರುವ ಈ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು. ಇದರಿಂದ ಭೋವಿ, ಲಂಬಾಣಿ, ಕೊರಮ, ಕೊರಚ ಸೇರಿದಂತೆ ಅನೇಕ ಜಾತಿಯವರಿಗೆ ನ್ಯಾಯ ಸಿಗುವುದಿಲ್ಲ. ಒಂದು ಪಕ್ಷ ಈ ವರದಿ ಜಾರಿ ಮಾಡಲು ಹೊರಟರೆ ಇದನ್ನು ಖಂಡಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟವನ್ನು ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಗದೀಶ್ ನಾಯ್ಕ್, ನಾನ್ಯಾ ನಾಯ್ಕ್, ಶಿವಾನಂದ ನಾಯ್ಕ, ವಾಸುದೇವ ನಾಯ್ಕ, ನಾಗರಾಜ್ ನಾಯ್ಕ ಮುಂತಾದವರಿದ್ದರು.