ಶಿವಮೊಗ್ಗ: ಹಿಜಾಬ್ ನಿಷೇಧ ವಾಪಾಸ್ ಪಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆಕ್ರೋಶ ಹೊರಹಾಕಿದ್ದಾರೆ.
ಈ ಹಿಂದೆ ಮೊಹಮ್ಮದ್ ತುಘಲಕ್ ನನ್ನು ಹುಚ್ಚು ದೊರೆ ಅಂತಾ ಕರೆಲಾಗುತ್ತಿತ್ತು.ಅದೇ ರೀತಿ ಸಿದ್ದರಾಮಯ್ಯ ಹುಚ್ಚು ದೊರೆ ಆಗುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಹಿಜಾಬ್ ವಿಚಾರ ಕೋರ್ಟ್ ನಲ್ಲಿದೆ.ನಾವೇನು ಮಾಡುವುದಕ್ಕೆ ಆಗಲ್ಲ ಎಂದು ಶಿಕ್ಷಣ ಸಚಿವರು ಹೇಳಿಕೆ ನೀಡುತ್ತಿದ್ದಾರೆ.ಆದರೆ ಸಿದ್ದರಾಮಯ್ಯ ಮುಸ್ಲಿಂ ರ ಒಲೈಕೆ ಮಾಡಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವುದು ಬೇಡ್ವಾ.ಕರ್ನಾಟಕದಲ್ಲಿ ಹಿಂದೂ ಮುಸ್ಲಿಂ ಬಡಿದಾಡುತ್ತಲೇ ಇರಲಿ ಎಂಬುದು ಸಿದ್ದರಾಮಯ್ಯ ಅವರ ಆಸೆ.ಒಂದು ಕಡೆ ಮುಸ್ಲಿಂರನ್ನು ಎತ್ತಿಕಟ್ಟಿ ಕುತಂತ್ರದ ರಾಜಕೀಯ ಮಾಡುತ್ತಿದ್ದಾರೆ ಎಂದರು.
ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಒಂದು ಸೀಟನ್ನು ಕಾಂಗ್ರೆಸ್ ಪಡೆದುಕೊಂಡಿತು.ಈ ಬಾರಿ ಎಲ್ಲ ೨೮ ಸೀಟುಗಳನ್ನು ಕಳೆದುಕೊಳ್ಳುತ್ತಾರೆ ಎಂಬ ಭಯ ಅವರಿಗೆ ಹುಟ್ಟಿದೆ.ಹಾಗಾಗಿ ಈ ರೀತಿಯ ಹೇಳಿಕೆಯನ್ನು ಸಿದ್ದರಾಮಯ್ಯನವರು ಕೊಡುತ್ತಿದ್ದಾರೆ ಎಂದರು.
ಊಟಕ್ಕೂ ಸಮವಸ್ತ್ರಕ್ಕೂ ಏನು ಸಂಬಂಧ.ರಾಜ್ಯದಲ್ಲಿ ದಂಗೆಯಾಗಿ ಯಾರದ್ರೂ ಸತ್ತರೆ ನೇರವಾಗಿ ಸಿಎಂ ಸಿದ್ದರಾಮಯ್ಯನವರೇ ನೇರವಾಗಿ ಕಾರಣ ಎಂದರು.
ತೆಲಂಗಾಣ ವಿಧಾನ ಸಭಾ ಚುನಾವಣೆ ವೇಳೆ ಜಮೀರ್ ಅಹಮ್ಮದ್ ಅವರು ಸ್ಪೀಕರ್ ಗೆ ಎಲ್ಲರೂ ತಲೆಬಾಗು ಬೇಕು ಅಂತಾರೆ.ರಾಜ್ಯದಲ್ಲಿ ಹಿಂದು ಮುಸ್ಲಿಂರು ಗೊಂದಲಕ್ಕೆ ಬೀಳಬೇಕು. ಮುಸ್ಲಿಂ ಓಟು ಕಾಂಗ್ರೆಸ್ ಗೆ ಬೀಳಬೇಕು ಎಂಬ ಒಂದೇ ಉದ್ದೇಶ ಅವರದ್ದು ಎಂದರು.
ರಾಜ್ಯದಲ್ಲಿ ಶಾಲೆಯಲ್ಲಿ ಸಮವಸ್ತ್ರ ಇದೆ.ಕಾನೂನು ಸಚಿವರು ಈಗಲಾದರೂ ನಾನು ಇದ್ದೀನಿ ಅಂತಾ ತೋರಿಸಬೇಕು.ಕಾನೂನು ಸಚಿವ ಕಾನೂನು ಓದಿದ್ದರೆ ಇದನ್ನು ಸಿದ್ದರಾಮಯ್ಯ ಅವರಿಗೆ ತಿಳಿಸಬೇಕು.ಹಿಜಾಬ್ ಆದೇಶ ಜಾರಿಗೆ ತರಲು ಅವಕಾಶ ಕೊಡಬಾರದು.ಇದು ಒಂದು ವೇಳೆ ಜಾರಿಯಾದರೆ ಕಾನೊನು ಸಚಿವರಾಗಿ ಮುಂದುವರಿಯಬಾರದು.ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು.ಬಿಜೆಪಿ ಪಕ್ಷದ ವತಿಯಿಂದ ಕಾನೂನು ಹೋರಾಟ ಮಾಡ್ತೀವಿ.ಯಾವುದೇ ಕಾರಣಕ್ಕು ಕಾನೂನು ಹೋರಾಟ ಬಿಡುವುದಿಲ್ಲ ಎಂದರು.
ದಲಿತ ವ್ಯಕ್ತಿಯನ್ನು ಪ್ರಧಾನಿಯನ್ನಾಗಿ ಮಾಡುವುದಾಗಿ ಇಂಡಿಯಾ ಮೈತ್ರಿ ಕೂಟದ ಪ್ರಮುಖರು ಹೇಳಿದ್ದಾರೆ.ಅದರೆ, ಕರ್ನಾಟಕದಲ್ಲಿ ೧೩೫ ಸ್ಥಾನ ಗಳಿಸಿದ್ದರೂ ದಲಿತ ವ್ಯಕ್ತಿಯನ್ನು ಸಿಎಂ ಮಾಡಲಿಲ್ಲ.ಈಗ ದಲಿತರನ್ನು ಪ್ರಧಾನಿ ಮಾಡುವ ಮಾತನಾಡುತ್ತಿದ್ದಾರೆ. ಕೇವಲ ಮಮತಾ ಬ್ಯಾನರ್ಜಿ ಮತ್ತು ಅರವಿಂದ ಕ್ರೇಜಿವಾಲ್ ಈ ಬಗ್ಗೆ ಮಾತನಾಡುತ್ತಿದ್ದಾರೆ ಕಾಂಗ್ರೆಸ್ ನ ಪ್ರಮುಖರೇ ಈ ಬಗ್ಗೆ ಮಾತನಾಡದೆ ಮೌನವಾಗಿದ್ದಾರೆ.ಇದನ್ನು ಮಲ್ಲಿಕಾರ್ಜುನ ಖರ್ಗೆ ಗಮನಿಸಿದ್ದಾರೆ.ಮೊದಲು ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳು ಗೆಲ್ಲಬೇಕು. ನಂತರ ನೋಡೋಣ ಎಂದು ಹೇಳಿದ್ದಾರೆ.ಇಂಡಿಯಾ ಮೈತ್ರಿಕೂಟ ಹೆಚ್ಚಿನ ಸ್ಥಾನ ಗೆಲ್ಲುವುದಿಲ್ಲ ಎಂದು ಅವರಿಗೂ ಗೊತ್ತಿದೆ ಎಂದರು.
ಇನ್ನು ಜಾತಿ ಜನಗಣತಿ ವರದಿಯನ್ನು ಬಿಡುಗಡೆ ಮಾಡುವುದಾಗಿ ಕಾಂಗ್ರೆಸ್ ನವರು ಹೇಳುತ್ತಿದ್ದಾರೆ.ಹಿಂದೆ ನೀವೇ ಅಧಿಕಾರದಲ್ಲಿ ಇದ್ದಾಗ ಏಕೆ ವರದಿ ಜಾರಿಗೆ ತರಲಿಲ್ಲ.ಈಗ ಮತ್ತೆ ಅದೇ ವಿಷಯ ಪ್ರಸ್ತಾಪ ಮಾಡುತ್ತಿದ್ದಾರೆ. ಈ ಮೂಲಕ ಹಿಂದುಳಿದ ವರ್ಗಗಳಿಗೂ ಅನ್ಯಾಯ ಮಾಡುತ್ತಿದ್ದಾರೆ.ದಲಿತರು, ಹಿಂದುಳಿದ ವರ್ಗದವರು ಕಾಂಗ್ರೆಸ್ ಕೈ ಬಿಟ್ಟಿದ್ದಾರೆ. ಇದೀಗ ಉಳಿದಿರುವುದು ಅಲ್ಪಸಂಖ್ಯಾತರು ಮಾತ್ರ .ಮುಂದೆ ಅವರೂ ಕೈ ಬಿಡಲಿದ್ದಾರೆ ಎಂದರು.
ಸಿಬಿಐ ಇರುವುದರಿಂದ ಕಳ್ಳರ ಗ್ಯಾಂಗ್ ಗೆ ಹೆದರಿಕೆ ಶುರುವಾಗಿದೆ.ಹಾಗಾಗಿ ಬಹುತೇಕ ರಾಜ್ಯಗಳು ಸಿಬಿಐ ತನಿಖೆ ಅಧಿಕಾರವನ್ನು ಹಿಂತೆಗೆದುಕೊಳ್ಳುತ್ತಿವೆ.ಸಿದ್ದರಾಮಯ್ಯ ಧರ್ಮಕ್ಕೆ ಮೋಸ ಮಾಡಬಹುದು. ಆದರೆ ದೇವರಿಗೆ ಮೋಸ ಮಾಡಲಾಗದು ಎಂದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಜೆಡಿಎಸ್ ಜೊತೆ ಮೈತ್ರಿ ವಿಷಯದಲ್ಲಿ ತೀರ್ಮಾನ ತೆಗೆದುಕೊಂಡಿರುವುದು ಸಂತಸದ ವಿಷಯ.ಕುಮಾರಸ್ವಾಮಿ ಮತ್ತು ವಿಜಯೇಂದ್ರ ಅವರು ಒಂದೇ ದಿನ ಪ್ರಧಾನಿಯನ್ನು ಭೇಟಿ ಮಾಡಿ ಒಂದೇ ರೀತಿಯ ಹೇಳಿಕೆ ನೀಡಿದ್ದಾರೆ.ಮೈತ್ರಿ ಮೂಲಕ ರಾಜ್ಯದ ಎಲ್ಲಾ ೨೮ ಸ್ಥಾನ ಗೆಲ್ಲುವುದಾಗಿ ತಿಳಿಸಿದ್ದಾರೆ. ಪಕ್ಷದ ಎಲ್ಲಾ ಹಿರಿಯರನ್ನು ಒಟ್ಟಾಗಿ ತೆಗೆದುಕೊಂಡು ಚುನಾವಣೆ ಎದುರಿಸುವುದಾಗಿ ಹೇಳಿದ್ದಾರೆ. ನಿಖಿಲ್ ಕುಮಾರಸ್ವಾಮಿ ನಾನು ಚುನಾವಣೆಗೆ ನಿಲ್ಲದೆ ಮೈತ್ರಿ ಕೂಟದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ್ದಾರೆ.ಇದು ಒಳ್ಳೆಯ ಬೆಳವಣಿಗೆ
ಕೆ.ಎಸ್ ಈಶ್ವರಪ್ಪ,ಮಾಜಿ ಸಚಿವ
ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯರಿಗೆ ವೋಟ್ ಕೊಟ್ಟವರು ಪಶ್ಚಾತಾಪ ಪಡೋದು ಜಾಸ್ತಿ ಇದೆ
ಶಿವಮೊಗ್ಗ :ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯರಿಗೆ ವೋಟ್ ಕೊಟ್ಟವರು ಪಶ್ಚಾತಾಪ ಪಡೋದು ಜಾಸ್ತಿ ಇದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಹಿಜಾಬ್ ನಿಷೇಧ ವಾಪಸ್ ಕುರಿತು ಸಿಎಂ ಹೇಳಿಕೆ ವಿಚಾರವಾಗಿ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಅವರು,ಹಿಜಾಬ್ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ಗಮನಿಸಿದ್ದೇನೆ..ಕಳೆದ ಸರ್ಕಾರದಲ್ಲಿಯೂ ಹಿಜಾಬ್ ಬಗ್ಗೆ ಯಾರ ವಿರೋಧ ಇರಲಿಲ್ಲ ಎಂದರು.
ಶಾಲಾ- ಕಾಲೇಜುಗಳಲ್ಲಿ ನಿರ್ದಿಷ್ಟವಾಗಿ ಯೂನಿಫಾರಂ ಹಾಕಿ ಬರಬೇಕು ಎಂಬ ನಿಯಮವಿದೆ.ಅಲ್ಲಿ ನಾನು ದೊಡ್ಡವರು, ಸಣ್ಣವರು, ಜಾತಿ, ಧರ್ಮ ಬರಬಾರದು.ಮಕ್ಕಳ ಮನಸ್ಸಿನಲ್ಲಿ ಒಗ್ಗಟ್ಟು ಬರಬೇಕು ಎಂದು ಮಾಡಲಾಗಿದೆ.ಬಹಳ ವರ್ಷಗಳ ಹಿಂದೆ ಇವರ ಸರ್ಕಾರವೇ ಮಾಡಿತ್ತು.ಕಾಲೇಜಿನ ಹೊರಗೆ ಹಿಜಾಬ್ ಹಾಕಬಹುದು.ಆದರೇ, ತರಗತಿಯಲ್ಲಿ ಯೂನಿಫಾರಂ ಇರಬೇಕು ಎಂಬ ನಿಯಮವಿದೆ.ಕೋರ್ಟ್ ಕೂಡ ಸರ್ಕಾರದ ನಿರ್ಧಾರ ಬೆಂಬಲಸಿದೆ ಎಂದರು.
ಮೈಸೂರಿನ ಸಭೆಯಲ್ಲಿ ಸಿಎಂ ಎಲ್ಲವನ್ನು ತೆಗೆದು ಹಾಕಿದ್ದೇವೆ ಎಂದಿದ್ದಾರೆ.ಹೀಗಾದ್ರೇ ನಾಳೆಯಿಂದ ಯೂನಿಫಾರಂ ಏನಾಗುತ್ತೇ.ಯಾರು ಬೇಕಾದ್ರೂ ಯಾವ ಡ್ರೆಸ್ ಅಲ್ಲಿ ಬೇಕಾದ್ರೂ ಬರಬಹುದಾ.ಒಂದೊಂದು ಧರ್ಮದವರು ಒಂದೊಂದು ರೀತಿ ಬರಬಹುದಾ ಎಂದು ಪ್ರಶ್ನಿಸಿದರು.
ಇತ್ತೀಚಿಗೆ ಸಿಎಂ ವಿಚಿತ್ರ ಹೇಳಿಕೆ ಕೊಡುತ್ತಿದ್ದಾರೆ.ಮೌಲ್ವಿಗಳ ಸಭೆಯಲ್ಲಿ ಉದ್ವೇಗಕ್ಕೆ ಒಳಗಾಗಿ ೧೦ ಸಾವಿರ ಕೋಟಿ ಕೋಡ್ತೇನೆ ಎಂದಿದ್ದರು.ರಾಜ್ಯದ ಸಂಪತ್ತಿನಲ್ಲಿ ಪಾಲನ್ನು ಕೊಡುವ ಬದ್ದತೆಯಿದೆ ಎಂದಿದ್ರು.ಇದೇ ಮಾತನ್ನು ಬರಪೀಡಿತ ರೈತರ ಬಳಿ ಹೋಗಿ ಹೇಳಲಿಲ್ಲ.ಆ ವರ್ಗಕ್ಕೆ ಹೇಳಲು ದುಡ್ಡಿಲ್ಲ. ಆದರೇ, ವೋಟ್ ಬ್ಯಾಂಕ್ ಗೆ ಹೇಳಲು ಹಣವಿದೆ. ಇವೆಲ್ಲಾ ಸಿದ್ದರಾಮಯ್ಯರಿಂದ ನಿರೀಕ್ಷಿತವಾದದ್ದೇ ಎಂದರು.
ನಾಳೆಯಿಂದ ಕೇಸರಿ ಹಾಕಿ ಬಂದ್ರೇ ಕೇಸ್ ಹಾಕಿಸ್ತಾರೆ.ಈ ರೀತಿಯ ಮಾನಸಿಕತೆ ಸಿದ್ದರಾಮಯ್ಯರಿಗೆ ಮೂಲಭೂತವಾಗಿಯೇ ಇದೆ.ಅದು ಈಗ ಪ್ರಕಟವಾಗುತ್ತಿದೆ. ೧೩೬ ಸೀಟ್ ಗೆಲ್ಲಿಸಿರೋದು ಅಲ್ಪಸಂಖ್ಯಾತರು ಎಂಬ ಮನಸ್ಥಿತಿಯಿದೆ.ಮುಂದೆ ಆಗೋದನ್ನು ನಾವೇಲ್ಲರೂ ಅನುಭವಿಸಬೇಕು.ವೋಟ್ ಕೊಟ್ಟವರು ಪಶ್ಚಾತಾಪ ಪಡೋದು ಜಾಸ್ತಿ ಇದೆ ಎಂದರು.