ಶಿವಮೊಗ್ಗ: ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಜ.೧೦ ರಿಂದ ಮತ್ತು ಬಲದಂಡೆ ನಾಲೆ ಜ.೨೦ ರಿಂದ ನೀರು ಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ತಿಳಿಸಿದರು.
ಶನಿವಾರ ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಅಭಿವೃದ್ದಿ ಪ್ರಾಧಿಕಾರ ಕಚೇರಿಯಲ್ಲಿ ನಡೆದ ೨೦೨೩-೨೪ ನೇ ಸಾಲಿನ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಧಿಕಾರಿಗಳು ಮತ್ತು ರೈತ ಮುಖಂಡರೊಂದಿಗೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಎಡದಂಡೆ ನಾಲೆಗೆ ಜ.೧೦ ಮತ್ತು ಬಲದಂಡೆ ನಾಲೆಗೆ ಜ.೨೦ ರಿಂದ ನೀರು ಹರಿಸಲಾಗುತ್ತಿದ್ದು ಆನ್ ಮತ್ತು ಆಫ್ ಮಾದರಿ ಅನುಸರಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಸಾಕಷ್ಟು ಪ್ರಮಾಣದ ಮಳೆಯಾಗದ ಕಾರಣ ಭದ್ರಾ ಜಲಾಶಯದಲ್ಲಿ ನೀರಿನ ಕೊರತೆಯಾಗಿದೆ. ಜಲಾಶಯದ ಗರಿಷ್ಟ ನೀರಿನ ಸಂಗ್ರಹಣಾ ಮಟ್ಟ ೧೮೬ ಅಡಿ, ಪ್ರಸ್ತುತ ೩೫.೩೭೦ ಅಡಿ ಸಂಗ್ರಹವಿದೆ. ಪ್ರಸ್ತತ ಜಲಾಶಯದಲ್ಲಿ ನೀರಾವರಿ ಬಳಕೆಗೆ ಬರುವ ೧೨.೫೦ ಟಿಎಂಸಿ ಪ್ರಮಾಣದ ನೀರನ್ನು ಬಲದಂಡೆ ನಾಲೆಗೆ ೨೬೫೦ ಕ್ಯೂಸೆಕ್ಸ್ ಮತ್ತು ಎಡದಂಡೆ ನಾಲೆಗೆ ೩೮೦ ಕ್ಯೂಸೆಕ್ಸ್ ಮತ್ತು ಗೊಂದಿ ನಾಲೆ ಸೇರಿದಂತೆ ಪ್ರತಿದಿನ ೦.೨೭ ಟಿಎಂಸಿ ನೀರು ಹರಿಸಿದಲ್ಲಿ ಒಟ್ಟು ೪೭ ದಿನಗಳಿಗೆ ನೀರು ಹರಿಸಬಹುದಾಗಿದೆ ಎಂದರು.
ಪ್ರಸ್ತುತ ಚಳಿ ಇದ್ದು ವಾತಾವರಣ ತಂಪಿದೆ. ಮಾರ್ಚ್ ನಂತರ ಬೇಸಿಗೆ ಹೆಚ್ಚಲಿದ್ದು, ಕುಡಿಯುವ ನೀರು ಮತ್ತು ತೋಟಗಾರಿಕೆ ಬೆಳೆ ಉಳಿಸಿಕೊಳ್ಳಲು ಕಷ್ಟವಾಗಬಹುದು. ಆದ್ದರಿಂದ ಕಟ್ಟಕಡೆಯ ಅಚ್ಚುಕಟ್ಟುದಾರರ ಅನುಕೂಲವನ್ನೂ ಪರಿಗಣಿಸಿ ಈಗ ಸ್ವಲ್ಪ ತಡವಾಗಿ ನೀರು ಹರಿಸುವ ಬಗ್ಗೆ ಅಧಿಕಾರಿಗಳು, ರೈತರು ತಮ್ಮ ಸಲಹೆ-ಸೂಚನೆಗಳನ್ನು ನೀಡಬೇಕು. ಹಾಗೂ ನೀರಿನ ಅಭಾವವಿರುವ ಕಾರಣ ಪ್ರಸ್ತುತ ರೈತರು ಭತ್ತ ಬೆಳೆಯದಿದ್ದರೆ ಒಳಿತು ಎಂದರು.
ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಮಾತನಾಡಿ, ಮುಂಬರುವ ಮಾನ್ಸೂನ್ ಮಳೆಗಾಲ ಸ್ವಲ್ಪ ವಿಳಂಬವಾದರೂ ಅಲ್ಲಿಯವರೆಗೆ ನೀರು ನೀಡಲು ಅನುಕೂಲವಾಗುವಂತೆ ನೀರು ವಿತರಣೆಯ ಯೋಜನೆ ಹಾಕಿಕೊಳ್ಳಬೇಕು. ಬೇಸಿಗೆಗೆ ನೀರು ಪೂರೈಕೆಯಾಗುವಂತೆ ನಿರ್ವಹಣೆ ಮಾಡುವ ಅಗತ್ಯವಿದೆ ಎಂದರು.
ದಾವಣಗೆರೆ ಜಿಲ್ಲಾಧಿಕಾರಿ ವೆಂಕಟೇಶ್ ಮಾತನಾಡಿ, ಪ್ರಸ್ತುತ ಜಲಾಶಯದಲ್ಲಿರುವ ನೀರನ್ನು ಕುಡಿಯುವ ನೀರು ಮತ್ತು ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು ಸಂರಕ್ಷಣೆ ಮಾಡಿಕೊಳ್ಳಬಹುದಾಗಿದ್ದು, ಜಿಲ್ಲೆಯಲ್ಲಿ ಭತ್ತ ಬೆಳೆಯದಿರುವಂತೆ ರೈತರಿಗೆ ಸೂಚನೆ ನೀಡಲಾಗಿದೆ ಎಂದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಮಾತನಾಡಿ, ಮೇ ೧೫ ರವರೆಗೆ ನೀರು ಬೇಕೇ ಬೇಕು. ೪೭ ದಿನಗಳಿಗೆ ಆಗಬಹುದಾದ ನೀರನ್ನು ಸಮರ್ಪಕವಾಗಿ ನೀಡಲು ಜ.೧೫ ರಿಂದ ಆನ್ ಮತ್ತು ಆಫ್ ಮಾದರಿಯಲ್ಲಿ ಮೇ ತಿಂಗಳವರೆಗೆ ನೀಡುವುದು ಉತ್ತಮ. ಹಾಗೂ ತುಂಗಾ ನದಿಯಿಂದ ಅಪ್ಪರ್ ಭದ್ರಾ ಯೋಜನೆಗೆ ನೀರು ನೀಡಲು ಕ್ರಮ ಕೈಗೊಳ್ಳಬೇಕು. ಇಂಜಿನಿಯರುಗಳು ಸಭೆ ಕೈಗೊಂಡು ತುಂಗಾ ಜಲಾಶಯದಿಂದ ನೀರೆತ್ತಲು ಕ್ರಮ ವಹಿಸಬೇಕೆಂದರು.
ರೈತ ಮುಖಂಡ ಕೆ.ಟಿ.ಗಂಗಾಧರ್ ಮಾತನಾಡಿ, ಕಟ್ಟಕಡೆಯ ಅಚ್ಚುಕಟ್ಟುದಾರರವರೆಗೆ ನೀರು ನೀಡುವ ವ್ಯವಸ್ಥೆ ಸಮರ್ಪಕವಾಗಿ ಆಗಬೇಕು. ಅಚ್ಚುಕಟ್ಟು ಪ್ರದೇಶದಲ್ಲಿ ಒಟ್ಟು ೩೧೭೩೯ ಹೆಕ್ಟೇರ್ ತೋಟಗಾರಿಕೆ ಬೆಳೆಯಿದ್ದು, ಇದನ್ನು ಉಳಿಸಿಕೊಳ್ಳಬೇಕಾಗಿದೆ. ಡಿಸ್ಚಾರ್ಜ್ ನೀರನ್ನು ನಿರ್ವಹಿಸಲು, ಅಕ್ರಮವಾಗಿ ನೀರೆತ್ತುವುದನ್ನು ನಿಲ್ಲಿಸಲು ವಾಹನ ನಿಯೋಜಿಸಬೇಕು, ಸೋಡಿಗಳನ್ನು ಮತ್ತು ಕಾನ್ಸ್‌ಟೇಬಲ್‌ನ್ನು ನೇಮಿಸಬೇಕೆಂದರು.
ಮತ್ತು ತುಂಗಾ ಜಲಾಶಯದಿಂದ ೧೯.೫ ನೀರನ್ನು ಲಿಫ್ಟ್ ಮಾಡಿದಲ್ಲಿ ಭದ್ರಾ ಜಲಾಶಯಕ್ಕೆ ನೀರು ಉಳಿಯುತ್ತದೆ. ಆದ್ದರಿಂದ ಸಚಿವರು, ಶಾಸಕರು ಸೇರಿ ಮುಖ್ಯಮಂತ್ರಿಗಳು ಮತ್ತು ನೀರಾವರಿ ಸಚಿವರ ಬಳಿ ಈ ಬಗ್ಗೆ ಮಾತನಾಡಿ ತುಂಗಾ ನದಿಯಿಂದ ಮೇಲ್ದಂಡ ಯೋಜನೆಗೆ ನೀರು ನೀಡಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ತೇಜಸ್ವಿ ಪಟೇಲ್ ಮಾತನಾಡಿ, ಭದ್ರಾ ಜಲಾಶಯದಲ್ಲಿ ನೀರನ್ನು ಆನ್ ಮತ್ತು ಆಫ್ ಜೊತೆಗೆ ಡಿಸ್ಚಾರ್ಜ್ ನಿರ್ವಹಣೆ ಮಾಡಬೇಕು. ಹಾಗೂ ನೀರಿನ ಸಂಗ್ರಹಕ್ಕಿಂತ ಮುಖ್ಯವಾಗಿ ನಿರ್ವಹನೆ ಕಡೆ ಹೆಚ್ಚಿನ ಒತ್ತು ನೀಡಬೇಕೆಂದರು,
ದಾವಣಗೆರೆ ಭಾಗದ ರೈತ ಮುಖಂಡರಾದ ಲಿಂಗರಾಜ್ ಮಾತನಾಡಿ, ಅಕ್ರಮ ಪಂಪ್‌ಸೆಟ್‌ನಿಂದ ನೀರೆತ್ತುವವರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡು ಬಿಗಿ ಮಾಡಿದಲ್ಲಿ ಎಲ್ಲ ರೈತರಿಗೆ ಅನುಕೂಲವಾಗುವುದು ಎಂದರು.
ರೈತ ಮುಖಂಡರಾದ ರಘು ಮಾತನಾಡಿ, ನೀರು ನಿಲ್ಲಿಸಿ ೯೦ ದಿನಗಳಾಗಿದ್ದು ಬೆಳೆ ಉಳಿಸಿಕೊಳ್ಳಲು ತಕ್ಷಣದಿಂದ ನೀರನ್ನು ಬಿಡಬೇಕು ಎಂದರು.
ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ, ಲತಾ ಮಲ್ಲಿಕಾರ್ಜುನ್, ಬಿ.ಕೆ.ಸಂಗಮೇಶ್, ಡಿ.ಜೆ. ಶಾಂತನಗೌಡ, ಬಸವರಾಜಪ್ಪ, ಶ್ರೀನಿವಾಸ್, ಬಸವರಾಜು ಶಿವಗಂಗ, ಕಾಡಾ ಮುಖ್ಯ ಇಂಜಿನಿಯರ್ ಶಿವಾನಂದ ಬಣಕಾರ್, ಆಡಳಿತಾಧಿಕಾರಿ ಮುರಳೀಧರ್, ಅಭಿಯಂತರರು, ಅಧಿಕಾರಿಗಳು, ರೈತ ಮುಖಂಡರು ಹಾಜರಿದ್ದರು.