ಶಿವಮೊಗ್ಗ ; ತಮಿಳುನಾಡು, ಪುದುಚೇರಿಯಲ್ಲಿ ರೌದ್ರವತಾರ ತೋರಿ ಅಕ್ಷರಶಃ ಜಲಪ್ರಳಯ ಸೃಷ್ಟಿಸಿದ್ದ ‘ಫೆಂಗಲ್’ ಚಂಡಮಾರುತ ದುರ್ಬಲಗೊಂಡಿದ್ದು, ವಾಯಭಾರ ಕುಸಿತವಾಗಿ ಮಾರ್ಪಟ್ಟಿದೆ.
ಬಂಗಾಳಕೊಲ್ಲಿಯಿಂದ ಅರಬ್ಬಿ ಸಮುದ್ರದ ತೀರದತ್ತ ಸಾಗಿರುವ ಫೆಂಗಲ್, ಅರಬ್ಬಿ ಸಮುದ್ರದಲ್ಲಿ ಮತ್ತೊಂದು ಸೈಕ್ಲೋನ್ ಆಗಿ ಪರಿವರ್ತನೆಗೊಂಡು, ಕರ್ನಾಟಕ, ಕೇರಳ ಗಡಿಯಲ್ಲಿ ಭಾರಿ ಮಳೆ ಸುರಿಸಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಆರಂಭದಲ್ಲಿ ಬೆಂಗಳೂರು ಸೇರಿದಂತೆ ಅಕ್ಕಪಕ್ಕದ ನಾಲ್ಕೈದು ಜಿಲ್ಲೆಗೆ ಸೀಮಿತವಾಗಿದ್ದ ಚಂಡಮಾರುತದ ಎಫೆಕ್ಟ್ ಇದೀಗ ರಾಜ್ಯದ ಹಲವು ಜಿಲ್ಲೆಗಳಿಗೆ ವ್ಯಾಪಿಸಿದೆ. ರಾಜ್ಯದ ಕೆಲವೆಡೆ ಇನ್ನೂ ಎರಡು ದಿನ ವ್ಯಾಪಕ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಚಾಮರಾಜ ನಗರ, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ರಾಮನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗೆ ಡಿಸೆಂಬರ್ 4 ರಂದು ಯಲ್ಲೋ ಅಲರ್ಟ್ ನೀಡಲಾಗಿದೆ. ಡಿ.5 ಮತ್ತು 6 ರಂದು ಈ ಎಲ್ಲಾ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಫೆಂಗಲ್ ನಿಂದ ಮಲೆನಾಡಿನ ರೈತರು ಕಂಗಾಲು:
ಫೆಂಗಲ್ ಚಂಡಮಾರುತದ ಪರಿಣಾಮವಾಗಿ ಕಳೆದ ಎರಡು ದಿನದಿಂದ ಮೋಡ ಕವಿದ ವಾತವರಣವಿದ್ದರೂ ಮಳೆಯಾಗಿರಲಿಲ್ಲ. ಆದರೆ, ಸೋಮವಾರ ಸಂಜೆಯಿಂದಲೇ ಶಿವಮೊಗ್ಗ ನಗರ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ಮಲೆನಾಡಿನ ರೈತರು ಮತ್ತೋಮ್ಮೆ ತೊಂದರೆಗೀಡಾದ್ದಾರೆ.
ಕಳೆದ ಒಂದು ತಿಂಗಳಿಂದ ಮಲೆನಾಡು ಭಾಗದಲ್ಲಿ ಭರದಿಂದ ಸಾಗಿದ್ದ ಅಡಕೆ ಕೊಯ್ಲಿಗೆ ಒಮ್ಮೆಲೆ ಹಿನ್ನಡೆ ಉಂಟಾಗಿದೆ. ಈಗಾಗಲೇ ಕೊಯ್ಲು ಮಾಡಿದವರು ಅಡಕೆ ಒಣಹಾಕಲು ಬಿಸಿಲು ಕಾಣದೇ ಕಂಗಲಾಗಿದ್ದಾರೆ. ಮರದಲ್ಲಿಯೇ ಅಡಕೆ ಹಣ್ಣಾಗಿದ್ದರಿಂದ ಚಾಲಿ ಮತ್ತು ಕೆಂಪಡಿಕೆ ಉತ್ಪಾದನೆ ಮೇಲೆ ಪರಿಣಾಮ ಉಂಟಾಗಿದೆ.
ಅದೇ ರೀತಿ ಭತ್ತ ಮತ್ತು ಮೆಕ್ಕೆಜೋಳ ಬೆಳೆಗಾರರಿಗೂ ಇದೇ ಸ್ಥಿತಿಯಲ್ಲಿದ್ದಾರೆ.
ಯಂತ್ರದ ಮೂಲಕ ಈಗಾಗಲೇ ಭತ್ತದ ಕೊಯ್ಲು ಮಾಡಿದವರು ಭತ್ತವನ್ನು ಸುರಕ್ಷಿತ ಪ್ರದೇಶಕ್ಕೆ ಕೊಂಡೊಯ್ದು ರಕ್ಷಿಸಿಕೊಂಡಿದ್ದಾರೆ. ಆದರೆ, ಭತ್ತದ ಹುಲ್ಲು ಮಳೆಗೆ ತೊಯ್ದು ನಷ್ಟ ಅನುಭವಿಸಿದ್ದಾರೆ. ಇನ್ನು ಹಲವೆಡೆ ಭತ್ತ ಕಟಾವಿಗೆ ಬಂದಿರುವ ಕಾರಣಕ್ಕೆ ಜಿಲ್ಲೆಯ ರೈತರು, ಈಗಾಗಲೇ ಕಟಾವು ಯಂತ್ರ ಕರೆಸಿಕೊಂಡಿದ್ದರೂ ಕಟಾವು ಮಾಡಿಸಲಾಗದ ಸಂದಿಗ್ಧತೆಗೆ ಸಿಲುಕಿದ್ದಾರೆ. ಸಂಪೂರ್ಣ ಒಣಗಿ ಕಟಾವಿಗೆ ಬಂದ ಭತ್ತ ಗಾಳಿ- ಮಳೆಗೆ ನೆಲಕ್ಕೆ ಒರಗಿದ್ದು, ಸಂಪೂರ್ಣ ಬೆಳೆ ನಾಶವಾಗುವ ಸಾಧ್ಯತೆಯಿದ್ದು, ಜಿಲ್ಲೆಯ ರೈತರು ಆತಂಕಕ್ಕೊಳಗಾಗಿದ್ದಾರೆ.