ಮಲೆನಾಡಿನಲ್ಲಿ ಈಗ ಸುಗ್ಗಿ ಸಂಭ್ರಮ. ಅತಿವೃಷ್ಟಿಯಿಂದ ತತ್ತರಿಸಿದ್ದ ರೈತ ಸಮುದಾಯ ಈಗ ಅಳಿದುಳಿದ ಫಸಲನ್ನು ಕಟಾವು ಮಾಡಲು ಮುಂದಾಗಿದೆ. ವಾಯುಭಾರ ಕುಸಿತದಿಂದ ವಾರವಿಡೀ ಮೋಡಮುಸುಕಿದ ವಾತಾವರಣ ಇದ್ದ ಕಾರಣ ಭತ್ತ, ಜೋಳ ಹಾಗೂ ರಾಗಿ ಬೆಳೆದಿದ್ದ ರೈತರಿಗೆ ಆತಂಕವಾಗಿತ್ತು. ಈಗ ಕೊಂಚ ಬಿಡುವಾಗಿದ್ದು ಸುಗ್ಗಿ ಸಂಭ್ರಮ ಬಿರುಸಾಗಿದೆ.
ಭತ್ತದ ಬೆಳೆಗಾರನ ಬವಣೆ:
ಮಲೆನಾಡಿನಲ್ಲಿ ಭತ್ತ ಪ್ರಮುಖ ಬೆಳೆಯಾಗಿದ್ದು, ಎಲ್ಲಾ ಕಡೆ ಭರದಿಂದ ಕೊಯ್ಲು ನಡೆಯುತ್ತಿದೆ. ಕೂಲಿ ಕಾರ್ಮಿಕರ ಕೊರತೆಯಿಂದ ಈಗ ಗದ್ದೆ ಬಯಲಿನ ತುಂಬಾ ತಮಿಳುನಾಡಿನಿಂದ ಬಂದಿರುವ ಭತ್ತಕೊಯ್ಯುವ ಯಂತ್ರದ ಸದ್ದು ಮೊಳಗುತ್ತಿದೆ. ದರಕುಸಿತದಿಂದಾಗಿ ಭತ್ತದ ಬೆಳೆಗಾರ ಚಿಂತಿತನಾಗಿದ್ದರೂ, ಫಸಲನ್ನು ಕಣಕ್ಕೆ ತರುವ ಧಾವಂತದಲ್ಲಿ ಯಂತ್ರಗಳ ಬೆನ್ನು ಬಿದ್ದಿದ್ದಾರೆ. ಹೈನುಗಾರಿಕೆ ಮಾಡುತ್ತಿರುವ ರೈತರು ಮುತುವರ್ಜಿಯಿಂದ ಭತ್ತದ ಹುಲ್ಲು ಒಪ್ಪಮಾಡುಲು ಮುಂದಾಗಿದ್ದಾರೆ. ಇಂತಹ ರೈತರು ಆಳುಗಳನ್ನು ಹಚ್ಚಿ ಕೊಯ್ಲು ಮಾಡುತ್ತಿದ್ದರೆ, ಮತ್ತೆ ಕೆಲವರು ಗದ್ದೆಯಲ್ಲಿಯೇ ಹುಲ್ಲು ಪಿಂಡಿಕಟ್ಟುವ ಯಂತ್ರಗಳಿಗೆ ಮೊರೆ ಹೋಗಿದ್ದಾರೆ. ಸರಕಾರ ಬೆಂಬಲ ಬೆಲೆಯಲ್ಲಿ ಖರೀದಿಸುವ ಕೇಂದ್ರ ತೆರೆದರೆ ಭತ್ತಕ್ಕೆ ಬೆಲೆ ಬರಬಹುದೇ ಎಂಬ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ.
ಕಕ್ಕಾಬಿಕ್ಕಿಯಾದ ಮೆಕ್ಕೆಜೋಳ ಬೆಳೆಗಾರ:
ಇತ್ತೀಚಿನ ವರ್ಷಗಳಲ್ಲಿ ಮಲೆನಾಡಿನಲ್ಲಿ ಮೆಕ್ಕೆಜೋಳವೂ ಪ್ರಮುಖ ಬೆಳೆಯಾಗಿದೆ. ಮಳೆಯಾಶ್ರಿತ ಹೊಲಗಳಲ್ಲಿ ಮೆಕ್ಕೆಜೋಳವೇ ಪ್ರಧಾನ ಬೆಳೆಯಾಗಿದ್ದು, ಈ ಬಾರಿಯ ಅತಿಯಾದ ಮಳೆಯಿಂದ ಫಸಲು ಅಷ್ಟೊಂದು ಸೊಗಸಾಗಿ ಬಂದಿಲ್ಲ. ಕಳೆದ ವರ್ಷ ಎರಡು ಸಾವಿರ ದಾಟಿದ್ದ ಮೆಕ್ಕೆ ಜೋಳದ ಬೆಲೆ ಈ ಬಾರೀ ಭಾರೀ ಕುಸಿತ ಕಂಡಿದೆ. ಈಗಾಗಲೇ ಕೊಯ್ಲು ಆರಂಭವಾಗಿದ್ದು, ಶಿವಮೊಗ್ಗಜಿಲ್ಲೆಯ ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಸೊರಬ ಹಾಗೂ ಸಾಗರ ಭಾಗದ ಮಳೆಯಾಶ್ರಿತ ಪ್ರದೇಶದಲ್ಲಿ ಜೋಳ ಹೆಚ್ಚಾಗಿ ಬೆಳೆಯಲಾಗುತ್ತದೆ.
ಚಿಕ್ಕಮಗಳೂರಿನ ತರೀಕೆರೆ, ಕಡೂರು ಭಾಗದಲ್ಲಿ ಅಲ್ಲಲ್ಲಿ ಮೆಕ್ಕೆ ಜೋಳ ಬೆಳೆಯಲಾಗುತ್ತದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಚನ್ನಗಿರಿ ತಾಲೂಕಿನಲ್ಲಿ ಅತೀಹೆಚ್ಚು ಮೆಕ್ಕೆಜೋಳ ಬೆಳೆಯಲಾಗುತ್ತಿದೆ. ಈ ಬಾರಿಯ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ.
ಅಡಕೆಗೆ ಸಿಕ್ಕ ಗೌರವ
ಮೆಲನಾಡಿನಲ್ಲಿ ಅಡಕೆ ಕೊಯ್ಲು ಭರದಿಂದ ಸಾಗುತ್ತಿದ್ದು, ದಾವಣಗೆರೆ ಶಿವಮೊಗ್ಗ, ಹಾಗೂ ಚಿಕ್ಕಮಗಳೂರಿನಲ್ಲಿ ದೊಡ್ಡ ದೊಡ್ಡ ರೈತರ ಮನೆಗಳಲ್ಲಿ ಅಡಕೆ ಸುಲಿಯುವ ಯಂತ್ರಗಳು ಬಂದಿದ್ದು, ಕೂಲಿ ಕಾರ್ಮಿಕರ ಸಮಸ್ಯೆಯನ್ನು ನೀಗಿಸಿದೆ. ಸೈಕ್ಲೋನ್ ಕಾರಣಕ್ಕೆ ಮೋಡ ಮುಸುಕಿದ ವಾತಾವರಣ ಇದ್ದ ಕಾರಣ ಸಣ್ಣ ರೈತರಿಗೆ ಸಮಸ್ಯೆಯಾಗಿದೆ. ಯಾಂತ್ರೀಕೃತ ವ್ಯವಸ್ಥೆಯನ್ನು ಅಷ್ಟಾಗಿ ಹೊಂದಿರದ ರೈತರು ಈ ಸಮಸ್ಯೆಯಲ್ಲಿದ್ದಾರೆ. ಈ ಬಾರಿ ಅಡಕೆ ದರ ಆರಂಭದಲ್ಲಿಯೇ 35 ರಿಂದ 40 ಸಾವಿರ ಇರುವುದರಿಂದ ಅಡಕೆ ಬೆಳೆಗಾರರಲ್ಲಿ ಭರವಸೆ ಮೂಡಿಸಿದೆ. ಆದರೆ ಈ ಬಾರಿ ಅತಿಯಾದ ಮಳೆ ಬಂದಿದ್ದರಿಂದ ಕೊಳೆರೋಗ ಬಂದಿದ್ದು, ಫಸಲಿನ ಪ್ರಮಾಣದಲ್ಲಿ ಕುಂಠಿತವಾಗಿದೆ ಎಂಬುದು ಬೆಳೆಗಾರರ ಅಭಿಪ್ರಾಯವಾಗಿದೆ.
ಶುಂಠಿ ಬೆಳಗಾರರ ಸಂಕಟ:
ಮಲೆನಾಡಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಶುಂಠಿ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ದುಬಾರಿ ದರ ಕೊಟ್ಟು ಶುಂಠಿ ನಾಟಿ ಮಾಡಿದ್ದ ರೈತರಿಗೆ ಕೊಳೆರೋಗ ತೀವ್ರವಾಗಿ ಬಾಧಿಸಿತ್ತು. ದುಬಾರಿ ಗೊಬ್ಬರ ಔಷಧಕ್ಕೆ ಹಾಕಿದ ಬಂಡವಾಳವೂ ಸಿಗಲಾರದೇನೊ ಎಂಬ ಆತಂಕ ಬೆಳೆಗಾರರಲ್ಲಿದೆ. ಕೊಳೆರೋಗದಿಂದ ಅಳಿದುಳಿದ ಬೆಳೆಗೆ ಬೆಲೆ ಬರಲಿ ಎಂದು ಕಾಯುವ ಕೆಲಸ ರೈತರದ್ದಾಗಿದೆ. ಒಣ ಶುಂಠಿ ಬೆಲೆ ಉತ್ತಮವಾಗಿದ್ದರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಒಣ ಶುಂಠಿಮಾಡುವ ಕಣದ ಕೆಲಸ ಭರದಿಂದ ಸಾಗಿದೆ. ಕಣಕ್ಕೆ ಹೋಗುವ ಶುಂಠಿಗೆ ಖರೀದಿದಾರರ ಹೊಲಗಳತ್ತ ಬರುತ್ತಿದ್ದು, ಈ ಬೆಲೆ ಧೀರ್ಘ ಕಾಲ ಉಳಿಯುತ್ತದೆ ಎಂದು ಹೇಳಲಾಗುವುದಿಲ್ಲ. ಕಳೆದ ವರ್ಷ ಕೊನೆಕೊನೆಗೆ ಉತ್ತಮ ದರಕಂಡಿದ್ದ ಶುಂಠಿ ಬೆಳೆಗಾರ ಈ ಬಾರಿಯೂ ಅದೇ ನಿರೀಕ್ಷೆಯಲ್ಲಿದ್ದಾನೆ.