ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಾ..ಕಳಕೊಂಡೆ..ನಾ ಕಳಕೊಂಡೆ.. ಎಂದು ತಮ್ಮ ಗುಡ್‍ವಿಲ್ ಬಗ್ಗೆ ಭಾರೀ ವಿಷಾದದ ಹೇಳಿಕೆ ನೀಡುತ್ತಿದ್ದಾರೆ. ಆದರೆ ತಳಮಟ್ಟದಲ್ಲಿ ಪಕ್ಷ ಬಲಗೊಳಿಸಲು ಅವಕಾಶ ಇರುವ ಗ್ರಾಮಪಂಚಾಯಿತಿ ಚುನಾವಣೆ ಹೊತ್ತಲ್ಲಿಯೇ ಶಿವಮೊಗ್ಗ ಜಿಲ್ಲೆಯಲ್ಲಿ ಅವರ ಜಾತ್ಯತೀತ ಜನತಾದಳ ನಾವಿಕನಿಲ್ಲದ ದೋಣಿಯಂತಾಗಿದೆ. ಪಕ್ಷದ ನಿಷ್ಟಾವಂತ ಕಾರ್ಯಕರ್ತರೇ ನಮ್ಮ ನಾಯಕರು ಯಾರು ಎಂಬ ಗೊಂದಲಕ್ಕೆ ಬಿದ್ದಿದ್ದಾರೆ.
ದಶಕಗಳ ಹಿಂದೆ ಏನೂ ಇಲ್ಲದ ಪಕ್ಷಕ್ಕೆ ತನು,ಮನ ಧನ ವಿನಿಯೋಗ ಮಾಡಿದ್ದ ಎಂ.ಶ್ರೀಕಾಂತ್ ಜಿಲ್ಲೆಯಲ್ಲಿ ಜೆಡಿಎಸ್‍ಗೆ ಒಂದು ಶಕ್ತಿ ತುಂಬಿದ್ದರು. ಅದಾದ ಬಳಿಕ ಮೂರು ಕ್ಷೇತ್ರಗಳಲ್ಲಿ ಆಯ್ಕೆಯಾಗಿದ್ದ ಶಾಸಕರುಗಳು ಶ್ರೀಕಾಂತ್ ಅವರನ್ನೇ ನಿರ್ಲಕ್ಷ್ಯ ಮಾಡಿದ್ದರು. ಜೆಡಿಎಸ್ ನಾಯಕರು ಕೂಡಾ ಅಧಿಕಾರ ಇದ್ದಾಗ ಶ್ರೀಕಾಂತ್ ಅವರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ. ಈ ಕಾರಣಕ್ಕೆ ಅವರು ರಾಜ್ಯಘಟಕದಲ್ಲಿದ್ದರೂ ಶಿವಮೊಗ್ಗ ಜಿಲ್ಲೆಯ ಮಟ್ಟಿಗೆ ಅಂತಹ ಆಸ್ಥೆವಹಿಸುತ್ತಿಲ್ಲ.
ಈಗ ಎಲ್ಲವೂ ಅತಂತ್ರ:
ಶಿವಮೊಗ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ಆರ್.ಎಂ.ಮಂಜುನಾಥ ಗೌಡರು ಬಹಳ ಹಿಂದೆಯೇ ರಾಜೀನಾಮೆ ನೀಡಿದ್ದರೂ ಅದನ್ನು ಸ್ವೀಕರಿಸಿಲ್ಲ. ಹಾಗಂತ ಮಂಜುನಾಥ ಗೌಡರೇನು ಜೆಡಿಎಸ್‍ನಲ್ಲಿ ಸಕ್ರಿಯವಾಗಿಯೂ ಇಲ್ಲ. ಹೊಸ ಅಧ್ಯಕ್ಷರ ನೇಮಕವೂ ಆಗಿಲ್ಲ. ಆದ್ದರಿಂದ ಜಿಲ್ಲಾ ಜೆಡಿಎಸ್ ನಾವಿಕನಿಲ್ಲದೆ ದೋಣಿಯಂತೆ ನಿಂತ ನೀರಲ್ಲಿಯೇ ನಿಂತಿದೆ.
ಅಪ್ಪಾಜಿಯಿಲ್ಲದೆ ಬಲ ಇಲ್ಲ:
ಜೆಡಿಎಸ್ ಪಕ್ಷ ಭದ್ರಾವತಿಯಲ್ಲಿ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಇರುವ ತನಕ ಯಾವತ್ತೂ ಗಟ್ಟಿಯಾಗಿಯೇ ಇತ್ತು. ಅಧಿಕಾರ ಇರಲಿ ಬಿಡಲಿ ಅಲ್ಲಿ ಅಪ್ಪಾಜಿಗೌಡರ ವೈಯಕ್ತಿಕ ಶಕ್ತಿಯಿಂದಾಗಿಯೇ ಅದಕ್ಕೆ ಬಲ ಬಂದಿತ್ತು. ನಿಜ ನಾಯಕ ಅಪ್ಪಾಜಿ ಅವರ ಅಕಾಲಿಕ ನಿಧನದಿಂದ ಪಕ್ಷ ಅಲ್ಲಿ ಸೊರಗಿದೆ. ಅಪ್ಪಾಜಿಯವರಿಂದ ಬೆಳೆದು ಜಿಲ್ಲಾಪಂಚಾಯಿತಿ ಉಪಾಧ್ಯಕ್ಷ, ಅಧ್ಯಕ್ಷ ಹುದ್ದೆ ಅನುಭವಿಸಿದ ಎಸ್.ಕುಮಾರ್ ಈಗ ಬಿಜೆಪಿಗೆ ಟವಲ್ ಹಾಕಿಕೊಂಡು ಕುಳಿತಿದ್ದಾರೆ ಎನ್ನಲಾಗಿದೆ. ಆದ್ದರಿಂದ ಈ ಪಂಚಾಯಿತಿ ಚುನಾವಣೆ ಅಪ್ಪಾಜಿಗೌಡರಿಲ್ಲದೆ ನಡೆಯುತ್ತಿದೆ. ಅಪ್ಪಾಜಿ ಪುತ್ರ ಮತ್ತು ಪತ್ನಿ, ಕರುಣಾಮೂರ್ತಿ,ಮಣಿಶೇಖರ್ ಮತ್ತಿತರರು ಪಕ್ಷದಲ್ಲಿ ಸಕ್ರಿಯವಾಗಿದ್ದರೂ ರಾಜ್ಯಘಟಕದಿಂದ ಸರಿಯಾದ ಬಲ ಇಲ್ಲದಂತಾಗಿದೆ.
ಮಂಜುನಾಥಗೌಡರ ಭಿನ್ನ ಹೋರಾಟ:
ತೀರ್ಥಹಳ್ಳಿ ಕ್ಷೇತ್ರದಲ್ಲಿ ಆರ್.ಎಂ.ಮಂಜುನಾಥ ಗೌಡರು ಸಕ್ರಿಯ ರಾಜಕಾರಣದಲ್ಲಿದ್ದಾರೆ. ಮಲೆನಾಡಿನ ಗ್ರಾಮೀಣ ಪ್ರದೇಶಗಳ ಮೇಲೆ ತೂಗುಗತ್ತಿಯಾಗಿರುವ ಡಾ.ಕಸ್ತೂರಿ ರಂಗನ್ ವರದಿಯ ಶಿಫಾರಸುಗಳ ವಿರುದ್ಧ ದೊಡ್ಡ ಮಟ್ಟದ ಹೋರಾಟವನ್ನೇ ಅವರು ಮಾಡಿದ್ದಾರೆ ಆದರೆ ಅದು ಜೆಡಿಎಸ್ ಬ್ಯಾನರ್‍ನಿಂದಲ್ಲ. ಕಾಂಗ್ರೆಸ್ ನಾಯಕರನ್ನೂ ಒಳಗೊಂಡು ಅವರು ಹೋರಾಟ ಮಾಡುತ್ತಿದ್ದು, ನೂತನ ವರ್ಷದಲ್ಲಿ ಅವರು ಕಾಂಗ್ರೆಸ್ ಪಾಳಯಕ್ಕೆ ಅಧಿಕೃತವಾಗಿ ಸೇರಲಿದ್ದಾರೆ.
ಸೊರಬದಲ್ಲಿ ಕಾಂಗ್ರೆಸ್‍ನೊಂದಿಗೆ ಮಧುರ ಬಾಂಧವ್ಯ:
ಇನ್ನು ಸೊರಬ ಕ್ಷೇತ್ರದಲ್ಲಿ ಮಾಜಿ ಶಾಸಕ ಮಧುಬಂಗಾರಪ್ಪ ಈಗಾಗಲೇ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಮಧುರ ಬಾಂಧವ್ಯ ಹೊಂದಿದ್ದು, ಗ್ರಾಮಪಂಚಾಯಿತಿ ಚುನಾವಣೆಯನ್ನು ಎಲ್ಲರೂ ಸೇರಿಯೇ ಎದುರಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಇಲ್ಲದಿರುವುದು ಅವರಿಗೆ ಹಿತಾನುಭವ ನೀಡಿದ್ದು, ಯುಗಾದಿ ಹೊತ್ತಿಗೆ ಅವರು ಪಥ ಬದಲಿಸಲಿದ್ದಾರೆ. ಹೀಗಾದಲ್ಲಿ ಸೊರಬದಲ್ಲಿ ಜೆಡಿಎಸ್ ಭಾವುಟ ಕಟ್ಟುವ ಜನಕ್ಕೂ ಹುಡುಕಾಟ ನಡೆಯುವ ಸಾಧ್ಯತೆ ಇದೆ.
ಎಡ್ಡಿಕೆ ನೆಚ್ಚಿಕೊಂಡಿರುವ ಶಾರದಮ್ಮ:
ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ತಳಮಟ್ಟದ ಕಾರ್ಯಕರ್ತರೊಂದಿಗೆ ಸಂಪರ್ಕ ಇಟ್ಟುಕೊಂಡು ಚುನಾವಣೆ ನಡೆಸುತ್ತಿರುವುದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕಿ ಶಾರದಾಪೂರ್ಯನಾಯ್ಕ್ ಮಾತ್ರ. ಅವರೂ ಕಾಂಗ್ರೆಸ್ ಹೊಸ್ತಿಲಲ್ಲಿದ್ದಾರೆ ಎಂಬ ರೂಮರ್‍ಗಳು ಇದ್ದವಾದರೂ ಕಾಂಗ್ರೆಸ್ ಎಂಬ ಸಮುದ್ರದಲ್ಲಿ ಅಲೆಗಳ ಸೆಳೆತಕ್ಕೆ ಸಿಕ್ಕುವ ಅಪಾಯ ಅರಿತು ಜೆಡಿಎಸ್‍ನಲ್ಲಿಯೇ ಇದ್ದಾರೆ. ಮಹಿಳಾ ನಾಯಕಿಯರು ಕಡಿಮೆ ಇರುವ ಜೆಡಿಎಸ್‍ನಲ್ಲಿ ಶಾರಮ್ಮರಿಗೆ ಮಹತ್ವವೂ ಇರುವುದರಿಂದ ಮನ್ನಣೆ ಇರುವೆಡೆ ಇರಬೇಕೆಂಬ ಇರಾದೆ ಅವರದು.
ಗ್ರಾಮ ಪಂಚಾಯಿತಿ ವ್ಯಾಪ್ತಿ ಹೊಂದಿಲ್ಲದ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಸಧ್ಯಕ್ಕೆ ಜೆಡಿಎಸ್ ಚಟುವಟಿಕೆ ಇಲ್ಲವಾಗಿದೆ. ಆಯ್ಕೆಯಾದ ಕಾರ್ಪೋರೇಟರ್‍ಗಳ ಅವರವರ ನೆಲೆಯಲ್ಲಿ ಫೀಲ್‍ಗುಡ್ ಎನ್ನುವಂತಿದ್ದು, ಮುಂದಿನ ಚುನಾವಣೆ ಹೊತ್ತಿಗೆ ಪಕ್ಷವನ್ನು ನೆನಪು ಮಾಡಿಕೊಳ್ಳಬಹುದು.