ಯಾವ ದೇಶದಲ್ಲಿ ಬೆವರಿನ ಶ್ರಮಕ್ಕೆ ಮೌಲ್ಯ ಸಿಗುವುದಿಲ್ಲವೊ ಆ ದೇಶದಲ್ಲಿ ಎಷ್ಟೇ ಸಂಪತ್ತಿದ್ದರೂ ಅದಕ್ಕೆ ಬೆಲೆ ಇಲ್ಲ. ಇಂದು ಸಾಹಿತ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಶ್ರಮವಿಲ್ಲದೆ ಕೀರ್ತಿಗಳಿಸುವ ಧಾವಂತಕ್ಕೆ ಬಿದ್ದ ಜನರನ್ನು ಹೆಚ್ಚು ಕಾಣುತ್ತೇವೆ. ಇದು ಸರಿಯಾದ ಜೀವನ ವಿಧಾನ ಅಲ್ಲ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಹೇಳಿದರು.
ಶಿವಮೊಗ್ಗದಲ್ಲಿ ಭಾನುವಾರ ಸಾಹಿತ್ಯ ಗ್ರಾಮದ ಡಾ.ಜಿ.ಎಸ್.ಶಿವರುದ್ರಪ್ಪ ಸಾಹಿತ್ಯ ಭವನದಲ್ಲಿ ಆರಂಭವಾದ ೧೫ ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಾಹ್ಮಣರು ಹಾಗೂ ಬ್ರಾಹ್ಮಣೇತರರ ನಡುವೆ ಸೈದ್ಧಾಂತಿಕ ಹಾಗೂ ಹಕ್ಕುಗಳಿಗಾಗಿ ಹೋರಾಟ ನಡೆಯುತಿತ್ತು. ಇಂದು ಜಗತ್ತು ಬದಲಾಗಿದೆ. ಇದು ಒಳ ಮೀಸಲಾತಿಯ ಕಾಲ. ಸದಾಶಿವ ವರದಿ ಮಂಡನೆಯಾದ ಬಳಿಕ ಒಳಮೀಸಲಾತಿ ಕೇಳುವ ಕಾಲ ಬಂದಿದೆ. ಉಂಡವನ ಬಳಿ ಹಸಿದವನಿಗೆ ತಟ್ಟೆ ಬಿಟ್ಟುಕೊಡು ಎಂದು ಕೇಳುವ ಮಟ್ಟಿಗೆ ಸಮಾಜ ಜಾಗೃತವಾಗಿದೆ. ಈ ರೀತಿಯ ಪ್ರಜ್ಞೆ ಬೆಳೆಯಲು ಸಾಹಿತ್ಯ ಸಮ್ಮೇಳನದಂತಹ ಉತ್ಸವಗಳು ಅಗತ್ಯ ಎಂದು ವಸಂತಕುಮಾರ್ ಹೇಳಿದರು.
ಕಾವ್ಯ ಖಡ್ಗವಾಗಬೇಕು ಎಂಬ ಪರಿಕಲ್ಪನೆ ಬದಲಾಗಿದೆ. ಈಗೇನಿದ್ದರೂ ಕಾವ್ಯ ಕರಣೆಯಾಗಲಿ ಎಂಬ ಕಾಲ ಬಂದಿದೆ. ಸಾಹಿತ್ಯದಲ್ಲಿಯೂ ಎಡ-ಬಲಗಳನ್ನು ಕಳಚಿಟ್ಟು ಸಾಮರಸ್ಯದ ಸಾಹಿತ್ಯ ಪ್ರವರ್ಧಮಾನಕ್ಕೆ ಬಂದಿದೆ. ಮಾತೃಭೂಮಿ, ಮಾತೃಭಾಷೆ ಹಾಗೂ ಮಾತೃಭಾವಗಳ ಮಾಧ್ಯಮ ಇಂದು ಅಗತ್ಯವಿದೆ. ಈ ನೆಲೆಯಲ್ಲಿ ಇಂದಿನ ಯುವ ಫೀಳಿಗೆ ಚಿಂತಿಸುತ್ತಿದೆ. ಈ ಬಗೆಯ ಭಾವಗಳ ಸಮ್ಮಿಲನ ಯುವಜನರ ಸಾಹಿತ್ಯದಲ್ಲಿ ಮೂಡಬೇಕು ಎಂದು ವಸಂತ್‌ಕುಮಾರ್ ಅಭಿಪ್ರಾಯಪಟ್ಟರು.
ಸಮ್ಮೇಳನ ಸರ್ವಾಧ್ಯಕ್ಷೆ ಡಾ.ವಿಜಯಾ ದೇವಿ, ನಿಕಟಪೂರ್ವ ಅಧ್ಯಕ್ಷೆ ವಿಜಯಾ ಶ್ರೀಧರ್, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಮೇಯರ್ ಸುವರ್ಣಶಂಕರ್, ಉಪಮೇಯರ್ ಸುರೇಖಾ ಮುರುಳೀಧರ್, ಪದವೀಧರರ ಸಂಘದ ಅಧ್ಯಕ್ಷ ಎಸ್.ಪಿ.ದಿನೇಶ್, ಲೇಖಕಿಯರ ಸಂಘದ ಅಧ್ಯಕ್ಷೆ ಎಸ್.ವಿ.ಚಂದ್ರಕಲಾ, ಮಧುಗಣಪತಿ ಪಡೆನೂರು, ಶಿವಮೊಗ್ಗ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಸಂಪತ್ ಕುಮಾರ್, ತಿರುಮಲ ಮಾವಿನಕುಳಿ, ಎಸ್.ಪಿ.ಶೇಷಾದ್ರಿ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಶಯ ನುಡಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಬಿ.ಶಂರಪ್ಪ ಕಳೆದ ಐದು ವರ್ಷಗಳಲ್ಲಿ ಜನಸಾಮಾನ್ಯರ ಬಳಿಗೆ ಸಾಹಿತ್ಯ ಪರಿಷತ್ ಹೋಗಿದೆ.ಸ್ಥಳೀಯ ಪ್ರತಿಭೆ ಹಾಗೂ ಸಾಧಕರನ್ನು ಗುರುತಿಸುವ ಕೆಲಸ ಮಾಡಿದ್ದೇವೆ. ಸಾಹಿತ್ಯ ಗ್ರಾಮದ ಎಲ್ಲ ಪರಿಕರಗಳನ್ನು ಸಾಹಿತ್ಯ ಪ್ರೇಮಿಗಳೂ ಹಾಗೂ ಸದಸ್ಯರ ದಾನ ನೀಡುವ ಮೂಲಕ ತಮ್ಮ ಭಾಷಾ ಪ್ರೇಮ ಮೆರೆದಿದ್ದಾರೆ. ಜನಸ್ಪಂದನೆಯ ಕಾರಣಕ್ಕೆ ಮೂರು ದಿನಗಳ ಕಾಲ ಸಮ್ಮೇಳನ ನಡೆಯಲಿದೆ ಎಂದರು. ವೇದಿಕೆಯಲ್ಲಿ ಹಲವು ಕೃತಿಗಳನ್ನು ಬಿಡುಗಡೆಮಾಡಲಾಯಿತು. ಎಂ.ಎನ್.ಸುಂದರಾಜ್ ಸ್ವಾಗತಿಸಿದರು. ರುದ್ರಮುನಿ ಸಜ್ಜನ್ ವಂದಿಸಿದರು. ಚನ್ನಬಸಪ್ಪ ಕಾರ್ಯಕ್ರಮ ನಿರೂಪಿಸಿದರು. ಖ್ಯಾತ ಛಾಯಾಚಿತ್ರಗ್ರಾಹಕ ಶಿವಮೊಗ್ಗ ನಾಗರಾಜ್ ಅವರು ಛಾಯಾಚಿತ್ರ ಪ್ರದರ್ಶನ ಸಾಹಿತ್ಯ ಸಮ್ಮೇಳನದ ಆಕರ್ಷಣೆಯ ಕೇಂದ್ರವಾಗಿತ್ತು.
ಸಮ್ಮೇಳನಾಧ್ಯಕ್ಷರ ಮೆರವಣಿಗೆ
ಶಿವಮೊಗ್ಗ ಗೋಪಾಳದ ಬಸ್ ನಿಲ್ದಾಣದಿಂದ ಸಾಹಿತ್ಯ ಗ್ರಾಮದ ತನಕ ಸಮ್ಮೇಳನಾಧ್ಯಕ್ಷೆ ಡಾ.ವಿಜಯಾದೇವಿ ಅವರನ್ನು ಅಲಂಕೃತ ರಥದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ವಿವಿಧ ಕಲಾ ತಂಡಗಳು ಹಾಗೂ ಸಾಹಿತ್ಯಾಭಿಮಾನಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಶೇ.೧೧ ಜಿಡಿಪಿ !
ಮುಂದಿನ ವರ್ಷಗಳಲ್ಲಿ ಭಾರತದ ಜಿಡಿಪಿ ಶೇ.೧೧ ಆಗಲಿದೆಯಂತೆ ಇದು ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿದ ವಸಂತಕುಮಾರ್ ಹೇಳಿದ ಆರ್ಥಿಕ ಸಂದೇಶ, ಅರೆ ಆರ್ಥಿಕತೆ ಕುಸಿದಿರುವ ಹೊತ್ತಲ್ಲಿ ಇದೆಂತ ಸಿಹಿಸುದ್ದಿ ಎಂದು ಕೇಳುಗರು ಕಿವಿಗೊಟ್ಟರು. ಅಷ್ಟಕ್ಕೇ ಸುಮ್ಮನಾಗದ ವಸಂತಕುಮಾರ್, ಕೊರೊನವನ್ನು ದೇಶ ಸಮರ್ಥವಾಗಿ ಎದುರಿಸುತ್ತಿದೆ. ದೇಶದ ಲಸಿಕೆಯಷ್ಟು ಪರಿಣಾಮವನ್ನು ಯಾವ ದೇಶದ ಲಸಿಕೆಯೂ ಹೊಂದಿಲ್ಲ ಎಂದೂ ಹೇಳಿದರು. ಸಾಹಿತ್ಯ ಸಮ್ಮೇಳನದಲ್ಲಿ ಯಾರೊ ಜನಪ್ರತಿನಿಧಿ ಮಾತನಾಡಿದಂತಾಯಿತಲ್ಲ ಎಂದು ಹಿಂಬದಿ ಕೂತವರು ಗೊಣಗಿದರು. ಕೊನೆಗೆ ಲಯಕ್ಕೆ ಬಂದ ವಸಂತಕುಮಾರ್ ಶಿವಮೊಗ್ಗ, ಇಲ್ಲಿನ ಸಾಹಿತ್ಯ, ರಾಜಕಾರಣ,ಹೋರಾಟ ಎಲ್ಲವನ್ನೂ ಪ್ರಸ್ತಾಪಿಸಿ ಹದವಾದ ಭಾಷಣ ಮಾಡಿ ಮುಗಿಸಿದರು.