ಮುಳುಗಡೆ ಸಂತ್ರಸ್ತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರ ಹೋಬಳಿ ನಾಗರಿಕ ವೇದಿಕೆಯ ಹೋಬಳಿ ಕೇಂದ್ರ ನಗರದ ನಾಡಕಛೇರಿ ಆವರಣದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.
ಗುರುವಾರ ಪ್ರತಿಭಟನೆ 3ನೇ ದಿನಕ್ಕೆ ಕಾಲಿಟ್ಟಿದ್ದು, ಸರಕಾರ ಸೂಕ್ತ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ಮುಂದುಚರಿಸಲು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ.
ಕಳೆದ 25 ವರ್ಷಗಳ ಹಿಂದೆ ಅಧಿಕಾರಿಗಳು ಮಾಡಿದ ತಪ್ಪಿಗೆ ಇಂದು ಅನುಭವಿಸುವಂತಾಗಿದೆ. ಮುಳುಗಡೆಯಿಂದ ಬದುಕು ಕಳೆದುಕೊಂಡಿದ್ದು ಒಂದೆಡೆಯಾದರೆ, ಇದುವರೆಗೂ ಅವರಿಗೆ ಭೂಮಿಯ ಹಕ್ಕು ದೊರೆಯದಿರುವುದು ದುರಂತವಾಗಿದೆ. ಇಲ್ಲಿಂದಲ್ಲೂ ಸಾವಿರಾರು ಕುಟುಂಬಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ಅಧಿಕಾರಿಗಳಿಂದ ನಡೆಯುತ್ತಿದೆ ಎಂದು ಆರೋಪಿಸಿದರು.
2015 ರಿಂದ ಆರಂಭಿಸಿ 2017, 19ರಲ್ಲಿಯೂ ತೀವ್ರ ತೆರನಾದ ಪ್ರತಿಭಟನೆ ಮಾಡಿ ಸರಕಾರದ ಗಮನ ಸೆಳೆಯಲಾಗಿತ್ತು. ಕಾಲಮಿತಿಯ ಒಳಗಾಗಿ ಎಲ್ಲವನ್ನೂ ಬಗೆಹರಿಸುವುದಾಗಿ ಅಂದಿನ ಅಧಿಕಾರಿಗಳು, ಜನಪ್ರತಿನಿಧಿಗಳು ಲಿಖಿತ ಭರವಸೆ ನೀಡಿದ್ದರು. ಅಂತಿಮವಾಗಿ ಈಗ ಕೇವಲ ಸರಕಾರದ ಮಟ್ಟದಲ್ಲಿ ಸಮಸ್ಯೆ ಬಗೆಹರಿಯುವ ಹಂತ ತಲುಪಿದೆ. ಆದರೆ ಅಲ್ಲಿ ವಿಳಂಭವಾಗುತ್ತಿದೆ ಎಂದು ದೂರಿದರು.
ಸೂಚಿತ ಅರಣ್ಯ ಎಂದು ಪಹಣಿಗಳಲ್ಲಿ ಕಾನೂನುಬಾಹಿರವಾಗಿ ನಮೂದಿಸಿರುವುದೇ ದೊಡ್ಡ ಸಮಸ್ಯೆಯಾಗಿದೆ. ಇನ್ನೂ ಕೆಲವು ಗ್ರಾಮಗಳನ್ನು ಅರಣ್ಯ ಪ್ರದೇಶವಾಗಿ ಘೋಷಿಸಲು ಕ್ರಮ ಕೈಗೊಂಡಿದ್ದು, ತಾಂತ್ರಿಕವಾಗಿ ತಪ್ಪಾಗಿದೆ. ಆದರೆ ಎಷ್ಟೋ ವರ್ಷಗಳ ನಂತರ ಮತ್ತೆ ಈ ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲು ಅರಣ್ಯ ಇಲಾಖೆ ಮುಂದಾಗಿದೆ. ಹೀಗಾದಲ್ಲಿ ಈ ಗ್ರಾಮಗಳಲ್ಲಿನ ಕುಟುಂಬಗಳು ಸಾರ್ವತ್ರಿಕವಾಗಿ ಒಕ್ಕಲೇಳಬೇಕಾಗುತ್ತದೆ. ಇದೆಲ್ಲದರ ನಡುವೆ ಜನತೆ ಅತಂತ್ರ ಸ್ಥಿತಿಯಲ್ಲಿ ಬದುಕುವಂತಾಗಿದೆ ಎಂದು ಆಪಾದಿಸಿದರು.
ಉಪವಿಭಾಗಾಧಿಕಾರಿ ಭೇಟಿ
ಪ್ರತಿಭಟನಾ ಸ್ಥಳಕ್ಕೆ ಸಾಗರದ ಉಪವಿಭಾಗಾಧಿಕಾರಿ ಡಾ.ನಾಗರಾಜ್ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಮುಂದಿನ ಹಂತದಲ್ಲಿ ಸರಿಪಡಿಸುವ ಭರವಸೆ ನೀಡಿದರು. ಪಹಣಿ ದಾಖಲೆಗಳನ್ನು ಸರಿಪಡಿಸಲು ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದರು. ಆದರೆ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕಂದಾಯ ಇಲಾಖೆಯ ಪ್ರದೇಶದ ಆರ್‍ಟಿಸಿ ತಿದ್ದುಪಡಿಗೆ ಅರಣ್ಯ ಇಲಾಖೆಯಿಂದ ನಿರಪೇಕ್ಷಣೆ ಬೇಕೇ? ಇಂತಹ ಕ್ರಮದಿಂದ ಜನತೆಗೆ ಎಳ್ಳಷ್ಟೂ ಉಪಯೋಗವಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ಹಾಗೂ ಪ್ರತಿಭಟನಾ ನಿರತರ ಮದ್ಯೆ ಕೆಲ ಕಾಲ ವಾಗ್ವಾದ ನಡೆಯಿತು.
ಅಂತಿಮವಾಗಿ ಸರಕಾರ ಸೂಕ್ತ ತೀರ್ಮಾನಕ್ಕೆ ಬರುವ ವರೆಗೂ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ಪ್ರತಿಭಟನಾಕಾರರು ತೀರ್ಮಾನಿಸಿದ್ದಾರೆ.
ಪ್ರತಿಭಟನೆಯಲ್ಲಿ ವೇದಿಕೆಯ ಸಂಚಾಲಕ ವಿ.ಜಿ.ಶ್ರೀಕರ, ಪ್ರಮುಖರಾದ ಮಾಸ್ತಿಕಟ್ಟೆ ರವೀಂದ್ರ, ಬೆಳ್ಳೂರು ತಿಮ್ಮಪ್ಪ, ತೀ.ನಾ.ಶ್ರೀನಿವಾಸ, ಟಿ.ಆರ್.ಕೃಷ್ಣಪ್ಪ, ಸತೀಶ್ ಪಟೇಲ್, ಸುಧೀರ್, ಅಂಬರೀಶ್, ರಮೇಶ್, ಕರುಣಾಕರ ಶೆಟ್ಟಿ ಮತ್ತಿತರರು ಇದ್ದರು.