ಅಲ್ಲೊಂದು ಪಶು ಆಸ್ಪತ್ರೆಯಿತ್ತು. ಎರಡು ಎಕರೆ ವಿಸ್ತೀರ್ಣದ ವಿಶಾಲದ ಆ ಜಾಗವನ್ನು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಗರುಡಾಚಾರ್ ದಾನವಾಗಿ ನೀಡಿದ್ದರು. ದಾನ ಪತ್ರದಲ್ಲಿ ಈ ಜಾಗ ಪಶು ಆಸ್ಪತ್ರೆ ಮತ್ತು ಆರೈಕೆಗೆ ಮೀಸಲಾಗಿರಬೇಕು ಎಂದು ಷರತ್ತು ವಿಧಿಸಿದ್ದಲ್ಲದೆ, ಕುಟುಂಬ ಸ್ವಂತ ಖರ್ಚಿನಲ್ಲಿ ಕಟ್ಟಡ ನಿರ್ಮಾಣ ಮಾಡಿ ಮೈಸೂರು ಅರಸರಿಂದ ಉದ್ಘಾಟನೆಯನ್ನೂ ಮಾಡಿಸಿತ್ತು. ಇದಾದ ಬಳಿಕ ಅರ್ಧ ಶತಮಾನಕ್ಕೂ ಅಧಿಕ ಕಾಲ ಶಿವಮೊಗ್ಗದ ಪಶು ಆಸ್ಪತ್ರೆ ಅದಾಗಿತ್ತು. ಇದರಿಂದ ದಾನ ಕೊಟ್ಟವರ ಉದ್ದೇಶವೂ ಈಡೇರಿತ್ತು.
ಸಿಟಿ ಸೆಂಟರ್ ಬಂತು:
2006 ರಲ್ಲಿ ಯಡಿಯೂರಪ್ಪ ಅವರು ಡಿಸಿಎಂ ಆಗಿದ್ದ ಅವಧಿಯಲ್ಲಿ ಶಿವಮೊಗ್ಗದ ಹೃದಯ ಭಾಗದ ಶಿವಪ್ಪ ನಾಯಕ ಹೂವು ಮತ್ತು ತರಕಾರಿ ಮಾರುಕಟ್ಟೆಯನ್ನು ಡೆಮಾಲಿಷ್ ಮಾಡಿ ಅಲ್ಲಿ ಬೃಹತ್ ಶಾಪಿಂಗ್ ಮಾಲ್ ನಿರ್ಮಾಣ ಮಾಡಲು ನಿರ್ಧರಿಸಲಾಯಿತು. ಹೂವಿನ ಮಾರುಕಟ್ಟೆಗೆ ಹೊಂದಿಕೊಂಡೇ ಇದ್ದ ಪಶು ಆಸ್ಪತ್ರೆ, ಉಪನಿರ್ದೇಶಕರ ಕಚೇರಿ ಎಲ್ಲವನ್ನೂ ಸೇರಿಯೇ ಮಾಲ್ ನಿರ್ಮಾಣಕ್ಕೆ ನೀಲನಕಾಶೆ ತಯಾರಾಗಿತ್ತು.
ವೇದಾ ಎಂಬ ಹೋರಾಟಗಾರ್ತಿ
ಗರುಡಾಚಾರ್ ಪಶುಪಾಲನೆ, ಚಿಕಿತ್ಸೆ ಇತ್ಯಾದಿ ಸಾರ್ವಜನಿಕ ಉದ್ದೇಶಕ್ಕೆ ನೀಡಿದ್ದ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಬೆಂಗಳೂರು ಸದಾಶಿವನಗರದಲ್ಲಿ ವಾಸವಿದ್ದ ಗರುಡಾಚಾರ್ ಮೊಮ್ಮಗಳು ವೇದಾ ಅವರಿಗೆ ಗೊತ್ತಾಯಿತು. ಶಿವಮೊಗ್ಗಕ್ಕೆ ಬಂದ ಅವರು, ಸರಕಾರದ ನಿರ್ಧಾರದಿಂದ ಕುಟುಂಬದ ಪೂರ್ವಿಕರು ನೀಡಿದ್ದ ದಾನದ ಉದ್ದೇಶಕ್ಕೆ ಧಕ್ಕೆಯಾಗುತ್ತದೆ. ಯಾವ ಕಾರಣಕ್ಕೂ ಪಶು ಆಸ್ಪತ್ರೆ ಜಾಗ ವಶಮಾಡಿಕೊಳ್ಳಬೇಡಿ ಎಂದು ಶಾಸಕರು, ಸಚಿವರ ಬಳಿ ಮೊರೆಯಿಟ್ಟರು. ಪತ್ರಿಕಾ ಕಚೇರಿಗಳಿಗೆ ಎಡತಾಕಿದರು. ಆದರೆ ಅಭಿವೃದ್ಧಿಯ ಕನಸಲ್ಲಿದ್ದವರಿಗೆ ಅದು ಕೇಳಲಿಲ್ಲ. ಕೊನೆಗೆ ದಿಟ್ಟ ಮಹಿಳೆ ವೇದಾ ಅವರು ನ್ಯಾಯಾಲಯದ ಮೆಟ್ಟಿಲೇರಿದರು.
ಬದಲಿ ಜಾಗದ ಒಪ್ಪಂದ:
ಪೂರ್ವಿಕರು ನೀಡಿದ್ದ ದಾನದ ಉದ್ದೇಶಕ್ಕೆ ಧಕ್ಕೆಯಾಗಬಾರದು ಎಂದು ಹೋರಾಟ ಮಾಡಿದ್ದ ವೇದಾ ಅವರೊಂದಿಗೆ ಜಿಲ್ಲಾಡಳಿತ ಒಪ್ಪಂದಕ್ಕೆ ಬಂದಿತು. ಬೆಂಗಳೂರಿನಲ್ಲಿ ಪ್ರಖ್ಯಾತ ವಕೀಲರ ಕುಟುಂಬದವರೂ ಆಗಿದ್ದ ವೇದ ಈ ಹೋರಾಟದಲ್ಲಿ ಗೆದ್ದರು. ಪಶುಆಸ್ಪತ್ರೆ ಒಡೆಯಬೇಕೆಂದರೆ ಬದಲಿ ಜಾಗವನ್ನು ಸರಕಾರಿ ಪಶು ಆಸ್ಪತ್ರೆಗೆ ಮೀಸಲಿಡಬೇಕೆಂದು ಷರತ್ತು ಹಾಕಿದ್ದರು. ಅದರಂತೆ ಈಗ ಶಾಸಕರ ಕಚೇರಿ ಇರುವ ಕಟ್ಟಡದಲ್ಲಿ ಪಶು ಇಲಾಖೆ ಉಪ ನಿರ್ದೇಶಕರ ಕಚೇರಿಗೆ 8 ಸಾವಿರ ಚದರ ಅಡಿ ಜಾಗ ಮೀಸಲಿಡಲಾಗಿದೆ. ಪಶು ಆಸ್ಪತ್ರೆಗೆ ಕುವೆಂಪು ನಗರದಲ್ಲಿ ನಿವೇಶನ ಮೀಸಲಿಡಿಸುವಲ್ಲಿ ವೇದಾ ಯಶಸ್ವಿಯಾಗಿದ್ದರು. ಅವರು ಇಷ್ಟೆಲ್ಲಾ ಮಾಡಿದ್ದು, ಸ್ವಂತಕ್ಕಲ್ಲ ಮೂಕ ಪ್ರಾಣಿ ಪಶುವಿನ ಆಸ್ಪತ್ರೆಗಾಗಿ.
99 ವರ್ಷ ಲೀಜ್‍ಗೆ ಹುನ್ನಾರ ?
ಪಶು ಆಸ್ಪತ್ರೆಯೂ ಇದ್ದ ಜಾಗವೂ ಸೇರಿದಂತೆ ಶಿವಮೊಗ್ಗದ ಹೃದಯ ಭಾಗದಲ್ಲಿ ತಲೆ ಎತ್ತಿದ ಸಿಟಿ ಸಿಂಟರ್ ಈಗ ಬ್ಯಾರಿ ಮಹಲ್ ಆಗಿದೆ. ಪ್ರಮುಖ ವಾಣಿಜ್ಯ ಕೇಂದ್ರವೂ ಆಗಿರುವ ಇದನ್ನು ಈ ಹಿಂದೆ 2012 ರಲ್ಲಿ ಬಿಜೆಪಿ ಸರಕಾರ ಪಿಪಿಪಿ ಆಧಾರದ ಮೇಲೆ 32 ವರ್ಷಕ್ಕೆ ಲೀಜ್‍ಗೆ ಕೊಟ್ಟಿದೆ. ಇಲ್ಲಿ ಗರುಡಾಚಾರ್ ಕುಟುಂಬದ ಆಶಯದಂತೆ ಯಾವ ಜನ ಅಥವಾ ಜಾನುವಾರು ಸೇವೆ ನಡೆಯುತ್ತಿಲ್ಲ.
ಬ್ಯಾರಿ ಮಹಲ್ ಮೇಲೆ ಪಾಲಿಕೆ ಪ್ರೀತಿ
ಬಜೆಪಿ ಸರಕಾರ ಇದ್ದಾಗಲೇ ಹಿಂದೆ ಲೀಜ್‍ಗೆ ಕೊಡಲಾಗಿತ್ತು. ಈಗಲೂ ಅದೇ ಸರಕಾರ ಇದೆ. ಪಾಲಿಕೆ ಅಧಿಕಾರವೂ ಬಿಜೆಪಿಯದೇ. ಈ ಎಲ್ಲಾ ಅಧಿಕಾರ ಬಳಸಿಕೊಂಡು ಬ್ಯಾರಿ ಮಹಲ್ ಗುತ್ತಿಗೆ ಅವಧಿಯನ್ನು 99 ವರ್ಷಗಳಿಗೆ ವಿಸ್ತರಿಸುವ ಹುನ್ನಾರ ಸದ್ದಿಲ್ಲದೆ ನಡೆಯುತ್ತಿರುವ ಬಗ್ಗೆ ವಿರೋಧ ವ್ಯಕ್ತವಾಗಿದೆ. ಏ.12 ರಂದು ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಇದೆ. ಅಂದಿನ ಅಜೆಂಡಾದಲ್ಲಿ ಬ್ಯಾರಿ ಮಹಲ್ ಲೀಜ್ ಅವಧಿ ವಿಸ್ತರಣೆ ವಿಷಯವೂ ಸೇರಿದೆ. ಮಜಾ ಎಂದರೆ ಈ ಸಂಗತಿ ನಮ್ಮ ಮೇಯರ್ ಹಾಗೂ ಆಯುಕ್ತರ ಗಮನಕ್ಕೇ ಬಂದಿಲ್ಲವಂತೆ.
ಪ್ರಭಾವಿಗಳ ಕೈವಾಡ
ಬ್ಯಾರಿ ಮಹಲ್ ಲೀಜ್ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಆರೋಪಗಳು ಮೊದಲೇ ಇವೆ. ಪಾರ್ಕಿಂಗ್ ಬಿಲ್ ಸಾಮಾನ್ಯರಿಗೆ ದುಬಾರಿಯಾಗಿದೆ ಎಂದು ಹೇಳಲಾಗುತ್ತಿದೆ. ಅದೂ ಅಲ್ಲದೆ ಹಿಂದೆ ನೀಡಿದ್ದ ಲೀಜ್ ಅವಧಿ ಅರ್ಧದಷ್ಟೂ ಮುಗಿದಿಲ್ಲ. ಈಗಲೇ ಗುತ್ತಿಗೆ ಅವಧಿಯನ್ನು 99 ವರ್ಷಗಳಿಗೆ ವಿಸ್ತರಿಸುವ ಉದ್ದೇಶದಿಂದ ಹಿಂದೆ ಆಡಳಿತಾರೂಢ ಸರಕಾರ ಹಾಗೂ ಪಾಲಿಕೆಯಲ್ಲಿನ ಪ್ರಭಾವಿಗಳ ಕೈವಾಡ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಕಾರ್ಪೊರೇಟ್ ಕಂಪೆನಿಗಳ ಆಮಿಷವೂ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈಗಿನ ಲೀಜ್ ಅವಧಿ ಮುಗಿದ ಮೇಲೆ ಮುಂದಿನ ಕಾಲಮಾನಕ್ಕೆ ತಕ್ಕಂತೆ ಲೀಜ್ ಬಗ್ಗೆ ನಿರ್ಣಯಿಸಬಹುದು. ಸಾರ್ವಜನಿಕ ಉದ್ಯಮಗಳಿಗೆ ಒಂದೊಂದಾಗಿಯೇ ಎಳ್ಳು ನೀರು ಬಿಡುತ್ತಿರುವ ಸರಕಾರಕ್ಕೆ ಬ್ಯಾರಿಮಹಲ್ ಅವಧಿ ವಿಸ್ತರಿಸುವ ವಿಚಾರದಲ್ಲಿ ಏಕಿಷ್ಟು ಪ್ರೀತಿ(?) ಎಂಬುದೇ ಅರ್ಥವಾಗುತ್ತಿಲ್ಲ. ಅಂದು ಗರುಡಾಚಾರ್ ಲೋಕ ಕಲ್ಯಾಣಕ್ಕೆ ಎರಡು ಎಕರೆ ಜಾಗ ನೀಡಿ ಜಾನುವಾರು ಆಸ್ಪತ್ರೆ ಕಟ್ಟಿಕೊಟ್ಟಿದ್ದರು. ಇಂದು ಬ್ಯಾರಿ ಮಹಲ್‍ಗೆ 99 ವರ್ಷ ಲೀಜ್ ಕೊಡುವ ಉದ್ದೇಶದ ಹಿಂದೆ ಯಾರ ಕಲ್ಯಾಣ ಇದೆಯೊ ಗೋ ಮಾತೆಗೆ ಗೊತ್ತು.
ಬ್ಯಾರಿ ಸಿಟಿ ಸೆಂಟರ್ ಲೀಸ್ ಕೊಡುವ ವಿಚಾರ ನನ್ನ ಹಾಗೂ ಮೇಯರ್ ಗಮನಕ್ಕೆ ಬಂದಿಲ್ಲ, ಕೇಸ್ ವರ್ಕರ್ ಕಣ್ತಪ್ಪಿನಿಂದ ಸಾಮಾನ್ಯ ಸಭೆಯ ಅಜೆಂಡಾದಲ್ಲಿ ಸೇರಿದೆ.ಸಿಟಿಸೆಂಟರ್‍ನ್ನು ಲೀಸ್ ಕೊಡುವುದೋ,ಬೀಡುವುದೋ ಸಾಮಾನ್ಯ ಸಭೆಯಲ್ಲಿ ನಿರ್ಧಾರವಾಗಲಿದೆ.
–ಚಿದಾನಂದ ಎಸ್ ವಟಾರೆ ಪಾಲಿಕೆ ಆಯುಕ್ತರು