ಕೊರೊನ ಎರಡನೇ ಅಲೆಯು ಮಲೆನಾಡಿನ ಕೃಷಿ ಕ್ಷೇತ್ರದ ಮೇಲೆ ಭಾರೀ ಪೆಟ್ಟು ಕೊಟ್ಟಿದ್ದು, ರೈತರು ಬೆಳೆದ ಬೆಳೆ ಹೊಲದಲ್ಲಿಯೇ ಕೊಳೆತು ಹೋಗುವಂತಾಗಿದೆ. ಬೇಸಿಗೆ ಹಂಗಾಮಿನಲ್ಲಿ ಬೆಳೆದ ಕಲ್ಲಂಗಡಿ, ಶುಂಠಿ ಹಾಗೂ ಭತ್ತದ ಬೆಳೆಯ ಮೇಲೆ ಕೊರೊನ ಪರಿಣಾಮ ವ್ಯಾಪಕವಾಗಿದೆ.
ಶುಂಠಿ ಮಾರುಕಟ್ಟೆಯ ಮೇಲೆ ಆಘಾತ ನೀಡಿರುವ ಕೊರೊನ ಮಲೆನಾಡಿನ ಶುಂಠಿ ಮಾರುಕಟ್ಟೆಯನ್ನು ಮಕಾಡೆ ಮಲಗಿಸಿಬಿಟ್ಟಿತು. ಶುಂಠಿ ಕೀಳುವ ಸಂದರ್ಭದಲ್ಲಿಯೇ ಮಹಾರಾಷ್ಟ್ರ, ದೆಹಲಿ ಹಾಗೂ ಬೆಂಗಳೂರಿನಲ್ಲಿ ಕೊರೊನ ಅಬ್ಬರ ಜೋರಾಗಿತ್ತು. ಮಲೆನಾಡಿನ ಶುಂಠಿ ಬೆಳೆ ಬಹುತೇಕ ಬಾಂಬೆ ಮಾರುಕಟ್ಟೆಗೆ ಹೋಗುತ್ತಿದ್ದು, ಅಲ್ಲಿನ ಕೊರೊನ ಪ್ರಮಾಣ ಹೆಚ್ಚುತ್ತಿದ್ದಂತೆ ಖರೀದಿದಾರರು ಮಲೆನಾಡಿಗೇ ಬರಲೇ ಇಲ್ಲ. ಇತ್ತ ಒಣ ಶುಂಠಿ ಮಾಡಿ ಮಾರುವ ಸ್ಥಳೀಯ ವ್ಯವಹಾರಸ್ಥರು ಅಗ್ಗದ ರೇಟಿಗೆ ಕೊಂಡುಕೊಳ್ಳುತ್ತಿದ್ದರು. ಈ ಬಾರಿ ಮಲೆನಾಡಿನಲ್ಲಿ ಮುಂಗಾರು ಪೂರ್ವ ಅಡ್ಡಮಳೆಗಳು ಆಗಾಗ ಬೀಳುತ್ತಿದ್ದ ಕಾರಣ ಶುಂಠಿ ಕಣಗಳಲ್ಲಿ ನಷ್ಟ ಸಂಭವಿಸುತ್ತಿದ್ದರಿಂದ ಶುಂಠಿ ಬೆಳೆಗಾರರಿಗೆ ಹಾಕಿದ ಬಂಡವಾಳವೂ ಸಿಗಲಿಲ್ಲ. ಕಳೆದ ವರ್ಷದ ಕೊರೊನದಲ್ಲಿಯೂ ಶುಂಠಿ ಬೆಳೆಗಾರರು ಇದೇ ಸಂಕಷ್ಟ ಅನುಭವಿಸಿದ್ದರು.
ರೈತರ ಸೊಂಟ ಮುರಿದ ಕಲ್ಲಂಗಡಿ
ಮಲೆನಾಡಿನಲ್ಲಿ ಬೇಸಿಗೆ ಹಂಗಾಮಿನಲ್ಲಿ ಅಲ್ಪಾವಧಿ ವಾಣಿಜ್ಯ ಬೆಳೆಯಾದ ಕಲ್ಲಂಗಡಿಯನ್ನು ಇತ್ತೀಚಿನ ವರ್ಷಗಳಲ್ಲಿ ಅವಲಂಭಿಸಿದ್ದರು. ಸಾಗರ ತಾಲೂಕಿನ ಕರೂರು,ಬಾರಂಗಿ ಹೋಬಳಿ ಹಾಗೂ ಹೊಸನಗರ ಹಾಗೂ ಶಿವಮೊಗ್ಗ ತಾಲೂಕಿನ ನೀರಿನ ಅನುಕೂಲ ಇರುವ ಭೂಮಿಯಲ್ಲಿ ಕಲ್ಲಂಗಡಿ ಬೆಳೆಯಲಾಗುತಿತ್ತು. ಕಳೆದ ವರ್ಷ ಕೊರೊನ ಲಾಕ್‍ಡೌನ್ ಆಗಿದ್ದರಿಂದ ಮಾರುಕಟ್ಟೆ ಇಲ್ಲದೆ ಬೆಳೆಗಾರರು ನಷ್ಟ ಅನುಭವಿಸಿದ್ದರು. ಆದರೆ ಭವಿಷ್ಯ ನೋಡಿ ಬಿತ್ತದ ರೈತ ಈ ಬಾರಿಯೂ ಭಾರೀ ಪ್ರಮಾಣದಲ್ಲಿ ಕಲ್ಲಂಗಡಿ ಬೆಳೆ ಬೆಳೆದಿದ್ದ.ಕೊರೊನ ಎರಡನೇ ಅಲೆ ಅಪ್ಪಳಿಸುತ್ತಿದ್ದಂತೆ ಬಾಂಬೆ, ಬೆಂಗಳೂರು ಹಾಗೂ ಗೋವಾ ಮಾರುಕಟ್ಟೆಗೆ ಹೋಗುತ್ತಿದ್ದ ಕಲ್ಲಂಗಡಿಯನ್ನು ಕೇಳುವವರೇ ಇಲ್ಲವಾದರು.
ಸಾಗರ ತಾಲೂಕಿನ ಕಲ್ಲಂಗಡಿಗೆ ಗೋವಾದಲ್ಲಿ ವಿಪರೀತ ಬೇಡಿಕೆ ಇದ್ದು, ಉತ್ತಮ ದರವೂ ಸಿಗುತಿತ್ತು. ಆದರೆ ಈ ವರ್ಷ ಖರೀದಿದಾರರು ಬಾರದ ಕಾರಣ ಅಂದಾಜು 75 ಲಕ್ಷ ರೂ. ಮೌಲ್ಯದ ಕಲ್ಲಂಗಡಿ ಹಣ್ಣು ಹೊಲದಲ್ಲಿಯೇ ಕೊಳೆತು ಹೋಯಿತು.
ಸೀಮಿತ ಅವಧಿಯ ಬೆಳೆಯಾಗಿದ್ದರಿಂದ ನಿರ್ದಿಷ್ಟ ಅವಧಿಯಲ್ಲಿ ಹಣ್ಣುಗಳನ್ನು ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಬೇಕಾಗಿತ್ತು. ಆದರೆ ಈಬಾರಿ ಉತ್ತಮವಾಗಿ ಬಂದಿದ್ದ ಫಸಲು ಕಣ್ಣಮುಂದೆಯೇ ಮಣ್ಣಾಗಿದೆ. ಅಕಾಲಿಕವಾಗಿ ಸುರಿದ ಮಳೆಯೂ ಈ ಬೆಳೆಯ ಅವಸಾನದಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಬೇಸಿಗೆ ಭತ್ತಕ್ಕೂ ತೊಂದರೆ
ಬೇಸಿಗೆ ಭತ್ತ ಬೆಳೆದಿದ್ದ ರೈತರು ಕಟಾವು ಮಾಡಲು ಮಳೆ ತೊಂದರೆ ನೀಡಿದ್ದಲ್ಲದೆ, ಕಟಾವು ಮಾಡಿದ ಭತ್ತಕ್ಕೆ ಉತ್ತಮ ಮಾರುಕಟ್ಟೆಯೇ ಇಲ್ಲವಾಗಿದೆ. ಆಹಾರ ಧಾನ್ಯ ಬೆಳೆಯುವವರ ಸಂಖ್ಯೆ ಕಡಿಮೆಯಾಗಿರುವ ಈ ಹೊತ್ತಲ್ಲಿ ಬೆಳೆದ ಭತ್ತಕ್ಕೂ ಬೆಲೆ ಇಲ್ಲದಾಗಿದೆ. ರೈತ ಮಹಾ ಪಂಚಾಯತ್ ಮಾಡಿ ಲಾಕ್ ಡೌನ್ ಕಾರಣದಿಂದ ಮನೆ ಸೇರಿರುವ ರೈತ ಸಂಘಟನೆಗಳು ಹಾಗೂ ಮುಖಂಡರು ಈ ದಿಸೆಯಲ್ಲಿ ಸರಕಾರದ ಮೇಲೆ ಒತ್ತಡ ಹೇರಬೇಕಾಗಿದೆ.
ಜನರಿಗೆ ಆಕ್ಸಿಜನ್ ಇಲ್ಲದೆ ಸತ್ತ ಬಂಧುಗಳನ್ನು ಕಳೆದುಕೊಂಡಷ್ಟೇ ನೋವು, ಬೆವರು ಬಸಿದು ಬೆಳೆದಿದ್ದ ಕಲ್ಲಂಗಡಿ ಹೊಲದಲ್ಲಿಯೇ ನಾಶವಾಗಿರುವಾಗಲೂ ಆಗಿದೆ. ಮಲೆನಾಡಿನ ರೈತರ ಸಂಕಷ್ಟ ಕೇಳುವವರಿಲ್ಲವಾಗಿದೆ. ಬೆಳೆ ರಕ್ಷಣೆಗೆ ಶೀತಲೀಕರಣ ಘಟಕ ಸ್ಥಾಪಿಸುವ ಮಟ್ಟದಲ್ಲಿ ನಮ್ಮ ಸರಕಾರಗಳು ಇಲ್ಲ. ಕರೂರು-ಬಾರಂಗಿ ಹೋಬಳಿಯೊಂದರಲ್ಲಿಯೇ ಕೋಟ್ಯಂತರ ರೂ. ಮೌಲ್ಯದ ಕಲ್ಲಂಗಡಿ ನಾಶವಾಗಿದೆ. ಶುಂಠಿ ಬೆಳೆಗಾರರ ಸಮಸ್ಕೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಸರಕಾರಗಳು ರೈತರಿಗಾದ ನಷ್ಟದ ಬಗ್ಗೆ ಗಮನ ಹರಿಸಬೇಕು.
–ಜಿ.ಟಿ.ಸತ್ಯನಾರಾಯಣ, ತುಮರಿ
ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ