ಪರಿಸರ ವ್ಯವಸ್ಥೆಯ ಪುನಃಸ್ಥಾಪನೆ ಇದು ಈ ವರ್ಷದ ವಿಶ್ವ ಪರಿಸರ ದಿನಾಚರಣೆಯ ಘೋಷವಾಕ್ಯವಾಗಿದೆ. ವಿಶ್ವದಾದ್ಯಂತ ಅತಿ ಹೆಚ್ಚು ದೇಶಗಳು ಆಚರಿಸುವಂತಹ ವಿಶೇಷ ದಿನವಾಗಿದೆ. 1974 ರಲ್ಲಿ ಮೊದಲ ಬಾರಿಗೆ ಅಮೆರಿಕಾದಲ್ಲಿ ಜೂನ್ 5 ರಂದು ಆಚರಣೆ ಆದಂತ ವಿಶ್ವ ಪರಿಸರ ದಿನಾಚರಣೆ ಪ್ರತಿವರ್ಷ ಒಂದೊಂದು ದೇಶದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷದ ಪರಿಸರ ದಿನಾಚರಣೆಯ ಜವಾಬ್ದಾರಿಯನ್ನು ಪಾಕಿಸ್ತಾನ ದೇಶವು ವಹಿಸಿಕೊಂಡಿದೆ.
ಪರಿಸರದ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬ ನಾಗರಿಕರಿಗೂ ತಿಳಿಸುವುದೇ ಪರಿಸರ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ.
ವಿಶ್ವಸಂಸ್ಥೆ ನೇತೃತ್ವದಲ್ಲಿ ನಡೆಯುವ ದಶಕದ (2021-2030) ಪರಿಸರ ದಿನಾಚರಣೆ “ಪರಿಸರ ವ್ಯವಸ್ಥೆಯ ಪುನಃಸ್ಥಾಪನೆ” ಹಲವು ಸಂಸ್ಥೆಗಳೊಡನೆ ನಡೆಸಲಾಗುತ್ತಿದೆ. ವಿಶೇಷವೆಂದರೆ ಈ ವರ್ಷ ವಿಶ್ವ ಆರೋಗ್ಯ ಸಂಸ್ಥೆಯು ಬಹಳ ಗಂಭೀರವಾಗಿ ಪರಿಗಣಿಸಿ ಅದು ಸಹ ಕೈಜೋಡಿಸಿದೆ.
ನಾವು ಪ್ರಕೃತಿಯ ಒಂದು ಭಾಗವಾಗಿದ್ದೇವೆ ಮತ್ತು ಜೀವಿಸಲು ಪ್ರಕೃತಿಯನ್ನು ಅವಲಂಬಿಸಿದ್ದೇವೆ, ಪ್ರಕೃತಿ ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು ಅರಿವು ಮೂಡಿಸುವ ವಿಶೇಷ ದಿನವಾಗಿದೆ. ಅನೇಕ ಕಾರಣಗಳಿಂದ ಹಾಳಾಗಿ ಹೋಗಿರುವ ಪರಿಸರ ವ್ಯವಸ್ಥೆಯನ್ನು ಮೊದಲಿನ ಹಾಗೆ ಸರಿಪಡಿಸುವುದು ಮುಂದಿನ 10 ವರ್ಷಗಳ ಯೋಜನೆಯಾಗಿದೆ.
ಮಹಾತ್ಮ ಗಾಂಧೀಜಿಯವರು ಹೇಳಿರುವ ಹಾಗೆ ಪ್ರಕೃತಿಯು ಪ್ರತಿಯೊಬ್ಬ ಮಾನವನ ಆಸೆಗಳನ್ನು ಈಡೇರಿಸುತ್ತದೆ ಹೊರತು ದುರಾಸೆಗಳನ್ನಲ್ಲ ಎನ್ನುವುದನ್ನು ನಾವು ಪ್ರತಿಯೊಬ್ಬರಿಗೂ ಮನದಟ್ಟು ಮಾಡಿಕೊಡಬೇಕಾದ ದಿನ ಬಂದಿದೆ.
ಮುಂದಿನ ಉತ್ತಮ ಭವಿಷ್ಯಕ್ಕಾಗಿ ಈಗ ಜಾಗೃತರಾಗುವುದು ಅನಿವಾರ್ಯವಾಗಿದೆ. ಪ್ರತಿ ದಿನವನ್ನು ಪರಿಸರ ದಿನವನ್ನಾಗಿ ಆಚರಿಸಿ ಪರಿಸರ ಸಂರಕ್ಷಣೆ ಮಾಡುವ ಸಂಕಲ್ಪವನ್ನು ಪ್ರತಿಯೊಬ್ಬರು ಮಾಡಲೇಬೇಕಾಗಿದೆ. ಭೂಮಿಯನ್ನು ಸ್ವಚ್ಛ ಸುಂದರ ಹಾಗೂ ಹಸಿರು ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕಾಗಿದೆ. ಮರಗಳು ಜೀವ ಮತ್ತು ಜೀವನ ಅವುಗಳನ್ನು ಕತ್ತರಿಸಬೇಡಿ ಎಂದು ಸಾರಿ ಸಾರಿ ಹೇಳಬೇಕಿದೆ.
ಪ್ರಕೃತಿ ನಮಗೀಗಾಗಲೇ ಅನೇಕ ಪಾಠಗಳನ್ನು ಕಲಿಸಿದೆ ಇನ್ನಾದರೂ ಎಚ್ಚೆತ್ತುಕೊಂಡು ನಾವು ಮನುಷ್ಯರಾಗಿ ಬಾಳೋಣ ಮತ್ತು ಬೇರೆ ಎಲ್ಲ ಜೀವರಾಶಿಗಳಿಗೆ ಬದುಕಲು ಅವಕಾಶ ಮಾಡಿಕೊಡೋಣ. ಸರ್ಕಾರ ಯಾವುದೇ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮೊದಲು ನೂರಾರು ಬಾರಿ ಯೋಚಿಸಿ ಪರಿಸರಕ್ಕೆ ಹಾನಿಯಾಗದಂತಹ ಯೋಜನೆಗಳನ್ನು ಮಾತ್ರ ಕೈಗೆತ್ತಿಕೊಳ್ಳಲು ತಿಳಿಸೋಣ. ಒಬ್ಬೊಬ್ಬರು ಒಂದೊಂದು ಗಿಡ ನೆಟ್ಟು ಬೆಳೆಸುವ ಸಂಕಲ್ಪ ಮಾಡೋಣ.
“ಬರಲಿ ಎಲ್ಲಾ ಜನರಿಗೆ ಪರಿಸರ ಪ್ರಜ್ಞೆ, ಬೇಕಿಲ್ಲ ಅದಕ್ಕೆ ಸರ್ಕಾರದ ಆಜ್ಞೆ “. ಬೇಕು ಗಳಿಗೆ ಕಡಿವಾಣ ಹಾಕಿ ಸಾಕು ಎಂದು ತೃಪ್ತಿಯ ಜೀವನವನ್ನು ನಡೆಸುವುದು ಕಲಿಯೋಣ. ನೈಸರ್ಗಿಕ ಸಂಪತ್ತಿನ ಪ್ರಾಮುಖ್ಯತೆಯನ್ನು ಅರಿತು ಬಾಳೋಣ, ಸರಳ ಜೀವನವನ್ನು ನಡೆಸೋಣ, ಪ್ರತಿಯೊಬ್ಬರೂ ಕೂಡಿ ಪರಿಸರವನ್ನು ರಕ್ಷಿಸೋಣ.
ಡಾ. ನಾಗರಾಜ್ ಪರಿಸರ, ಮುಖ್ಯಸ್ಥರು, ಪರಿಸರ ವಿಜ್ಞಾನ ವಿಭಾಗ, ಸಹ್ಯಾದ್ರಿ ವಿಜ್ಞಾನ ಕಾಲೇಜು. ಹಾಗೂ ಕಾರ್ಯಕ್ರಮ ಸಂಯೋಜನಾಧಿಕಾರಿ, ರಾಷ್ಟ್ರೀಯ ಸೇವಾ ಯೋಜನೆ, ಕುವೆಂಪು ವಿಶ್ವವಿದ್ಯಾಲಯ.