ಏನಾದರೂ ಆಗು ಮೊದಲು ಮಾನವನಾಗು ಅನ್ನುವುದು’ ಸಿದ್ದಯ್ಯಪುರಾಣಿಕರ ಸಾಲು. ಮಾನವನಾಗುವುದು ಅಂದರೆ ಏನು? ಇದು ಬಹುಮುಖ್ಯ ಪ್ರಶ್ನೆ. ಎಲ್ಲಾ ಪ್ರಾಣಿಪಕ್ಷಿಗಳಿಗೂ ಅಥವಾ ಸೃಷ್ಟಿಯ ಜೀವಿಗಳಿಗೆಲ್ಲಾ ಕೆಲವು ನಿರ್ದಿಷ್ಟ ಲಕ್ಷಣಗಳಿರುವಂತೆಯೇ ಮನುಷ್ಯನಿಗೂ ಇವೆ. ಮಾತಾಡುವುದು, ಆಲೋಚಿಸುವುದು, ಚರ್ಚಿಸುವುದು, ತರ್ಕಿಸುವುದು, ಓದುವುದು, ಬರೆಯುವುದು ಇವೆಲ್ಲಾ ಮನುಷ್ಯನಲ್ಲಿರುವ ವಿಶಿಷ್ಟ ಲಕ್ಷಣಗಳು. ಈ ಕಾರಣಕ್ಕಾಗಿ ಆತ ವಿಜ್ಞಾನಿ, ಶಿಕ್ಷಕ, ಕಲೆಗಾರ, ರಾಜಕಾರಣಿ ಹೀಗೆ ಏನೇನೋ ಆಗಿದ್ದಾನೆ. ಏನೇ ಆಗಿದ್ದರೂ ಮಾನವನಾಗುವುದು ಇನ್ನೂ ಆಗಿಲ್ಲವೆ? ಆಗಿದ್ದರೆ ಮತ್ಯಾಕೆ ಏನಾದರೂ ಆಗು ಮೊದಲು ಮಾನವನಾಗು ಎಂದು ಕವಿ ಹೇಳಬೇಕಿತ್ತು? ಮಾನವನಾಗುವುದಕ್ಕೆ ಬೇರೆಯೇ ಅರ್ಹತೆಗಳು ಬೇಕೇನೋ..ಮನುಷ್ಯನಾಗಿ ಹುಟ್ಟಿದವನು ಮಾನವಂತನಾಗುವುದು,ಮಾನವೀಯನಾಗುವುದು ಒಂದು ಬೆಳವಣಿಗೆ.ಇದು ಮನುಷ್ಯ
ಮಾಗುವ’ ಕ್ರಿಯೆ. ಇದಕ್ಕೆ ವಯಸ್ಸಾದರೆ ಸಾಲದು. ಇದಕ್ಕೆ ನಾಗರೀಕತೆ ಮತ್ತು ಸಂಸ್ಕೃತಿಗಳ ಜೊತೆಗೆ ಅರಿವಿನ ಸಹಾಯವೂ ಬೇಕು.
ಯಾವುದು ಜೀವಪರವೂ, ದಯಾರೂಪವೂ, ಸಹನಾಸ್ವರೂಪವೂ ಆಗಿರುತ್ತದೋ ಅದು ಮಾನವೀಯವಾದುದು. ಇವುಗಳನ್ನು ತನ್ನದಾಗಿಸಿಕೊಂಡಾಗ ಮಾತ್ರ ಮನುಷ್ಯ ಇತರೆ ಪ್ರಾಣಿಗಳಿಂದ ಭಿನ್ನವಾಗುತ್ತಾನೆ; ಮಾನವನಾಗುತ್ತಾನೆ. ಮಾನವ’ನಾದ ಮನುಷ್ಯ ಮಾತ್ರ
ಮಾನವಂತ’ನಾಗಿರುವುದು ಸಾಧ್ಯ. ನಾಗರೀಕತೆ ಬೆಳೆದಂತೆ ಮನುಷ್ಯನೂ ಬದಲಾಗಿದ್ದಾನೆ. ಅವನ ಸುತ್ತಲಿನ ಸಂಸ್ಕೃತಿ ಅವನನ್ನು ಬದಲಾಯಿಸಿದೆ, ಬೆಳೆಸಿದೆ. ಇವುಗಳೊಂದಿಗೆ ಓದು ಎನ್ನುವುದು ಅರಿವು’ ಆಗಿ ತನ್ನೊಳಗೆ ಇಳಿದಾಗ ಮಾತ್ರ ಮನುಷ್ಯ ಮಾನವನಾಗಿದ್ದಾನೆ. ಈ
ಮಾನವನೇ’ ಈಗಿನ ಅಗತ್ಯ.
ಕಣ್ಣಿಗೆ ಕಾಣದ ವೈರಸ್ಸೊಂದು ಇಡೀ ಜಗತ್ತನ್ನೇ ತಲ್ಲಣಗೊಳಿಸಿ ಹೈರಾಣಾಗಿಸುತ್ತಿದೆ. ಈ ಹೊತ್ತಲ್ಲಿ ಜಗತ್ತು ಓದಿನ ಶಕ್ತಿಗಿಂತ ಮಾನವೀಯ ಅರಿವಿ’ನಲ್ಲಿ ತನ್ನನ್ನು ಉಳಿಸಿಕೊಳ್ಳಬೇಕಾಗಿದೆ. ಓದಿನ ಜ್ಞಾನ ವ್ಯಾಕ್ಸಿನೇಷನ್ ಕಂಡುಹಿಡಿಯಬಹುದು, ಔಷಧಿಗಾಗಿ ಸಂಶೋಧನೆಗೆ ತೊಡಗಬಹುದು. ಆದರೆ
ಮಾನವೀಯ ಅರಿವು’ ಈಗ ಲೋಕಕ್ಕೆ ಅಗತ್ಯವಿದೆ. ಜಿದ್ದಿಗೆ ಬಿದ್ದು ಯುದ್ಧಕ್ಕೆ ತೊಡಗಿದ ಅಧಿಕಾರದಾಹಿಗೆ, ಶಸ್ತ್ರಾಸ್ತ್ರ ಮಾರಿ ಲಾಭ ಮಾಡಿಕೊಳ್ಳುವ ಆಡಳಿತಕ್ಕೆ, ಲಕ್ಷಾಂತರ ಕೋಟಿ ಲೂಟಿಮಾಡಿ ಓಡಿಹೋದರಿಗೆ, ದಿನವೂ ತನ್ನ ಸಂಪತ್ತು ವೃದ್ಧಿಯಾಗುವುದನ್ನು ಕಂಡು ಖುಷಿಗೊಳ್ಳುವ ವ್ಯಾಪಾರಿ ಉದ್ಯಮಿಗೆ ಅರ್ಥವಾಗಬೇಕಾಗಿರುವುದು ಹಣವೇ ಅಂತಿಮವಲ್ಲ.’ಎಂಬುದು. ಜೀವ ಮತ್ತು ಜೀವನವೇ ಬಹಳ ದೊಡ್ಡದು ಎಂಬ ಅರಿವು ಬಂದರೆ ಮಾತ್ರ ಅವನು ಮಾನವ; ಅದು ಮಾನವೀಯ ಬದುಕು, ಅದು ಮಾನವಂತ ದೇಶ. ನಾನು ಬದುಕಬೇಕು ಎಂಬುದು ಮನುಷ್ಯ ಸಹಜವೆ. ಆದರೆ
ನಾನೂ ಬದುಕಬೇಕು’ ಎಂಬಲ್ಲಿ ನೀನೂ ಬದುಕು’ ಎಂಬ ಮಾನವೀಯತೆ ಇದೆ. ಇದುವೇ ಮಾನವತ್ವ.
ನಾನೇ’ ಬದುಕಬೇಕು ಅನ್ನುವುದೇ ಸ್ವಾರ್ಥ ಮತ್ತು ಅಹಂಕಾರ. ಇವೆರಡೂ ಮನುಷ್ಯನನ್ನು ಮನುಷ್ಯನಾಗಿಯಷ್ಟೆ ಉಳಿಸುತ್ತವೆ. ವೈರಾಣುಗಳು ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಇವುಗಳು ಮನುಷ್ಯನನ್ನು ಮಾನವನನ್ನಾಗಿ ಮಾಡುವಲ್ಲಿ ಕಾಲಕಾಲಕ್ಕೆ ಪಾಠ ಮಾಡುತ್ತಲೇ ಇವೆ. ಮಾನವನಾಗುವುದು ಎಂದರೆ ಈ ಪಾಠ’ಗಳನ್ನು ಅರಿತು ಬದುಕುವುದು ಎಂದೇ ಅರ್ಥ. ವಸ್ತುಗಳನ್ನು ಬದಲಾಯಿಸಬಲ್ಲವನಿಗಿಂತಲೂ ಮನಸ್ಸನ್ನು ಬದಲಾಯಿಸಬಲ್ಲವನು ಮಾತ್ರ ಮಾನವನಾಗುತ್ತಾನೆ. ಹಣ, ಅಧಿಕಾರ, ಪ್ರತಿಷ್ಠೆ, ಜಿದ್ದು, ವೈರತ್ವದಲ್ಲಿ ಮುಳುಗಿ ಮನಸ್ಸು ಕಲ್ಲಾಗಿದೆ. ಹದವಾರಿ ಜೊಳ್ಳಾಗಿದೆ ಇಲ್ಲವೆ ಮದವೇರಿ ಮುಳ್ಳಾಗಿದೆ. ಈ ಮನಸನ್ನು ಕಟ್ಟುವಲ್ಲಿ ಬೇಕಾದುದು ಅರಿವು. ಈ ಅರಿವಿನ ಕೊರತೆಯಿರುವುದರಿಂದಲೇ ವಿಕೃತಿಗಳು ಆಗಾಗ್ಗೆ ವಿಜ್ರಂಭಿಸುವುದನ್ನು ಕಾಣುತ್ತಿದ್ದೇವೆ. ಕೊರೊನಾ ಕಾಲದಲ್ಲಿ ನಮ್ಮ ಸುತ್ತಮುತ್ತಲಿನ ಸಾವುಗಳನ್ನು ಕಂಡು ಕರಗಿಹೋಗಿರುವ ನಾವು ಯಾರದೇ ಫೋಟೋ ನೋಡಿದಾಕ್ಷಣ
ಅಯ್ಯೋ ಇವರಿಗೇನಾಯಿತಪ್ಪಾ’ ಎಂದು ಆತಂಕಕ್ಕೆ ಒಳಗಾಗುತ್ತೇವೆ. ಈ ಹೊತ್ತಿನಲ್ಲೇ ಇನ್ನು ಕೆಲವರು ಜೀವಂತವಿರುವವರ ಫೋಟೋ ಹಾಕಿ ಸತ್ತರೆಂದು ಸಾರುತ್ತಾ ಖುಷಿಪಡುತ್ತಿರುವುದನ್ನು ಕಾಣುತಿದ್ದೇವೆ.
ಸಾವಿನ ಹೊತ್ತಲ್ಲಿ ವೈರತ್ವವನ್ನು ಮರೆಯಬೇಕು ಎಂದು ನಮ್ಮ ತತ್ವಶಾಸ್ತ್ರಗಳೂ, ಧರ್ಮಗ್ರಂಥಗಳೂ ಸಾರಿವೆ. ಆದರೆ ಸತ್ತವರ ಸುದ್ದಿಗೆ ಕಾಮೆಂಟಿಸುವಾಗ ನಮ್ಮ ಒಳಗಿನ ವಿಕೃತಿ ಹೊರಬರುತ್ತಿರುವುದನ್ನು ಕಾಣುತ್ತಿದ್ದೇವೆ. ಅಸಹಾಯಕರಾಗಿ ಆಸ್ಪತ್ರೆಯ ಎದುರು ಸಹಸ್ರಾರು ಜನ ಗೋಳಾಡುತ್ತಾ ನಿಂತಿರುವಾಗಲೇ ರೋಗವನ್ನು ಕೂಡಾ ದುಡ್ಡುಮಾಡುವ ದಂದೆಯನ್ನಾಗಿ ಮಾಡಿಕೊಂಡವರನ್ನು ಕಾಣುತ್ತಿದ್ದೇವೆ. ಇವರೆಲ್ಲಾ ಕೇವಲ ಮನುಷ್ಯರು ಅಷ್ಟೆ. ಇಂಥವರ ಮನಸ್ಸನ್ನು ಇಂದು ಬದಲಾಯಿಸಬೇಕಾಗಿದೆ. ಅಲ್ಲಮನ ಅರಿವಿನ ಗುರುವನ್ನು ಇವರು ಕಾಣದ ಹೊರತು ಇವರು ಮಾನವರಾಗುವುದಿಲ್ಲ.
ಸಾವಿನ ಹೊತ್ತಲ್ಲಿ ವೈರತ್ವವನ್ನು ಮರೆಯಬೇಕು ಎಂದು ನಮ್ಮ ತತ್ವಶಾಸ್ತ್ರಗಳೂ, ಧರ್ಮಗ್ರಂಥಗಳೂ ಸಾರಿವೆ. ಆದರೆ ಸತ್ತವರ ಸುದ್ದಿಗೆ ಕಾಮೆಂಟಿಸುವಾಗ ನಮ್ಮ ಒಳಗಿನ ವಿಕೃತಿ ಹೊರಬರುತ್ತಿರುವುದನ್ನು ಕಾಣುತ್ತಿದ್ದೇವೆ.
ಜಗತ್ತಿನ ಯಾವ ದೇಶವೂ ಯಾವ ವ್ಯಕ್ತಿಯೂ ಇಂದು ನಿರುಮ್ಮಳವಾಗಿಲ್ಲ. ವಿಜ್ಞಾನ ತಂತ್ರಜ್ಞಾನದ ಕಾರಣ ಜಗತ್ತು ಇಂದು ಕಿರಿದಾಗಿದೆ. ಎಲ್ಲೋ ಸ್ವಿಚ್ ಹಾಕಿದರೆ ಇನ್ನೆಲ್ಲೋ ಬೆಳಕು ಹತ್ತಿಕೊಳ್ಳುತ್ತದೆ. ಎಲ್ಲೋ ಬಟನ್ ಒತ್ತಿದರೆ ಇನ್ನೆಲ್ಲೋ ಬೆಳಕು ಆರಿಹೋಗುತ್ತದೆ. ಕ್ಷಣಮಾತ್ರದಲ್ಲಿ ಎಲ್ಲರನ್ನೂ ನುಂಗಿ ಇಲ್ಲವಾಗಿಸುವ ವೇಗ ಆವೇಗ, ಗುಟುಕಿನಲ್ಲಿ ಆಪೋಷನ ತೆಗೆದುಕೊಳ್ಳುವ ಅಸಹನೆ, ಆಕ್ರೋಶ ಇವುಗಳೆಲ್ಲಾ ಢಾಳಾಗಿ ಗೋಚರಿಸುತ್ತಿವೆ. ಕಾವಿಗೆ ಕೂತ ಹೆಂಟೆಯಂತೆ ಮನಸ್ಸು ಕುದಿಯುತ್ತಿದೆ. ಕಂಡದ್ದನ್ನೆಲ್ಲಾ ಹುರಿದು ಮುಕ್ಕುವ ಸ್ವಾರ್ಥದೊಂದಿಗೆ ಯಾರನ್ನೂ, ಯಾವುದನ್ನೂ ಸಹಿಸಲಾರದ ವಿಕ್ಷಿಪ್ತತೆಯಲ್ಲಿ ಮನುಷ್ಯ ಅಸ್ವಸ್ಥನಾಗಿದ್ದಾನೆ.
ಕೊರೋನಾ ಕಾಲದ ಜಗತ್ತಿಗೆ ಈಗ ಮನುಷ್ಯ `ಮಾನವನಾಗ’ಬೇಕಾಗಿದೆ. ಜಾತಿ, ಧರ್ಮ, ದ್ವೇಷ, ಬಣ್ಣ, ಬಾವುಟಗಳ ಆಚೆಗೆ ನಿಂತು ಯಾವುದೋ ದೇಶ, ಯಾವುದೋ ವ್ಯಕ್ತಿ ಲೋಕದ ಕಷ್ಟಗಳಿಗೆ ಕರಗುತ್ತದೆ ಎಂದರೆ ಅಲ್ಲಿ ಮಾನವತ್ವ ಚಿಗುರಿದೆ ಎಂದೇ ಅರ್ಥ. ನಿದ್ದೆಯಿಲ್ಲದೆ ಒದ್ದಾಡುತ್ತಿರುವ ಅಸ್ವಸ್ಥ ಮನಸುಗಳಿಗೆ ತಾಯ್ತನದ ಹೊದಿಕೆ ಬೇಕು. ಕಾರುಣ್ಯದ ಹಾಸಿಗೆ ಬೇಕು. ಜಾಗೃತಿಯ ಗಾಳಿ ಬೇಕು. ಅರಿವಿನ ಜೋಗುಳ ಬೇಕು. ಮಾನವನಾಗುವುದು ಎಂದರೆ ಈ ತಾಯ್ತನ, ಕಾರುಣ್ಯ, ಜಾಗೃತಿ, ಅರಿವುಗಳನ್ನು ತನ್ನೊಳಗೆ ಆಗುಮಾಡಿಕೊಳ್ಳುವುದೇ ಆಗಿದೆ.
ಡಾ.ನಾಗೇಶ್ ಬಿದರಗೋಡು
ಹೊಸಗದ್ದೆ ಪೋಸ್ಟ್
ತೀರ್ಥಹಳ್ಳಿ ತಾ. ಶಿವಮೊಗ್ಗ ಜಿ.
9449265228