ಶರಾವತಿ ಹಿನ್ನೀರು ಪ್ರದೇಶದ ಹುಡುಗರಿಗೆ ಸ್ಫೂರ್ತಿಯ ಸೆಲೆಯಾಗಿದ್ದ ಲೋಹಿತ್ ಕಿಡದುಂಬೆ ಅಕಾಲಿಕ ಸಾವು ಆ ಭಾಗದ ಆತನ ಒಡನಾಡಿಗಳಿಗೆ ತೀವ್ರ ಆಘಾತ ತಂದಿದೆ. ಕರೂರು ಸೀಮೆಯಲ್ಲಿನ ಯಾವುದೇ ಯುವಜನ ಮೇಳ, ಸಾಹಿತ್ಯ ಸಮ್ಮೇಳನ, ಹಿನ್ನೀರಿನ ಜನರ ಹೋರಾಟ, ಕ್ರಿಕೆಟ್, ವಾಲಿಬಾಲ್ ಪಂದ್ಯಾವಳಿ ಹೀಗೆ ಏನೆ ಆದರೂ ಅಲ್ಲಿ ಲೋಹಿತ್ ಹವಾ ಇರುತಿತ್ತು.
ಕರೂರು ಸಮೀಪದ ಮೂರ್‍ಕೈ ಎಂಬ ಸ್ಥಳದಲ್ಲಿ ಹಿನ್ನೀರು ಸಂತ್ರಸ್ಥ ಹುಡುಗರ ಆಟೋಟಕ್ಕಾಗಿಯೇ ಒಂದು ಕ್ರೀಡಾಂಗಣ ಮಾಡಿದ್ದಾರೆ. ಅಲ್ಲಿನ ಯುವಕ ಪಡೆ ಮಾಡಿದ್ದ ಈ ಸಾಹಸ ಕೆಲಸದಲ್ಲಿ ಮುಂಚೂಣಿಯಲ್ಲಿದ್ದದ್ದು, ಇದೇ ಲೋಹಿತ್, ಸಾಗರ ಸೀಮೆಯಲ್ಲಿ ಯಾವುದೇ ಕ್ರಿಕೆಟ್ ಟೂರ್ನಮೆಂಟ್ ನಡೆದರೂ ಅಲ್ಲಿ ಕರೂರು ಟೀಂ ಇರುತಿತ್ತು. ಜಾನಪದ ಗಾಯಕನೂ ಆಗಿದ್ದ ಲೋಹಿತ್ ಅಲ್ಲಿನ ಸಾಂಸ್ಕೃತಿಕ ತಂಡಕ್ಕೆ ನೇತೃತ್ವ ನೀಡುತ್ತಿದ್ದ.
ಬರೀ ಕ್ರೀಡೆ ಮತ್ತು ಹಾಡು ಮಾತ್ರವಲ್ಲದೆ, ವಿದ್ಯಾಭ್ಯಾಸದಲ್ಲೂ ಮುಂದೆ ಇದ್ದ ಲೋಹಿತ್ ಎಂಎಸ್ಸಿಯಲ್ಲಿ ರ್ಯಾಂಕ್‍ಗಳಿಸುವ ಮೂಲಕ ಚಿನ್ನದ ಪದಕ ಪಡೆದಿದ್ದ,ಬಯೋಕಾನ್ ಅಂತ ಸಂಸ್ಥೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ಲೋಹಿತ್‍ಗೆ ಊರು-ಕೇರಿ ಮೇಲೆ ಇನ್ನಿಲ್ಲದ ಅಭಿಮಾನ. ಬಡತನದಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದ ಆತ ಕೂಲಿಗೆ ಹೋಗಿ ಫೀಜಿಗೆ ಹಣ ಹೊಂದಿಸಿಕೊಳ್ಳುತ್ತಿದ್ದ ಎನ್ನುತ್ತಾರೆ ಅವರ ಒಡನಾಡಿಗಳು.
ನೌಕರಿಗೆ ಸೇರಿದ ಮೇಲೂ ಊರಿನ ಯಾವುದೇ ಸಾಂಸ್ಕೃತಿಕಮತ್ತು ಕ್ರೀಡಾ ಕಾರ್ಯಕ್ರಮ ಮಿಸ್ ಮಾಡಿಕೊಳ್ಳದ ಲೋಹಿತ್, ಶರಾವತಿ ಹಿನ್ನೀರ ನಾಡಿನ ಎಲ್ಲ ಆಗುಹೋಗುಗಳಿಗೂ ಪ್ರತಿಸ್ಪಂದಿಸುತ್ತಾ ಎಲ್ಲರ ಪ್ರೀತಿ ಗಳಿಸಿದ್ದ.
ಕಾಡಿನ ಮಕ್ಕಳಾದ ನಮಗೆ ಕೊರೊನ ಯಾಕೆ ಬರುತ್ತದೆ ಎಂಬ ಒಂದೇ ನಿರ್ಲಕ್ಷ್ಯದಿಂದ ಆಸ್ಪತ್ರೆಗೆ ಹೋಗುವುದನ್ನು ವಿಳಂಬ ಮಾಡಿದ್ದಕ್ಕಾಗಿ ಇಂದು ಜೀವತೆರಬೇಕಾಯಿತು. ಲೋಹಿತ್ ತಂದೆ ಅಂಗವಿಕಲರಾಗಿದ್ದರೂ, ಆ ಭಾಗದಲ್ಲಿ ಯಕ್ಷಗಾನ ಭಾಗವತಿಕೆಗೆ ಹೆಸರುವಾಸಿ. ಹೀಗೆ ಕಲಾವಿದ. ಹೋರಾಟಗಾರ, ಕ್ರೀಡಾಳು ಆಗಿದ್ದ ಲೋಹಿತ್ ಗೆಜ್ಜೆ ಕಟ್ಟಿ ಕುಣಿದಿದ್ದ ಊರಲ್ಲಿ ಈಗ ಬರೀ ಹೆಜ್ಜೆಗುರುತುಗಳಷ್ಟೇ ಉಳಿದಿವೆ. ಚಿಕ್ಕ ಮಕ್ಕಳು, ಪತ್ನಿ ಸೋದರ ಹಾಗೂ ಅಪಾರ ಗೆಳೆಯರು ಮಾತ್ರ ಬೌತಿಕವಾಗಿ ತಮ್ಮ ನಡುವಿಲ್ಲದ ಮಿತ್ರನ ನೆನೆದು ಕಣ್ಣೀರಾಗುತ್ತಿದ್ದಾರೆ. ಯಾರಿಗೂ ಜಗ್ಗದ ಮಲೆನಾಡಿನ ಗಟ್ಟಿಹುಡುಗ ಕೊರೊನಕ್ಕೆ ಬಲಿಯಾದದ್ದು ಮಾತ್ರ ಘೋರ ಅನ್ಯಾಯವೇ ಸರಿ.