ರಾಜ್ಯಾದ್ಯಂತ ಮೆಗಾ ಲೋಕ ಅದಾಲತ್ ಮೂಲಕ ರಾಜಿ ಆಗಬಹುದಾದಂತಹ ಪ್ರಕರಣಗಳನ್ನು ವಿಲೇವಾರಿ ಮಾಡಲಾಗುತ್ತಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿಯೂ ಸಹ ಸುಮಾರು 18333 ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಇತ್ಯರ್ಥಪಡಿಸಲು ಗುರುತಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮುಸ್ತಫಾ ಹುಸೇನ್ ಎಸ್.ಎ. ಹೇಳಿದರು.
ಇಂದು ಜಿಲ್ಲಾ ನ್ಯಾಯಾಲಯದಲ್ಲಿ ಏರ್ಪಡಿಸಲಾಗಿದ್ದ ಬೃಹತ್ ಲೋಕ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾ ಮತ್ತು ಎಲ್ಲ ತಾಲ್ಲೂಕು ಗಳ ನ್ಯಾಯಾಲಯಗಳಲ್ಲಿ ಇಂದು ಲೋಕ ಅದಾಲತ್ ನಡೆಯುತ್ತಿದ್ದು ಗುರುತಿಸಲಾದ ರಾಜೀಯಾಗಬಲ್ಲ ಪ್ರಕರಣಗಳ ಇತ್ಯರ್ಥ ಆಗಲಿವೆ. ಇಲ್ಲಿ ಡಿಕ್ರಿ ಆದ ಪ್ರಕರಣಗಳು ಅಂತಿಮವಾಗಿದ್ದು ಮೇಲ್ಮನವಿ ಹೋಗಲು ಅವಕಾಶ ಇರುವುದಿಲ್ಲ. ಉಭಯ ಕಕ್ಷಿದಾರರನ್ನು ಕರೆಸಿ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಮಾಡುವುದರಿಂದ ಸಾರ್ವಜನಿಕರ ಹಾಗೂ ನ್ಯಾಯಾಲಯದ ಅಮೂಲ್ಯವಾದ ಸಮಯ ಉಳಿತಾಯವಾಗಿ, ತ್ವರಿತ, ಸುಲಭ ಮತ್ತು ಖರ್ಚಿಲ್ಲದೆ ನ್ಯಾಯ ಸಾಧ್ಯವಾಗಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ನ್ಯಾಯ ವಿತರಣೆಯ ಸದವಕಾಶವನ್ನು ಉಪಯೋಗಿಸಿಕೊಳ್ಳುವಂತೆ ಅವರು ಕರೆ ನೀಡಿದರು.
೧ನೇ ಅಪರ ಜಿಲ್ಲಾ ನ್ಯಾಯಾಧೇಶರಾದ ಕೆ.ಎಸ್.ಮಾನು ಮಾತನಾಡಿ, ರಾಜೀ ಸಂಧಾನದ ಮೂಲಕ ಸೌಹಾರ್ದಯುತ ಮತ್ತು ಶೀ ಘ್ರ ನ್ಯಾಯ ಒದಗಿಸುವ ಉದ್ದೇಶ ಹೊಂದಿರುವ ಲೋಕ ಅದಾಲತ್ ನ ಈ ಕಾರ್ಯ ಸಾಕಾರಗೊಳ್ಳಲು ಎಲ್ಲರ ಸಹಕಾರ ಅತ್ಯಗತ್ಯವಾಗಿದೆ. ಅಗತ್ಯ ಇರುವವರೆಲ್ಲ ಇದರ ಸದುಪಯೋಗ ಪಡೆದು ಬೃಹತ್ ಲೋಕ ಅದಾಲತ್ ನ್ನು ಯಶಸ್ವಿಗೊಳಿಸಬೇಕೆಂದರು.
ಎಎಸ್ಪಿ ಡಾ.ಶೇಖರ್ ಮಾತನಾಡಿ, ಲೋಕ ಅದಾಲತ್ ನಡೆಸುವ ಹಿಂದೆ ಬಹಳಷ್ಟು ಜನರ ಪರಿಶ್ರಮ ಇದೆ. ಜಿಲ್ಲಾ ಪ್ರಧಾನ ನ್ಯಾಯಾಧೀಶರ ಮಾರ್ಗದರ್ಶನದಲ್ಲಿ ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ, ಸಂಸ್ಥೆಗಳ ಸಹಕಾರದಿಂದ ಶೀಘ್ರ ನ್ಯಾಯ ವಿತರಣೆ ಸಾಧ್ಯವಾಗುತ್ತಿದ್ದು ಎಲ್ಲರೂ ಇದರ ಸದುಪಯೋಗ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಮತಿ ಸರಸ್ವತಿ, ಹಿರಿಯ ಮತ್ತು ಕಿರಿಯ ಶ್ರೇಣಿಯ ನ್ಯಾಯಾಧೀಶರು, ಸಂಧಾನಕಾರರು, ವಕೀಲರು. ನ್ಯಾಯಾಲಯದ ಸಿಬ್ಬಂದಿಗಳು, ಕಕ್ಷಿದಾರರು, ಪಾಲ್ಗೊಂಡಿದ್ದರು.