ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಅಟಲ್ ಬಿಹಾರಿ ವಾಜಪೇಯಿ ವಸತಿ ಬಡಾವಣೆಯ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆಯ ಕಾನೂನು ತೊಡಕನ್ನು ಇತ್ಯರ್ಥಗೊಳಿಸಿ, ೫೬೦ಫಲಾನುಭವಿಗಳ ಪೈಕಿ ಅರ್ಹರಾದ ೧೩೦ಫಲಾನುಭವಿಗಳಿಗೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಖಾತಾ ಪತ್ರ ವಿತರಿಸಿದರು.
ಪೊಲೀಸ್ ಚೌಕಿಯ ವಿಪ್ರ ಸಭಾಂಗಣದಲ್ಲಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಏರ್ಪಡಿಸಿದ್ದ ಮಲ್ಲಿಗೇನಹಳ್ಳಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಬಡಾವಣೆಯಲ್ಲಿನ ನಿವೇಶನ ಹಂಚಿಕೆಯಲ್ಲಿ ಕ್ರಮಬದ್ದವಾಗಿರುವ ನಿವೇಶನ ಹಂಚಿಕೆದಾರರಿಗೆ ಖಾತಾ ಪತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಗೂ ಸೂಡಾ ಅಧ್ಯಕ್ಷರ ಅವಿರತ ಶ್ರಮದಿಂದ ಸಮಸ್ಯೆಗಳನ್ನು ತೊಡೆದು ಹಾಕಿ ಖಾತಾ ಪತ್ರಗಳನ್ನು ವಿತರಿಸುತ್ತಿರುವುದು ಹರ್ಷದ ಸಂಗತಿಯಾಗಿದೆ. ಅನೇಕ ವರ್ಷಗಳಿಂದ ನಿವೇಶನಕ್ಕಾಗಿ ಕಾದಿದ್ದು, ಇಂದು ನಿವೇಶನ ಪಡೆಯುತ್ತಿರುವ ಫಲಾನುಭವಿಗಳು ತ್ವರಿತಗತಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ನೆಮ್ಮದಿಯ ಜೀವನ ಕಳೆಯುವಂತಾಗಬೇಕು ಎಂದವರು ಆಶಿಸಿದರು.
ಈ ಬಡಾವಣೆಯಲ್ಲಿ ಕಲ್ಪಿಸಬೇಕಾದ ಮೂಲಭೂತ ಸೌಕರ್ಯಗಳ ಬಗ್ಗೆ ಅಲ್ಲಿನ ನಿವಾಸಿಗಳು ಈಗಾಗಲೆ ತಮ್ಮ ಗಮನಕ್ಕೆ ತಂದಿದ್ದು, ಅಗತ್ಯವಾಗಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು ಉಳಿದ ಅರ್ಹ ಫಲಾನುಭವಿಗಳಿಗೂ ಶೀಘ್ರದಲ್ಲಿ ನಿವೇಶನದ ಖಾತಾ ಪತ್ರಗಳನ್ನು ಹಂಚಿಕೆ ಮಾಡಲು ಕ್ರಮವಹಿಸಲಾಗುವುದು ಎಂದರು.
ಅರ್ಹರಾದ ೧೩೦ ಫಲಾನುಭವಿಗಳಿಗೆ ಖಾತಾ ಪತ್ರಗಳನ್ನು ಸಚಿವರು, ಸಂಸದರು ಹಾಗೂ ವೇದಿಕೆಯಲ್ಲಿದ್ದ ಗಣ್ಯರು ವಿತರಿಸಿದರು.
ಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಮೇಯರ್ ಶ್ರೀಮತಿ ಸುನಿತಾ ಅಣ್ಣಪ್ಪ, ಸೂಡಾ ಮಾಜಿ ಅಧ್ಯಕ್ಷ ಜ್ಞಾನೇಶ್ವರ್, ಚನ್ನಬಸಪ್ಪ, ಶ್ರೀಮತಿ ಅನಿತಾ ರವಿಶಂಕರ್ ಮುಂತಾದವರು ಉಪಸ್ಥಿತರಿದ್ದರು.
ಸೂಡಾ ಆರಂಭದ ಅವಧಿಯಿಂದ ಅನೇಕ ಅಧ್ಯಕ್ಷರುಗಳ ಆಡಳಿತಾವಧಿಯಲ್ಲಿ ಈವರೆಗೆ ಸುಮಾರು ೧೬ ಬಡಾವಣೆಗಳನ್ನು ಸೃಜಿಸಿ, ಸಹಸ್ರಾರು ನಿವೇಶನಗಳನ್ನು ಸರ್ಕಾರದ ನಿಯಾಮನುಸಾರ ಅರ್ಹರಿಗೆ ವಿತರಿಸಲಾಗಿದೆ. ಮೂಲೆಯ ನಿವೇಶನಗಳನ್ನು ಬಹಿರಂಗ ಹರಾಜು ಮೂಲಕ ವಿತರಿಸಲಾಗಿದೆ ಎಂದ ಅವರು, ಮಲ್ಲಿಗೇನಹಳ್ಳಿ ವಾಜಪೇಯಿ ಬಡಾವಣೆ ಸೃಜಿಸುವಲ್ಲಿ ಆಗಿದ್ದ ಸಮಸ್ಯೆಗಳನ್ನು ಇತ್ಯರ್ಥಪಡಿಸುವಲ್ಲಿ ಸಚಿವರು, ಸಂಸದರು ನೆರವಾಗಿದ್ದಾರೆ. ಉಳಿದಿರುವ ಫಲಾನುಭವಿಗಳಿಗೂ ನಿವೇಶನ ಅತ್ಯಲ್ಪ ಅವಧಿಯಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು.
– ಎಸ್. ಎಸ್.ಜ್ಯೋತಿ ಪ್ರಕಾಶ್ , ಸೂಡಾ ಅಧ್ಯಕ್ಷ