ಶಿವಮೊಗ್ಗ: ಸೆಪ್ಟೆಂಬರ್ 30 ರೊಳಗೆ ಲಿಂಗಾಯತ ಪಂಚಮಸಾಲಿ, ಗೌಡ ಲಿಂಗಾಯತ, ಮಲೆಗೌಡ, ದೀಕ್ಷಾ ಲಿಂಗಾಯತರುಗಳಿಗೆ ೨ ಎ ಹಾಗೂ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ನೀಡದಿದ್ದರೆ, ಅಕ್ಟೋಬರ್ 1 ರಿಂದ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಘೋಷಣೆ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, 2 ಎ ಮೀಸಲಾತಿಗಾಗಿ ಕಳೆದ ಜನವರಿ ೧೪ ರಿಂದ ಕೂಡಲ ಸಂಗಮದಿಂದ ಬೆಂಗಳೂರಿನ ವಿಧಾನಸೌಧದವರೆಗೆ ಸುಮಾರು 31ದಿನಗಳ ಕಾಲ ಪಾದಯಾತ್ರೆ ನಡೆಸಲಾಗಿದೆ. ಹುಬ್ಬಳ್ಳಿಯಲ್ಲಿ ಸಮಾವೇಶ ಮಾಡಿ ಒತ್ತಾಯಿಸಿದ್ದೇವೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ23 ದಿನಗಳ ಕಾಲ ನಿರಂತರ ಧರಣಿ ಸತ್ಯಾಗ್ರಹ ಮಾಡಿದ್ದೇವೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನರನ್ನು ಸೇರಿಸಿ ವಿರಾಟ್ ಪ್ರದರ್ಶನ ಮಾಡಿದ್ದೇವೆ. ಇಷ್ಟೆಲ್ಲ ಆದ ಮೇಲೂ ಸರ್ಕಾರ ನಮಗೆ ಭರವಸೆ ನೀಡಿದೆಯೇ ಹೊರತು ಇನ್ನೂ ಆದೇಶ ಮಾಡಿಲ್ಲ ಎಂದರು.
ಸರ್ಕಾರ ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿ ಸೆ. ೧೫ ರೊಳಗೆ ಮೀಸಲಾತಿ ಪ್ರಕಟಿಸುವುದಾಗಿ ಭರವಸೆ ನೀಡಿತ್ತು. ಸರ್ಕಾರ ನೀಡಿದ ಭರವಸೆ ದಿನ ಸಮೀಪಿಸುತ್ತಿದೆ. ಸೆ. 15 ರ ವರೆಗೆ ನಾವು ಕಾಯುತ್ತೇವೆ. ನುಡಿದಂತೆ ನಡೆಯುವ ಸರ್ಕಾರ ಮೀಸಲಾತಿ ನೀಡುವಂತೆ ಒತ್ತಾಯಿಸುತ್ತೇವೆ. ಆಗಲೂ ನಮ್ಮ ಬೇಡಿಕೆ ಈಡೇರದಿದ್ದರೆ, ಮತ್ತೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹವನ್ನು ಮುಂದುವರೆಸುತ್ತೇವೆ ಎಂದರು.
2ಎ ಮೀಸಲಾತಿಗಾಗಿ ಆಗ್ರಹಿಸಿ 4 ನೇ ಹಂತದಲ್ಲಿ ನಾವು ಮುಂದುವರೆದ ಚಳವಳಿಯ ಭಾಗವಾಗಿ ‘ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಬೃಹತ್ ರಾಜ್ಯ ಅಭಿಯಾನ’ವನ್ನು ಆಗಸ್ಟ್ 26 ರಿಂದ ಮಲೆಮಹದೇಶ್ವರ ಬೆಟ್ಟದಿಂದ ಆರಂಭಿಸಲಾಗಿದೆ. ಈ ಅಭಿಯಾನವು ಅಕ್ಟೋಬರ್ 1 ರವರೆಗೆ ರಾಜ್ಯಾದ್ಯಂತ ನಡೆಯುತ್ತಿದೆ. ಸೆ. 3 ರಂದು ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಸೊರಬ, ಶಿಕಾರಿಪುರ, ಸಾಗರದಲ್ಲಿ ಕೂಡ ಮುಂದುವರೆಯಲಿದೆ. ಒಟ್ಟಾರೆ ಇಡೀ ರಾಜ್ಯಾದ್ಯಂತ ಈ ಅಭಿಯಾನದ ಮೂಲಕ ನಾವು ಸರ್ಕಾರವನ್ನು 2ಎ ಮೀಸಲಾತಿ ನೀಡುವಂತೆ ಒತ್ತಾಯಿಸುತ್ತೇವೆ ಎಂದರು.
ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರ ಕೊಟ್ಟ ಮಾತನ್ನು ನೆನಪಿಸುವುದು, ಮೀಸಲಾತಿ ಹಕ್ಕನ್ನು ಪಡೆಯಲು ನಮ್ಮ ನಿರಂತರ ಹೋರಾಟ ಇರುತ್ತದೆ. ಪಂಚ ಲಕ್ಷ ಸಂಖ್ಯೆಯಲ್ಲಿ ನಾವು ಭಾಗವಹಿಸುತ್ತೇವೆ. ಹೊಸ ಇತಿಹಾಸವನ್ನೇ ನಿರ್ಮಾನ ಮಾಡುತ್ತೇವೆ. ನಮ್ಮ ಹೋರಾಟ ಯಾರ ವಿರುದ್ಧವಲ್ಲ. ಎಲ್ಲ ಹಿಂದುಳಿದ ವರ್ಗಗಳಿಗೂ ಮೀಸಲಾತಿ ನೀಡಬೇಕೆಂಬುದು ನಮ್ಮ ಉದ್ದೇಶವಾಗಿದೆ. ಆ ಮೂಲಕ ನಮ್ಮ ಮಕ್ಕಳ ಶಿಕ್ಷಣಕ್ಕೆ, ಉದ್ಯೋಗಕ್ಕೆ ಮೀಸಲಾತಿ ಪಡೆಯಬೇಕು ಎಂಬುದು ನಮ್ಮ ಹಂಬಲ ಎಂದರು.
ಶಿವಮೊಗ್ಗದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಶಿವಪ್ಪ ನಾಯಕ, ಬಸ್ ನಿಲ್ದಾಣಕ್ಕೆ ಕೆಳದಿ ಚನ್ನಮ್ಮ, ಹಾಗೂ ಗುಲ್ಬರ್ಗಾ ವಿವಿಗೆ ಬಸವಣ್ಣನವರ ಹೆಸರು ಇಡುವಂತೆ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ, ಹೆಚ್.ವಿ. ಮಹೇಶ್ವರಪ್ಪ, ಹೆಚ್.ಎಂ. ಚಂದ್ರಶೇಖರಪ್ಪ, ಮಲ್ಲೇಶಪ್ಪ, ನಟರಾಜ್, ಶಿವಣ್ಣ, ಕುಮಾರ್ ಇದ್ದರು.
ಅಭಿಯಾನದ ಮೂಲಕ ನಾವು ಸರ್ಕಾರವನ್ನು 2A ಮೀಸಲಾತಿ ನೀಡುವಂತೆ ಒತ್ತಾಯಿಸುತ್ತೇವೆ ಎಂದರು.
ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರ ಕೊಟ್ಟ ಮಾತನ್ನು ನೆನಪಿಸುವುದು, ಮೀಸಲಾತಿ ಹಕ್ಕನ್ನು ಪಡೆಯಲು ನಮ್ಮ ನಿರಂತರ ಹೋರಾಟ ಇರುತ್ತದೆ. ಪಂಚ ಲಕ್ಷ ಸಂಖ್ಯೆಯಲ್ಲಿ ನಾವು ಭಾಗವಹಿಸುತ್ತೇವೆ. ಹೊಸ ಇತಿಹಾಸವನ್ನೇ ನಿರ್ಮಾಣ ಮಾಡುತ್ತೇವೆ.ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ