ವಿದ್ಯಾರ್ಥಿಗಳಲ್ಲಿ ವೃತ್ತಿಪರತೆ, ಕೌಶಲ್ಯತೆ, ಸಂಸ್ಕøತಿ ಮತ್ತು ಆರ್ಥಿಕ ಸಬಲತೆ ನೀಡುವ ಶಿಕ್ಷಣ ನಮ್ಮದಾಗಬೇಕೆಂಬ ಉದ್ದೇಶದಿಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗಿದ್ದು, ಶಿಕ್ಷಕರಾದಿಯಾಗಿ ಎಲ್ಲರೂ ಈ ಬಗ್ಗೆ ಅಧ್ಯಯನ ಮಾಡಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ವಿಚಾರಗಳು, ನಮ್ಮ ನಾಡಿನ ಸಂಸ್ಕøತಿ ಜೊತೆಗೆ ತಾಂತ್ರಿಕತೆಗೆ ಒತ್ತು ನೀಡುವ ಶಿಕ್ಷಣ ನೀತಿ ಇದಾಗಿದೆ. ಪರ ವಿರೋಧ ಎಲ್ಲೆಡೆ ಇರುತ್ತದೆ. ಆದರೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಶಿಕ್ಷಣ ನೀತಿಯನ್ನು ಎಲ್ಲರೂ ತಿಳಿದು ಅನುಷ್ಠಾನಗೊಳಿಸಬೇಕೆಂದರು.
ಇನ್ನು ವಿಧಾನ ಪರಿಷತ್ ಶಾಸಕರು ಶಿಕ್ಷಣ ವ್ಯವಸ್ಥೆಯಲ್ಲಿರುವ ಅನೇಕ ಸಮಸ್ಯೆಗಳ ಬಗ್ಗೆ ಹೇಳಿದ್ದು, ಮುಂದಿನ ಅಧಿವೇಶನದ ಒಳಗೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಪದಾಧಿಕಾರಿಗಳು, ವಿಧಾನ ಪರಿಷತ್ ಶಾಸಕರು, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರನ್ನೊಳಗೊಂಡು ಶಿಕ್ಷಣ ಸಚಿವರು ಮತ್ತು ತಮ್ಮ ಸಹಯೋಗದಲ್ಲಿ ಸಭೆ ಕರೆದು ಆದ್ಯತೆಯ ಮೇಲೆ ಶಿಕ್ಷಣ ವ್ಯವಸ್ಥೆ, ಶಿಕ್ಷಕರ, ಉಪನ್ಯಾಸಕರ ಮತ್ತು ಎನ್‍ಪಿಎಸ್ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಲೋಕೋಪಯೋಗಿ ಸಚಿವರಾದ ಸಿ.ಸಿ.ಪಾಟಿಲ್ ಮಾತನಾಡಿ, ಮನುಷ್ಯನನ್ನು ಒಂದು ವ್ಯಕ್ತಿ ಮತ್ತು ಶಕ್ತಿಯನ್ನಾಗಿ ರೂಪಿಸುವ ಸಾಮಥ್ರ್ಯ ಕೇವಲ ಶಿಕ್ಷಕರಿಗಿದ್ದು, ನಮ್ಮ ಸಂಸ್ಕøತಿಯಲ್ಲಿ ತಾಯಿ-ತಂದೆ ನಂತರದ ಸ್ಥಾನ ಶಿಕ್ಷಕರು ತುಂಬುತ್ತಾರೆ. ಎಲ್ಲ ಮಕ್ಕಳಿಗೆ ಮೌಲ್ಯಾಧಾರಿತ ಮತ್ತು ಸರ್ವತೋಮುಖ ಬೆಳವಣಿಗೆಯಾಗುವಂತಹ ಶಿಕ್ಷಣ ವ್ಯವಸ್ಥೆ ಮಾಡಲಾಗುತ್ತಿದೆ. ಕೋವಿಡ್ ಸಂಕಷ್ಟದಲ್ಲಿ ಅನೇಕ ಶಿಕ್ಷಕರು ತಮ್ಮ ಜೀವದ ಹಂಗು ತೊರೆದು ಯೋಧರಂತೆ ಸೇವೆ ಸಲ್ಲಿಸಿರುವುದು ಶ್ಲಾಘನೀಯವಾಗಿದ್ದು, ಕೋವಿಡ್‍ನಿಂದ ಮೃತ ಹೊಂದಿದ ಶಿಕ್ಷಕರ ಪರವಾಗಿ ಸರ್ಕಾರ ಇದೆ ಎಂದರು.
ತುಂಬ ಕಾಲ ಶಾಲೆಯಿಂದ ಮಕ್ಕಳು ಹೊರಗುಳಿಯುವುದು ರಾಷ್ಟ್ರೀಯ ಹಿತದೃಷ್ಟಿಯಿಂದ ಒಳ್ಳೆಯದಲ್ಲವೆಂದು ಸರ್ಕಾರ ಶಾಲೆ ಆರಂಭಿಸುವ ನಿರ್ಧಾರ ಮಾಡಿ ಶಾಲೆ ಆರಂಭಿಸಿದ್ದು, ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದರು.
ಸಂಸದರಾದ ಬಿ.ವೈ.ರಾಘವೇಂದ್ರ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿವೆ. ಜೊತೆಗೆ ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ವಿಶೇಷವಾಗಿ ಖಾಸಗಿ ಶಿಕ್ಷಕರ ಸೇವೆ ಮತ್ತು ಅವರ ತ್ಯಾಗ ಅವಿಸ್ಮರಣೀಯ. ಸ್ಮರ್ಧಾತ್ಮಕ ಜಗತ್ತಿನಲ್ಲಿ ನಾವು ಅಪ್‍ಡೇಟ್ ಆಗಬೇಕಿದ್ದು, ಹೊಸ ಶಿಕ್ಷಣ ನೀತಿಯನ್ನು ಸವಾಲಾಗಿ ಸ್ವೀಕರಿಸಿ ಅಳವಡಿಸಿಕೊಳ್ಳಬೇಕು. ಹಾಗೂ ಇಂದು ಚಾಲನೆ ನೀಡಲಾಗಿರುವ ರೈತ ಮಕ್ಕಳ ವಿದ್ಯಾರ್ಥಿವೇತನದ ಸದುಯಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕೆಂದರು.
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಿದ ಸರ್ಕಾರವನ್ನು ಉತ್ತಮ ಆಡಳಿತ ನೀಡಿದ ಸರ್ಕಾರ ಎನ್ನಬಹುದು. ಈ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿವೆ. ಅತಿ ಹೆಚ್ಚು ಪ್ರಯೋಗಕ್ಕೀಡಾಗುವ ಕ್ಷೇತ್ರ ಕೂಡ ಇದಾಗಿದೆ. ಪ್ರಸ್ತುತ ತಂತ್ರಜ್ಞಾನ, ಪೈಪೋಟಿಯ ಯುಗದಲ್ಲಿ ಶಿಕ್ಷಣ ಪದ್ದತಿ ಕೂಡ ಅದಕ್ಕೆ ತಕ್ಕನಾಗಿ ಬದಲಾಗುವ, ಮಾರ್ಪಾಡಾಗುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಸಾಧಕ ಬಾಧಕಗಳನ್ನು ಶಿಕ್ಷಕರಾದಿಯಾಗಿ ಎಲ್ಲರೂ ಅಧ್ಯಯನ ಮಾಡಬೇಕಿದೆ. ಈ ಹೊಸ ಶಿಕ್ಷಣ ನೀತಿಗೆ ಶಿಕ್ಷಕರೂ ಹೇಗೆ ಬದಲಾಗಬೇಕು, ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂಬ ಬಗ್ಗೆ ಕೂಡ ಚಿಂತನೆ ಆಗಬೇಕು ಎಂದರು.
ಎನ್‍ಪಿಎಸ್ ವ್ಯವಸ್ಥೆ ಸರಿಪಡಿಸುವವಿಕೆಗೆ ಒತ್ತಾಯ :
ಹೊಸ ಪಿಂಚಣಿ ಪದ್ದತಿಯು ಸರ್ಕಾರಿ ನೌಕರರ ನಿವೃತ್ತಿ ನಂತರದ ಜೀವನ ನಿರ್ವಹಣೆಗೆ ತೊಡಕುಂಟಾಗುವ ರೀತಿ ಇದೆ. ನಿವೃತ್ತಿ ನಂತರದ ದಿನಗಳಲ್ಲಿ ಇನ್ನೊಬ್ಬರ ಮುಂದೆ ಕೈ ಒಡ್ಡದೇ ಘನತೆಯಿಂದ ಬದುಕಲು ಪಿಂಚಣಿ ವ್ಯವಸ್ಥೆ ತರಲಾಗಿತ್ತು. ಆದರೆ ಎನ್‍ಪಿಎಸ್ ನಿಂತ ನಿವೃತ್ತರ ಜೀವನ ಅತಂತ್ರ ಸ್ಥಿತಿಗೆ ಬರಲಿದೆ. ಎರಡೂವರೆ ಶಾಸಕರಾಗಿ ನಿವೃತ್ತಿ ಹೊಂದಿದವರಿಗೂ ಪಿಂಚಣಿ ಯೋಜನೆ ಇದೆ. ಹಾಗಾದರೆ ಎಲ್ಲರಿಗೂ ಎನ್‍ಪಿಎಸ್‍ಗೆ ಒಳಪಡಿಸುವಂತಾಗಲಿ. ಸರ್ಕಾರದ ಯಂತ್ರದ ಭಾಗವಾಗಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಪಿಂಚಣಿ ವ್ಯವಸ್ಥೆಯನ್ನು ಸರ್ಕಾರ ಸರಿಪಡಿಸಬೇಕೆಂದು ಇದೇ ವೇಳೆ ಒತ್ತಾಯಿಸಿದರು.
ಶೇ.100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ :
ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ ಯಲ್ಲಿ 625 ಕ್ಕೆ 625 ಅಂಕ ಪಡೆದ ಸಾಗರ, ತೀರ್ಥಹಳ್ಳಿ ಮತ್ತು ಶಿವಮೊಗ್ಗದ ಮೂರು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಇದೇ ವೇಳೆ ಆಯ್ದೆ ಶಿಕ್ಷಕರಿಗೆ 2021 ನೇ ಸಾಲಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಸಾ.ಶಿ.ಇ. ಉಪನಿರ್ದೇಶಕ ರಮೇಶ ಎನ್.ಎಂ. ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಶಿವಮೊಗ್ಗ ಮಹಾನಗರಪಾಲಿಕೆ ಮಹಾಪೌರೆ ಶ್ರೀಮತಿ ಸುನೀತಾ ಅಣ್ಣಪ್ಪ, ಉಪಮಹಾಪೌರ ಗನ್ನಿ ಶಂಕರ್, ಸಾ.ಕೃ.ಉ.ಮ.ಅ.ಸಮಿತಿ ಅಧ್ಯಕ್ಷ ಆನಂದ ಅ.ಶ್ರೀ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಎಂ.ಎಲ್.ವೈಶಾಲಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಂ. ಲಕ್ಷ್ಮೀಪ್ರಸಾದ್, ಕ.ರಾ.ಸ.ನೌ.ಸಂ.ದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಜಿ.ಶಿ.&ತ ಸಂಸ್ಥೆಯ ಪ್ರಾಂಶುಪಾಲರ ಬಸವರಾಜಪ್ಪ.ಬಿ.ಆರ್,ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಾಲಾ ಶಿಕ್ಷಕ ಸಂಘಗಳ ಅಧ್ಯಕ್ಷರು, ಸದಸ್ಯರುಗಳು ಪಾಲ್ಗೊಂಡಿದ್ದರು.