ಮಕ್ಕಳು ಗ್ರಾಂಥಿಕ ಭಾಷೆಯಲ್ಲಿ ಕಲಿಯುತಿರುವುದರಿಂದ ಇಂದಿನ ಸಾಹಿತಿಗಳು ಗ್ರಾಂಥಿಕ ಭಾಷೆಯಲ್ಲಿ ಹೆಚ್ಚು ಸಾಹಿತ್ಯ ರಚನೆ ಮಾಡುತ್ತಿದ್ದಾರೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಗ್ರಾಮೀಣ ಭಾಷೆ ಬಳಕೆ ಹೆಚ್ಚಾಗಬೇಕು. ನಮ್ಮ ಸುತ್ತಲಿನ ಪರಿಸರ ಭಾಷೆಯನ್ನು ಕಲಿಯಬೇಕು. ಆಗ ನಮ್ಮ ಕನ್ನಡ ಭಾಷೆ ವೈವಿಧ್ಯತೆ ಉಳಿಯುತ್ತದೆ ಎಂದು ಮಲೆನಾಡು ಭಾಷಾ ಕಮ್ಮಟ ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಮೋಹನ್ ಚಂದ್ರಗುತ್ತಿ ಅವರು ಅಭಿಪ್ರಾಯಪಟ್ಟರು.
ಶಿವಮೊಗ್ಗದ ಸಿಂಗಾರ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಶಿವಮೊಗ್ಗ ಹಾಗೂ ಕನ್ನಡ ಭಾಷ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಲೆನಾಡು ಭಾಷಾ ಕಮ್ಮಟದಲ್ಲಿ ವಿವಿಧ ತಾಲೂಕಿನ 50ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಮಲೆನಾಡು ಭಾಷಾ ಕಮ್ಮಟ ವಿದ್ಯಾರ್ಥಿಗಳಿಗೆ ಭಾಷೆ ಬಗ್ಗೆ ತಿಳಿಸಲು ಇಂದು ಅತೀ ಅಗತ್ಯ ಎಂದು ಆಶಯ ನುಡಿಗಳನ್ನಾಡಿದ ಕುಮುದಾ ಸುಶೀಲ್ ಅಭಿಪ್ರಾಯಪಟ್ಟರು .
ಮಲೆನಾಡು ಭಾಷಾ ಕಮ್ಮಟದ ನಿರ್ದೇಶಕರು, ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರು ಆದ ಅಧ್ಯಕ್ಷತೆ ವಹಿಸಿದ್ದ ರವಿರಾಜ್ ಸಾಗರ್ ಅವರು ಮಾತನಾಡುತ್ತ ಇಂದಿನ ನಮ್ಮ ಆಧುನಿಕ ಶಿಕ್ಷಣ ವ್ಯವಸ್ಥೆ ಏಕರೂಪ ಭಾಷೆಯನ್ನು ಕೇಂದ್ರೀಕರಿಸುತ್ತದೆ.ಇದರಿಂದ ಪ್ರಾದೇಶಿಕ ಭಾಷೆಗಳು ಅಳಿವಿನ ಅಂಚಿಗೆ ತಳ್ಳುವ ಅಪಾಯದಲ್ಲಿವೆ. ನಮ್ಮ ಗ್ರಾಮೀಣ ಭಾಷಾ ಸೊಗಡು ಸಾಹಿತ್ಯದಲ್ಲಿ ಹೆಚ್ಚೆಚ್ಚು ಬಳಕೆ ಆಗುವಂತೆ ಇಂದಿನ ಯುವ ಸಾಹಿತಿಗಳು ಕಾಳಜಿ ವಹಿಸಬೇಕು. ಮತ್ತು ವಿದ್ಯಾರ್ಥಿಗಳು ಗ್ರಾಮೀಣ ಭಾಷಾಪ್ರೇಮ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳ ಮಂದಾರ ಪ್ರಶಸ್ತಿಯನ್ನು ಡಾ. ಪ್ರಕಾಶ್ ನಾಡಿಗ್ ಅವರಿಗೆ, ಡಾ ಶಿವಪ್ರಕಾಶ್ ಕೊಡೆಕಲ್ ದತ್ತಿ ಪ್ರಶಸ್ತಿಯನ್ನು ಅನಿತಾ ಮೇರಿ ಅವರಿಗೆ, ಮಕ್ಕಳ ಮಂದಾರ ಗೌರವ ಪ್ರಶಸ್ತಿಯನ್ನು ಶೋಭ ಸತೀಶ್ ಅವರಿಗೆ ನೀಡಲಾಯಿತು.
ವೇದಿಕೆಯಲ್ಲಿ ರುದ್ರಪ್ಪ ಕೊಳಲೆ ,ಡಾ ಶಶಿಧರ್, ಹಸನ್ ಬೆಳ್ಳಿಗನೂಡು, ತ್ರಿವೇಣಿ ಭದ್ರಾವತಿ ಇದ್ದರು.ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಅಣ್ಣಪ್ಪ ಒಂಟಿ ಮಾಳಗಿ ಕಾರ್ಯಕ್ರಮ ನಿರೂಪಿಸಿದರು. ಜಗದೀಶ್ ಬಿ.ಕೆ.ಯವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.