ಸಿನಿಮಾ ಕಲಾವಿದರು ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಅತ್ಯಂತ ಸಂಕಷ್ಟಕ್ಕೀಡಾಗಿದ್ದು, ಸಾರ್ವಜನಿಕರು ಥಿಯೇಟರ್ ಗಳಲ್ಲೇ ಸಿನಿಮಾ ನೋಡಿ ಪ್ರೋತ್ಸಾಹಿಸಿದಾಗ ಮಾತ್ರ ಸಿನಿಮಾ ರಂಗ ಉಳಿಯಲು ಸಾಧ್ಯವೆಂದು ಖ್ಯಾತ ಸಂಗೀತ ನಿರ್ದೇಶಕ ಹಾಗೂ ಸಾಹಿತಿ ವಿ. ಮನೋಹರ್ ಹೇಳಿದ್ದಾರೆ.
ಶಿವಮೊಗ್ಗ ಮಹಾನಗರ ಪಾಲಿಕೆ, ಜಿಲ್ಲಾಡಳಿತ, ವಾರ್ತಾ ಇಲಾಖೆ, ಶಿವಮೊಗ್ಗ ಬೆಳ್ಳಿಮಂಡಲ, ಸಿನಿಮೊಗೆ ಚಿತ್ರ ಸಮಾಜ ವತಿಯಿಂದ ನಗರದ ಹೆಚ್.ಪಿ.ಸಿ. ಚಿತ್ರಮಂದಿರದಲ್ಲಿ ಹಮ್ಮಿಕೊಂಡಿದ್ದ ಶಿವಮೊಗ್ಗ ದಸರಾ ಚಲನಚಿತ್ರೋತ್ಸವ -೨೦೨೧ ಉದ್ಘಾಟಿಸಿ ಅವರು ಮಾತನಾಡಿದರು.
ಸಿನಿಮಾ ಎನ್ನುವುದು ಸಿನಿ ಕಲಾವಿದರಿಗೆ ತಾಯಿ ಇದ್ದ ಹಾಗೇ. ಶಿವಮೊಗ್ಗ ಜಿಲ್ಲೆ ಪ್ರಕೃತಿ ಮಾತೆಯ ಪುಣ್ಯ ಕ್ಷೇತ್ರವಾಗಿದೆ. ಕಲಾವಿದರಿಗೆ ತಾಯಿ ಇದ್ದಂತೆ. ಇಲ್ಲಿ ಅನೇಕ ಸಾಹಿತ್ಯ ದಿಗ್ಗಜರು ಮತ್ತು ಕಲಾವಿದರು ಜನ್ಮ ತಾಳಿದ್ದು, ಸಿನಿಮಾ ರಂಗಕ್ಕೆ ಶಿವಮೊಗ್ಗದ ಕೊಡುಗೆ ಅಪಾರ. ಇಲ್ಲಿಯ ಜನ ಕಲೆಯ ಆರಾಧಕರು ಮತ್ತು ಕಲಾವಿದರಿಗೆ ಅನ್ನದಾತರು ಆಗಿದ್ದಾರೆ ಎಂದರು.
ದಸರಾ ಸಂದರ್ಭದಲ್ಲಿ ಈ ರೀತಿಯ ಕಾರ್ಯಕ್ರಮ ಏರ್ಪಡಿಸಿ ಚಿತ್ರ ಕಲಾವಿದರನ್ನು ಗೌರವಿಸುತ್ತಿರುವುದು ಕಲಾವಿದರಲ್ಲಿ ಸ್ಪೂರ್ತಿ ತಂದಿದೆ. ಅಲ್ಲದೇ, ಇವತ್ತಿನ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿರುವ ಚಲನಚಿತ್ರ ಮತ್ತು ಕಿರುತೆರೆಯ ಅಭಿನಯಿಸುವ ದಂಪತಿಗಳಾದ ಸುಂದರ್ ಮತ್ತು ವೀಣಾ ಸುಂದರ್, ಗಾಯಕ, ಸಂಗೀತ ಸಂಯೋಜನಕ ವಾಸುಕಿ ವೈಭವ್, ಕಲಾವಿದ ಶಿವಮೊಗ್ಗ ರಾಮಣ್ಣ ಎಲ್ಲರೂ ಕೂಡ ಚಿತ್ರರಂಗಕ್ಕೆ ಅಭೂತಪೂರ್ವ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಧಾರಾವಾಹಿಯ ಒಂದು ಎಪಿಸೋಡ್ ಒಂದು ಸಿನಿಮಾಕ್ಕೆ ಸಮ. ಅಂತಹ ಧಾರಾವಾಹಿಯ ಮಧ್ಯದಲ್ಲಿ ಬರುವ ಜಾಹೀರಾತುಗಳು ಮುಗಿದ ಮೇಲೆ ಚಾನೆಲ್ ಬದಲಿಸದೇ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಸಂಭಾಷಣೆಕಾರ ಸುಂದರ್ ಅವರಾಗಿದ್ದು, ಅತ್ಯಂತ ಬೇಡಿಕೆಯ ಪೋಷಕ ನಟರಾಗಿದ್ದಾರೆ. ವೀಣಾ ಸುಂದರ್ ಕೂಡ ಅತ್ಯುತ್ತಮ ಕಲಾವಿದೆ. ಶಿವಮೊಗ್ಗ ರಾಮಣ್ಣ ಎಲೆಮರೆ ಕಾಯಿಯಾಗಿ ಸಾವಿರಾರು ಕಲಾವಿದರಿಗೆ ಅವಕಾಶ ಕೊಟ್ಟವರು. ಮತ್ತು ವಾಸುಕಿ ವೈಭವ್ ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ದೊಡ್ಡ ಸಾಹಿತಿಗಳ ಸಾಹಿತ್ಯವನ್ನು ಅರಗಿಸಿಕೊಂಡವರು. ಇಂತಹ ಪ್ರತಿಭೆಗಳನ್ನು ಗುರುತಿಸಿ ಸಮಾರಂಭದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿರುವುದು ಶಿವಮೊಗ್ಗದ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಕಲಾವಿದ ಸುಂದರ್ ಮಾತನಾಡಿ, ಮನುಷ್ಯನ ಎಲ್ಲ ಬೇಕು ಬೇಡಗಳನ್ನು ಪೂರೈಸಿದ ನಂತರ ಕಟ್ಟಕಡೆಗೆ ಸಿನಿಮಾ ಕ್ಷೇತ್ರದ ಕಡೆಗೆ ಬರುವಂತಹುದು. ನಾವೆಲ್ಲರೂ ಅನಿವಾರ್ಯವಾಗಿ ಆ ಕ್ಷೇತ್ರದಲ್ಲೇ ಇದ್ದೇವೆ. ಕನ್ನಡ ಸಿನಿಮಾಕ್ಕೆ ಶಿವಮೊಗ್ಗ ಜಿಲ್ಲೆ ಬೇರು. ಸಿನಿಮಾವನ್ನು ಪ್ರೋತ್ಸಾಹಿಸುವುದು ಕೂಡ ಶಿವಮೊಗ್ಗದಂತಹ ಜಿಲ್ಲೆಗಳೇ. ಈ ಕ್ಷೇತ್ರವನ್ನು ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.
ಗಾಯಕ ವಾಸುಕಿ ವೈಭವ್ ಶಿವಮೊಗ್ಗದ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಸಂತೋಷವಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆರ್ಯವೈಶ್ಯ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್, ಮೇಯರ್ ಸುನಿತಾ ಅಣ್ಣಪ್ಪ, ಉಪಮೇಯರ್ ಗನ್ನಿಶಂಕರ್, ದಸರಾ ಚಲನಚಿತ್ರ ಸಮಿತಿ ಅಧ್ಯಕ್ಷ ಲಕ್ಷ್ಮಿ ಶಂಕರನಾಯ್ಕ್, ಬೆಳ್ಳಿಮಂಡಲ ಸಂಚಾಲಕ ವೈದ್ಯ, ಪಾಲಿಕೆ ಆಯುಕ್ತ ಚಿದಾನಂದ ವಠಾರೆ, ದಸರಾ ಚಲನಚಿತ್ರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಕಲಾವಿದರನ್ನು ಗೌರವಿಸುವುದರಿಂದ ಅವರಿಗೆ ಸ್ಪೂರ್ತಿ ಸಿಗುತ್ತದೆ. ಸಿನಿಮಾ ರಂಗ ಕಳೆದ ಎರಡು ವರ್ಷಗಳಲ್ಲಿ ತಡೆಯಲಾಗದಷ್ಟು ಹೊಡೆತ ಬಿದ್ದಿದ್ದು, ಸಿನಿಮಾ ಕಲಾವಿದರಿಗೆ ಆನ್ ಲೈನ್ ಜೀವನ ಇಲ್ಲ. ಜನ ಚಿತ್ರಮಂದಿರಕ್ಕೆ ಬಂದಾಗ ಮಾತ್ರ ಸಿನಿಮಾ ಕಲಾವಿದರಿಗೆ ಬದುಕು. ದಸರಾ ಸಂದರ್ಭದಲ್ಲಿ ಆ ದೇವಿಯು ಎಲ್ಲರಿಗೂ ಆರೋಗ್ಯ ನೀಡಲಿ, ಕೋವಿಡ್ ಸಂಹಾರ ಮಾಡಲಿ.
– ವೀಣಾ ಸುಂದರ್,ಸಿನಿಮಾ ಕಲಾವಿದೆ