ಕಟ್ಟಡ ಕಾರ್ಮಿಕರು ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ರಾಜೀವಗಾಂಧಿ ಕಟ್ಟಡ ಕಾರ್ಮಿಕರ ಕ್ಷೇಮಾಭೀವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸೂಡಾ ಅಧ್ಯಕ್ಷ ಎನ್. ರಮೇಶ್ ಹೇಳಿದರು.
ಶನಿವಾರ ಹುಣಸೋಡು ಗ್ರಾಮದಲ್ಲಿ ಸಂಘದವ ತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆನ್ ಲೈನ್ ಮೂಲಕ ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸಿ ಅವರು ಮಾತನಾಡಿದರು.
ಸರ್ಕಾರದಲ್ಲಿ ಕಾರ್ಮಿಕರ ಕಲ್ಯಾಣ ನಿಧಿಯಲ್ಲಿ ೨೫ ಸಾವಿರ ಕೋಟಿ ರೂ. ಹಣವಿದೆ. ಈ ಹಣವನ್ನು ಕಾರ್ಮಿಕರ ಕಲ್ಯಾಣಕ್ಕಾಗಿಯೇ ಬಳಸಬೇಕಾಗಿದೆ. ಕಟ್ಟಡ ಕಾರ್ಮಿಕರು ಸರ್ಕಾರದ ಸೌಲಭ್ಯ ಪಡೆಯಲು ಗುರುತಿನ ಚೀಟಿಯನ್ನು ಪಡೆಯುವುದು ಕಡ್ಡಾಯವಾಗಿದೆ. ಆದ್ದರಿಂದ ಕಾರ್ಮಿಕರು ಗುರುತಿನ ಚೀಟಿಯನ್ನ ಮರೆಯದೆ ಪಡೆಯಬೇಕು. ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜೀವ್ ಗಾಂಧಿ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಉಚಿತವಾಗಿ ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ಶಿಬಿರ ಆಯೋಜಿಸುವ ಮೂಲಕ ನೀಡುತ್ತಿದೆ. ಆನ್ ಲೈನ್ ಮೂಲಕವೇ ಗುರುತಿನ ಚೀಟಿ ಪಡೆಯಬೇಕಾಗಿರುವುದರಿಂದ ಸಂಘವೇ ಈ ಕೆಲಸ ಉಚಿತವಾಗಿ ಮಾಡುತ್ತಿದೆ ಎಂದರು.
ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಅನೇಕ ಸೌಲಭ್ಯಗಳಿವೆ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ, ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ, ೫೮ ವರ್ಷವಾದ ಮೇಲೆ ನಿವೃತ್ತಿ ವೇತನ, ಆಸ್ಪತ್ರೆ ಸೌಲಭ್ಯ ಸೇರಿದಂತೆ ಇನ್ನು ಹಲವು ಸೌಲಭ್ಯಗಳಿದ್ದು. ಇದರ ಉಪಯೋಗವನ್ನು ಕಟ್ಟಡ ಕಾರ್ಮಿಕರು ಪಡೆಯಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹುಣಸೋಡು ಗ್ರಾಮಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ, ಕಾರ್ಮಿಕರು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಮಾಡಿಸಬೇಕು. ಮತ್ತು ನವೀಕರಣ ಕೂಡ ಮಾಡಿಸಬೇಕು ನಕಲಿ ಗುರುತಿನ ಚೀಟಿಗಳ ಹಾವಳಿ ನಿಲ್ಲಬೇಕು. ಕಟ್ಟಡ ಕಾರ್ಮಿಕರು ಮೃತಪಟ್ಟರೆ ೫ ಲಕ್ಷ ರೂ ಸರ್ಕಾರದಿಂದ ಪರಿಹಾರ ಸಿಗುತ್ತದೆ. ಹಾಗಾಗಿ ಕಟ್ಟಡ ಕಾರ್ಮಿಕರು ಸರ್ಕಾರದ ಸೌಲತ್ತುಗಳನ್ನು ಪಡೆಯಲು ಮುಂದಾಗಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತೆರೆಜಾ, ವೆಂಕಟೇಶ್, ಹರೀಶ್, ಮುಜೀಬ್, ಮುಂತಾದವರಿದ್ದರು ಸುಮಾರು ೧೦೦ ಕ್ಕೂ ಹೆಚ್ಚು ಕಾರ್ಮುಕರಿಗೆ ಗುರುತಿನ ಚೀಟಿ ನೀಡಲಾಯಿತು.