ಮಲೆನಾಡಿನಾದ್ಯಂತ ಬುಧವಾರ ಭೂಮಿ ಹುಣ್ಣಿಮೆ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಅನ್ನ ಕೊಟ್ಟು ನಮ್ಮನ್ನೆಲ್ಲ ಪೊರೆವ ಭೂತಾಯಿಗೆ ಸೀಮಂತ ಎಂದೇ ಶ್ರದ್ದಾಭಕ್ತಿಯಿಂದ ಆಚರಿಸುವ ಭೂಮಿ ಹುಣ್ಣಿಮೆ ಹಬ್ಬ ಮಲೆನಾಡಿನ ರೈತಾಪಿ ವರ್ಗಕ್ಕೆ ಪ್ರಮುಖ ಹಬ್ಬವಾಗಿದೆ. ರೈತರು ಬಿತ್ತಿದ ಬೀಜ ಮೊಳೆತು ಫಸಲಾಗುವ ಸಂದರ್ಭ ಭೂಮಿತಾಯಿ ಗರ್ಭವತಿಯಾಗಿರುತ್ತಾಳೆ. ಬೆಳೆ ಅದರಲ್ಲೂ ಭತ್ತದ ಬೆಳೆ ಈಗ ಹೊಡೆಯಾಗುವ ಸಂದರ್ಭವಾಗಿರುತ್ತದೆ. ತೆನೆಕಟ್ಟುವ ಮುನ್ನ ಭೂಮಿ ತಾಐಇಗೆ ಬಯಕೆ ತೀರಿಸುವ ಹಬ್ಬವೆಂಬ ಭಾವನಾತ್ಮಕ ಸಂಬಂಧವನ್ನು ರೈತ ಸಮುದಾಯ ಹೊಂದಿದೆ. ಈ ಹಿನ್ನೆಲೆಯಲ್ಲಿ ಹೊಲಗದ್ದೆ, ತೋಟಗಳಿಗೆ ಪೂಜೆ ಮಾಡಿ ಅನ್ನಕೊಡುವ ಭೂಮಿತಾಯಿಗೆ ಪೂಜೆ ಭಕ್ತಿ ಸಮರ್ಪಣೆ ಮಾಡುತ್ತಾರೆ.
ಆಚರಣೆ ಹೇಗೆ?
ಭೂಮಿ ಹುಣ್ಣಿಗೆ ಹಿಂದಿನ ದಿನ ರಾತ್ರಿಯಿಡಿ ಅಡುಗೆ ಮಾಡುವ ರೈತ ಮಹಿಳೆಯರು ಏಳು ಬಗೆಯ ಪಲ್ಲೆ, ಸಹಿ, ಬುತ್ತಿ, ಕಡುಬು, ತುಪ್ಪ, ಬೆಣ್ಣೆ ಹೀಗೆ ಹಲವು ರೀತಿಯ ಖಾದ್ಯಗಳನ್ನು ತಯಾರು ಮಾಡುತ್ತಾರೆ. ಸೂರ್ಯಮೂಡುತ್ತಿದ್ದಂತೆ ಮನೆಮಂದಿಯಲ್ಲಾ ತೋಟ ಗದ್ದೆಗಳಿಗೆ ಹೋಗಿ ಅಲ್ಲಿ ನಿಗದಿತ ಸ್ಥಳದಲ್ಲಿ ಬಾಳೆಕಂದು ,ತೋರಣ, ಹೂವಿನಿಂದ ಸಿಂಗರಿಸಿ ಆ ಜಾಗದಲ್ಲಿ ಪೂಜೆ ಮಾಡಿದ ಬಳಿಕ ಅಲ್ಲಿಯೇ ಊಟ ಮಾಡಿ ಸಂಭ್ರಮಿಸುತ್ತಾರೆ. ಭೂಮಿಯನ್ನು ನಂಬಿ ಬದುಕುತ್ತಿರುವ ಎಲ್ಲಾ ರೈತ ಸಮುದಾಯ ಈ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸುತ್ತಾರೆ. ಬಸುರಿಯಾಗಿರುವ ಭೂಮಿಗೆ ಬಯಕೆ ತೀರಿಸಬೇಕೆಂಬ ಉದ್ದೇಶದಿಂದ ಮನೆಯಲ್ಲಿ ಮಾಡಿರುವ ಎಲ್ಲಾ ತಿನಿಸುಗಳನ್ನು ಹೊಲ ಗದ್ದೆಗಳಿಗೆ(ಚರಗ) ಬೀರುತ್ತಾರೆ. ಬುಧವಾರ ಮಲೆನಾಡಿನಾದ್ಯಂತ ರೈತ ಸಮುದಾಯ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು.
ಬೂಮಣ್ಣಿ ಬುಟ್ಟಿ:
ಮಲೆನಾಡಿನಲ್ಲಿ ಗದ್ದೆಗೆ ಕೊಂಡೊಯ್ಯುವ ಪೂಜಾ ಪರಿಕರಗಳನ್ನು ಬೂಮಣ್ಣಿ ಬುಟ್ಟಿಯಲ್ಲಿ ಗದ್ದೆಯ ಕೊಂಡೊಯ್ಯುವ ಪದ್ಧತಿಯಿದೆ. ಈ ಬಟ್ಟಿಗೆ ಕೆಮ್ಮಣ್ಣು ಮತ್ತು ಅಕ್ಕಿ ಹಿಟ್ಟಿನಿಂದ ಕೃಷಿ ಸಂಸ್ಕೃತಿ ಬಿಂಬಿಸುವ ಚಿತ್ತಾರ ಬಿಡಿಸಲಾಗುತ್ತದೆ. ಹಬ್ಬಕ್ಕೆ ಹದಿನೈದು ದಿನ ಮೊದಲೇ ಈ ಚಿತ್ತಾರ ಬರೆಯುವ ಕಾಯಕ ಆರಂಭಿಸುವ ಮಲೆನಾಡಿನ ಚಿತ್ತಾರಗಿತ್ತಿಯರು ಈ ಕಾಯಕದಲ್ಲಿಯೇ ತಮ್ಮ ಅಸ್ಮತೆಯನ್ನು ಕಂಡುಕೊಳ್ಳುತ್ತಿರುವುದು ಅತ್ಯಂತ ವಿಶೇಷವಾಗಿದೆ.