ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮೌಲ್ಯಾಧರಿತ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಶಿವಮೊಗ್ಗ ಡಯಟ್ ಉಪನ್ಯಾಸಕ ಹರಿಪ್ರಸಾದ್ ಹೇಳಿದ್ದಾರೆ.
ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶ್ರೀ ಮಠದ ೩೧ ನೇ ವಾರ್ಷಿಕೋತ್ಸವ ಸಮಾರಂಭ ಮತ್ತು ೨೦೨೦ -೨೧ ನೇ ಸಾಲಿನ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯ್ಲಲಿ ಅತ್ಯುನ್ನತ ಶ್ರೇಣಿ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮತ್ತು ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾಗಿ ಪೊಲೀಸ್ ಅಧಿಕಾರಿಗಳಾದ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ವಿದ್ಯಾರ್ಥಿಗಳ ಅಭಿನಂದನೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಬದುಕಲ್ಲಿ ಏನಾದರೊಂದು ಮೌಲ್ಯ ಇಟ್ಟುಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಯಾವುದೇ ಕ್ಷೇತ್ರವಿರಲಿ, ಶಿಸ್ತುಬದ್ಧ ಜೀವನ ಮತ್ತು ತಾನು ನಂಬಿದ ಮೌಲ್ಯಗಳನ್ನು ಬಿಡದೇ ಮುಂದುವರೆದಾಗ ಫಲ ಸಿಗುವುದು ಖಂಡಿತ ಎಂದರು.
ನಮ್ಮ ದೇಶದಲ್ಲಿ ನೂರಾರು ಉದಾಹರಣೆಗಳಿವೆ. ಸಂತರು, ದಾರ್ಶನಿಕರು, ರಾಜಕಾರಣಿಗಳು, ಉದ್ಯಮಿಗಳು ಯಾವುದೇ ಕ್ಷೇತ್ರವಾದರೂ ತಮ್ಮ ಮೌಲ್ಯಗಳಿಂದಲೇ ಗಮನಸೆಳೆದವರು. ಶಂಕರಾಚಾರ್ಯರು ಸೇರಿದಂತೆ ಜ್ಞಾನ, ಕ್ಷಮೆ, ತ್ಯಾಗ, ಬಲಿದಾನ ಎಲ್ಲಾ ಗುಣಗಳನ್ನು ಮೈಗೂಡಿಸಿಕೊಂಡು ದೇಶಕ್ಕೆ ಕೀರ್ತಿ ತಂದ ಅನೇಕ ಮಹಾತ್ಮರಿದ್ದಾರೆ. ಯಾವುದೇ ಕೆಲಸದ ಆರಂಭ ಮತ್ತು ಅಂತ್ಯ ನಾವೇ ಮಾಡಬೇಕು. ನಮ್ಮ ಯಶಸ್ಸು ನಮ್ಮ ಕೈಯಲ್ಲೇ ಇದೇ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ನಾಗರಾಜ್ ಮಾತನಾಡಿ, ಮೊಬೈಲ್ ಮತ್ತು ಇಂಟರ್ ನೆಟ್ ಗಳಿಂದ ನಮ್ಮ ಮಕ್ಕಳು ಹಿನ್ನಡೆ ಅನುಭವಿಸುತ್ತಿದ್ದಾರೆ ಎಂದು ಪೋಷಕರು ದೂರುತ್ತಾರೆ. ಆದರೆ, ಫಲಿತಾಂಶ ಬಂದಾಗ ಶೇಕಡ ೧೦ ರಷ್ಟು ವಿದ್ಯಾರ್ಥಿಗಳು ಎ ಪ್ಲಸ್ ಶ್ರೇಣಿಯಲ್ಲಿ ಪಾಸಾಗಿದ್ದರೆ ಉಳಿದವರು ಕೂಡ ಉತ್ತಮ ಅಂಕ ಗಳಿಸಿರುತ್ತಾರೆ. ಆದರೆ, ಕರ್ನಾಟಕ ವಿದ್ಯಾರ್ಥಿಗಳು ಜೆ.ಡಬ್ಲ್ಯೂ.ಇ. ಪರೀಕ್ಷೆಯಲ್ಲಿ ಮಾತ್ರ ವಾರ್ಷಿಕ ಕೇವಲ ೨೦೦ ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ದೇಶದಲ್ಲಿ ೧೮ ನೇ ಸ್ಥಾನದಲ್ಲಿದ್ದಾರೆ. ಐಐಟಿ ಸೇರುವ ಪ್ರಯತ್ನದಲ್ಲಿ ನಮ್ಮ ರಾಜ್ಯದ ವಿದ್ಯಾರ್ಥಿಗಳು ಯಾಕೆ ಹಿಂದುಳಿದಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಅಂಕಗಳು ಮಾತ್ರ ಸಾಧನೆಯಲ್ಲ, ಅಂಕಗಳ ಜೊತೆಗೆ ಉಳಿದ ಜ್ಞಾನ ಕೊಡಬೇಕು. ಅರಿವು ಉತ್ತರವಾಗಬೇಕು. ತಾವು ಕುಟುಂಬಕ್ಕೆ ಮಾತ್ರ ಆಸ್ತಿಯಾಗದೇ ದೇಶಕ್ಕೂ ಆಸ್ತಿಯಾಗಬೇಕು ಎಂದರು.
ಸಾನಿಧ್ಯ ವಹಿಸಿದ್ದ ಪ್ರಸನ್ನನಾಥ ಸ್ವಾಮೀಜಿ ಅವರು, ಸಾಧಕರಿಗೆ ಅಭಿನಂದನೆ ಸಲ್ಲಿಸುತ್ತಾ ಕ್ಷೇತ್ರದ ಶೈಕ್ಷಣಿಕ ಸಂಸ್ಥೆಗಳಲ್ಲಿ ಓದಿದ ಮಕ್ಕಳು ಸಾಂಸ್ಕೃತಿಕ, ಕ್ರೀಡಾ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಅತ್ಯುನ್ನತ ಸ್ಥಾನದಲ್ಲಿದ್ದಾರೆ. ಈ ಬಾರಿ ಕ್ಷೇತ್ರದಿಂದ ಪೊಲೀಸ್ ಇಲಾಖೆಯಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸುತ್ತಿರುವುದು ವಿಶೇಷ ಎಂದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶಿಕ್ಷಣ ಸಂಸ್ಥೆಯ ಟ್ರಸ್ಟಿಗಳು, ಲೆಕ್ಕ ಪರಿಶೋಧಕರಾದ ಡಾ. ದೇವರಾಜ್, ಶ್ರೀಕಾಂತ್, ಕೆ.ಬಿ. ಪ್ರಸನ್ನಕುಮಾರ್ ಮತ್ತಿತರರು ಇದ್ದರು.