Malenadu Mitra
ರಾಜ್ಯ ಶಿವಮೊಗ್ಗ

ನೈಜ ಕತೆಯ ಸಿನಿಮಾಯಶಸ್ವಿಯಾಗುತ್ತದೆ ಸಂವಾದದಲ್ಲಿ ಚಿತ್ರನಟ ದೊಡ್ಡಣ್ಣ ಅಭಿಮತ

ಯಾವುದೇ ಸಿನಿಮಾ ನೈಜಕತೆಯನ್ನು ಹೊಂದಿದ್ದರೆ ಅದು ಯಶಸ್ವಿಯಾಗುತ್ತದೆ ಎಂದು ಚಿತ್ರನಟ ದೊಡ್ಡಣ್ಣ ಅಭಿಪ್ರಾಯಪಟ್ಟ್ಟಿದ್ದಾರೆ.
ಪ್ರೆಸ್ ಟ್ರಸ್ಟ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಮಾನವೀಯ ಗುಣ ಕತೆಯಲ್ಲಿರುಬೇಕು. ಅಂತಹ ವಸ್ತು ಇಟ್ಟುಕೊಂಡು ಸಿನಿಮಾ ಮಾಡಿದರೆ ಅದು ಅಮರವಾಗುತ್ತದೆ. ರಾಮಾಯಣ ಮತ್ತು ಮಹಾಭಾರತ ಕತೆಗಳು ಇಂದಿಗೂ ಅಷ್ಟೊಂದು ಪ್ರಖ್ಯಾತವಾಗಿರಲು ಮತ್ತು ಜನರು ನೆನೆಪಿಡಲು ಅವುಗಳ ನೈಜತೆಯೇ ಕಾರಣ ಎಂದು ವಿಶ್ಲೇಷಿಸಿದರು.
ಇಂತಹ ಕತೆಗಳು ಸಂಸ್ಕಾರವನ್ನು ಮತ್ತು ಜೀವನದ ಮಹತ್ವವನ್ನು ತಿಳಿಸುತ್ತವೆ. ಪ್ರಖ್ಯಾತ ಮಹಾಕಾವ್ಯಗಳೂ ಸಹ ಇಂದಿಗೂ ಜೀವಂತವಾಗಿವೆ. ರನ್ನ, ಪಂಪ, ಜನ್ನರ ಕೃತಿಗಳು ಜನರ ನಾಲಿಗೆಯ ಮೇಲೆ ನಲಿದಾಡುತ್ತಿವೆ. ಎಂದಿಗೂ ಇವು ಮರೆಯಾಗುವುದಿಲ್ಲ ಎಂದ ಅವರು, ಈ ಕೃತಿಗಳ ಕೆಲವು ಸಾಲುಗಳನ್ನು ಪಟಪಟನೆ ಹೇಳುವ ಮೂಲಕ ಕೃತಿಯ ಸೊಬಗನ್ನು ವಿವರಿಸಿದರು.
ಯಾವ ಪಾತ್ರವಾದರೂ ಸರಿ. ಅದಕ್ಕೆ ಜೀವ ತುಂಬುತ್ತೇನೆ. ತನ್ಮಯವಾಗಿ ನಟಿಸುತ್ತೇನೆ. ಇದು ಪ್ರತಿ ಕಲಾವಿದರಲ್ಲೂ ಇರಬೇಕು. ಇಂತಹುದೇ ಪಾತ್ರ ಕೊಡಿ ಎಂದು ಕೇಳಿ ಪಡೆಯುವುದಲ್ಲ. ಪರಕಾಯ ಪ್ರವೇಶವಾಗಿ ಅಭಿನಯಿಸಬೇಕು. ಆಗ ಆ ಸಿನಿಮಾ ಅಥವಾ ಆ ನಾಟಕಕ್ಕೆ ಇನ್ನಷ್ಟು ಜೀವಂತಿಕೆ ಬರುತ್ತದೆ. ಅದು ಖಳನಾಯಕನಾಗಲಿ, ನಾಯಕನಾಗಲಿ, ಅದಕ್ಕೊಂದು ಕಳೆಗಟ್ಟುತ್ತದೆ ಎಂದರು.
ತಮ್ಮ ನಟನಾ ಜೀವನದ ಬಗ್ಗೆ ವಿವರಿಸಿದ ಅವರು, ಮೇಷ್ಟ್ರು ಲಕ್ಕಪ್ಪಗೌಡ ಮತ್ತು ನಾಗರಾಜ್ ಎನ್ನುವವರ ನೆರಳಿನಲ್ಲಿ ಅಕ್ಷರ ಕಲಿತೆ.1967ರಲ್ಲಿ ಭದ್ರಾವತಿಯಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿದೆ. ಅಲ್ಲಿ ಐತಿಹಾಸಿಕ ಮತ್ತು ಜಾನಪದ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಅಲ್ಲಿಂದ ನಾಟಕ ರಂಗ ಕೈಬೀಸಿ ಕರೆಯಿತು. ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಜೋಕುಮಾರಸ್ವಾಮಿ ನಾಟಕ ಅಭಿನಯಿಸಿದ್ದೆ. ಆನಂತರ ಸಿನಿಮಾ ರಂಗವೂ ತನ್ನನು ಕರೆಯಿತು. ಅದರಲ್ಲಿ ಉತ್ತಮ ನಟನೆನ ಮೂಲಕ ಒಳ್ಳೆಯ ಪಾತ್ರ ಮಾಡಿದೆ. ಸುಮಾರು 800 ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ ಎಂದು ವಿವರಿಸಿದರು.
ಮೊಬೈಲ್ ಗೀಳಿನ ಬಗ್ಗೆ ಮಾತನಾಡಿದ ಅವರು, ಮನೆಯಲ್ಲಿನ ಮತ್ತು ಮನುಷ್ಯರ ನಡುವಿನ ಸಂಬಂಧವನ್ನು ಮೊಬೈಲ್ ಹಾಳುಮಾಡಿದೆ. ಇನ್ನೊಬ್ಬರು ಕರೆದರೂ ಗಮನಕೊಡದಷ್ಟು ತಲ್ಲೀನರಾಗಿ ಮೊಬೈಲ್ ಕೀ ಒತ್ತುತ್ತಿರುತ್ತೇವೆ. ಇದು ಅಪಾಯಕಾರಿ ಬೆಳವಣಿಗೆ. ಎಷ್ಟಕ್ಕೆ ಬೇಕೋ ಅಷ್ಟಕ್ಕೆ ಅದನ್ನು ಸೀಮಿತವಾಗಿರಬೇಕೆಂದ ಅವರು, ಕಾನ್ವೆಂಟ್ ಸಂಸ್ಕೃತಿ ಮಕ್ಕಳನ್ನು ನಮ್ಮಿಂದ ದೂರಮಾಡುತ್ತಿದೆ. ಪೋಷಕರೊಂದಿಗಿನ ಸಂಬಂಧವನ್ನು ಮಕ್ಕಳು ಕಡಿದುಕೊಳ್ಳುವಂತಾಗಿದೆ. ಕನ್ನಡ ಮತ್ತು ಕನ್ನಡ ಶಾಲೆ ಉಳಿಯಬೇಕು. ಇದರಲ್ಲಿ ಪೋಷಕರ ಜವಾಬ್ದಾರಿ ಅಧಿಕವಿದೆ. ಮಕ್ಕಳು ಕಾನ್ವೆಂಟ್ ಸೇರಿ ಕಲಿತು ಪೋಷಕರನ್ನು ಅನಾಥಾಶ್ರಮಕ್ಕೆ ಸೇರಿಸುವ ಕೆಲಸವನ್ನು ದೂರಮಾಡಬೇಕಿದೆ ಎಂದು ಹೇಳಿದರು.

ಸುದ್ದಿಯ ಸತ್ಯಾಸತ್ಯತೆ ಪರಿಶೀಲಿಸಬೇಕು

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಿರಿಯ ನ್ಯಾಯವಾದಿ ರೇವಣ ಸಿದ್ಧಯ್ಯ ಮಾತನಾಡಿ, ಯಾವುದೇ ಸುದ್ದಿ ಪ್ರಕಟ ಮಾಡಬೇಕಾದರೂ ಅದರ ಸತ್ಯಾಸತ್ಯತೆ ಪರಿಶೀಲಿಸಬೇಕು. ಸುದ್ದಿ ಪ್ರಕಟಿಸುವುದರಿಂದ ಸಮಾಜಕ್ಕೆ ಸಹಾಯವಾಗುತ್ತದೆಯೇ ಎಂಬುದನ್ನು ಗಮನಿಸಬೇಕಿದೆ. ಸುದ್ದಿಯಿಂದ ಯಾರಿಗೂ ಮಾನಹಾನಿಯಾಗಿರಬಾರದು. ಆಗ ಮಾತ್ರ ಸುದ್ದಿಯಿಂದ ಹೆಚ್ಚಿನ ಪರಿಣಾಮ ಆಗಲಿದೆ ಎಂದರು.
ಡೆಫಾರ್ಮೇಶನ್ ಮತ್ತು ನ್ಯಾಯಾಂಗ ನಿಂದನೆಯಾಗುವಂತಹ ಸುದ್ದಿಗಳನ್ನು ಪರಿಶೀಲಿಸಬೇಕು. ಯಾವುದೇ ದೃಷ್ಟಿಕೋನದಲ್ಲಿ ಸುದ್ದಿ ಪ್ರಕಟಿಸಿದರೂ ಕೂಡ ಕೆಲವೊಮ್ಮೆ ಕಾನೂನು ತೊಡಕು ಎದುರಿಸಬೇಕಾಗುತ್ತದೆ ಎಂದ ಅವರು, ಪತ್ರಕರ್ತರಿಗೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಗ್ರಂಥಾಲಯದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಕಾರ್ಯಪ್ರವೃತ್ತವಾಗಬೇಕಿದೆ ಎಂದರು.ಪತ್ರಕರ್ತರಿಗೆ ಕಾನೂನಿನ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಆಗಾಗ ಕಾರ್ಯಾಗಾರ ಹಾಗೂ ಸಂವಾದವನ್ನು ಏರ್ಪಡಿಸಿದರೆ ಹೆಚ್ಚು ಸೂಕ್ತ ಎಂದ ಅವರು, ಪತ್ರಿಕಾ ಭವನದಲ್ಲಿ ಗ್ರಂಥಾಲಯ ಸ್ಥಾಪನೆಗೆ ೨೫ ಸಾವಿರ ರೂ. ನಗದು ಅಥವಾ ಅಷ್ಟೇ ಬೆಲೆಯ ಪುಸ್ತಕಗಳನ್ನು ನೀಡುತ್ತೇನೆ ಎಂದರು. ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ, ಕಾರ್ಯದರ್ಶಿ ನಾಗರಾಜ್ ನೇರಿಗೆ ಇದ್ದರು.

Ad Widget

Related posts

ನಿಗದಿತ ಅವಧಿಯ ಒಳಗಾಗಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ: ಸಚಿವ ಸಿ.ಸಿ.ಪಾಟೀಲ್

Malenadu Mirror Desk

ಹುಲಿ & ಸಿಂಹಧಾಮಕ್ಕೆ ಬಂದ ನೂತನ ಅತಿಥಿಗಳು : ಪ್ರಾಣಿ ಪ್ರಭೇದಗಳ ಸಂಖ್ಯೆ 34ಕ್ಕೆ ಏರಿಕೆ

Malenadu Mirror Desk

ಗ್ರಾಮ ಪಂಚಾಯಿತಿಗಳ ಬಲವರ್ಧನೆಗೆ ಕ್ರಮ: ಡಿ.ಎಸ್. ಅರುಣ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.