Malenadu Mitra
ರಾಜಕೀಯ ರಾಜ್ಯ ಶಿವಮೊಗ್ಗ

ವಿಧಾನ ಪರಿಷತ್ ಚುನಾವಣೆ: ಕೈ -ಕಮಲ ನೇರ ಹಣಾಹಣಿ ಅರುಣರಾಗವೋ, ಪ್ರಸನ್ನವದನವೋ.. ಎಂಬುದನ್ನು ನಿರ್ಧರಿಸಲಿರುವ ‘ಕೈಚಳಕ’

ರಾಜ್ಯದಲ್ಲಿ ಒಮಿಕ್ರಾನ್ ವೈರಸ್ ಭಯದ ಛಾಯೆಯಲ್ಲಿಯೇ ಬುದ್ದಿವಂತರ ಸದನ ಎಂದೇ ಹೇಳಲಾಗುವ ವಿಧಾನ ಪರಿಷತ್‌ನ ೨೫ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯ ಭರಾಟೆಯೂ ಜೋರಾಗಿದೆ. ಇತ್ತೀಚೆಗೆ ನಡೆದ ಸಿಂಧಗಿ ಮತ್ತು ಹಾನಗಲ್ ಫಲಿತಾಂಶದ ಉಮೇದಿನಲ್ಲಿರುವ ಆಡಳಿತ ಮತ್ತು ಪ್ರತಿ ಪಕ್ಷಗಳು ಮೈ ಕೊಡವಿಕೊಂಡೇ ರಣಕಣಕ್ಕಿಳಿದಿವೆ. ಒಂದು ಕಾಲದಲ್ಲಿ ಜ್ಞಾನಿಗಳು, ಸಮಾಜಸೇವಕರು, ಸಾಂಸ್ಕೃತಿಕ ,ವಿಷಯ ತಜ್ಞರು ಇರುತ್ತಿದ್ದ ಮೇಲ್ಮನೆ ಇತ್ತೀಚಿನ ದಿನಗಳಲ್ಲಿ ಆ ಘನತೆ ಕಳೆದುಕೊಂಡಿದೆ. ನಾಮಕಾರಣ ಸದಸ್ಯರ ನೇಮಕ ಕೂಡಾ ಆಯಾ ಪಕ್ಷಗಳ ಮರ್ಜಿಗೇ ಆಗುತ್ತಿವೆ. ಈಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕ ಮಣಿಗಳು ತಮ್ಮ ಕಳ್ಳುಬಳ್ಳಿಗಳಿಗೇ ಟಿಕೆಟ್ ಕೊಟ್ಟು ಪ್ರಭಾವಿ ಕುಟುಂಬಗಳ ಪ್ರತಿಷ್ಠೆಯನ್ನೇ ಪಣಕ್ಕಿಟ್ಟಿವೆ.

ಬಿಜೆಪಿಯ ಶಕ್ತಿಕೇಂದ್ರ ಶಿವಮೊಗ್ಗದಲ್ಲಿ ಈ ಬಾರಿಯ ವಿಧಾನಪರಿಷತ್ ಚುನಾವಣೆ ಎಂದಿಗಿಂತ ಹೆಚ್ಚು ರಂಗುಪಡೆದುಕೊಂಡಿದೆ. ಕ್ಷೇತ್ರ ಉಳಿಸಿಕೊಳ್ಳುವ ಛಲ ಕಾಂಗ್ರೆಸ್‌ಗಿದ್ದರೆ, ತಪ್ಪಿದ ಕ್ಷೇತ್ರವನ್ನು ಮತ್ತೊಮ್ಮೆ ತಮ್ಮ ವಶ ಮಾಡಿಕೊಳ್ಳಬೇಕೆಂಬ ತವಕ ಆಡಳಿತ ಪಕ್ಷ ಬಿಜೆಪಿಯದು. ಈ ನೆಲೆಯಲ್ಲಿ ರಾಜ್ಯ ಬಿಜೆಪಿಯ ಪರಮೋಚ್ಚನಾಯಕ ಬಿ.ಎಸ್.ಯಡಿಯೂರಪ್ಪ ಅವರು ಕ್ಷೇತ್ರದಲ್ಲಿ ಒಂದು ಸುತ್ತು ಪ್ರಚಾರ ಮಾಡಿದ್ದಾರೆ. ಕಾಂಗ್ರೆಸ್‌ನ ಅಗ್ರಗಣ್ಯ ನಾಯಕರಾದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮ ತಂಡ ಕಟ್ಟಿಕೊಂಡು ಮತಪ್ರಚಾರ ಮಾಡಿದ್ದಾರೆ.

ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಹೊನ್ನಾಳಿ, ನ್ಯಾಮತಿ, ಚನ್ನಗಿರಿ ತಾಲೂಕು ವ್ಯಾಪ್ತಿಯ ಮತದಾರರನ್ನು ಈ ಕ್ಷೇತ್ರ ಹೊಂದಿದೆ. ಈ ಬಾರಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಸದಸ್ಯರು ಇಲ್ಲದಿರುವ ಕಾರಣ ಆಯಾ ಪಕ್ಷಗಳಿಗೆ ಇಡಿಗಂಟಾಗಿ ಸಿಗುತ್ತಿದ್ದ ಮತಗಳ ಪ್ರಮಾಣ ಕಡಿಮೆಯಿದೆ. ಗ್ರಾಮ ಪಂಚಾಯಿತಿ ಸದಸ್ಯರು ನಮ್ಮವರೇ ಎಂದು ರಾಜಕೀಯ ಪಕ್ಷಗಳು ಎಷ್ಟೇ ಬೀಗಿದರೂ ಚಿಹ್ನೆಯ ಮುದ್ರೆ ಇಲ್ಲದ ಕಾರಣ ಆ ಮತಗಳು ಅಭ್ಯರ್ಥಿಗಳಿಗೆ ಒಂದು ರೀತಿಯ ಬಿಸಿಲು ಕುದುರೆಯಂತೆ ಭಾಸವಾಗುತ್ತಿವೆ. ಈ ಪಂಚಾಯಿತಿ ಸದಸ್ಯರ ಮತಗಳೆಂಬ ಮಾಯಾ ಜಿಂಕೆ ಬೆನ್ನು ಹತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತರಾವರಿ ತಂತ್ರಗಾರಿಕೆಯಲ್ಲಿ ತೊಡಗಿವೆ.

ಕಣದಲ್ಲಿನ ಕಲಿಗಳು

ಕ್ಷೇತ್ರದಲ್ಲಿ ಒಟ್ಟು ನಾಲ್ಕು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯಿಂದ ಮಾಜಿ ಸಭಾಪತಿ ಹಾಗೂ ೩೦ ವರ್ಷಗಳ ಕಾಲ ಪದವೀಧರ ಕ್ಷೇತ್ರದಿಂದ ಮೇಲ್ಮನೆ ಪ್ರತಿನಿಧಿಸಿದ್ದ ಡಿ.ಹೆಚ್.ಶಂಕರಮೂರ್ತಿ ಅವರ ಪುತ್ರ ಡಿ.ಎಸ್.ಅರುಣ್, ಕಾಂಗ್ರೆಸ್‌ನಿಂದ ಹಾಲಿ ಸದಸ್ಯ ಆರ್.ಪ್ರಸನ್ನಕುಮಾರ್, ಜೆಡಿಯು ಪಕ್ಷದಿಂದ ಶಶಿಕುಮಾರ್ ಹಾಗೂ ರವಿ ಪಿ.ವೈ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ನೇರ ಹಣಾಹಣಿ
ನಿರ್ದಿಷ್ಟ ಮತದಾರರನ್ನೇ ಹೊಂದಿರುವ ಕ್ಷೇತ್ರದಲ್ಲಿ ನಾಲ್ಕು ಮಂದಿ ಅಭ್ಯರ್ಥಿಗಳಿದ್ದರೂ ನೇರ ಹಣಾಹಣಿ ಇರುವುದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಎಂಬುದು ಕ್ಷೇತ್ರವನ್ನು ಅವಲೋಕಿಸಿದಾಗ ಗೊತ್ತಾಗುತ್ತಿದೆ. ಈ ಹಿಂದಿನ ಕ್ಷೇತ್ರದ ಇತಿಹಾಸವನ್ನು ಗಮಿಸಿದಾಗ ಆಡಳಿತ ಪಕ್ಷದ ಅಭ್ಯರ್ಥಿಗಳೇ ಜಯ ಸಾಧಿಸಿದ್ದಾರೆ. ಆದರೆ ಈ ಬಾರಿ ಅದನ್ನು ಸಲೀಸಾಗಿ ಹೇಳಲು ಆಗುವುದಿಲ್ಲ. ರಾಜಕೀಯದಲ್ಲಿ ಜಾತಿ ಲೆಕ್ಕಾಚಾರವೇ ಪ್ರಮುಖ ಸಂಗತಿ ಆಗುತ್ತಿರುವ ಈ ಹೊತ್ತಿನಲ್ಲಿ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಆಯ್ಕೆ ಆ ನೆಲೆಯಲ್ಲಿ ಆಗಿಲ್ಲ. ಹಿಂದೊಮ್ಮೆ ಜಾತಿಯ ಒಂದೂ ಮತವಿಲ್ಲದ ಆರ್.ಕೆ.ಸಿದ್ದರಾಮಣ್ಣ ಅವರನ್ನು ಬಿಜೆಪಿ ಗೆಲ್ಲಿಸಿಕೊಂಡಿತ್ತು. ಅದೇ ಸೂತ್ರವನ್ನು ಇಲ್ಲಿಯೂ ಅನುಸರಿಸಿರುವ ಆಡಳಿತ ಪಕ್ಷ ಈ ಬಾರಿ ಬೆರಳೆಣಿಕೆಯ ಮತದಾರರನ್ನು ಹೊಂದಿರಬಹುದಾದ ಆರ್ಯವೈಶ್ಯ ಸಮುದಾಯ ಪ್ರತಿನಿಧಿಸುವ ಡಿ.ಎಸ್.ಅರುಣ್ ಅವರನ್ನು ಕಣಕ್ಕಿಳಿಸಿದೆ. ಎಬಿವಿಪಿಯಿಂದ ಹಿಡಿದು ಪಕ್ಷದ ನೆಲೆಯಲ್ಲಿ ವಿವಿಧ ಹುದ್ದೆ ಅಲಂಕರಿಸಿರುವ ಅರುಣ್, ಕಲ್ಚರಲ್ ಕ್ಲಬ್, ಸ್ಪೋರ್ಟ್ಸ್ ಕ್ಲಬ್, ಕ್ರಿಕೆಟ್ ಮಂಡಳಿ, ಕಂಟ್ರಿಕ್ಲಬ್, ಚೇಂಬರ್ ಆಫ್ ಕಾಮರ್ಸ್ ಹೀಗೆ ನಗರ ಕೇಂದ್ರಿತ ಸಂಸ್ಥೆ ಹಾಗೂ ರಾಜಕಾರಣ ನೋಡಿದವರು ಮತ್ತು ಈ ಕ್ಷೇತ್ರದಲ್ಲಿ ಉತ್ತಮ ಹೆಸರೂ ಇದೆ. ಗ್ರಾಮೀಣ ರಾಜಕಾರಣದ ಪರಿಚಯ ಇಲ್ಲದಿದ್ದರೂ, ಜನಸಂಘದಿಂದಲೂ ಅವರ ಕುಟುಂಬಕ್ಕಿರುವ ಪಕ್ಷ ನಿಷ್ಠೆಯ ಕಾರಣಕ್ಕೆ ಉಮೇದುವಾರಿಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಜೆಪಿಗಿರುವ ಸಕಾರಾತ್ಮಕ ಅಂಶ

ಶಿವಮೊಗ್ಗ ಕ್ಷೇತ್ರ ವ್ಯಾಪ್ತಿಯಲ್ಲಿ 9 ಶಾಸಕರು ಬರಲಿದ್ದು, ಅದರಲ್ಲಿ 8 ಮಂದಿ ಬಿಜೆಪಿಯವರೇ ಇದ್ದಾರೆ. ಇಬ್ಬರು ಲೋಕಸಭೆ ಸದಸ್ಯರು ಬಿಜೆಪಿಯವರಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಭದ್ರಾವತಿ ಮತ್ತು ತೀರ್ಥಹಳ್ಳಿ ಹೊರತುಪಡಿಸಿ ಉಳಿದೆಲ್ಲಾ ಕಡೆಯೂ ಬಿಜೆಪಿ ಅಧಿಕಾರದಲ್ಲಿದೆ. ಸಾರ್ವತ್ರಿಕ ಚುನಾವಣೆಗೆ ಒಂದೂವರೆ ವರ್ಷ ಮಾತ್ರ ಇರುವ ಈ ಹೊತ್ತಿನಲ್ಲಿ ತಮ್ಮ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗೆ ಹೆಚ್ಚು ಮತ ಹಾಕಿಸುವ ಒತ್ತಡ ಸಹಜವಾಗಿಯೇ ಎಲ್ಲ ಶಾಸಕರ ಮೇಲೂ ಇದೆ. ಕೇಂದ್ರ ಮತ್ತು ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿರುವುದೂ ಅರುಣ್‌ಗೆ ಅನುಕೂಲವಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅವಿಭಜಿತ ಶಿವಮೊಗ್ಗ ಜಿಲ್ಲೆಯಲ್ಲಿ ಲಿಂಗಾಯತ ಮತದಾರರು ಹೆಚ್ಚಿರುವ ಕಾರಣ ಯಡಿಯೂರಪ್ಪ ಅವರ ಪ್ರಭಾವಳಿ ಕೆಲಸ ಮಾಡಲಿದೆ. ಪ್ರಭಾವಿ ಸಚಿವರಾದ ಕೆ.ಎಸ್.ಈಶ್ವರಪ್ಪ ಮತ್ತು ಆರಗ ಜ್ಞಾನೇಂದ್ರ, ಸಂಸದ ಬಿ.ವೈ ರಾಘವೇಂದ್ರ, ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ ನಾಯ್ಕಅವರುಗಳು ಅರುಣ್ ಬೆನ್ನಿಗಿದ್ದಾರೆ. ಜಿಲ್ಲೆಯಲ್ಲಿ ಇನ್ನೊಂದು ಪ್ರಭಾವಿ ಸಮುದಾಯವಾದ ಈಡಿಗರ ಪ್ರತಿನಿಧಿಯಾಗಿ ಶಾಸಕ ಹರತಾಳು ಹಾಲಪ್ಪ ಹಾಗೂ ಕುಮಾರ್ ಬಂಗಾರಪ್ಪ ಪ್ರಭಾವ ಬಿಜೆಪಿಗೆ ನೆರವಾಗಲಿದೆ.

ಕಾಂಗ್ರೆಸ್ ಅಭ್ಯರ್ಥಿ ಪ್ರಸನ್ನ ಕುಮಾರ್ ಹಾಲಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಪಕ್ಷದಲ್ಲಿ ಪೈಪೋಟಿಯೇ ಇಲ್ಲದ ಕಾರಣ ಸರಾಗವಾಗಿ ಅಭ್ಯರ್ಥಿಯಾಗಿದ್ದಾರೆ. ಆರ್.ಪ್ರಸನ್ನಕುಮಾರ್ ಅವರ ತಂದೆ ನಿಷ್ಠಾವಂತ ಕಾಂಗ್ರೆಸ್ಸಿಗರಾಗಿದ್ದು, ನಗರ ಸಭೆ ಅಧ್ಯಕ್ಷರೂ ಆಗಿದ್ದರು. ಅದೇ ರೀತಿ ಪ್ರಸನ್ನಕುಮಾರ್ ಕೂಡಾ ನಗರಸಭೆ ಸದಸ್ಯರಾಗಿ, ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಸತತ ಹತ್ತು ವರ್ಷಗಳ ಕಾಲ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದ ಪ್ರಸನ್ನಕುಮಾರ್ ಪಕ್ಷದಲ್ಲಿ ಯಥೇಚ್ಛ ಅವಕಾಶಗಳನ್ನು ಪಡೆದುಕೊಂಡಿದ್ದರೂ ಶಿವಮೊಗ್ಗ ಜಿಲ್ಲೆಯಲ್ಲಿ ಒಬ್ಬ ಪ್ರಭಾವಿ ನಾಯಕ ಎನ್ನಿಸಿಕೊಂಡಿಲ್ಲ ಎಂಬ ಆರೋಪವಿದೆ. ಸಿದ್ದಾರಾಮಯ್ಯ ಸರಕಾರದ ಅವಧಿಯಲ್ಲಿ ಒಂದಷ್ಟು ಅನುದಾನ ತಂದು ಕೆಲಸ ಮಾಡಿದ್ದರು. ಆದರೆ ಬಿಜೆಪಿ ಸರಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ಕೇವಲ ೧ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕೊರೊನ ಕಾರಣದಿಂದ ಕ್ಷೇತ್ರದ ಕೆಲಸಗಳೂ ಮಂಕಾಗಿದ್ದು ಸುಳ್ಳಲ್ಲ.

ಕಾಂಗ್ರೆಸ್‌ಗಿರುವ ಸಕಾರಾತ್ಮಕ ಅಂಶಗಳು

ಮೃದು ಸ್ವಭಾವದ ಪ್ರಸನ್ನಕುಮಾರ್ ವಿವಾದ ಮೈ ಮೇಲೆ ಎಳೆದುಕೊಂಡವರಲ್ಲ. ಒಮ್ಮೆ ಸದಸ್ಯರಾಗಿರುವುದರಿಂದ ಇಡೀ ಕ್ಷೇತ್ರ ಮತ್ತು ಮತದಾರರ ಪರಿಚಯ ಹೊಂದಿದ್ದಾರೆ. ಕುರುಬ ಸಮುದಾಯ ಪ್ರತಿನಿಧಿಸುವ ಅವರಿಗೆ ಕ್ಷೇತ್ರದಲ್ಲಿರುವ ಸ್ವಜಾತಿಯ ಮತಗಳೂ ಕೈಹಿಡಿಯಲಿವೆ. ಎದುರಾಳಿ ಅಭ್ಯರ್ಥಿಗೆ ಜಾತಿಯ ಬಲವಿಲ್ಲ ಮತ್ತು ಗ್ರಾಮಾಂತರ ರಾಜಕಾರಣಕ್ಕೆ ಅವರದು ಹೊಸಮುಖವಾಗಿದೆ ಎಂಬ ಪೂರಕ ಅಂಶಗಳಿವೆ. ಭದ್ರಾವತಿಯಲ್ಲಿ ಶಾಸಕ ಬಿ.ಕೆ.ಸಂಗಮೇಶ್, ಹಿರಿಯ ನಾಯಕ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್ ಪ್ರಭಾವ, ಜೆಡಿಎಸ್ ನಿಂದ ಕಾಂಗ್ರೆಸ್‌ಗೆ ಬಂದಿರುವ ಮಧುಬಂಗಾರಪ್ಪ ಮತ್ತು ಆರ್.ಎಂ.ಮಂಜುನಾಥ್ ಗೌಡ ಅವರ ಪ್ರಭಾವಳಿ ಪ್ರಸನ್ನಕುಮಾರ್‌ಗೆ ನೆರವಾಗಲಿದೆ. ಇಂಧನ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದುಂಟಾಗಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳ ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ಗೆ ಅನುಕೂಲವಾಗಬಹುದು

ಸೀಮಿತ ಮತ್ತು ಚಾಣಾಕ್ಷ ಮತದಾರರನ್ನು ಹೊಂದಿರುವ ಈ ಚುನಾವಣೆಯಲ್ಲಿ ಅಭ್ಯರ್ಥಿ ಹಾಗೂ ಪಕ್ಷಗಳ ಲೆಕ್ಕಾಚಾರಗಳು ಏನೇ ಇದ್ದರೂ ಫಲಿತಾಂಶವನ್ನು ತಲೆಕೆಳಗೆ ಮಾಡುವ ಅಂಶ ಬೇರೆನೇ ಇದ್ದು, ಅದು ಬೀರುವ ಪ್ರಭಾವ ಗೆಲುವನ್ನು ನಿರ್ಧರಿಸಲಿದೆ.

ಮತದಾರರ ವಿವರ

ಶಿವಮೊಗ್ಗ ಕ್ಷೇತ್ರದಲ್ಲಿ ಒಟ್ಟು4180 ಮತದಾರರಿದ್ದು, ಇದರಲ್ಲಿ 2175 ಪುರುಷರು, 2005 ಮಹಿಳಾ ಮತದಾರರಿದ್ದಾರೆ. ಸೊರಬ ತಾಲೂಕಿನಲ್ಲಿ 319 ಶಿಕಾರಿಪುರದಲ್ಲಿ 509, ಹೊನ್ನಾಳಿ ತಾಲೂಕಿನಲ್ಲಿ 344 ನ್ಯಾಮತಿ ತಾಲೂಕಿನಲ್ಲಿ 190 ,ಚನ್ನಗಿರಿ ತಾಲೂಕಿನಲ್ಲಿ 761,ಭದ್ರಾವತಿಯಲ್ಲಿ 475 ಶಿವಮೊಗ್ಗದಲ್ಲಿ 502 ,ಸಾಗರದಲ್ಲಿ 419, ಹೊಸನಗರದಲ್ಲಿ 301 ಹಾಗೂ ತೀರ್ಥಹಳ್ಳಿ ತಾಲೂಕಿನಲ್ಲಿ 353 ಮತದಾರರಿದ್ದಾರೆ.

Ad Widget

Related posts

ಕಾಡಾನೆ ನಿಯಂತ್ರಣಕ್ಕೆ ಕ್ರಮ

Malenadu Mirror Desk

ಅಪಾಯದ ಮಟ್ಟದಲಿ ತುಂಗಾ, ಪ್ರವಾಹದ ಭೀತಿ ಜೋಗದಲ್ಲಿ ರುದ್ರ ರಮಣೀಯ ದೃಶ್ಯ

Malenadu Mirror Desk

ತೀರ್ಥಹಳ್ಳಿಯ ತಹಶೀಲ್ದಾರ್ ಜಕ್ಕಣ್ಣ ಗೌಡರ್ ಹೃದಯಾಘಾತದಿಂದ ನಿಧನ : ಕರ್ತವ್ಯ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ತಹಶೀಲ್ದಾರ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.