ಒಂದು ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿಕೊಂಡೇ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದ್ದೇವೆ ಎಂದು ಸಚಿವ ಗ್ರಾಮೀಣಾಭಿವೃದ್ದಿ ಸಚಿವ ಕೆಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆ ಜಾರಿ ತರುವುದನ್ನು ವಿರೋಧಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ನಮ್ಮ ದೇಶದಿಂದ ಮತಾಂತರಗೊಂಡ ಹೆಣ್ಣು ಮಕ್ಕಳನ್ನು ವಿದೇಶದಲ್ಲಿ ಮಾರಾಟ ಮಾಡುತ್ತಿದ್ದಾರೆ. ಅವರ ಕಷ್ಟ ಗೊತ್ತಿದ್ದರೆ ಡಿಕೆಶಿ ಹೀಗೆ ಮಾತನಾಡುತ್ತಿರಲಿಲ್ಲ ಎಂದು ಹೇಳಿದರು.
ಒಂದು ಧರ್ಮವನ್ನು ಉದ್ದೇಶಿಸಿಯೇ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುತ್ತಿರುವುದು. ಹಿಂದು ಧರ್ಮದ ಹೆಣ್ಣು ಮಕ್ಕಳಿಗೆ ಹಣದ ಆಮಿಷ ಒಡ್ಡಿ ಮತಾಂತರ ಮಾಡಲಾಗುತ್ತಿದೆ. ಮತಾಂತರ ಎಂಬುದು ಸಮಾಜಕ್ಕೇ ಕಾಣುತ್ತಿದೆ ಆದರೆ ಡಿ.ಕೆ ಶಿವಕುಮಾರ್ ಗೆ ಕಾಣದಿರುವುದು ಆಶ್ಚರ್ಯದ ಸಂಗತಿ. ಸ್ವತಃ ಶಾಸಕ ಗೂಳಿಹಟ್ಟಿ ಶೇಖರ್ ತಮ್ಮ ತಾಯಿ ಮತಾಂತರಕ್ಕೊಳಪಟ್ಟಿರುವ ಬಗ್ಗೆ ಸದನದಲ್ಲಿ ಬಿಡಿಸಿ ಹೇಳಿದ್ದಾರೆ. ಮತಾಂತರ ನಿಷೇಧವನ್ನು ಯಾಕೆ ವಿರೋಧ ಮಾಡುತ್ತಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಿ ಎಂದು ಡಿಕೆಶಿಗೆ ಸವಾಲು ಹಾಕಿದರು.
ಪಾಕಿಸ್ತಾನದಲ್ಲಿ ಹಿಂದುಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಆದರೆ ನಮ್ಮಲ್ಲಿ ಮತಾಂತರ ನಿಷೇಧದ ಬಗ್ಗೆ ಹೇಳಿದರೆ ತಕರಾರು ಮಾಡುತ್ತಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಕಸಾಯಿಖಾನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಅದರಲ್ಲೂ ಕದ್ದು ಮುಚ್ಚಿ ನಡೆಯುತ್ತಿರುವ ಅಕ್ರಮದ ವಿರುದ್ಧ ಬಿಗಿ ಕ್ರಮಕೈಗೊಳ್ಳುತ್ತಾರೆ. ಜನರಿಗೆ ಉಪಯೋಗವಾಗುವಂತಹ ಕಾಯ್ದ ಜಾರಿಗೆ ಬರಬೇಕಾದರೆ. ವಿಧಾನ ಪರಿಷತ್‌ನಲ್ಲೂ ಪೂರ್ಣ ಬಹುಮತ ಸಿಗಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.