Malenadu Mitra
ರಾಜ್ಯ ಶಿವಮೊಗ್ಗ

ಮಲೆನಾಡಿಗೂ ಕಾಲಿಟ್ಟ ‘ಹಿಜಾಬ್’ ಕೇಸರಿ ವಿವಾದ ಗೃಹ ಸಚಿವರ ಜಿಲ್ಲೆಯಲ್ಲಿ ಪ್ರತಿಭಟಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರು

ಹಿಜಾಬ್ ವಿವಾದ ಈಗ ಕೋಮುಸೂಕ್ಷ್ಮ ಜಿಲ್ಲೆಯಾದ ಶಿವಮೊಗ್ಗಕ್ಕೂ ಕಾಲಿಟ್ಟಿದೆ. ರಾಜ್ಯದ ಹಲವೆಡೆ ಭಾರೀ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿರುವ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಸೋಮವಾರ ಮಲೆನಾಡಿನಲ್ಲೂ ಅನುರಣಿಸಿದೆ. ಪರ-ವಿರೋಧದ ಪ್ರತಿಭಟನೆಗಳು ಆರಂಭವಾಗಿವೆ. ಪ್ರತಿಷ್ಠಿತ ಸಹ್ಯಾದ್ರಿ ಕಾಲೇಜಿನ ಅಂಗಳವೂ ಹಿಜಾಬ್ -ಕೇಸರಿ ಶಾಲು ವಿವಾದದ ಸಂಘರ್ಷಕ್ಕೆ ವೇದಿಕೆ ಆಯಿತು. ಬೆಳಗ್ಗೆ ಸಹ್ಯಾದ್ರಿ ಕಾಲೇಜಿಲ್ಲಿದ್ದ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಮಧ್ಯಾಹ್ನ ತೀರ್ಥಹಳ್ಳಿಯ ಬಾಳೆಬೈಲು ಸರ್ಕಾರಿ ಪದವಿ ಕಾಲೇಜು ಮತ್ತು ಶಿವಮೊಗ್ಗದ ಎಟಿಎನ್‌ಸಿಸಿ ಕಾಲೇಜಿಗೆ ಕಾಲಿಟ್ಟಿತ್ತು. ಮತ್ತೊಂದೆಡೆ ಹಿಜಾಬ್ ಧರಿಸುವುದನ್ನು ಸಮರ್ಥಿಸಿಕೊಂಡು ನಗರದ ನೂರಾರು ಮಂದಿ ಮುಸ್ಲಿಂ ಮಹಿಳೆಯರು ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿನಿಯರು ಮಹಿಳಾ ಒಕ್ಕೂಟದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟಿಸಿ ಮನವಿ ಸಲ್ಲಿಸಿದರು.
ಸಹ್ಯಾದ್ರಿ ಕಾಲೇಜಿನಲ್ಲಿ…

ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೂ ಒಂದೇ ರೀತಿಯ ಸಮವಸ್ತ್ರ ಸಂಹಿತೆಯನ್ನು ಜಾರಿ ಮಾಡಬೇಕೆಂದು ಆಗ್ರಹಿಸಿ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಈಗಾಗಲೇ ಸಮವಸ್ತ್ರ ಸಂಹಿತೆ ಜಾರಿಯಲ್ಲಿದೆ. ಆದರೂ ಸಹ ಕೆಲವು ವಿದ್ಯಾರ್ಥಿನಿಯರು ಕಾಲೇಜಿಗೆ ಸಮವಸ್ತ್ರ ಧರಿಸದೇ ನಿಯಮ ಉಲ್ಲಂಘಿಸಿ ಬರುತ್ತಿದ್ದಾರೆ. ನಮ್ಮಗಳ ಹಿತದೃಷ್ಠಿ ಯಿಂದ ಕಾಲೇಜಿನ ಆಡಳಿತ ಮಂಡಳಿ ಸಮವಸ್ತ್ರವನ್ನು ಜಾರಿ ಮಾಡಿದೆ. ಇದರಿಂದ ಎಲ್ಲರೂ ಸಮಾನರು ಎಂಬ ಭಾವನೆ ನಮ್ಮಲ್ಲಿದೆ. ಇದನ್ನು ಉಲ್ಲಂಘಿಸಿ ಹಲವರು ಸಮವಸ್ತ್ರ ಧರಿಸದೇ ಬರುತ್ತಿದ್ದಾರೆ ಎಂದು ಆರೋಪಿಸಿದರು.
ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕ್ಲಾಸ್ ರೂಂ ಪ್ರವೇಶಕ್ಕೆ ಮುಂದಾದರು. ಈ ಸಂದರ್ಭದಲ್ಲಿ ಕೇಸರಿ ಶಾಲು ತೆಗೆದು ತರಗತಿಗೆ ಬನ್ನಿ ಎಂದು ಪ್ರಾಂಶುಪಾಲರು ಸೂಚಿಸಿದ್ದಾರೆ. ಆ ಸಂದರ್ಭದಲ್ಲಿ ಹಾಗಾದರೆ ತರಗತಿಗೆ ಹಿಜಾಬ್ ಧರಿಸಿ ಬರಬಾರದು. ಕಾಲೇಜಿನಲ್ಲಿ ಸಮಾನ ವಸ್ತ್ರ ಸಂಹಿತೆ ಪಾಲಿಸಬೇಕೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದು ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಘೋಷಣೆ ಕೂಗುತ್ತಾ ಕಾಲೇಜಿನಿಂದ ಹೊರಬಂದರು. ಹಿಜಾಬ್ ಧರಿಸಿಕೊಂಡೇ ತರಗತಿಗೆ ಬರುವುದಾಗಿ ಪಟ್ಟು ಹಿಡಿದ ಮುಸ್ಲಿಂ ವಿದ್ಯಾರ್ಥಿನಿಯರಿಗೂ ಕೂಡ ಪ್ರವೇಶ ನಿರಾಕರಿಸಲಾಯಿತು.
ಕುವೆಂಪು ವಿಶ್ವವಿದ್ಯಾಲಯದ ಆಡಳಿತಕ್ಕೆ ಒಳಪಟ್ಟ ಸಹ್ಯಾದ್ರಿ ವಾಣಿಜ್ಯ ಕಾಲೇಜಿನಲ್ಲಿ ವಿವಿ ಆದೇಶದಂತೆ ನಡೆದುಕೊಳ್ಳಲಾಗುವುದು. ಅಲ್ಲಿಂದ ಸೂಕ್ತ ಆದೇಶ ಬರುವವರೆಗೆ ಹಿಜಾಬ್ ಮತ್ತು ಕೇಸರಿ ಶಾಲು ಹಾಕಿಕೊಂಡು ತರಗತಿಗೆ ಬರಲು ಅವಕಾಶ ನೀಡುವುದಿಲ್ಲ. ವಿದ್ಯಾರ್ಥಿಗಳ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ಈಗಾಗಲೇ ತರಲಾಗಿದೆ ಎಂದು ಪ್ರಾಂಶುಪಾಲೆ ಡಾ. ವೀಣಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ವಾಣಿಜ್ಯ ಕಾಲೇಜಿನಲ್ಲೇ ೨೫೦೦ ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳ ಮನವೊಲಿಸಿಯೇ ಸಮಾನ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ಹಿಜಾಬ್ ಧರಿಸಿ ಬಂದವರು ಅವರಿಗೆ ಮೀಸಲಾದ ರೂಂನಲ್ಲಿ ಅದನ್ನು ತೆಗೆದಿಟ್ಟು ತರಗತಿಗೆ ಹಾಜರಾಗಲು ಮೊದಲಿನಿಂದಲೂ ಅವಕಾಶ ನೀಡಲಾಗಿದೆ. ಆದರೆ, ಅದನ್ನು ಧರಿಸಿಯೇ ತರಗತಿಗೆ ಬರುತ್ತೇವೆ ಎಂದು ಪಟ್ಟು ಹಿಡಿದವರಿಗೆ ಮತ್ತು ಅದಕ್ಕೆ ವಿರುದ್ಧವಾಗಿ ಕೇಸರಿ ಶಾಲು ಧರಿಸಿ ತರಗತಿಗೆ ಬರುತ್ತೇವೆ ಎಂದವರಿಗೂ ಪ್ರವೇಶ ನಿರಾಕರಿಸಿದ್ದೇವೆ ಎಂದು ಅವರು ಸ್ಪಷ್ಠೀಕರಣ ನೀಡಿದರು.
ಸುಮಾರು ಒಂದು ಗಂಟೆಗೂ ಅಧಿಕ ಕಾಲ ನಡೆದ ಈ ಹೈಡ್ರಾಮಾದ ಬಳಿಕ ಕೆಲವು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಮನೆ ದಾರಿ ಹಿಡಿದರೆ ಮತ್ತೆ ಕೆಲವರು ತರಗತಿಗೆ ಹಾಜರಾದರು. ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ ಕೆಲವರು ಹಿಜಾಬ್ ಪರ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಹೋರಾಟದಲ್ಲಿ ಭಾಗವಹಿಸಿದ್ದರು.


ಕೇಸರಿ ಶಾಲು ಧರಿಸಿ ಪ್ರತಿಭಟನೆ:ನಮಗೂ ಅವಕಾಶ ಕೊಡಿ
ತೀರ್ಥಹಳ್ಳಿ: ಗೃಹ ಸಚಿವ ಆರಗ ಜ್ಞಾನೇಂದ್ರರವರ ಸ್ವಕ್ಷೇತ್ರದಲ್ಲಿ ಹಿಜಾಬ್- ಕೇಸರಿ ಶಾಲಿನ ಸಂಘರ್ಷದ ಕಾವು ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ.
ಪಟ್ಟಣದ ಬಾಳೆಬಯಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಸೋಮವಾರ ಬೆಳಗ್ಗೆ ಕಾಲೇಜಿನ ಮುಂಭಾಗದಲ್ಲಿ ಸಮವಸ್ತ್ರದೊಂದಿಗೆ ಕೇಸರಿ ಶಾಲು ಧರಿಸಿ ಪ್ರತಿಭಟಿಸಿ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದರು.
ಕೇಸರಿ ಶಾಲು ಧರಿಸಿದ ವಿಧ್ಯಾರ್ಥಿಗಳು ಪ್ರತಿಭಟಿಸಿ ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಬರುತ್ತಿದ್ದಾರೆ. ಇದರಿಂದ ಸಮವಸ್ತ್ರದ ಸಮಾನತೆಗೆ ಅರ್ಥವೇನು, ನಾವು ಧರ್ಮ,ಜಾತಿ ವಿಚಾರ ಮಾತನಾಡುತ್ತಿಲ್ಲ,ಸಮವಸ್ತ್ರ ಎಲ್ಲರಲ್ಲೂ ಸಮಾನತೆಯಲ್ಲಿರಬೇಕು.ಸಮವಸ್ತ್ರ ಕಡ್ಡಾಯವಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಪ್ರಾಂಶುಪಾಲ ಧರ್ಮಣ್ಣ ಈ ವಿಚಾರದ ಬಗ್ಗೆ ಒಂದು ದಿನದ ಕಾಲಾವಕಾಶಬೇಕಿದ್ದು, ಕಾಲೇಜು ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಎಲ್ಲರಿಗೂ ಒಂದೇ ರೀತಿಯ ಸಮವಸ್ತ್ರ ಧರಿಸುವಂತೆ ಸೂಚನೆ ನೀಡಲಾಗುವುದು ಎಂದು ಹೇಳಿದರು.

ವಾಣಿಜ್ಯ ಕಾಲೇಜಿನಲ್ಲೂ ಪ್ರತಿಭಟನೆ:
ಶಿವಮೊಗ್ಗ ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿಯೂ ಮಧ್ಯಾಹ್ನದ ಹೊತ್ತಿಗೆ ಹಿಜಾಬ್ ಮತ್ತು ಕೇಸರಿ ಶಾಲಿನ ಪ್ರತಿಭಟನೆ ನಡೆಯಿತು. ನೂರಾರು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜು ಆವರಣಕ್ಕೆ ಪ್ರವೇಶ ಮಾಡಿದರು. ಈ ಸಂದರ್ಭ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರ ಪ್ರಾಚಾರ್ಯರು, ನಮ್ಮ ಕಾಲೇಜಿನಲ್ಲಿ ಮೊದಲಿಂದಲೂ ವಿದ್ಯಾರ್ಥಿಗಳಿಗೆ ಯೂನಿಫಾರಂ ಇದೆ. ನಾಳೆಯಿಂದ ನಿಗದಿತ ಸಮವಸ್ತ್ರದಲ್ಲಿ ಬಂದರೆ ಮಾತ್ರ ಪ್ರವೇಶ ಹೆಚ್ಚುವರಿಯಾಗಿ ಯಾವುದೇ ವಸ್ತ್ರ ಧರಿಸಿದರೂ ತರಗತಿಯಿಂದ ಹೊರಹಾಕಲಾಗುವುದು ಎಂದು ಹೇಳಿದರು.


ಸಹ್ಯಾದ್ರಿ ಕಾಲೇಜ್‌ನಲ್ಲಿ ೬ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ವಾಣಿಜ್ಯ ಕಾಲೇಜಿನಲ್ಲೇ ೨೫೦೦ಕ್ಕೂ ಅಧಿಕ ವಿದ್ಯಾರ್ಥಿ ಗಳಿದ್ದಾರೆ. ವಿದ್ಯಾರ್ಥಿಗಳ ಮನವೊಲಿಸಿಯೇ ಸಮಾನ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ಹಿಜಾಬ್ ಧರಿಸಿ ಬಂದವರು ಅವರಿಗೆ ಮೀಸಲಾದ ರೂಂನಲ್ಲಿ ಅದನ್ನು ತೆಗೆದಿಟ್ಟು ತರಗತಿಗೆ ಹಾಜರಾಗಲು ಮೊದಲಿನಿಂದಲೂ ಅವಕಾಶ ನೀಡಲಾಗಿದೆ. ಆದರೆ, ಅದನ್ನು ಧರಿಸಿಯೇ ತರಗತಿಗೆ ಬರುತ್ತೇವೆ ಎಂದು ಪಟ್ಟು ಹಿಡಿದವರಿಗೆ ಮತ್ತು ಅದಕ್ಕೆ ವಿರುದ್ಧವಾಗಿ ಕೇಸರಿ ಶಾಲು ಧರಿಸಿ ತರಗತಿಗೆ ಬರುತ್ತೇವೆ ಎಂದವರಿಗೂ ಪ್ರವೇಶ ನಿರಾಕರಿಸಿದ್ದೇವೆ.

-ಡಾ. ವೀಣಾ, ಪ್ರಾಂಶುಪಾಲೆ

Ad Widget

Related posts

ಪಂಚಮುಖಿ ಯಾಗಶಾಲೆ ಲೋಕಾರ್ಪಣೆ

Malenadu Mirror Desk

ಅರಣ್ಯಾಧಿಕಾರಿಗಳ ದುರಾಡಳಿತ ಖಂಡಿಸಿ ಪಾದಯಾತ್ರೆ

Malenadu Mirror Desk

ಅನ್ನದಾತರ ಆಕ್ರೋಶ ಸರಕಾರ ಸುಡಲಿದೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.