ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ ಲಸಿಕೆ ಹಾಕಲು ಮಾಕ್ ಟೆಸ್ಟ್‍ಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಶಿವಮೊಗ್ಗ ಡಿಎಚ್‍ಒ ಡಾ.ರಾಜೇಶ್ ಸುರಗಿಹಳ್ಳಿ, ಸಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ, ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಶ್ರೀಧರ್ ಮಾರ್ಗದರ್ಶನದಲ್ಲಿ ಡ್ರೈ ರನ್‍ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಾಲ್ಕು ಜನ ವೈದ್ಯರ ತಂಡ ಇದ್ದು, ಅದರಲ್ಲಿ ಡಾ.ಧನಂಜಯ್,ಡಾ.ಚಂದ್ರಶೇಖರ್, ಡಾ.ಶಿವಯೋಗಿ ಹಾಗೂ ಡಾ.ಮಲ್ಲಿಕಾರ್ಜುನ ಕೊಪ್ಪದ್ ಅವರ ನೇತೃತ್ವದ ತಂಡ ವ್ಯಾಕ್ಸಿನೇಷನ್ ಹಂಚಿಕೆ ಮಾಡಲಿದ್ದು, ಆಯ್ಕೆಮಾಡಿಕೊಂಡಿರುವ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ವಿತರಣೆ ಮಾಡಲಾಗುತ್ತಿದೆ.
ಏನಿದು ಮಾಕ್ ಟ್ರಯಲ್:
ಕೇಂದ್ರ ಸರಕಾರ ಕೋವಿಡ್ ಲಸಿಕೆ ವಿತರಿಸಲು ರಾಜ್ಯದ ಐದು ಜಿಲ್ಲೆಗಳಲ್ಲಿ ಡ್ರೈರನ್ ನಡೆಸುತ್ತಿದೆ. ಅದಕ್ಕೆ ಶಿವಮೊಗ್ಗ ಜಿಲ್ಲೆಯೂ ಆಯ್ಕೆಯಾಗಿದ್ದು, ಈ ಕಾರಣದಿಂದ ಸಿಮ್ಸ್‍ನಲ್ಲಿ ಡ್ರೈರನ್ ನಡೆಸಲಾಗುತ್ತಿದೆ. ಕೋವಿಡ್ ಲಸಿಕೆ ಅಭಿಯಾನಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಿದ್ದು, ನಿಯಮ ಬದ್ಧವಾಗಿ ಲಸಿಕೆ ಹಾಕುವ ಯೋಜನೆಯಿದೆ. ಈ ಕಾರಣದಿಂದ ಈಗ ಐದು ಜಿಲ್ಲೆಗಳಲ್ಲಿ ಈ ಅಣಕ ಪರೀಕ್ಷೆ ನಡೆಸಲಾಗುತ್ತಿದೆ.
ಮೊದಲ ಹಂತ: ರೆಸೆಪ್ಶನ್‍ನಲ್ಲಿ ಸೋಂಕಿತರ ನೋಂದಣಿ ಮಾಡಲಾಗುತ್ತದೆ. ಅಲ್ಲಿರುವ ಕಂಪ್ಯೂಟರ್‍ನಲಿ ಆಧಾರ್ ಕಾರ್ಡ್ ಆಧಾರದ ಮೇಲೆ ನೋಂದಣಿ ಮಾಡಿಕೊಂಡು ಲಸಿಕಾ ನಿರೀಕ್ಷಣಾ ಕೊಠಡಿಗೆ ಕಳಿಸಿಕೊಡಲಾಗುತ್ತದೆ. ಎರಡನೇ ಹಂತದಲ್ಲಿ ಸೋಂಕಿತರಿಗೆ ಲಸಿಕೆ ನೀಡಲಾಗುತ್ತದೆ. ಮೂರನೇ ಹಂತದಲ್ಲಿ ಲಸಿಕೆ ಪಡೆದುಕೊಂಡವರ ಆರೋಗ್ಯದಲ್ಲಿನ ಬದಲಾವಣೆಯನ್ನು ಗಮನಿಸಲಾಗುತ್ತದೆ. ಅರ್ಧಗಂಟೆ ಅವಧಿಯಲ್ಲಿ ಚುಚ್ಚುಮದ್ದು ಪಡೆದವರಲ್ಲಿ ಏನೂ ಬದಲಾವಣೆ ಕಂಡು ಬಂದಿಲ್ಲ ಎಂದಾದಲ್ಲಿ ಅವರನ್ನು ಮನೆಗೆ ಕಳಿಸಲಾಗುತ್ತದೆ.
ಆರೋಗ್ಯ ಕಾರ್ಯಕರ್ತರ ಬಳಕೆ:
ಮಾಕ್ ಟ್ರಯಲ್‍ನಲ್ಲಿ ಸ್ಥಳೀಯ ಆರೋಗ್ಯ ಕಾರ್ಯಕರ್ತರನ್ನು ಬಳಸಿಕೊಂಡು ಈ ಪ್ರಯೋಗ ಮಾಡಲಾಗುತ್ತದೆ. ಈ ಡ್ರೈ ರನ್‍ನಲ್ಲಿ ಅಸಲಿಯಾಗಿ ಯಾವುದೇ ಚುಚ್ಚುಮದ್ದು ನೀಡುವುದಿಲ್ಲ. ಮುಂದೆ ಸಮರೋಪಾದಿಯಲ್ಲಿ ಕೋವಿಡ್ ಲಸಿಕೆ ಕೊಡಬೇಕಾಗಿರುವುದರಿಂದ ಸಿಬ್ಬಂದಿಗೆ ತರಬೇತಿ ನೀಡುವ ಸಲುವಾಗಿ ಈ ಡ್ರೈರನ್ ನಡೆಸಲಾಗುತ್ತಿದೆ. ಆರೋಗ್ಯಕಾರ್ಯಕರ್ತರಿಗೆ ಲಸಿಕೆ ವಿತರಣೆ, ಸಾಗಣೆ ಸೇರಿದಂತೆ ಎಲ್ಲ ತರಬೇತಿಯನ್ನು ಈ ಅವಧಿಯಲ್ಲಿ ನೀಡಲಾಗುತ್ತದೆ