Malenadu Mitra
ಬೇಸಾಯ ರಾಜ್ಯ ಶಿವಮೊಗ್ಗ

ಅಡಕೆ ಮಾನ ಕಾಪಾಡಲು ಪಂಚ ತಜ್ಞರ ಸಮಿತಿ

ಅಡಕೆ ಕಾರ್‍ಯಪಡೆಯ ಪ್ರಥಮ ಸಭೆಯಲ್ಲಿ ನಿರ್ಣಯ
ಅಡಕೆ ಬೆಳೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬುದನ್ನು ನ್ಯಾಯಾಲಯದ ಮುಂದೆ ಸಾಬೀತುಪಡಿಸಲು ಪ್ರಯತ್ನಗಳು ಮುಂದುವರೆದಿದ್ದು, ಇದರೊಂದಿಗೆ ಎಂ.ಎಸ್.ರಾಮಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ತಜ್ಞರ ಜೊತೆಗೆ ಕೃಷಿ ವಿವಿ.ಗಳ ಕುಲಪತಿಗಳು, ಪ್ರಗತಿಪರ ತೋಟಗಾರಿಕೆ ಬೆಳಗಾರರು ಸೇರಿದಂತೆ ಐದು ಜನರ ಸಮಿತಿಯೊಂದನ್ನು ರಚಿಸಿ ಸಭೆಯು ನಿರ್ಣಯ ಕೈಗೊಂಡಿದೆ ಎಂದು ರಾಜ್ಯ ಅಡಕೆ ಕಾರ್ಯಪಡೆ ಅಧ್ಯಕ್ಷ ಹಾಗೂ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಮಲೆನಾಡು ಪ್ರದೇಶಾಭಿವೃಧ್ಧಿ ಮಂಡಳಿ (ಎಂಎಡಿಬಿ) ಯ ಸಭಾಂಗಣದಲ್ಲಿ ರಾಜ್ಯ ಅಡಕೆ ಕಾರ್ಯಪಡೆ ಟಾಸ್ಕ್‌ಫೋರ್ಸ್ ಸಮಿತಿಯ ಮೊಟ್ಟಮೊದಲ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವೈಜ್ಞಾನಿಕ ಸಂಶೋಧನೆಗಳನ್ನಾಧರಿಸಿ ಅಡಕೆ ಕ್ಯಾನ್ಸರ್ ನಿವಾರಕ ಅಂಶಗಳನ್ನು ಹೊಂದಿದೆ ಎಂಬುದನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಬಲವಾಗಿ ವಿಷಯ ಮಂಡಿಸಿ ಸಮರ್ಥಿಸಿಕೊಳ್ಳಬೇಕಾದ ಅಗತ್ಯವಿದೆ ಎಂದ ಅವರು, ಅಡಕೆ ಬೆಳೆಗಾರರ ಅತಂಕವನ್ನು ದೂರ ಮಾಡಲು ಕಾರ್ಯಪಡೆ ಸಕ್ರಿಯವಾಗಿದೆ. ಪ್ರಗತಿಪರ ರೈತರು, ವಿವಿಧ ತೋಟಗಾರಿಕೆ ಬೆಳೆಗಾರರ ಸಂಘಗಳೂ ಕೂಡ ಸೇರಿವೆ. ವಿದೇಶಗಳಿಂದ ಆಮದಾಗುತ್ತಿದ್ದ ಅಡಕೆ ನಿಯಂತ್ರಣಕ್ಕೆ ಕ್ರಮ ವಹಿಸುವಂತೆ ಹಾಗೂ ಇಲ್ಲಿನ ಅಡಕೆ ಉತ್ಪನ್ನ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ದರ ನಿಗಧಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.
ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ) ಯೋಜನೆಯನ್ನು ಅಡಕೆಗೂ ವಿಸ್ತರಿಸಬೇಕು. ಇದರಿಂದಾಗಿ ವಿದೇಶದಿಂದ ಆಮದಾಗುವ ಅಡಕೆ ನಿಯಂತ್ರಣಕ್ಕೆ ಬರುವ ನಿರೀಕ್ಷೆ ಇದೆ. ಪ್ರಾದೇಶಿಕವಾಗಿ ಮಾದರಿಯನ್ನು ಸಂಗ್ರಹಿಸಿ, ಅದನ್ನು ವೈಜ್ಞಾನಿಕವಾಗಿ ಪರೀಕ್ಷೆಗೊಳಪಡಿಸಲಾಗುತ್ತಿದೆ. ಅದರ ವರದಿ ಬರುವವರೆಗೆ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣದ ತೀರ್ಪನ್ನು ಕಾಯ್ದಿರಿಸಬೇಕು. ಅಲ್ಲದೇ ಅದರ ವಿಸ್ತೃತ ವಿಚಾರಣೆಗಾಗಿ ಹಿರಿಯ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವಂತೆ ಅವರು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ಟಾಸ್ಕ್‌ಫೋರ್ಸ್‌ನ ಚಟುವಟಿಕೆಗಳಿಗಾಗಿ ಮುಂದಿನ ಬಜೆಟ್‌ನಲ್ಲಿ ೧೦ ಕೋಟಿ ರೂ.ಗಳನ್ನು ಕಾಯ್ದಿರಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿಕೊಳ್ಳಲಾಗಿದೆ. ಪ್ರಸ್ತುತ ೩.೫೦ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ. ಕಾರ್ಯಪಡೆಯು ಕೃಷಿ ಮತ್ತು ತೋಟಗಾರಿಕೆ ವಿವಿಗಳ ಸಹಯೋಗದಲ್ಲಿ ನಡೆಯುವ ಕೌಶಲ್ಯಾಧಾರಿತ ತರಬೇತಿಗಳಿಗೆ ಅಗತ್ಯ ಸಹಕಾರ ನೀಡಲಿದೆ ಎಂದರು.
ವಾಣಿಜ್ಯ ಕ್ಷೇತ್ರದಲ್ಲಿ ಬೇರೆ-ಬೇರೆ ವಿಧಾನಗಳಲ್ಲಿ ಅಡಕೆ ಪರಿಚಯಿಸುವುದನ್ನು ಕಾರ್ಯಪಡೆಯು ಉತ್ತೇಜಿಸಲಿದೆ. ಬೆಂಗಳೂರಿನಲ್ಲಿರುವ ಶಿರಸಿಯ ಉದ್ಯಮಿ ಗುರುಮೂರ್ತಿ ಹೆಗಡೆಯವರು ಅಡಕೆಯ ಪರ್ಯಾಯ ಉತ್ಪನ್ನಗಳನ್ನು ಹಾಗೂ ಬಳಸಬಹುದಾದ ಹೊಸ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ಕೈಗೊಳ್ಳುವ ಸಂಶೋಧನಾ ಚಟುವಟಿಕೆಗಳಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಸಭೆಯಲ್ಲಿ ಶಾಸಕ ಹರತಾಳು ಹಾಲಪ್ಪ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ತೋಟಗಾರಿಕಾ ಇಲಾಖೆಯ ಲಾಲ್‌ಬಾಗ್‌ನ ಉಪನಿರ್ದೇಶಕ ಪ್ರಸಾದ್, ಶಿವಮೊಗ್ಗ ತೋಟಗಾರಿಕಾ ವಿಶ್ವವ್ವಿದ್ಯಾನಿಲಯದ ಕುಲಪತಿ ಪ್ರೊ. ಮಂಜುನಾಥ ಕೆ. ನಾಯ್ಕ್, ಮ್ಯಾಮ್ಕೋಸ್ ಉಪಾಧ್ಯಕ್ಷ  ಸುಬ್ರಹ್ಮಣ್ಯ ಯಡಗೆರೆ, ಅಡಿಕೆ ಕಾರ್ಯಪಡೆಯ ಸದಸ್ಯರು ಉಪಸ್ಥಿತರಿದ್ದರು.

ಸಭೆಯಲ್ಲಿ ಯಾರು ಏನೆಂದರು ?

  • ಅಡಕೆ ಸಿಪ್ಪೆಯನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ತ್ಯಾಜ್ಯ ಹೆಚ್ಚಳವಾಗಿ ಪರಿಸರ ಮಾಲಿನ್ಯಗೊಳ್ಳುತ್ತಿದೆ. ಅದರಿಂದ ಪರ್ಯಾಯ ಉತ್ಪನ್ನಗಳನ್ನು ತಯಾರಿಸಲು ಸಂಶೋಧನೆ ನಡೆಸಬೇಕಾದ ಅಗತ್ಯವಿದೆ.
    _ಕೆ.ಎಸ್.ಗುರುಮೂರ್ತಿ, ಅಧ್ಯಕ್ಷರು, ಎಂಎಡಿಬಿ
  • ಸುಮಾರು ೯೩ರೀತಿಯ ಅಡಕೆಯ ಮಾದರಿಯನ್ನು ಸಂಗ್ರಹಿಸಲಾಗಿದೆ. ಅಧ್ಯಯನ ದೃಷ್ಟಿಯಿಂದ ಅದನ್ನು ಬಳಸಿಕೊಳ್ಳಬಹುದಾಗಿದೆ.
    ಸಿಪ್ಪೆಯನ್ನು ಅಲ್ಪಾವಧಿಯಲ್ಲಿ ಗೊಬ್ಬರವನ್ನಾಗಿ ಪರಿವರ್ತಿಸುವ ಸಂಶೋಧನೆ ಪ್ರಗತಿಯಲ್ಲಿದೆ.
  • ಮಂಜುನಾಥ್ ನಾಯ್ಕ, ಕುಲಪತಿ, ತೋಟಗಾರಿಕಾ.ವಿವಿ. ಶಿವಮೊಗ್ಗ.
  • ತಾಳೆಬೆಳೆ ಸಂಸ್ಕರಣೆಗಾಗಿ ಭದ್ರಾವತಿಯಲ್ಲಿ ಕೈಗಾರಿಕೆಯನ್ನು ಆರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು.
  • ಆರಗ ಜ್ಞಾನೇಂದ್ರ., ರಾಜ್ಯ ಅಡಕೆ ಕಾರ್ಯಪಡೆ ಅಧ್ಯಕ್ಷ ಹಾಗೂ ಶಾಸಕ
  • ಅಮೆರಿಕಾ ಸಂಸ್ಥೆಯ ವರದಿಯೊಂದರಲ್ಲಿ ಹಾಗೂ ಚೀನಾ ದೇಶದ ಸಂಶೋಧನಾ ಕೃತಿಯಲ್ಲಿ ಅಡಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬ ಅಂಶವನ್ನು ಗುರುತಿಸಲಾಗಿದೆ.
    ವೈ ಎಸ್ ಸುಬ್ರಹ್ಮಣ್ಯ, ಮ್ಯಾಮ್ಕೋಸ್ ಉಪಾಧ್ಯಕ್ಷ

Ad Widget

Related posts

ಅತ್ಯಾಚಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

Malenadu Mirror Desk

ಮಂಡ್ಲಿ ಖಬರಸ್ಥಾನ್ ಜಾಗ ಗೊಂದಲ ಬೇಡ: ಜಾಮಿಯಾ ಮಸೀದಿ ಸವಾಯಿ ಪಾಳ್ಯ ಸಮಿತಿ

Malenadu Mirror Desk

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರು, ಸಚಿವ ಸಂಪುಟ ಅನುಮೋದಿಸಿದೆ ಎಂದ ಮುಖ್ಯಮಂತ್ರಿ ಬೊಮ್ಮಾಯಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.