ಬಿಜೆಪಿಯಲ್ಲಿ ಮುಗಿದ ಮಾಸ್ ಲೀಡರ್ ಶಕೆ
ನಿರೀಕ್ಷೆಯಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ಇದರಿಂದ ನಾಲ್ಕೂವರೆ ದಶಕಗಳ ರಾಜಕೀಯ ಹೋರಾಟಕ್ಕೊಂದು ಸಾರ್ಥಕ್ಯ ವಿದಾಯವೂ ಸಿಕ್ಕಿದೆ ಎಂಬುದು ಬಿಜೆಪಿಯವರ ಅಭಿಪ್ರಾಯ. ದಕ್ಷಿಣಭಾರತದಲ್ಲಿ ಬಲಪಂಥೀಯ ಚಿಂತನೆಯ ಪಕ್ಷಗಳಿಗೆ ನೆಲೆಯನ್ನೇ ಕೊಡದ ಹೊತ್ತಿನಲ್ಲಿ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಶ್ರೇಯ ಯಡಿಯೂರಪ್ಪರಿಗೆ ಸಲ್ಲುತ್ತದೆ. ಇದು ಸಾಧ್ಯವಾಗಿರುವುದು ಯಡಿಯೂರಪ್ಪರ ಛಲಬಿಡದ ಹೋರಾಟದಿಂದ ಎಂಬುದರಲ್ಲಿ ಎರಡು ಮಾತಿಲ್ಲ.
ಪಕ್ಷ ಸಂಘಟನೆ ಹಾಗೂ ಸರಕಾರ ರಚನೆ ಮಾಡಿದ ಯಡಿಯೂರಪ್ಪರ ಶ್ರಮಕ್ಕೆ ಪಕ್ಷದಲ್ಲಿ ಎಲ್ಲಾ ಅಧಿಕಾರಗಳು ದಕ್ಕಿವೆ ಆದರೂ ಅದಕ್ಕೆ ಪಕ್ಷದ ಒಂದು ವಲಯ ಸದಾಕಾಲ ಎಡರುಗಾಲು ಹಾಕುತ್ತಲೇ ಬಂದಿತ್ತು. ಈ ಎಲ್ಲ ತಡೆಗಳನ್ನೂ ತಮ್ಮ ವರ್ಚಸ್ವೀ ನಾಯಕತ್ವದಿಂದಾಗಿ ಕಾಲಿನಿಂದ ಒದ್ದುಕೊಂಡೇ ಮೇಲೆ ಬಂದಿದ್ದ ಯಡಿಯೂರಪ್ಪರಿಗೆ ಇಂತಹ ವಿದಾಯದ ನಿರೀಕ್ಷೆ ಇರಲಿಲ್ಲ. ಈ ಕಾರಣದಿಂದಲೇ ವೀರಶೈವ ಸ್ವಾಮೀಜಿಯೊಬ್ಬರು ಬಿಜೆಪಿಗೆ ಹಿಡಿಶಾಪ ಹಾಕಿದ್ದಾರೆ.
ಮುಗಿದ ಮಾಸ್‍ಲೀಡರ್ ಪರ್ವ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾಮಾನ್ಯ ಕಾರ್ಯಕರ್ತನಾಗಿ ಮಂಡ್ಯ ಜಿಲ್ಲೆಯಿಂದ ಶಿವಮೊಗ್ಗಕ್ಕೆ ಬಂದಿದ್ದ ಯಡಿಯೂರಪ್ಪ ಮನೆ ಅಳಿಯನಾಗಿ, ತರುವಾಯ ಪುರಸಭೆ ಸದಸ್ಯ, ಶಾಸಕ, ಪ್ರತಿಪಕ್ಷ ನಾಯಕ, ಡಿಸಿಎಂ,ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಾರೆ. ನಾಲ್ಕೂವರೆ ದಶಕಗಳ ಅವರ ಈ ಪಯಣ ಸುಲಭದ್ದೇನಾಗಿರಲಿಲ್ಲ. ಜೀತವಿಮುಕ್ತಿ, ಭೂರಹಿತರ ಹೋರಾಟ, ಬಗರ್ ಹುಕುಂ ಚಳವಳಿ, ನೀರಾವರಿ ಹೋರಾಟ ಎಲ್ಲವುಗಳ ಬಗ್ಗೆ ಅವರಿಗಿದ್ದ ಬದ್ಧತೆಯ ಕಾರಣದಿಂದ ಈ ಚಳವಳಿಗಳೇ ಯಡಿಯೂರಪ್ಪ ಅವರನ್ನು ಒಬ್ಬ ಮಾಸ್ ಲೀಡರ್ ಆಗಿ ಮಾಡಿದವು. ಶಿವಮೊಗ್ಗ ನೆಲದ ಹೋರಾಟದ ಗುಣ, ಆರ್‍ಎಸ್‍ಎಸ್ ಕಲಿಸಿದ ಅರ್ಪಣಾ ಮನೋಭಾವದಿಂದಾಗಿ ಯಡಿಯೂರಪ್ಪ ಅವರು ಬಹುಬೇಗ ಜನನಾಯಕನ ಇಮೇಜು ಗಳಿಸಿಕೊಂಡರು. ಅಧಿಕಾರ ಹಿಡಿಯುವ ಹೊತ್ತಿನಲ್ಲಿ ಅವರ ಬೆನ್ನಿಗಿದ್ದ ಜಾತಿಯ ಬಲದಿಂದ ಕರ್ನಾಟಕ ರಾಜ್ಯದ ಒಬ್ಬ ಪ್ರಬಲ ಮಾಸ್ ಲೀಡರ್ ಆಗಿ ಯಡಿಯೂರಪ್ಪ ಹೊರಹೊಮ್ಮಿದರು.
ರಾಜ್ಯ ಬಿಜೆಪಿಯಲ್ಲಿ ಅಂದಿಗೂ ಇಂದಿಗೂ ಯಡಿಯೂರಪ್ಪ ಅವರಿಗೆ ಅವರೇ ಸಾಟಿ. ಅವರ ನಂತರ ಆ ಪಕ್ಷದಲ್ಲಿ ಮತ್ತೊಬ್ಬ ಮಾಸ್‍ಲೀಡರ್ ಬರಲೇ ಇಲ್ಲ. ರಾಜ್ಯಾದ್ಯಂತ ಅಭಿಮಾನಿಗಳು ಹಾಗೂ ಬೆಂಬಲಿಗರನ್ನು ಹೊಂದಿದ್ದ ಮತ್ತು ಇಡೀ ರಾಜ್ಯವನ್ನು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತಿದ್ದ ಮತ್ತೊಬ್ಬ ನಾಯಕ ಬಿಜೆಪಿಯಲ್ಲಿ ಇಲ್ಲ. ಈಗ ಯಡಿಯೂರಪ್ಪ ಅವರೊಂದಿಗೇ ಬಿಜೆಪಿಯಲ್ಲಿ ಮಾಸ್ ಲೀಡರ್ ಪರ್ವವೂ ಮುಗಿದಂತಾಗಿದೆ. ಆ ರೀತಿಯ ಜನನಾಯಕನ ವರ್ಚಸ್ಸು ಹೊಂದಿರುವ ಲೀಡರ್ ಬಿಜೆಪಿಯಲ್ಲಿ ಯಾರೂ ಇಲ್ಲ. ತಾನೂ ಗೆದ್ದು ತನ್ನ ನಾಮಬಲದಿಂದ ಹತ್ತು ಶಾಸಕರನ್ನು ಗೆಲ್ಲಿಸಿಕೊಂಡು ಬರುವ ತಾಕತ್ತು ಆ ಪಕ್ಷದ ಯಾರಿಗೂ ಇಲ್ಲವಾಗಿದೆ. ಈ ದೃಷ್ಟಿಕೋನದಲ್ಲಿ ನೋಡುವುದಾದರೆ ಯಡಿಯೂರಪ್ಪ ನಿರ್ಗಮನ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ದೊಡ್ಡ ಹೊಡೆತವೇ ಸರಿ.
ಹೈಕಮಾಂಡ್‍ಗೇ ಅಳುಕಿತ್ತು
ಕಾನೂನಿನ ಕತ್ತರಿಯಲ್ಲಿ ಸಿಕ್ಕಿ ಜೈಲಿಗೆ ಹೋಗಿ ಬಂದು, ಸ್ವತಂತ್ರ ಪಕ್ಷ ಕಟ್ಟಿದ್ದ ಯಡಿಯೂರಪ್ಪ ಅವರಿಂದ ಬಿಜೆಪಿಗೆ ಉಳಿಗಾಲವಿಲ್ಲ ಎಂದು ಅರಿತೇ ಮತ್ತೆ ಅವರನ್ನು ಸೇರಿಸಿಕೊಂಡು ಪಕ್ಷದ ಅದ್ಯಕ್ಷಗಾದಿಯನ್ನೂ ನೀಡಲಾಗಿತ್ತು. ಈ ಕಾರಣದಿಂದಲೇ 2018 ರಲ್ಲಿ ನಡೆದ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವ ವಹಿಸಿದ್ದರು. 75 ವರ್ಷ ಮೀರಿದವರಿಗೆ ಅಧಿಕಾರ ಇಲ್ಲ ಎಂಬ ನಿಯಮ ಹಾಕಿಕೊಂಡಿದ್ದ ಬಿಜೆಪಿ ರಾಷ್ಟ್ರ ನಾಯಕತ್ವ ಕರ್ನಾಟಕದ ಮಟ್ಟಿಗೆ ಆ ನಿಯಮ ಸಡಿಲಿಸಿದ್ದೇ ಯಡಿಯೂರಪ್ಪ ಅವರ ತಾಕತ್ತು ಏನು ಎಂಬುದನ್ನು ಸಾಬೀತು ಪಡಿಸುತ್ತದೆ.
ಭಾವುಕ ನುಡಿ ಹಿಂದೆ ನೋವಿತ್ತೇ ?
ದೇಶದ ರಾಜಕೀಯ ಇತಿಹಾಸ ಹಾಗೂ ಕುಟುಂಬ ರಾಜಕಾರಣವನ್ನು ನೋಡಿದರೆ ಆರೋಗ್ಯ ಹಾಗೂ ದೈಹಿಕವಾಗಿ ದುರ್ಬಲರಾದವರು ಅಧಿಕಾರ ಚಲಾಯಿಸಿದ ಉದಾಹರಣೆಗಳಿವೆ. ಹಾಗೆ ನೋಡಿದರೆ ಯಡಿಯೂರಪ್ಪ ಈಗಲೂ ದೈಹಿಕವಾಗಿ ಚುರುಕಾಗಿಯೇ ಇದ್ದಾರೆ. ನಾಳೆ ಗದ್ದುಗೆ ಬಿಡುವೆ ಎಂದು ಗೊತ್ತಿದ್ದರೂ ದೂರದ ಬೆಳಗಾವಿಗೆ ಹೋಗಿ ಭಾನುವಾರ ನೆರೆ ಹಾನಿ ವೀಕ್ಷಣೆ ಮಾಡಿದ್ದಾರೆ. ಆದರೆ ಸೋಮವಾರ ರಾಜೀನಾಮೆ ನಿರ್ಧಾರ ಪ್ರಕಟಮಾಡುವಾಗ ಅವರು ಭಾವುಕರಾಗಿ ಮಾತನಾಡಿದ್ದಾರೆ. ರಾಜ್ಯದಲ್ಲಿ ಅವರಿಗಿರುವ ಜನ,ಜಾತಿ ಹಾಗೂ ಮಠಬಲವನ್ನು ನೋಡಿದರೆ ಸಲೀಸಾಗಿ ಅಧಿಕಾರ ಬಿಟ್ಟುಕೊಡುವ ಅಗತ್ಯವಿರಲಿಲ್ಲ. ಆದರೆ ಅವರು ಅಧಿಕಾರದಲ್ಲಿರುವಾಗ ಕುಟುಂಬ ಅದರಲ್ಲೂ ಮಕ್ಕಳ ಹಸ್ತಕ್ಷೇಪ ಅತಿಯಾಗಿತ್ತು ಎಂಬ ಅಪಖ್ಯಾತಿ ಅವರಿಗೆ ಕಾಡಿದ್ದು ಸುಳ್ಳಲ್ಲ.
ರಾಜಕೀಯ ಅಸ್ತಿತ್ವ ಕಳೆದುಕೊಂಡಿದ್ದ ಬಸವನಗೌಡ ಪಾಟೀಲ್ ಯತ್ನಾಳ್, ಯೋಗಿಶ್, ಎಚ್.ವಿಶ್ವನಾಥ್ ಅವರಿಗೆ ಸ್ಥಾನಮಾನ ಕೊಟ್ಟ ಯಡಿಯೂರಪ್ಪ ಅವರು ಅವರಿಂದಲೇ ನಿಂದನೆಗೊಳಗಾಗಬೇಕಾಯಿತು. ಹೀಗೆ ಅವರು ಆಹಾರವಾಗಲು ಕಾರಣವಾಗಿದ್ದೇ ಕುಟುಂಬ ರಾಜಕಾರಣ. ಈ ನಕಾರಾತ್ಮಕ ಅಂಶವನ್ನೇ ಮುಂದಿಟ್ಟುಕೊಂಡಿದ್ದ ಬಿಜೆಪಿ ಹೈಕಮಾಂಡ್ ಗಟ್ಟಿ ನಾಯಕತ್ವದ ಬುಡವನ್ನೇ ಅಲುಗಾಡಿಸಿದೆ. ಈ ಕಾರಣದಿಂದಲೇ ಕಾಯಕಯೋಗಿ ಬೂಕನಕೆರೆ ಸಿದ್ದಲಿಂಗಯ್ಯ ಯಡಿಯೂರಪ್ಪ ಅವರು ಒಲ್ಲದ ಮನಸ್ಸಿನಲ್ಲಿಯೇ ಹೈ ಕಮಾಂಡ್ ಹಂಗಿಗೆ ಒಳಗಾಗಿ ಕಣ್ಣಿರಿನ ವಿದಾಯ ಹೇಳಬೇಕಾಯಿತು.