ಶಿವಮೊಗ್ಗ ನಗರದಲ್ಲಿ ನಾಲ್ಕನೇ ದಿನವೂ ಹಿಜಾಬ್ ವಿವಾದ ಯಥಾಸ್ಥಿತಿಯಲ್ಲಿದ್ದು, ಗುರುವಾರ ಡಿವಿಎಸ್ ಸ್ವತಂತ್ರ ಪಿಯು ಕಾಲೇಜು ಮತ್ತು ಸರ್ವೋದಯ, ಕಮಲಾ ನೆಹರು ಕಾಲೇಜಿನ ಎದುರು ಪ್ರತಿಭಟನೆ ನಡೆಯಿತಾದರೂ ನಂತರ ಅದು ಜಿಲ್ಲಾಧಿಕಾರಿ ಕಚೇರಿಗೆ ಸ್ಥಳಾಂತರಗೊಂಡಿದೆ. ಹಿಜಾಬ್ ಧರಿಸಿ ತಮಗೆ ತರಗತಿಗೆ ಹಾಜರಾಗಲು ಅವಕಾಶ ಕೊಡಬೇಕೆಂದು ಒತ್ತಾಯಿಸಿದರು.
ಪೊಲೀಸರು ಧರಣಿ, ಪ್ರತಿಭಟನೆ ನಡೆಸದಂತೆ ತಿಳಿಹೇಳಿ, ಮನೆಗೆ ಕಳುಹಿಸಲು ಯತ್ನಿಸಿದರಾದರೂ ಸಫಲರಾಗಲಿಲ್ಲ. ನೂರಾರು ಸಂಖ್ಯೆಯಲ್ಲಿದ್ದ ವಿದ್ಯಾರ್ಥಿನಿಯರು ಮಧ್ಯಾಹ್ನದವರೆಗೂ ಪ್ರತಿಭಟನೆ ನಡೆಸಿದರು.
ಡಿವಿಎಸ್ ಕಾಲೇಜಿನ ಮುಂಭಾಗದಲ್ಲಿ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಪ್ರವೇಶಿಸಲು ಯತ್ನಿಸಿದಾಗ ಅವರನ್ನು ತಡೆಯಲಾಯಿತು,.
ನಂತರ ವಿದ್ಯಾರ್ಥಿನಿಯರನ್ನು ಮತ್ತು ಅವರ ಜೊತೆಗಿದ್ದ ಪೋಷಕರನ್ನು ಕಾಲೇಜು ಆವರಣಕ್ಕೆ ಕರೆತಂದು ಅಲ್ಲಿ ಡಿವೈಎಸ್‌ಪಿ ಪ್ರಶಾಂತ್‌ಕುಮಾರ್ ಮುನ್ನೋಳಿ ಸುಮಾರು ೪೫ ನಿಮಿಷಗಳ ಕಾಲ ಚರ್ಚಿಸಿದರು.
ಚರ್ಚೆಯ ನಂತರ ವಿದ್ಯಾರ್ಥಿನಿಯರು ಮರುಮಾತನಾಡದೆ ಮನೆಗೆ ಮರಳಿದರು. ಈ ಸಂದರ್ಭದಲ್ಲಿ ಪ್ರ್ರಾಂಶುಪಾಲರೂ ಸಹ ಹಾಜರಿದ್ದರು. ಕಾಲೇಜಿನ ಪಾಠಗಳು ಈ ವಿದ್ಯಾರ್ಥಿನಿಯರಿಗೆ ತಪ್ಪಿಹೋಗಿದ್ದಲ್ಲಿ ಅವರಿಗೆ ಪುನಃ ಪಾಠ ಮಾಡಲಾಗುವುದು. ನ್ಯಾಯಾಲಯದ ಆದೇಶ ಬರುವವರೆಗೆ ಸಹಕರಿಸಬೇಕೆಂದು ಅವರು ಕೋರಿದರು.
ಈ ಮಧ್ಯೆ ಡಿವಿಎಸ್ ಹೈಸ್ಕೂಲಿನ 8-10 ಹುಡುಗರು ಹಿಜಾಬ್ ಬೆಂಬಲಿಸಿ ಪ್ರತಿಭಟನೆ ನಡೆಸಿದರು. ಆನಂತರ ತರಗತಿ ತ್ಯಜಿಸಿ ಮನೆಗೆ ನಡೆದರು. ಪಿಯು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದು ಪ್ರತಿಭಟನೆ ಮಾಡುತ್ತಿದ್ದರೂ ಅವರಿಗೆ ಒಳಪ್ರವೇಶ ಕೊಡುತ್ತಿಲ್ಲ. ಅವರಿಗೆ ಪ್ರವೇಶ ದೊರೆಯುವವರೆಗೆ ತಾವೂ ತರಗತಿಗೆ ಹಾಜರಾಗುವುದಿಲ್ಲ ಎಂದು ಈ ವಿದ್ಯಾಥಿಗಳು ಹೇಳಿದರು.
ಜಯನಗರದಲ್ಲಿರುವ ಸರ್ವೋದಯ ಮಹಿಳಾ ಪದವಿ ಕಾಲೇಜಿನಲ್ಲಿ ಹಿಜಾಬ್ ವಿವಾದಕ್ಕೆ ನಾಂದಿ ಹಾಡಲಾಗಿದೆ. ಹಿಜಾಬ್ ಧರಿಸಿ ತರಗತಿಗೆ ಹಾಜರಾಗದಂತೆ ಆಡಳಿತ ಮಂಡಳಿಯವರು ಮತ್ತು ಶಿಕ್ಷಕರು ತಿಳಿಸಿದ್ದರಿಂದ ಅದನ್ನು ಪ್ರತಿಭಟಿಸಿ ಬಹಳಷ್ಟು ವಿದ್ಯಾರ್ಥಿನಿಯರು ತರಗತಿಯಿಂದ ಹೊರಬಂದು ಪ್ರತಿಭಟಿಸಿದ್ದಾರೆ. ಗೇಟ್ ಎದುರು ಪ್ರತಿಭಟನೆ ನಡೆಸಿದ ಈ ವಿದ್ಯಾರ್ಥಿನಿಯರನ್ನು ಸಮುದಾಯದ ಪೋಷಕರೇ ಮನವೊಲಿಸಿದರು. ಒಂದು ಗಂಟೆ ಪ್ರತಿಭಟನೆ ನಡೆಸಿದರು. ಹೈಕೋರ್ಟ್ ತೀರ್ಪು ಗಮನಿಸಿ ಮುಂದಿನ ಹೆಜ್ಜೆ ಇಡಬೇಕೆಂದು ಪಾಲಕರು ಹೇಳಿದ್ದರಿಂದ ಅಲ್ಲಿಗೆ ಪ್ರತಿಭಟನೆ ಮುಗಿಸಿದರು. ಪ್ರಾಚಾರ್‍ಯ ಶಶಿಕುಮಾರ್ ಹಾಜರಿದ್ದರು.
ಕಮಲಾ ನೆಹರು ಕಾಲೇಜಿನಲ್ಲೂ ಪ್ರತಿಭಟನೆ ನಡೆಯಿತು. ಹಿಜಾಬ್ ಧರಿಸಿ ಬಂದವರಿಗೆ ಅವಕಾಶ ನಿರಾಕರಿಸಿದ್ದರಿಂದ ಕಾಲೇಜಿನ ಮುಂಭಾಗವೇ ವಿದ್ಯಾರ್ಥಿನಿಯರು ನಿಂತು ಪ್ರತಿಭಟಿಸಿದರು. ಹಿಜಾಬ್ ನಮ್ಮ ಗೌರವ. ನಮಗೆ ಹಿಜಾಬ್ ಬೇಕು, ಶಿಕ್ಷಣವೂ ಬೇಕು, ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಘೋಷಿಸಿದವರು ಈ ರೀತಿ ತಾರತಮ್ಯ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.