ಶಿವಮೊಗ್ಗ: ನಗರದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಇನ್ನೂ ಹೆಚ್ಚಿನ ಕೃಷಿ ಅಧ್ಯಯನ ನಡೆಸಲು ಅನುಕೂಲವಾಗುವಂತೆ ಹೊಸ ಕೋರ್ಸುಗಳನ್ನು ಅಳವಡಿಸಲು ಚಿಂತನೆ ನಡೆಯುತ್ತಿದೆ. ಬಿ ಎಸ್ ಸಿ ಮತ್ತು ಎಂಎಸ್‌ಸಿಯಲ್ಲಿ ಆಧುನಿಕ ಕೃಷಿ ಅಧ್ಯಯನದ ಹೆಚ್ಚು ವಿಷಯಗಳನ್ನು ಸೇರಿಸಲಾಗುವುದು ಎಂದು ವಿವಿಯ ಕುಲಪತಿ ಪ್ರೊ. ಆರ್. ಸಿ. ಜಗದೀಶ ಹೇಳಿದರು.
ಪ್ರೆಸ್ ಟ್ರಸ್ಟಿನಲ್ಲಿ ಜಿಲ್ಲಾ ಶಿವಮೊಗ್ಗ ಕಾರ್‍ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್ ಟ್ರಸ್ಟ್ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಈ ಮಾಹಿತಿ ನೀಡಿದರು.
ಈಗ ವಿವಿಯಲ್ಲಿ ಸುಮಾರು ೧೫೦೦ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಇದನ್ನು ಮೂರು ಸಾವಿರಕ್ಕೆ ಹೆಚ್ಚಿಸುವ ಪ್ರಸ್ತಾವನೆ ಇದೆ. ಇದಕ್ಕಾಗಿ ಹೊಸ ವಿಷಯಗಳನ್ನು ಅಳವಡಿಸಲಾಗುವುದು. ಕೃಷಿಗೆ ಹೆಚ್ಚಿನ ಒತ್ತು ಕೊಡುವುದು ಮತ್ತು ಕೃಷಿ ಶಿಕ್ಷಣವನ್ನು ಜನಪ್ರಿಯಗೊಳಿಸುವುದು ಉದ್ದೇಶವಾಗಿದೆ ಎಂದರು.
ಸುಮಾರು ೧೨ ಸಂಶೋಧನಾ ಕೇಂದ್ರಗಳು ವಿವಿಯಲ್ಲಿ ಕೆಲಸ ಮಾಡುತ್ತಿವೆ. ಇದರಲ್ಲಿ ಸಾಕಷ್ಟು ವಿಷಯಗಳಿವೆ. ಅಂತಿಮ ವರ್ಷದ ವಿದ್ಯಾಥಿಗಳನ್ನು ರೈತರ ಹೊಲಗಳಿಗೆ ಕಳುಹಿಸಿ ಬೆಳೆಯ ಬಗ್ಗೆ ಮಾಹಿತಿ ಕೊಡಿಸಲಾಗುತ್ತಿದೆ. ಅವರಿಂದ ಸಮೀಕ್ಷೆ ನಡೆಸಲಾಗುತ್ತಿದೆ.
ರೈತರಿಂದಲೂ ಅನುಭವವನ್ನು ಅವರಿಗೆ ಕೊಡಿಸಲಾಗುತ್ತಿದೆ ಎಂದ ಅವರು, ರೈತರಿಗೂ ಈ ವಿದ್ಯಾರ್ಥಿಗಳು ಆಧುನಿಕ ಮಾಹಿತಿ ಕೊಡುವರು ಎಂದರು.
ಭತ್ತ ಬೆಳೆಯುವ ಪ್ರದೇಶ ಮಲೆನಾಡಿನಲ್ಲಿ ಕಡಿಮೆ ಆಗುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಅವರು, ಅಷ್ಟೇನೂ ಕಡಿಮೆಯಾಗುತ್ತಿಲ್ಲ. ಅಡಿಕೆ ಬೆಳೆಯ ಸಂಬಂಧ ಕೆಲವೆಡೆ ಕೃಷಿ ಭೂಮಿಯನ್ನು ತೋಟವನ್ನಾಗಿ ಪರಿವರ್ತಿಸಲಾಗುತ್ತಿದೆ. ಮಲೆನಾಡು ಹೊರತುಪಡಿಸಿ ಉಳಿದೆಡೆ ಭತ್ತದ ವ್ಯಾಪ್ತಿ ಕಡಿಮೆ ಆಗುತ್ತಿಲ್ಲ ಎಂದರಲ್ಲದೆ, ಈಗ ತೋಟಗಾರಿಕೆ ಬೆಳೆಗಳ ಜೊತೆ ಮಿಶ್ರ ಬೆಳೆ ತೆಗೆಯುವ ಮೂಲಕ ಅಧಿಕ ಆದಾಯ ಪಡೆಯಬಹುದಾಗಿದೆ. ಸಾಂಬಾರು ಬೆಳೆಗಳು. ಅಪ್ಪೆಮಿಡಿ, ಗೇರು ಮೊದಲಾದವನ್ನು ಮಿಶ್ರ ಬೆಳೆಯಾಗಿ ಬೆಳೆಯಬಹುದು. ಕಾಳುಮೆಣಸು, ಜಾಯಿಕಾಯಿ ಸಹ ಬೆಳೆಯಲಾಗುತ್ತಿದೆ. ರೈತರು ಇದನ್ನು ಅಳವಡಿಸಿಕೊಳ್ಳುವತ್ತ್ತ ಮುಂದಾಗಬೇಕು ಎಂದರು.
ಅಡಿಕೆಯ ವಿವಿಧ ರೋಗಗಳ ಬಗ್ಗೆ ಪ್ರಸ್ತಾಪಿಸಿದಾಗ ಅಡಿಕೆ ರೋಗವಿಲ್ಲದ ಬೆಳೆಯಾಗಿತ್ತು. ಆದರೆ ಕೆಲವು ದಶಕಗಳಿಂದ ಕೊಳೆ ರೋಗ ಕಾಣಿಸಿಕೊಂಡಿತು. ನಂತರ ಹಳದಿ ರೋಗ, ಮತ್ತು ಈಗ ಎರಡು ವರ್ಷದಿಂದ ಎಲೆ ಚುಕ್ಕಿ ರೋಗ ಬಂದಿದೆ. ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ನಡೆಸಿ ಕಾರಣ ಪತ್ತೆ ಮಾಡಿದ್ದಾರೆ. ಪರಿಹಾರ ಕಂಡುಹಿಡಿಯಲು ೮ ವಿದ್ಯಾರ್ಥಿಗಳೊಂದಿಗೆ ಇಬ್ಬರು ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ. ಎಲೆಚುಕ್ಕಿರೋಗ ಶೀತದ ಪ್ರಮಾಣ ಹಾಗೂ ನಿರಂತರ ಮಳೆಯಿಂದ ಉಂಟಾಗುತ್ತದೆ. ಗಾಳಿಯ ಮೂಲಕ ಹರಡುವ ಈ ರೋಗದ ವೈರಾಣುಗಳು ಸಾಯುವುದಿಲ್ಲ. ಮತ್ತೆ ಮುಂದಿನ ದಿನದ ಮಳೆಗಾಲದ ಅವಧಿಯಲ್ಲಿ ಉತ್ಪತ್ತಿಯಾಗುತ್ತವೆ. ಇದಕ್ಕೆ ಸೂಕ್ತ ಪರಿಹಾರ ಕಂಡುಹಿಡಿಯುವ ಜವಾಬ್ದಾರಿ ನಮ್ಮದಾಗಿದೆ ಎಂದರು.
ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ, ಕಾರ್‍ಯನಿgತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಹಾಜರಿದ್ದರು. ಹೊನ್ನಾಳಿ ಚಂದ್ರು ಕಾರ್‍ಯಕ್ರಮ ನಿರೂಪಿಸಿದರು.
* ಶಿಕ್ಷಣ, ಸಂಶೋಧನೆ, ವಿಸ್ತರಣೆ ನೋಡಿ ದೇಶದ ೭೨ ಕೃಷಿ ವಿಶ್ವ ವಿದ್ಯಾಲಯಗಳಲ್ಲಿ ಶಿವಮೊಗ್ಗ ವಿವಿ ಈಗಾಗಲೇ ೩೨ನೇ ರ್‍ಯಾಂಕಿಂಗ್ ಪಡೆದಿದೆ. ದೇಶದ ೧೦ನೇ ರ್‍ಯಾಂಕಿಂಗ್‌ನೊಳಗೆ ತರುವ ಪ್ರಯತ್ನ ನಡೆದಿದೆ.
* ರೈತರು ಬೆಳೆಗಳ ಮೌಲ್ಯವರ್ಧನೆ ಮಾಡಬೇಕು. ಏಕಬೆಳೆಯನ್ನು ನಂಬಿಕೊಳ್ಳಬಾರದು.
* ರೈತರಿಗೆ ತರಬೇತಿಯನ್ನು ಸಾಂದರ್ಭಿಕವಾಗಿ ನೀಡಲಾಗುತ್ತಿದೆ. ಮಹಿಳೆಯರಿಗೆ ಕೂಡ ತರಬೇತಿ ಇದೆ. ಇತ್ತೀಚೆಗೆ ಆಧುನಿಕ ಕೃಷಿಯ ಬಗ್ಗೆ ಹೆಚ್ಚು ಸಂಶೋಧನೆ ನಡೆಯುತ್ತಿದೆ. ಈ ಮಧ್ಯೆ ಪಾರಂಪರಿಕ ಕೃಷಿಯನ್ನು ಸಹ ಪ್ರೋತ್ಸಾಹಿಸಲಾಗುತ್ತಿದೆ.
* ಜೇನುತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದ್ದು, ಅದಕೋಸ್ಕರ ೩ ಕ್ಯಾಂಪಸ್‌ಗಳಲ್ಲಿ ಜೇನು ಸಾಕಾಣಿಕೆ ಕಾರ್ಯ ನಡೆಯುತ್ತಿದೆ.
* ರೈತರು ನೇರವಾಗಿ ತಮ್ಮ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಲು ಕೃಷಿ ವಿವಿಯ ತಜ್ಞರೊಂದಿಗೆ ಸಂಪರ್ಕಿಸಿ ಮಾಹಿತಿ ಪಡೆಯಲು ಸದ್ಯದಲ್ಲೆ ಹೆಲ್ಪ್‌ಲೈನ್ ಸ್ಥಾಪಿಸಲಾಗುತ್ತದೆ.
* ಮುಂಬರುವ ಜನವರಿಯಲ್ಲಿ ಕೃಷಿ ಮೇಳವನ್ನು ಏರ್ಪಡಿಸಲಾಗುವುದು. ಸತತವಾಗಿ ಮಳೆ ಬೀಳುತ್ತಿರುವುದರಿಂದ ಈ ತಿಂಗಳು ನಡೆಯಬೇಕಿದ್ದ ಕೃಷಿ ಮೇಳವನ್ನು ಮುಂದೂಡಲಾಗಿದೆ.