Malenadu Mitra
ರಾಜ್ಯ ಶಿವಮೊಗ್ಗ

ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣ ಕ್ರಮಕ್ಕೆ ಸೂಚನೆ : ಆರಗ ಜ್ಞಾನೇಂದ್ರ

ಶಿವಮೊಗ್ಗ : ಜಿಲ್ಲೆಯಲ್ಲಿ ಅಡಿಕೆ ಎಲೆ ಚುಕ್ಕೆ ರೋಗದಿಂದ ಬಾಧಿತರಾದ ತೋಟಗಾರಿಕೆ ಬೆಳೆಗಾರರ ರಕ್ಷಣೆಗೆ ಸರ್ಕಾರ ಸದಾ ಸಿದ್ಧವಾಗಿದ್ದು, ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು.
ಅವರು  ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೇರಿ ಹೊಸೂರಿನಲ್ಲಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ತೋಟಗಾರಿಕೆ ಇಲಾಖೆ ಇವರುಗಳ ಆಶ್ರಯದಲ್ಲಿ ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣದ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. ರೋಗದ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೃಷಿ ವಿಜ್ಞಾನಿಗಳು ಹಾಗೂ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ನಿಯಂತ್ರಣದ ಕ್ರಮದ ಬಗ್ಗೆ ಬೆಳೆಗಾರರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಅಲ್ಲದೇ ರೋಗದ ಹತೋಟಿಗೆ ಔಷಧ ಸಿಂಪಡಿಸಲು ತೋಟಗಾರಿಕೆ ಇಲಾಖೆ ವತಿಯಿಂದ ಪ್ರತಿ ಹೆಕ್ಟೇರ್‌ಗೆ ರೂ.೪,೦೦೦/- ಮೌಲ್ಯದ ಔಷಧಗಳನ್ನು ಸಂತ್ರಸ್ಥ ತೋಟಗಾರಿಕೆ ಬೆಳೆಗಾರರಿಗೆ ವಿತರಿಸಲಾಗುತ್ತಿದೆ ಎಂದ ಅವರು, ಈ ಸಂಬಂಧ ಈಗಾಗಲೇ ಜಿಲ್ಲೆಯಲ್ಲಿ ಅಡಿಕೆ ಬೆಳೆಗೆ ತಗುಲಿರುವ ಸೋಂಕಿನ ಕುರಿತು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದ್ದು, ಕೈಗೊಳ್ಳಬಹುದಾದ ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. ಅಗತ್ಯವಿದ್ದಲ್ಲಿ ಮಾನ್ಯ ಮುಖ್ಯಮಂತ್ರಿಗಳನ್ನು ಹಾಗೂ ಕೃಷಿ ಸಚಿವರನ್ನು ಕರೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.
.
ಸಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ಜಿಲ್ಲೆಯಲ್ಲಿ ಎಲೆಚುಕ್ಕೆ ರೋಗಕ್ಕೆ ತುತ್ತಾಗಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಅಡಿಕೆ ಬೆಳೆ ಸಂಪೂರ್ಣವಾಗಿ ನಾಶವಾಗಿದ್ದಲ್ಲಿ ಅಂತಹ ರೈತರಿಗೆ ಆರ್ಥಿಕ ನೆರವು ಒದಗಿಸುವಂತೆ ಸರ್ಕಾರವನ್ನು ಕೋರಲಾಗುವುದಲ್ಲದೇ ಶೀಘ್ರ ತಜ್ಞರು ಹಾಗೂ ಪರಿಣಿತರ ತಂಡದೊಂದಿಗೆ ಕೇಂದ್ರ ಕೃಷಿ ಮತ್ತು ತೋಟಗಾರಿಕೆ ಸಚಿವರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದಿಂದ ಒದಗಿಸಬಹುದಾದ ಪರಿಹಾರ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಲಾಗುವುದು ಎಂದರು.
ಮಕ್ಕಳಂತೆ ಸಂರಕ್ಷಿಸಿದ ಅಡಿಕೆ ಮರಗಳಿಗೆ ತಗುಲಿರುವ ಎಲೆ ಚುಕ್ಕೆ ರೋಗದಿಂದಾಗಿ ಗ್ರಾಮೀಣ ಪ್ರದೇಶದ ರೈತರಲ್ಲಿ ಸೂತಕದ ವಾತಾವರಣ ಮೂಡಿದೆ. ಈ ಕುರಿತು ವಾಸ್ತವ ಸ್ಥಿತಿಗತಿ ಅರಿತು ಸೋಂಕನ್ನು ನಿಯಂತ್ರಿಸುವ ಕ್ರಮದ ಭಾಗವಾಗಿ ಕಾಸರಗೋಡಿನ ಸಂಶೋಧನಾ ಕೇಂದ್ರದ ವಿಜ್ಞಾನಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಕೈಗೊಳ್ಳಬಹುದಾದ ಸುಧಾರಣಾ ಕ್ರಮಗಳ ಬಗ್ಗೆ ಶೀಘ್ರವೇ ಮಾಹಿತಿ ದೊರೆಯಲಿದೆ ಎಂದರು.

ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕುಗಳ ವ್ಯಾಪ್ತಿಯಲ್ಲಿ ಮುಂಗಾರು ಹಂಗಾಮಿನಲ್ಲಿ ನಿರಂತರವಾಗಿ ಬಿದ್ದ ಭಾರೀ ಮಳೆಯಿಂದಾಗಿ ಸುಮಾರು ೬೩೯೫ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಅಡಿಕೆ ಬೆಳೆ ಎಲೆಚುಕ್ಕೆ ರೋಗಕ್ಕೆ ತುತ್ತಾಗಿದ್ದು, ಈ ಭಾಗದ ತೋಟಗಾರಿಕೆ ಬೆಳೆಗಾರರು ತೀವ್ರ ಪ್ರಮಾಣದ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಈ ರೋಗದ ಭಾದೆಯಿಂದ ಶೇ.೨೫-೨೫ರಷ್ಟು ಇಳುವರಿ ಕುಂಠಿತವಾಗುತ್ತಿದೆ. ಸಕಾಲದಲ್ಲಿ ಸೂಕ್ತ ನಿರ್ವಹಣಾ ಕ್ರಮಗಳನ್ನು ಅನುಸರಿಸಿದಲ್ಲಿ ರೋಗವನ್ನು ನಿಯಂತ್ರಿಸಬಹುದಾಗಿದೆ.

ಪ್ರಕಾಶ್, ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಶಿವಮೊಗ್ಗ.

ವಾತಾವರಣದಲ್ಲಿ ಹೆಚ್ಚಿನ ತೇವಾಂಶ ಮತ್ತು ನಿರಂತರ ಮಳೆ-ಬಿಸಿಲಿನಿಂದ ರೋಗದ ಉಲ್ಬಣವಾಗುತ್ತಿದೆ. ಶಿಲೀಂದ್ರಗಳ ನಾಶಕ ಸಕಾಲಿಕ ಸಿಂಪರಣೆ ಮತ್ತು ಭೂಮಿಗೆ ಸಾವಯವ ಗೊಬ್ಬರ ಬಳಕೆಯಿಂದ ಗಿಡಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಗಿಡಗಳನ್ನು ಸಂರಕ್ಷಿಸಿಕೊಳ್ಳಬಹುದಾಗಿದೆ.
– ಆರ್.ಸಿ.ಜಗದೀಶ್, ಕುಲಪತಿಗಳು, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ.

Ad Widget

Related posts

ಸಿಮ್ಸ್ ಗೆ ಒಬ್ಬಉತ್ಸಾಹಿ ನಿರ್ದೇಶಕರ ನೇಮಿಸಿ: ಶ್ರೀಪಾಲ್

Malenadu Mirror Desk

ಹರ್ಷ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ರೂ ಪರಿಹಾರ ಭಾನುವಾರ ಚೆಕ್ ಹಸ್ತಾಂತರಿಸಲಿರುವ ಯಡಿಯೂರಪ್ಪ, ಸಚಿವ ಕೆ.ಎಸ್ ಈಶ್ವರಪ್ಪ

Malenadu Mirror Desk

ಬಾಲ ಬಿಚ್ಚಿದರೆ ಹುಷಾರ್: ರೌಡಿಗಳಿಗೆ ಎಚ್ಚರಿಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.