ಮಲೆನಾಡಿನ ಸಂಸ್ಕೃತಿಯ ಪ್ರತೀಕವಾದ ಗೌರಿ ಹಬ್ಬವನ್ನು ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಗೌರಿ ಹಬ್ಬವೆಂದರೆ ಮಲೆನಾಡಿನಲ್ಲಿ ವಿಶಿಷ್ಟ ಆಚರಣೆ. ಮಲೆನಾಡು ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ವ್ಯಾಪಕವಾಗಿರುವ ದೀವರ ಸಮುದಾಯದಲ್ಲಿ ಗೌರಿ ಹಬ್ಬಕ್ಕೆ ಎಲ್ಲಿಲ್ಲದ ಮಹತ್ವವಿದೆ
ವಿಶಿಷ್ಟ ಬುಡಕಟ್ಟು ಸಂಪ್ರದಾಯವನ್ನು ಹೊಂದಿರುವ ಈ ಸಮುದಾಯದ ಪ್ರತಿ ಮನೆಯಲ್ಲಿ ಬಾಳೆಮರ ಅಥವಾ ಮರದ ಮಂಟಪದಲ್ಲಿ ಹೊಳೆಯಿಂದ ಹೆಂಗಳೆಯರೆಲ್ಲಾ ಸೇರಿ ತರುವ ನೀರನ್ನೇ ಗೌರಮ್ಮ ಎಂದು ಪೂಜಿಸುತ್ತಾರೆ.
ಮೂರು ದಿನಗಳ ಕಾಲ ಮನೆಯಲ್ಲಿ ಗೌರಿ ಹಬ್ಬ ಆಚರಿಸುವ ಅವರಲ್ಲಿ ತಾಯಿ ಪಾರ್ವತಿ ಗಂಡನೊಂದಿಗೆ ತೌರಿಗೆ ಹಬ್ಬಕ್ಕೆ ಬಂದಿದಾಳೆ ಎಂಬ ಪ್ರತೀತಿ ಇದೆ.. ತವರಿಗೆ ಬರುವ ಹೆಣ್ಣುಮಕ್ಕಳು ತರಾವರಿ, ಅಡುಗೆ , ಕಜ್ಜಾಯ, ಚಕ್ಕುಲಿ, ಅತ್ರಾಸು, ಕರಿಗಡಬು ಸೇರಿದಂತೆ ತರಾವರಿ ತಿನಿಸುಗಳನ್ನು ತಯಾರಿಸಿ ಗೌರಮ್ಮನಿಗೆ ಎಡೆ ಹಾಕುವುದು ಸಂಪ್ರದಾಯ.
ಮಲೆನಾಡಿನಲ್ಲಿ ಮಳೆಯಿಲ್ಲದೆ ಸಂಕಷ್ಟದ ನಡುವೆಯೇ ಹೆಣ್ಣುಮಕ್ಕಳು ತವರಿಗೆ ಬಂದು ಹಬ್ಬ ಆಚರಿಸಿದರು.
ತವರುಮನೆಯಿಂದ ಗಂಡನ ಮನೆಗೆ ಹೊರಡುತ್ತಾಳೆ. ಮೂರು ದಿನ ತೌರಿನಲ್ಲಿ ಸುಖವಾಗಿದ್ದ ಸಿರಿಗೌರಿಯನ್ನು ಭಾರವಾದ ಮನಸ್ಸಿನಲ್ಲಿಯೇ ಹೊಳೆಯ ನೀರಿನ ಮೂಲಕವೇ ಗಂಡನ ಮನೆಗೆ ಕಳಿಸುವ ಈ ಹಬ್ಬದೊಂದಿಗೆ ದೀವರ ಸಮುದಾಯ ಒಂದು ಭಾವನಾತ್ಮಕ ಹಾಗೂ ಪೂಜನೀಯ ಸಂಬಂಧ ಹೊಂದಿದೆ. ಬರಗಾಲದ ಛಾಯೆ ಆವರಿಸಿದರೂ ಹೆಣ್ಣು ಮಕ್ಕಳನ್ನು ತವರಿಗೆ ಕರೆದು ಮಲೆನಾಡಿನಾದ್ಯಂತ ಸಂಭ್ರಮದಿಂದ ಹಬ್ಬ ಆಚರಿಸಲಾಯಿತು.
ಹಬ್ಬವನ್ನು ಯಾವುದೇ ಅಡಚಣೆಯಾಗದಂತೆ ಮಾಡಿದ್ದಾರೆ.
ಹಿಂದೆ ಊರಿನ ಕೆರೆಗಳಲ್ಲಿ ಎಲ್ಲಾ ಕುಟುಂಬಗಳೂ ಕೂಡಿ ಗೌರಮ್ಮನನ್ನು ಬರಮಾಡಿಕೊಳ್ಳುವ ಮತ್ತು ವಿಸರ್ಜಿಸುವ ಪರಿಪಾಠವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅದು ಕಡಿಮೆಯಾಗಿದೆ. ಸಾಗರ ಮತ್ತು ಸೊರಬ ಸೀಮೆಯಲ್ಲಿ ಈಗಲೂ ಈ ಸಂಭ್ರಮವನ್ನು ನಾವು ಕಾಣಬಹುದು. ಪೃಕೃತಿಯನ್ನೇ ದೇವರೆಂದು ಆರಾಧಿಸುವ ಮಲೆನಾಡಿಗರು ಗೌರಿ ಹಬ್ಬದಲ್ಲಿ ದೇವಿಗೆ ಅಲಂಕರಿಸಲು ಅರಣ್ಯದಲ್ಲಿಯೇ ಸಿಗುವ ಹೂವು ಹಣ್ಣುಗಳನ್ನು ತರುವುದು ವಿಶೇಷವಾಗಿದೆ.
ಗಂಡನ ಮನೆಯಲ್ಲಿಯೇ ಎಲ್ಲಾ ಹಬ್ಬ ಆಚರಿಸುವ ನಾನು ಗೌರಿ ಹಬ್ಬ ಮಾತ್ರ ತವರಿನಲ್ಲಿಯೇ ಮಾಡುವೆ. ಈ ಹಬ್ಬ ಮತ್ತು ತವರಿನ ಬಾಂದವ್ಯ ಆ ರೀತಿ ಇದೆ. ಇಂತಹ ಆಚರಣೆಗಳಿಂದ ಮಲೆನಾಡಿನ ಶ್ರೀಮಂತ ಸಂಸ್ಕೃತಿ ಉಳಿಯುತ್ತದೆ. ನಾವು ನಮ್ಮ ಮುಂದಿನ ಪೀಳಿಗೆಗೆ ಆಚರಣೆಯನ್ನು ತಲುಪಿಸುವ ಕೆಲಸ ಮಾಡಬೇಕಾಗಿದೆ. ನಿಜಕ್ಕೂ ಈ ಹಬ್ಬ ಅದ್ಭುತ ಅನುಭವ ನಮಗೆ. ತಾಯಿ ಗೌರವ್ವ ಎಲ್ಲಾ ಹೆಣ್ಣುಮಕ್ಕಳ ತೌರಿನಲ್ಲಿಯೂ ಸುಖ ಶಾಂತಿ ತರಲಿ ಎಂದು ಬೇಡುವೆ
ಸುಷ್ಮಿತಾ, ರಿಪ್ಪನ್ ಪೇಟೆ