Malenadu Mitra
ರಾಜ್ಯ ಶಿವಮೊಗ್ಗ

ಮಾರಿಜಾತ್ರೆಯ ಸಡಗರದಲ್ಲಿ ಮಲೆನಾಡಿನ ಹೆಬ್ಬಾಗಿಲು ಮಾರಿಕಾಂಬೆ ಆರಾಧನೆಗೆ ಸಿಂಗಾರಗೊಂಡ ಸಿಹಿಮೊಗೆ

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗನಗರದಲ್ಲಿ ಮಂಗಳವಾರದಿಂದ ಐದು ದಿನಗಳ ಕಾಲ ಐತಿಹಾಸಿಕ ಶ್ರೀ ಕೋಟೆ ಮಾರಿಕಾಂಬ ದೇವಿ ಜಾತ್ರೆ ನಡೆಯಲಿದ್ದು, ಇಡೀ ನಗರ ಗ್ರಾಮದೇವಿ ಮಾರಿಕಾಂಬೆಯ ಆರಾಧನೆಯ ಸಂಭ್ರಮದಲ್ಲಿದೆ.
ಆಧುನಿಕ ಭರಾಟೆಯಲ್ಲಿ ನಗರ ಪ್ರದೇಶದಲ್ಲಿ ಬದಲಾವಣೆ ಎಂಬುದು ನಾಗಾಲೋಟದಲ್ಲಿ ಸಾಗುತ್ತಿದ್ದರೂ, ಮಾರಿಕಾಂಬ ಜಾತ್ರೆ ಮಾತ್ರ ತನ್ನ ಸಾಂಪ್ರದಾಯಿಕ ಸೊಗಡನ್ನು ಯಾವತ್ತೂ ಬಿಟ್ಟುಕೊಟ್ಟಿಲ್ಲ. ಊರ ಕಾಯುವ ದೇವಿ ಎಂದೇ ಮಾರಿಕಾಂಬೆಯನ್ನು ನಂಬಿರುವ ಭಕ್ತಜನರು ತಾಯಿಗೆ ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಶೂದ್ರ ಪರಂಪರೆಯ ಮಾರಿಕಾಂಬ ದೇವಿಯ ಜಾತ್ರೆಯಲ್ಲಿ ಸರ್ವಜನಾಂಗಗಳು ಭಾಗವಹಿಸುವ ಮತ್ತು ಜಾತ್ರೆಯ ಭಾಗವಾಗುವುದು ವಿಶೇಷವಾಗಿದೆ.


ಮಾರಿಕಾಂಬೆಯ ಮೂರ್ತಿ ಕೆತ್ತನೆಗೆ ಕಾಡಿನಿಂದ ಮರ ತರುವುದನ್ನು ಒಂದು ಶಾಸ್ತ್ರವಾಗಿ ಮಾಡುವ ಹಬ್ಬದಲ್ಲಿ ಮಡಿವಾಳ ಸಮುದಾಯವರೇ ಕಾಡಿನಿಂದ ಮರ ತರಬೇಕು. ಮರತಂದು ಮೂರ್ತಿ ಕೆತ್ತನೆಗೆ ಆಚಾರರ ಮನೆಗೆ ಕೊಡುವುದರಿಂದಲೇ ವಿದ್ಯುಕ್ತವಾಗಿ ಆರಂಭವಾಗುವ ಮಾರಿ ಜಾತ್ರೆ ದಿನದಿಂದ ದಿನಕ್ಕೆ ಕಳೆಗಟ್ಟುತ್ತದೆ. ಹೀಗೆ ಆರಂಭವಾದ ಮಾರಿಕಾಂಬೆ ಜಾತ್ರೆಗಾಗಿ ಶಿವಮೊಗ್ಗ ನಗರ ನವವಧುವಿನಂತೆ ಸಿಂಗಾರಗೊಂಡಿದೆ. ನಗರಾದ್ಯಂತ ಎಲ್ಲೆಂದರಲ್ಲಿ ಕಟೌಟುಗಳು ರಾರಾಜಿಸುತಿದ್ದರೆ, ದೀಪಾಲಂಕಾರದಿಂದ ನಗರ ಜಗಮಗಿಸುತ್ತಿದೆ.
ಕೊರೊನ ನಿಮಿತ್ತ ಸರಳ ಜಾತ್ರೆಗೆ ಶ್ರೀ ಕೋಟೆ ಮಾರಿಕಾಂಬ ಸೇವಾ ಸಮಿತಿ ನಿರ್ಧಾರ ಮಾಡಿತ್ತು. ಮೂರನೇ ಅಲೆ ಅಬ್ಬರ ತಗ್ಗಿದ ಕಾರಣ ಜಿಲ್ಲಾಡಳಿತ ಹಬ್ಬದ ಅದ್ದೂರಿ ಆಚರಣೆಗೆ ಅನುಮತಿ ನೀಡಿದೆ. ಮಾತ್ರವಲ್ಲದೆ, ಶಿವಮೊಗ್ಗ ಮಹಾನಗರ ಪಾಲಿಕೆಯ ಆಡಳಿತವೂ ಸಮಿತಿಯೊಂದಿಗೆ ನಡೆಸಿದ್ದ ಸಭೆಯಲ್ಲಿ ಅದ್ದೂರಿ ಆಚರಣೆ ಮಾಡಲೇ ಬೇಕೆಂಬ ಸಲಹೆ ನೀಡಿದೆ.
ದೇವಾಲಯದ ಐತಿಹ್ಯ:
ಶಿವಮೊಗ್ಗದ ಮಾರಿಕಾಂಬ ದೇವಾಲಯವು ಕೆಳದಿ ಸಾಮ್ರಾಜ್ಯದ ಅರಸ ಶಿವಪ್ಪನಾಯಕನ ಕೋಟೆ ಮತ್ತು ಅರಮನೆ ಸಮೀಪ ಇದ್ದುದರಿಂದ ಮಾರಿಕಾಂಬೆಗೆ ಕೋಟೆ ಮಾರಿಕಾಂಬ ಎಂಬ ಹೆಸರು ಬಂದಿದೆ. ಕೆಳದಿ ಅರಸರು ತಮ್ಮ ರಾಜ್ಯದಲ್ಲಿ ಯಾವುದೇ ಕಾರ್ಯ ಮಾಡುವ ಮುನ್ನ ಊರದೇವಿ ಮಾರಿಕಾಂಬೆಗೆ ಪೂಜೆ ಸಲ್ಲಿಸುವುದು ಪ್ರತೀತಿ. ಈ ಹಿನ್ನೆಯಲ್ಲಿ ಮಾರಿಕಾಂಬ ದೇವಿಗೆ ಐತಿಹಾಸಿಕ ಮಹತ್ವ ಇದ್ದು, ಮಾತ್ರವಲ್ಲದೆ ಆದಿಕಾಲದಿಂದಲೂ ಊರಿಗೆ ಯಾವುದೇ ರೋಗ ರುಜಿನ, ಬರಗಾಲ ಅಥವಾ ಅತೀವೃಷ್ಟಿಯಂತಹ ಆಪತ್ತುಗಳೂ ಬಂದರೂ ಗ್ರಾಮದೇವಿಯ ಉತ್ಸವ ಮಾಡಿ ಹರಕೆ ಸಲ್ಲಿಸಿದಾಗ ಊರಿಗೆ ಬಂದ ವಿಪತ್ತುಗಳು ದೂರವಾಗಿರುವುದು ಮತ್ತೆ ಮತ್ತೆ ರುಜುವಾತಾಗಿದೆ. ಈ ಕಾರಣದಿಂದ ಮಾರಿಕಾಂಬೆಯನ್ನು ಎಲ್ಲಾ ಧರ್ಮೀಯರು ಶ್ರದ್ಧೆಯಿಂದ ಪೂಜಿಸುತ್ತಾರೆ.
ಐದುದಿನಗಳ ಉತ್ಸವ:
 

ಮಂಗಳವಾರ ಜಾತ್ರೆ ಪ್ರಾರಂಭವಾಗಲಿದ್ದು, ಬೆಳಗಿನ ಜಾವ ೫ ಗಂಟೆಗೆ ಬ್ರಾಹ್ಮಣರ ನಾಡಿಗ ಕುಟುಂಬ ಪ್ರಥಮ ಪೂಜೆ ಇರುತ್ತದೆ. ಬ್ರಾಹ್ಮಣ ಸುಹಾಸಿನಿಯರು ದೇವಿಗೆ ಉಡಿ ತುಂಬಿ ಪೂಜೆಗೆ ನಾಂದಿ ಹಾಡುತ್ತಾರೆ.  ಕುಂಬಾರ ಸಮುದಾಯದವರು ದೇವಿಗೆ  ಬಾಸಿಂಗ ತೊಡಿಸುತ್ತಾರೆ.ಮೊದಲ ದಿನ ದೇವಿಯನ್ನು ತವರು ಮನೆಯಾದ ಗಾಂಧಿಬಜಾರಿನಲ್ಲಿ ಪ್ರತಿಷ್ಠಾಪಿಸಿದ ಬಳಿಕ ವಿಶ್ವಕರ್ಮ ಸಮಾಜದವರು ಮುಂಜಾನೆ ಪೂಜೆ ಮಾಡುವರು.
ದೇವಿಯ ತವರು ಮನೆಯ ಪೂಜೆಗೆ ಭಕ್ತ ಸಾಗರ ಹರಿದು ಬರುತ್ತದೆ. ಅದೇ ದಿನ  ರಾತ್ರಿ ೯ಕ್ಕೆ ಗಾಂಧಿಬಜಾರಿನಿಂದ ಕೋಟೆ ಗದ್ದುಗೆಗೆ ಬಂದು ಆಸೀನಳಾಗುತ್ತಾಳೆ.  ಗಂಗಾಮತಸ್ಥರು ಗಟೇವುನೊಂದಿಗೆ ದೇವಿಯನ್ನು ಗಾಂಧಿಬಜಾರಿನಲ್ಲಿ ಎದುರುಗೊಂಡು ಪೂಜೆ ಸಲ್ಲಿಸಿದರೆ ರಾತ್ರಿ ಉಪ್ಪಾರ ಸಮುದಾಯದವರು ದೇವಿಯನ್ನು ಗದ್ದುಗೆಗೆ ಕರೆತರುತ್ತಾರೆ.  ಗದ್ದುಗೆಗೆ ಬಂದ ಬಳಿಕ ವಿದ್ಯಾನಗರದ ಕರ್ಲಹಟ್ಟಿಯ ಹರಿಜನರು ಪೂಜೆ ಸಲ್ಲಿಸುತ್ತಾರೆ.  ಕುರುಬ ಸಮಾಜದ ಚೌಡಿಕೆ ಮನೆತನದವರು ಪೂಜಿಸಿ ನೈವೇದ್ಯ ಅರ್ಪಿಸುತ್ತಾರೆ. ಬಳಿಕ ಬೆಳಿಗ್ಗೆ ೬:೩೦ಕ್ಕೆ ವಾಲ್ಮೀಕಿ ಜನಾಂಗದವರು, ಉಪ್ಪಾರರು, ಮಡಿವಾಳರು  ೪ ದಿನಗಳ ಕಾಲ ಸರದಿಯಂತೆ ಪೂಜೆ ಸಲ್ಲಿಸುತ್ತಾರೆ.  ಶನಿವಾರ ರಾತ್ರಿ ೮ಕ್ಕೆ ಅಮ್ಮನವರ ರಾಜಬೀದಿ ಉತ್ಸವವು ಗಾಂಧಿಬಜಾರ್ ಮೂಲಕ ಬಿಎಚ್ ರಸ್ತೆಯಿಂದ ಶೇಷಾದ್ರಿ ಪುರಂನ ಮಾರ್ಗವಾಗಿ ಸಾಗಿ ಅಲ್ಲಿನ ಅರಣ್ಯದಲ್ಲಿ ದೇವಿಯನ್ನು ಬೀಳ್ಕೊಡಲಾಗುತ್ತದೆ.
ಬೀಗರ ಸಮಭ್ರಮ
ಜಾತ್ರೆ ಎಂದರೇನೆ ಜನರಲ್ಲಿ ಒಂದು ರೀತಿಯ ಸಂಭ್ರಮ, ಸಡಗರ ಇರುತ್ತದೆ. ಅದರಲ್ಲೂ ಮಾರಿ ಜಾತ್ರೆಯೆಂದರೆ  ಊರಿಗೆ ಊರೇ ಸಂಭ್ರಮದಲ್ಲಿ ಮಿಂದೇಳುತ್ತದೆ. ಹಿಂದೆ ದೇವಿಗೆ ಕೋಣನ ಬಲಿ ಕೊಡುತಿದ್ದು, ಇತ್ತೀಚಿನ ವರ್ಷಗಳಲ್ಲಿ ಅದನ್ನು ನಿಲ್ಲಿಸಲಾಗಿದೆ. ಸಸ್ಯಹಾರಿ ಸಮುದಾಯ ದೇವಿಗೆ ಹಣ್ಣುಕಾಯಿ ಹರಕೆ ಅರ್ಪಿಸಿ ಮನೆಯಲ್ಲಿ ಸಿಹಿ ತಿಂಡಿ ತಿನಿಸು ಮಾಡಿ ಎಡೆಹಾಕಿದರೆ. ಮಾಂಸಹಾರಿಗಳು ತಮ್ಮ ಯಥಾನುಶಕ್ತಿ ಕೋಳಿ ಕುರಿಗಳನ್ನು ಬಲಿಕೊಡುತ್ತಾರೆ. ಪೂಜೆ ಬಳಿಕ ದೇವಿಯ ಪ್ರಸಾದವನ್ನು ಹಾಕಿ ತಂತಮ್ಮ ಮನೆ ಮುಂಭಾಗವೇ ಪ್ರಾಣಿ ಬಲಿಕೊಡಲಾಗುತ್ತದೆ. ಮಾರಿ ಜಾತ್ರೆ ಎಂದರೆ ಊರಿನಲ್ಲಿ ಗೆಳೆಯರು,ಬಂಧು- ಬಳಗದ ಸಮ್ಮೇಳನವೇ ಆಗುತ್ತದೆ. ಕುಟುಂಬ ಮತ್ತು ಸಂಬಂಧಿಕರ ನಡುವೆ ಏನೇ ಈರ್ಷೆಗಳಿದ್ದರೂ ಜಾತ್ರೆಗೆ ನೆಂಟರನ್ನು ಕರೆದು ಆತಿಥ್ಯ ನೀಡುವುದು ಸಂಪ್ರದಾಯ. ಶಿವಮೊಗ್ಗ ನಗರದಲ್ಲಿ ಮಾರಿ ಜಾತ್ರೆ ಎಂದು ಕಳ್ಳುಬಳ್ಳಿಗಳ ಸಂಭ್ರಮ ತುಸು ಜೋರಾಗಿಯೇ ಇರುತ್ತದೆ. ಹೆಣ್ಣುಮಕ್ಕಳು ತವರು ಮನೆಗೆ ಬಂದು ದೇವಿ ದರ್ಶನ ಪಡೆದು ಪೂಜೆ ಸಲ್ಲಿಸುವುದು ವಾಡಿಕೆ.
ಸೌಹಾರ್ದದ ಸಂಕೇತ:
 ಮಾರಿ ಜಾತ್ರೆಯೆಂದರೆ ಊರಿನಲ್ಲಿ ಎಲ್ಲರ ನಡುವಿನ ಸೌಹಾರ್ದದ ಸಂಕೇತವಾಗಿದೆ. ರಾಜ್ಯದಲ್ಲಿ ಇತ್ತೀಚೆಗೆ ನಡೆದ ಹಿಜಾಬ್ ಗಲಾಟೆ ಮತ್ತು ಶಿವಮೊಗ್ಗ ನಗರದಲ್ಲಿ ನಡೆದ ಬಜರಂಗದಳ ಕಾರ್ಯಕರ್ತನ ಕೊಲೆ ಪ್ರಕರಣಗಳು ಜಾತ್ರೆಯ ಮೇಲೆ ಪ್ರತಿಕೂಲ ಪರಿಣಾಮ ಬೀರದಿರಲಿ ಎಂದು ಈ ಬಾರಿ ಪೊಲೀಸ್ ಇಲಾಖೆ ಹಾಗೂ ಮಾರಿಕಾಂಬ ಸೇವಾ ಸಮಿತಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ಸರಳ ಜಾತ್ರೆಗೆ ನಿರ್ಧಾರ ಮಾಡಿತ್ತು. ಕೊರೊನ ಅಬ್ಬರ ಕಡಿಮೆಯಾದ ಬಳಿಕ ಅದ್ದೂರಿ ಜಾತ್ರೆಗೆ ನಿರ್ಣಯ ಮಾಡಲಾಗಿದೆ. ದೇವಸ್ಥಾನದ ಸುತ್ತಲ ಆವರಣದಲ್ಲಿ ಅಂಗಡಿಮುಂಗಟ್ಟುಗಳಿಗೆ ಅವಕಾಶ ನೀಡಿಲ್ಲ. ಉಳಿದಂತೆ ಜಾತ್ರೆ ಎಂದಿನ ತನ್ನ ಸಡಗರ ಮತ್ತು ಸಂಭ್ರಮ ಉಳಿಸಿಕೊಳ್ಳಲಿದೆ. ನಾಗರೀಕರು  ಮಾರಿ ಜಾತ್ರೆ ಯಶಸ್ವಿಗೆ ಸಹಕರಿಸಬೇಕು
ಸ್.ಕೆ.ಮರಿಯಪ್ಪ, ಅಧ್ಯಕ್ಷರು, ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ

ಮಾರಿಕಾಂಬೆ ಜಾತ್ರೆ ಒಂದು ಊರ ಹಬ್ಬ. ತಾಯಿಗೆ ಹಿಂದೂಗಳು ಮಾತ್ರವಲ್ಲದೆ, ಉಳಿದ ಮುಸ್ಲಿಂ, ಕ್ರೈಸ್ತ ಭಕ್ತರೂ ಇದ್ದಾರೆ. ಇದೊಂದು ಸರ್ವಜನಾಂಗದ ಉತ್ಸವ. ಎರಡು ವರ್ಷಗಳಿಗೊಮ್ಮೆ ಬರುವ ಈ ಜಾತ್ರೆಯಲ್ಲಿ ನಗರದ ಜನ ಸಡಗರದಿಂದ ಪಾಲ್ಗೊಳ್ಳುತ್ತಾರೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಮಾರಿಕಾಂಬೆ ಜಾತ್ರೆಯಲ್ಲಿ ಎಲ್ಲರೂ ಸಂತಸದಿಂದ ಪಾಲ್ಗೊಳ್ಳಬೇಕು.

ಎನ್.ಮಜುನಾಥ್, ಕಾರ್ಯದರ್ಶಿ, ಶ್ರೀ ಕೋಟೆ ಮಾರಿಕಾಂಬ ಸೇವಾಸಮಿತಿ

Ad Widget

Related posts

ಬಿಜೆಪಿ ವಿಶೇಷ ಸಭೆ ಸಂಭ್ರಮ

Malenadu Mirror Desk

ಬೆಂಗಳೂರಲ್ಲಿ ಮಧು ಬಂಗಾರಪ್ಪಗೆ ಅಭಿಮಾನಿಗಳಿಂದ ಸನ್ಮಾನ

Malenadu Mirror Desk

ಹೆಚ್‍ಐವಿ ಸೋಂಕಿತರನ್ನು ಎಲ್ಲರಂತೆ ಸಮಾನವಾಗಿ ಕಾಣಬೇಕು: ಡಾ.ರಘುನಂದನ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.