ರಾಜ್ಯದಲ್ಲಿ ಮಾಂಡೌಸ್ ಚಂಡಮಾರುತದ ಪರಿಣಾಮ ಗಂಭೀರವಾಗಿದ್ದು,ಅಕಾಲಿಕ ಮಳೆಯ ಕಾರಣ ಮೊದಲೇ ನಷ್ಟದಲ್ಲಿದ್ದ ರೈತ ಸಮುದಾಯವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.
ಎರಡು ದಿನಗಳಿಂದ ಥಂಡಿ ವಾತಾವರಣ ಹಾಗೂ ಭಾನುವಾರ ಬೆಳಗ್ಗೆಯಿಂದ ಸುರಿದ ಮಳೆಯಿಂದಾಗಿ ಕೃಷಿ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ.
ಈ ಬಾರಿ ವರ್ಷವಿಡೀ ಮಳೆಯಾಗಿದ್ದಕಾರಣ ಕೃಷಿಯ ಮೇಲೆ ಪ್ರತಿ ಕೂಲ ಪರಿಣಾಮ ಬೀರಿತ್ತು. ಈಗ ಕೊಯ್ಲಿನ ಸಂದರ್ಭವಾಗಿದ್ದು, ಬಂದಿರುವ ಅಲ್ಪಸ್ವಲ್ಪ ಬೆಳೆಯನ್ನು ಕಟಾವು ಮಾಡಲು ಮಾಂಡೌಸ್ ಚಂಡಮಾರುತ ಕಂಟಕವಾಗಿ ಪರಿಣಮಿಸಿದೆ.
ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆ ಅಡಕೆ ಬೆಳೆಗಾರರಿಗೆ ಎಲೆಚುಕ್ಕೆ ರೋಗ ಮತ್ತು ದರಕುಸಿತಗಳು ಮರ್ಮಾಘಾತ ನೀಡಿದ್ದು, ಬಂದಿರುವ ಬೆಳೆಯನ್ನು ಕೈಗೆ ತೆಗೆದುಕೊಳ್ಳಲು ಈಗ ಅಸಾಧ್ಯವಾಗಿದೆ. ಕೊನೆ ಕೊಯ್ಲಿಗೆ ಮುಹೂರ್ತ ನಿಗಧಿ ಮಾಡಿಕೊಂಡಿರುವ ರೈತರು ಮೋಡ ಹಾಗೂ ಮಳೆಗೆ ಹೆದರಿ ಕಟಾವು ಮುಂದೂಡುತ್ತಿದ್ದಾರೆ. ಅಡಕೆ ಕೊನೆ ಕೊಯ್ದರೆ ಒಣಗಿಸಲು ಆಗುವುದಿಲ್ಲ ಎಂಬ ಕಾರಣಕ್ಕೆ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಮಲೆನಾಡಿನಲ್ಲಿ ಅಡಕೆ ತೋಟಗಳಿಗೆ ಬಂದಿರುವ ಎಲೆಚುಕ್ಕೆ ರೋಗದಿಂದ ಅಡಕೆ ಬೆಳೆಗಾರರು ಕಂಗಾಲಾಗಿದ್ದಾರೆ. ವರ್ಷವಿಡೀ ಮಳೆಯಾಗಿದ್ದರಿಂದ ತೋಟದಲ್ಲಿ ನಿರಂತರ ಥಂಡಿ ಹವಾ ಇದ್ದು, ಗಾಳಿ ಮತ್ತು ಶೀತದ ವಾತಾವರಣದಿಂದಾಗಿ ರೋಗ ಎಲ್ಲೆಡೆ ಹರಡುತ್ತಿದೆ. ರೋಗಬಾಧಿತ ತೋಟಗಳಲ್ಲಿ ಅಡಕೆ ಬೆಳೆಯೇ ಬಂದಿಲ್ಲ.
ಬೆಲೆ ಇಳಿಕೆ :
ಎಲೆಚುಕ್ಕೆ ರೋಗದಿಂದ ರೈತರು ತೋಟ ಕಳೆದುಕೊಂಡಿರುವುದರ ಬೆನ್ನಲ್ಲೇ ಕೇಂದ್ರ ಸರಕಾರ ಭೂತಾನ್‌ನಿಂದ ಹಸಿ ಅಡಕೆ ಆಮದು ಮಾಡಿಕೊಂಡಿರುವುದರಿಂದ ಸ್ಥಳೀಯ ಅಡಕೆಯ ದರ ಕ್ವಿಂಟಾಲ್‌ಗೆ ಸರಾಸರಿ ೧೫ ಸಾವಿರದಷ್ಟು ಕಡಿಮೆಯಾಗಿದೆ. ಕೇಂದ್ರ ಸರಕಾರದ ಪ್ರತಿನಿಧಿಗಳು ಹಾಗೂ ಆಡಳಿತ ಪಕ್ಷದ ಒಲವುಳ್ಳ ಅಡಕೆ ಬೆಳೆಗಾರರ ಸಹಕಾರ ಸಂಘಗಳು ರಾಜ್ಯದ ಅಡಕೆ ಮಾರುಕಟ್ಟೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಮರ್ಥನೆ ಮಾಡಿಕೊಳ್ಳುತ್ತಿರುವ ನಡುವೆಯೇ ಬೆಲೆ ಕುಸಿದಿದೆ. ಈಗ ಇರುವ ಅಡಕೆಯನ್ನೂ ಕೊಯ್ದು ಒಪ್ಪ ಮಾಡಲು ಅಕಾಲಿಕವಾಗಿ ಸುರಿಯುತ್ತಿರುವ ಮಳೆ ಅಡ್ಡಿಯಾಗಿದೆ.
ಭತ್ತಕೊಯ್ಲಿಗೆ ಅಡ್ಡಿ:
ಮಲೆನಾಡಿನಾದ್ಯಂತ ಭತ್ತದ ಬೆಳೆ ಕಟಾವಿಗೆ ಬಂದಿದ್ದು, ಮೋಡ ಮತ್ತು ಮಳೆಯ ಕಾರಣ ಕೊಯ್ಲು ವಿಳಂಭವಾಗುತ್ತಿದೆ. ಗದ್ದೆಯಲ್ಲಿ ನೀರು ನಿಂತಿದೆ. ಶಿಕಾರಿಪುರ, ಸಾಗರ, ಹೊಸನಗರ, ತೀರ್ಥಹಳ್ಳಿ, ಸೊರಬ ಹಾಗೂ ಶಿವಮೊಗ್ಗ ತಾಲೂಕಿನಲ್ಲಿ ಭತ್ತದ ಬೆಳೆ ಸಂಪೂರ್ಣ ಕೊಯ್ಲಿಗೆ ಬಂದಿದ್ದು, ಕೆಲವರು ಕೊಯ್ದು ಅದನ್ನು ಹಸನು ಮಾಡಲಾಗದೆ ಪರಿತಪಿಸುತ್ತಿದ್ದಾರೆ. ಗದ್ದೆಯಲ್ಲಿ ಕೊಯ್ದು ಹಾಕಿದ ಮೆದೆಯ ಮೇಲೆ ಮಳೆ ಸುರಿದಿದ್ದು, ಇನ್ನು ಎರಡು ದಿನ ಹೀಗೆ ಮಳೆ ಸುರಿದರೆ ಗದ್ದೆಯಲ್ಲಿಯೇ ಮೊಳಕೆ ಬರಲಿದೆ. ಭತ್ತದ ಹುಲ್ಲಿಗೆ ತುಂಬಾ ಬೇಡಿಕೆ ಇರುವ ಕಾರಣ ರೈತರು ಹುಲ್ಲು ಸಂರಕ್ಷಣೆಗೂ ಆದ್ಯತೆ ನೀಡುತ್ತಿದ್ದಾರೆ. ಆದರೆ ಮಳೆಯ ಕಾರಣ ಅದೂ ಸಾಧ್ಯವಾಗುತ್ತಿಲ್ಲ. ಯಂತ್ರಗಳೂ ಗದ್ದೆಗೆ ಇಳಿಯುವ ಸನ್ನಿವೇಶ ಇಲ್ಲವಾಗಿದ್ದು, ಅತೀವೃಷ್ಟಿಯ ಕಾರಣ ಭತ್ತದ ಇಳುವರಿ ಕುಂಠಿತವಾಗಿರುವ ನಡುವೆಯೇ ಮಳೆಯ ರಾದ್ಧಾಂತ ಭತ್ತ ಬೆಳೆಯುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಜೂನ್ ಮತ್ತು ಜುಲೈ ಮಾಹೆಯಲ್ಲಿ ಅತಿಯಾದ ಮಳೆಯಾಗಿದ್ದರಿಂದ ಪ್ರಮುಖ ವಾಣಿಜ್ಯ ಬೆಳೆಯಾದ ಮೆಕ್ಕೆಜೋಳ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ಮಲೆನಾಡಿನಲ್ಲಿ ಮೆಕ್ಕೆಜೋಳ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಅರೆಮಲೆನಾಡು ಪ್ರದೇಶದಲ್ಲಿ ಬಂದ ಮೆಕ್ಕೆಜೋಳ ಕಟಾವಿನ ಈ ಹಂತದಲ್ಲಿ ಸುರಿಯುತ್ತಿರು ಮಳೆ ಮತ್ತು ಶೀತಗಾಳಿಯಿಂದ ಮೆಕ್ಕೆಜೋಳಕ್ಕೆ ಹಾನಿ ಉಂಟಾಗಲಿದೆ. ಇನ್ನು ಜಿಲ್ಲೆಯಲ್ಲಿ ಅಲ್ಲಲ್ಲಿ ಇರುವ ಹತ್ತಿ ಬೆಳೆಯ ಮೇಲೂ ಪ್ರತಿಕೂಲ ಪರಿಣಾಮವಾಗಿದೆ.
ತರಕಾರಿ ಬೆಳೆಯ ಮೇಲೆ ಮಳೆಯ ಅಡ್ಡ ಪರಿಣಾಮಗಳಾಗಿದ್ದು, ಒಟ್ಟಾರೆ ರೈತರು ಕಂಗಾಲಾಗಿದ್ದರೆ.