ಶಿವಮೊಗ್ಗ ನಗರಕ್ಕೆ ಉಂಗುರದಂತೆ ಸುತ್ತುವರಿದಿರುವ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಭೌಗೋಳಿಕವಾಗಿ ವಿಸ್ತಾರವಾದ ಕ್ಷೇತ್ರ ಪರಿಶಿಷ್ಟ ವರ್ಗದ ಮೀಸಲು ಕ್ಷೇತ್ರವಾದ ಇಲ್ಲಿ ಕೃಷಿಯೇ ಪ್ರಧಾನ ಉದ್ಯೋಗ. ಬಹುಭಾಗ ನೀರಾವರಿ ಪ್ರದೇಶ ಹೊಂದಿರುವ ಕ್ಷೇತ್ರದಲ್ಲಿ ಮಳೆಯಾಧಾರಿತ ಪ್ರದೇಶಗಳೂ ಇವೆ. ಕ್ಷೇತ್ರ ಮರುವಿಂಗಡಣೆ ಸಂದರ್ಭ ಹೊಳೆಹೊನ್ನೂರು ಕ್ಷೇತ್ರದ ಪೂರ್ಣ ಭಾಗ ಹಾಗೂ ಹೊಸನಗರ ಕ್ಷೇತ್ರದ ಕೆಲ ಪ್ರದೇಶವನ್ನು ಒಳಗೊಂಡ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ನಡೆದ ಮೂರು ಚುನಾವಣೆಗಳಲ್ಲಿ ಎರಡು ಬಾರಿ ಬಿಜೆಪಿ ಹಾಗೂ ಒಮ್ಮೆ ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದಾರೆ.
ಪ್ರಸ್ತುತ ಬಿಜೆಪಿಯಿಂದ ಹಾಲಿ ಶಾಸಕ ಕೆ.ಬಿ.ಅಶೋಕ್ ನಾಯ್ಕ, ಜೆಡಿಎಸ್ ನಿಂದ ಮಾಜಿ ಶಾಸಕಿ ಶಾರದಾಪೂರ್ಯನಾಯ್ಕ, ಕಾಂಗ್ರೆಸ್‌ನಿಂದ ಡಾ.ಶ್ರೀನಿವಾಸ್ ಕರಿಯಣ್ಣ, ಕೆಆರ್‍ಪಿಯಿಂದ ವಿಜಯ, ಬಿಎಸ್ಪಿಯಿಂದ ಶಿವಪ್ಪ, ಕೆ.ಆರ್.ಎಸ್ ನಿಂದ ನಿರಂಜನ ಸೇರಿದಂತೆ ೧೧ ಮಂದಿ ಕಣದಲ್ಲಿದ್ದಾರೆ.
ಚುನಾವಣೆ ವಿಷಯಗಳು:
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಮಲೆನಾಡು ಮತ್ತು ಬಯಲುನಾಡನ್ನು ಒಳಗೊಂಡಿರುವುದರಿಂದ ಒಂದೊಂದು ಹೋಬಳಿಗೂ ವಿಭಿನ್ನ ಸಮಸ್ಯೆಗಳಿವೆ.ಹೊಳೆಹೊನ್ನೂರು, ಹೊಳಲೂರು ಭಾಗದಲ್ಲಿ ಹೆಚ್ಚಿನ ಮತದಾರರನ್ನು ಹೊಂದಿರುವ ಕ್ಷೇತ್ರದಲ್ಲಿ ಏತನೀರಾವರಿ ಯೋಜನೆಗಳು, ಇರುವ ಯೋಜನೆಗಳಿಗೆ ಸಂಪರ್ಕ ಕಾಲುವೆ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಹಾಗೂ ರಸ್ತೆ ಮತ್ತು ಕೆಲವು ಗ್ರಾಮಗಳಲ್ಲಿ ಸಾರಿಗೆ ವ್ಯವಸ್ಥೆ ಇಲ್ಲ. ಗ್ರಾಮೀಣ ಪ್ರದೇಶವಾಗಿರುವುದರಿಂದ ಬಗರ್ ಹುಕುಂ ಸಮಸ್ಯೆ ಮುಖ್ಯವಾಗಿದೆ. ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಗೆ ಸೇರುವ ಕುಂಸಿ ಜಿಲ್ಲಾಪಂಚಾಯಿತಿ ಕ್ಷೇತ್ರದುದ್ದಕ್ಕೂ ಹರಡಿಕೊಂಡಿರುವ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಕಗ್ಗಂಟಾಗಿದೆ. ಮಾತ್ರವಲ್ಲದೆ ಈ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿ ಚರ್ಚಿತವಾಗಿದೆ.
ಮೂರು ಪಕ್ಷಗಳೇ ಮುಖ್ಯ:
ಕ್ಷೇತ್ರದಲ್ಲಿ ಪ್ರಮುಖವಾಗಿ ಮಾಜಿ ಶಾಸಕಿ ಶಾರದಾಪೂರ್ಯನಾಯ್ಕ, ಮಾಜಿ ಶಾಸಕ ಕರಿಯಣ್ಣರ ಪುತ್ರ ಡಾ.ಶ್ರೀನಿವಾಸ್ ಕರಿಯಣ್ಣ ಹಾಗೂ ಹಾಲಿ ಶಾಸಕ ಕೆ.ಬಿ.ಅಶೋಕ್ ನಾಯ್ಕ ಅವರ ನಡುವೆ ತ್ರಿಕೋನ ಸ್ಪರ್ಧೆ ಕ್ಷೇತ್ರದಲ್ಲಿ ಕಂಡುಬರುತ್ತಿದೆ. ಹಾಲಿ ಶಾಸಕ ಅಶೋಕ್ ನಾಯ್ಕ ಮತ್ತು ಶಾರದಾಪೂರ್ಯನಾಯ್ಕ ಅವರು ಬಂಜಾರ ಸಮುದಾಯದವರಾಗಿದ್ದು, ಶ್ರೀನಿವಾಸ್ ಅವರು ದಲಿತ ಎಡಗೈ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ:
ಗ್ರಾಮಾಂತರ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತರೇ ಪ್ರಾಬಲ್ಯ ಹೊಂದಿದ್ದು, ಬಂಜಾರ, ಭೋವಿ, ಪರಿಶಿಷ್ಟ ಜಾತಿ ,ಮುಸ್ಲಿಂ, ಈಡಿಗ,ಮರಾಟ, ಉಪ್ಪಾರ ಸಮುದಾಯದ ಮತಗಳೂ ಗಣನೀಯ ಪ್ರಮಾಣದಲ್ಲಿವೆ. ಲಿಂಗಾಯತ ಮತದಾರರು ಯಾರನ್ನು ಬೆಂಬಲಿಸುತ್ತಾರೊ ಆ ಅಭ್ಯರ್ಥಿ ಗೆಲುವು ಸಾಧಿಸುವುದು ಕಳೆದ ಮೂರು ಚುನಾವಣೆಗಳಲ್ಲಿ ರುಜುವಾತಾಗಿದೆ.
ಬಿಜೆಪಿ ಲೆಕ್ಕಾಚಾರ:
ಹಾಲಿ ಶಾಸಕ ಅಶೋಕ್ ನಾಯ್ಕ್ ಅವರಿಗೆ ಪಕ್ಷದ ಪ್ರಬಲವಾದ ಬುಡಮಟ್ಟದ ಕಾರ್ಯಕರ್ತರ ಪಡೆ ಇದೆ. ಹಾಲಿ ಶಾಸಕರಾಗಿರುವ ಕಾರಣ ಕ್ಷೇತ್ರಕ್ಕೆ ಸಾಕಷ್ಟು ಕೆಲಸವನ್ನೂ ತಂದಿದ್ದಾರೆ. ವೀರಶೈವ ಸಮಾಜದ ಯಡಿಯೂರಪ್ಪ ಮತ್ತು ಸಂಸದ ರಾಘವೇಂದ್ರ ಅವರ ಬೆಂಬಲವೂ ಇದೆ. ಈ ಕಾರಣದಿಂದಲೇ ಅವರನ್ನು ಕಳೆದ ಚುನಾವಣೆಯಲ್ಲಿ ಗೆಲ್ಲಿಸಲಾಗಿತ್ತು. ಕ್ಷೇತ್ರದ ಪ್ರಚಾರ ಸಂದರ್ಭ ಅಶೋಕ್ ನಾಯ್ಕ ಅವರು ಯಡಿಯೂರಪ್ಪ ಅವರನ್ನು ಕೊಂಡಾಡುತ್ತಲೇ ಸಾಗಿರುವುದು ಅವರ ತಂತ್ರಗಾರಿಕೆಯ ಭಾಗವಾಗಿದೆ. ಆದರೆ ಈ ಬಾರಿ ಆ ರೀತಿಯ ವಾತಾವರಣ ಇಲ್ಲ ಎಂಬ ಆರೋಪವೂ ಇಲ್ಲ ಎನ್ನಲಾಗಿದೆ.
ಈ ಬಾರಿ ಶಾರದಮ್ಮ:
ಚುನಾವಣೆ ಘೋಷಣೆಗೂ ಮುನ್ನವೇ ಈ ಬಾರಿ ಶಾರದಮ್ಮ ಪರವಾದ ಅಲೆ ಮತ್ತು ಅನುಕಂಪ ಇತ್ತು. ಕ್ಷೇತ್ರದಲ್ಲಿ ಜೆಡಿಎಸ್‌ಗಿಂತ ಶಾರದಾ ಪೂರ್ಯನಾಯ್ಕ ಅವರದೇ ಪ್ರಭಾವ ಹೆಚ್ಚಾಗಿದೆ. ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ ಮಾಡಿರುವ ಕೆಲಸ ಮತ್ತು ಕ್ಷೇತ್ರದ ಜನರೊಂದಿಗೆ ಇಟ್ಟುಕೊಂಡಿದ್ದ ನಿಕಟ ಸಂಪರ್ಕ ಅವರಿಗೆ ವರದಾನವಾಗಿದೆ. ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತಿದ್ದ ಅವರಿಗೆ ಕ್ಷೇತ್ರದಲ್ಲಿ ಎಲ್ಲಾ ಜಾತಿಗಳ ಬೆಂಬಲ ಇದೆ. ವೀರಶೈವ ಲಿಂಗಾಯತರು ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕೆಂಬ ಕಾರಣದಿಂದ ಅಶೋಕ್ ನಾಯ್ಕ್‌ಗೆ ಬೆಂಬಲಿಸಿದ್ದರು. ಆದರೆ ಈ ಬಾರಿ ಶಾರದಮ್ಮರನ್ನು ಆ ಸಮುದಾಯ ಬೆಂಬಲಿಸಲಿದೆ. ಶಾರದಮ್ಮ ಶಾಸಕಿಯಾಗಿದ್ದ ಕಾಲದಲ್ಲಿ ಪ್ರೀತಿಯ ರಾಜಕಾರಣ ಇತ್ತು. ಅದೇ ತಮಗೆ ನೆರವಾಗಲಿದೆ ಎಂಬುದು ಅವರ ಲೆಕ್ಕಾಚಾರ. ಸಮ್ಮಿಶ್ರ ಸರಕಾರ ಬಂದರೆ ಮೊದಲ ಹಂತದಲ್ಲಿಯೇ ಸಚಿವೆಯಾಗುವ ಅವಕಾಶ ಇದೆ ಎಂಬ ಅಂಶ ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ.
ಶ್ರೀನಿವಾಸ್‌ಕರಿಯಣ್ಣ
ಕಾಂಗ್ರೆಸ್‌ನ ಕಾರ್ಯಕರ್ತರು ಈ ಬಾರಿ ಶ್ರೀನಿವಾಸ್ ಕರಿಯಣ್ಣ ಅವರಿಗೆ ಟಿಕೆಟ ಸಿಗುವುದಿಲ್ಲ ಎಂದು ನಾರಾಯಣ ಸ್ವಾಮಿ, ಪಲ್ಲವಿ ಹಾಗೂ ರವಿಕುಮಾರ್ ಪರ ಚುನಾವಣೆ ಮಾಡಬೇಕಾಗುತ್ತದೆ ಎಂದು ಭಾವಿಸಿದ್ದರು. ಆದರೆ ಶ್ರೀನಿವಾಸ್ ಅವರು ತಮ್ಮ ಪ್ರಭಾವ ಬಳಸಿ ಟಿಕೆಟ್ ತಂದರು. ಸಮುದಾಯದ ಮತ , ಕಾಂಗ್ರೆಸ್ ಸಾಂಪ್ರದಾಯಿಕ ಮತ ಮತ್ತು ಇದು ತಮ್ಮ ಕೊನೆಯ ಚುನಾವಣೆ ಎಂದು ಘೋಷಿಸಿಕೊಂಡು ಶ್ರೀನಿವಾಸ್ ಪ್ರಚಾರ ಮಾಡುತ್ತಿದ್ದಾರೆ. ಆದರೆ ಯುದ್ದಕ್ಕೂ ಮೊದಲೇ ಶಸ್ತ್ರ ತ್ಯಾಗ ಮಾಡಿದಂತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಬಡಿದೆಬ್ಬಿಸಲು ಡಾ.ಶ್ರೀನಿವಾಸ್ ಹರಸಾಹಸ ಪಟ್ಟರು. ಕೊನೇ ವಾರದಲ್ಲಿ ಕಾಂಗ್ರೆಸ್ ಚೇತರಿಕೆ ಕಾಣುತಿದೆ. ಸಂಪನ್ಮೂಲ ಬಳಕೆಯೂ ಆಗುತ್ತಿರುವ ಕಾರಣ ಕಾಂಗ್ರೆಸ್ ಕೂಡಾ ತೀವ್ರ ಸ್ಪರ್ಧೆಗೆ ಮುಂದಾಗಿದೆ.
ಬಿಜೆಪಿಯವರು ಆರ್ಥಿಕ ಶಕ್ತಿ ಬಳಕೆಯನ್ನು ಹೆಚ್ಚು ಮಾಡಿದ್ದಾರೆ. ಆದರೆ ಕ್ಷೇತ್ರದಲ್ಲಿ ಮತದಾರನ ಒಲವು ಮತ್ತು ಅನುಕಂಪ ಶಾರದಮ್ಮ ಪರ ಇದೆ. ಈ ನಡುವೆ ಕಾಂಗ್ರೆಸ್ ಚೇತರಿಕೆ ಕಂಡಷ್ಟೂ ಬಿಜೆಪಿಗೆ ಅನುಕೂಲ ಎಂಬ ಮಾತುಗಳೂ ಕೇಳಿಬರುತ್ತಿವೆ. ವಿಶಾಲವಾಗಿ ಹರಡಿಕೊಂಡಿರುವ ಕ್ಷೇತ್ರದ ಮತದಾರನ ಮನಸು ವಿಶಾಲವಾಗಿ ಮಹಿಳೆ ಪರ ನಿಲ್ಲುತ್ತಾರೆ ಎಂದು ಕೆಲವರು ಹೇಳಿದರೆ, ಕೆಲಸ ಮಾತಾಡುತ್ತಿವೆ ಅಶೋಕ್ ನಾಯ್ಕ್ ಅವರಿಗೆ ಅವಕಾಶವಿದೆ ಎಂಬುವವರೂ ಇದ್ದಾರೆ. ಅಂದುಕೊಂಡಂತೆ ನಡೆಯದ ಚುನಾವಣೆಯಲ್ಲಿ ಅದೃಷ್ಟದಾಟ ಈ ಇಬ್ಬರ ನಡುವೆಯೇ ಇರುವುದಂತೂ ಸತ್ಯ.
ReplyForward |