ಜ್ಯೋತಿಕುಮಾರಿ ಕೆ.ವಿ. ಉಪನ್ಯಾಸಕಿ,ಡಯೆಟ್ ,ಶಿವಮೊಗ್ಗ
ಮಲೆನಾಡೆಂದರೆ ಶ್ರೀಮಂತ ಸಂಸ್ಕೃತಿಯ ಪ್ರತೀಕ. ಇಲ್ಲಿನ ಮಳೆಗಾಲವನ್ನು ಅನುಭವಿಸುವುದೇ ಒಂದು ಸಂಭ್ರಮ. ಈ ಮಳೆನಾಡಿನಲ್ಲಿ ಮಣ್ಣಿನ ಒಲೆಗೆ ಇನ್ನಿಲ್ಲದ ಮಹತ್ವ ಇದೆ. ಹೌದು. ಹೊರಗೆ ಜಡಿಮಳೆಯಲ್ಲಿ ತೋಯ್ದ ಕಾಯಕ್ಕೆ ಒಲೆಯಲ್ಲಿರುವ ಕಾದ ಬೆಂಕಿಯ ಮೇಲೆ ಒಲವು. ನಮ್ಮ ನೆಂದ ಬಾಲ್ಯಕ್ಕೂ ಬೆಂಕಿಗೂ ಇರುವ ನಂಟು ಬಣ್ಣಿಸಲಸದಳ. ಕುಳಿರ್ಗಾಳಿಯ ತೆಕ್ಕೆಯಿಂದ ಬಿಡಿಸಿಕೊಂಡು ಬೆಚ್ಚಗಾಗಲು ಇಂಗಳು ಇಂಗಳಾದ ಕೆಂಡಗಳ ಕೆಂಪಿಗೆ ಮನಸೋತು ಬೆಂಕಿ ಕಾಯಿಸಲು ನಾ ಮುಂದೆ ತಾ ಮುಂದೆ ಎಂದು ಮಕ್ಕಳ ತಳ್ಳಾಟ ನೂಕಾಟ. ಕೊರೆಯುವ ಚಳಿಗೆ ಬೆಂಕಿಯ ಬಿಸುಪಲ್ಲಿ ಬಂಧಿಯಾಗಲು ಹರಸಾಹಸ. ಈ ಒಲೆಯೆಂಬ ಒಲೆ ನಮ್ಮ ಬಾಲ್ಯ ಮತ್ತು ಬದುಕನ್ನು ಆವರಿಸಿಕೊಂಡ ಪರಿ ಮಾತ್ರ ಅನನ್ಯ. ಬೆಂಕಿ ಕಾಯಿಸೋದು ಮಳೆಗಾಲದ ಜೀವನದ ಅವಿಭಾಜ್ಯ ಅಂಗವೇ ಆಗಿತ್ತು.
ಶಾಲಾ ದಿನಗಳಲ್ಲಿ ಬೆಳಿಗ್ಗೆ ಮತ್ತೆ ಸಂಜೆ ಮಾತ್ರ ಒಲೆಯೊಂದಿಗೆ ಸಖ್ಯವಾದರೆ ರಜೆಯ ದಿನದಂದು ಒಲೆಯ ಮುಂದೆ ಠಿಕಾಣಿ ತುಸು ಜಾಸ್ತಿನೇ. ಆಗೆಲ್ಲಾ ಮೊಬೈಲ್ , ಟಿ.ವಿಗಳು ಮನೆಗೆ ಮಾತ್ರವಲ್ಲ ಊರಿಗೇ ಕಾಲಿಟ್ಟಿರದ ದಿನಗಳು. ಮಳೆ ಸುರಿಯುತ್ತಿದ್ದರೆ ಈ ಒಲೆಯೆಂಬೋ ಒಲೆಯಿಂದ ಏಳಲಾಗದೇ ಬಗೆಬಗೆಯ ಸೌದೆಯ ಅವಲೋಕನ ಕಾರ್ಯ ಅವ್ಯಾಹತವಾಗಿ ಸಾಗುತ್ತಿತ್ತು. ಬೆಂಕಿ ಹತ್ತುತ್ತಲೇ ಚಟಪಟ ಕಿಡಿ ಸಿಡಿಸುತ್ತಾ ಒಲೆತೋಳಿನಿಂದ ಹುಡುಗರನ್ನೋಡಿಸುವ ಜಂಬೆ ಸೌದೆಯ ಪಟಾಕಿ ಮ್ಯಾಜಿಕ್ ಒಂದೆಡೆಯಾದರೆ, ಗಳಗಳ ಚೆಂದ ಉರಿದು ಬೂದಿಯ ರಾಶಿ ನಿರ್ಮಿಸುವ ಹುನಾಲು ಸೌದೆ ಇನ್ನೊಂದೆಡೆ. ಹಿತಮಿತವಾಗಿ ಉರಿಯುತ್ತಾ ಹೇಳಿ ಮಾಡಿಸಿದಂತೆ ಒಲೆಯೊಳಗೆ ಪದಾರ್ಥಗಳಿಗೆ ತಕ್ಕಂತೆ ಬೇಯಿಸುವ ಚೊಕ್ಕಟ ನೇರಳೆ ಸೌದೆ ಮತ್ತೊಂದೆಡೆ. ಮುಂದೆ ದಳದಳ ಉರಿದು ಹಿಂಬದಿ ಕೆಂಪು ಸೊನೆ ಒಸರಿ ಕಾಲು ಕೊಳೆ ಮಾಡುವ ಹೊನ್ನೆ ಸೌದೆ ಮಗದೊಂದು ಕಡೆ. ಕೆಂಡದ ಕಡೆ ಗಮನ ಕೊಡ್ತಾ ಗೇರುಬೀಜ, ಹಲಸಿನ ಬೀಜ ಸುಟ್ಟು ತಿನ್ನುವಾಗ ತರಹೇವಾರಿ ಸೌದೆಯ ಗುಣಗಳು ಗಮನಕ್ಕೆ ಬರ್ತಿದ್ದವು.
ಅವ್ವಂದಿರ ಮುಂಜಾನೆ ಆರಂಭವಾಗುವುದೇ ಬೂದಿ ಮೊಗೆದು ಒಲೆಯಲ್ಲಿ ಬೆಂಕಿಹೊತ್ತಿಸುವ ಮೂಲಕ. ಅರಿಶಿನ ಕುಂಕುಮ ಹಚ್ಚಿ ರಂಗೋಲಿ ಇಟ್ಟು ಒಪ್ಪವಾಗಿ ಸೌದೆ ಜೋಡಿಸಿ ಒಲೆ ಉರಿಸೋದು . ಒಲೆಗೆ ಬೆಂಕಿ ಹಾಕುವಾಗ ಸೀಮೆ ಎಣ್ಣೆ ಸುರಿಯುವಂತಿರಲಿಲ್ಲ. ಮೊದಲ ಬೆಂಕಿ ಸ್ಪರ್ಶ ಆಗಬೇಕಾಗಿದ್ದೇ ಅಳ್ಳಟ್ಟೆಯಿಂದ. ಆಲೆಮನೆಯಲ್ಲಿ ರಸಭರಿತ ಕಬ್ಬಿನ ಹಾಲು ಹಿಂಡಿ ತೆಗೆದ ಮೇಲೆ ಉಳಿಯುವ ಸಿಪ್ಪೆಯನ್ನು ಆರಿಸಿ ಒಣಗಿಸಿ ಹೊರೆಕಟ್ಟಿ ಜೋಪಾನ ಮಾಡಿಕೊಂಡರೆ ಮಳೆಗಾಲಕ್ಕೆ ಮನಸಾರೆ ಮಂದಸ್ಮಿತರಾಗಿ ಹೊತ್ತಾರೆ ಹೊತ್ತಲ್ಲಿ ಏಳಬಹುದು. ಸದಾ ಅಸ್ತಮಾದಿಂದ ನರಳುತ್ತಿದ್ದ ನನ್ನವ್ವನಿಗೆ ಮಳೆಗಾಲ ಚಳಿಗಾಲವೆಂದರೆ ಅಗ್ಮಿಪರೀಕ್ಷೆ. ಕಟ್ಟಿಗೆಯಿಲ್ಲದ,ಅಳ್ಳಟ್ಟೆಯಿಲ್ಲದ ಒಲೆಯಲ್ಲಿ ಹೊತ್ತದ ಬೆಂಕಿಗೆ ಮುಖಾಮುಖಿಯಾಗಿ ಏದುಸಿರು ಬಿಡುತ್ತಾ ಹೊಗೆಯಲ್ಲಿ ಕೆಮ್ಮುತ್ತಾ ನಿತ್ಯ ಬೇಯಿಸುವ ಅನ್ನಕ್ಕಾಗಿ ತಾನು ಬೆಂದು ನೋವಿನ ಅಗುಳಾಗಿದ್ದು, ಇಂದು ಒಲೆಯೇ ಇಲ್ಲದ ಅವಳ ಮನೆಯಲ್ಲಿ ನೆನಪುಗಳೂ ಮರೆಯಾಗಿದ್ದು ಕಾಲದ ಮಹಿಮೆಯಷ್ಟೆ.
ಹೋಟೆಲ್‌ಗಳನ್ನಾಗಲಿ , ಭಾರಿ ಬೋಜನಗಳನ್ನಾಗಲಿ ಒಮ್ಮೆಯೂ ಕಂಡಿರದ ನಮಗೆ ಒಲೆಯೇ ರುಚಿಯ ತವರು. ಗದ್ದೆ ನೆಟ್ಟಿ ಶುರುವಾಯ್ತು ಅಂದ್ರೆ ಕೊರೆಮೀನು, ಏಡಿ, ಅಣಬೆಗಳಿಗೆ ಬರವಿರಲಿಲ್ಲ. ಅಣಬೆ, ಏಡಿ,ಕೊರೆ ಮೀನುಗಳಿಗೆ ಉಪ್ಪುಕಾರ ಹುಳಿ ಹಾಕಿ ಬಾಳೇ ಎಲೇಲಿ ಸುತ್ತಿ ಬಬ್ಬೂದಿ ಒಳಗೆ ಇಟ್ರೆ ಗಮ್ಮತ್ತಾದ ಖಾದ್ಯ ರೆಡಿ. ಯಾವ ಯೂಟ್ಯೂಬ್ ರೆಸಿಪಿಗೂ ಕಮ್ಮಿ ಇರಲಿಲ್ಲ ಅದು. ಚಳಿಗೆ ಹೊಟ್ಟೆಯೊಳಗಿಂದ ಬೆಚ್ಚಗೆ ಮಾಡಿ ಬಾಯಿಗೂ ಹದವಾದ ರುಚಿಯ ನೀಡಿ ಕಣ್ಣಲ್ಲಿ ಬೆಳಕು ಮೂಡಿಸುವ ನೆನಪುಗಳು ಇಂದಿಗೂ ಅಚ್ಚರಿ. ಒದ್ದೆ ಸೌದೆ ,ಹೊತ್ತಿಕೊಳ್ಳದ ಬೆಂಕಿ ಮಾಡುವ ಅನಾಹುತಗಳಿಗೇನೂ ಕಮ್ಮಿ ಇಲ್ಲ. ಉರಿಯದ ಬೆಂಕಿಯಲ್ಲಿ ಹೊಗೆ ಸುತ್ತಿ ಸುತ್ತೀ ಸಾರು ಟೀಗಳನ್ನು ಹೊಗಸಲು ವಾಸನೆ ಮಾಡಿ ಅಸಲಿರುಚಿಯೇ ಇಲ್ಲವಾಗುತಿತ್ತು. ಒಮ್ಮೆ ಅಜ್ಜಿ ಜೊತೆ ಅವಳ ತವರು ಮನೆ ಆರಿದ್ರ ಮಳೆ ಹಬ್ಬಕ್ಕೆ ಹೋಗಿ ದೊಡ್ಡ ಕಿಟಕಿಗಳಿಲ್ಲದ ಮನೆಯಲ್ಲಿ ಇಡೀ ಮನೆ ಹೊಗೆಮಯ. ಉಂಡು ಮನೆ ಸೇರುವಷ್ಟರಲ್ಲಿ ಹೊಗೆಯಿಂದ ಅತ್ತೂ ಅತ್ತೂ ಹಣ್ಣುಗಾಯಿ ನೀರುಗಾಯಿ ಆಗಿದ್ದು ಇಂದು ನಗು ತರಿಸಿದರೆ ಅಂದು ಅದೊಂದು ಘನಘೋರ ಸಂಗತಿ. ಒಲೆ ಮೇಲಿರುವ ಬೆಸಲುತಟ್ಟಿಯಲ್ಲಿ ಒಣಗಿಸೋ ಕರಿಮೀನು ಮತ್ತು ಕಾಯಿ ಕಡಿಗಳು ಒಣಗಿ ಹೊಗೆಮಿಶ್ರಣಗೊಂಡು ಹೊಸ ಬಗೆಯ ರುಚಿಯನ್ನೇ ಪರಿಚಯಿಸುತಿತ್ತು.
ಒಲೆಯೆಂದರೆ ಬರೀ ಅಡುಗೆಗೆ ಸೀಮಿತವಾಗಿರಲಿಲ್ಲ ಅಲ್ಲೂ ಚಿಂತನ ಮಂಥನಗಳು ನಡೆಯುತ್ತಿದ್ದವು. ಒಲೆಯ ಮುಂದೆ ಕೂತೇ ಮಾತುಕತೆ ನಿರಂತರವಾಗಿ ನಡೆಯುತ್ತಿತ್ತು. ಒಮ್ಮೊಮ್ಮೆ ಮಾತು ನೀರಸವಾಗಿ ಹಳಸಿದಂತಿದ್ದರೆ ಇನ್ನೊಮ್ಮೆ ವಿನೂತನ ಮತ್ತೊಮ್ಮೆ ಅನುಭವ ಮಂಟಪದಂತೆ. ಮಳೆಯಲ್ಲಿ ಒಣಗದ ಯೂನಿಫಾರಂ ಒಣಗಿಸಲು ಒಲೆಯೇ ಡ್ರೈಯರ್. ಏನೂ ನೆಂಚಿಕೊಳ್ಳಲು ಇಲ್ಲದಿರೆ ಒಣ ಮೀನಿನ ತುಂಡೊಂದನ್ನು ಒಲೆಗೆ ಎಸೆದರೆ ಪೊಗದಸ್ತಾದ ಊಟ. ಮಲೆನಾಡೆಂದರೆ ಹೀಗೇ.. ಇಲ್ಲಿನ ಕಟು ಬಾಲ್ಯ ಕಳೆದು ಮಣ್ಣಿಂದ ಎದ್ದು ಬರುವ ಫೀನಿಕ್ಸ್ ನಂತೆ ಮತ್ತೆ ಮತ್ತೆ ಚಿಗುರಿ ಮೇರು ಪ್ರತಿಭೆ ಗಳಾಗಿ ಹೊರಬಂದಿರುವುದೂ ಸಹಾ ಮಲೆಸೀಮೆಯ ವಿಸ್ಮಯಗಳಲ್ಲೊಂದು.
ತೀರಾ ಚಿಕ್ಕವರಿರುವಾಗ ಪೇಸ್ಟ್ ಟೂತ್ ಬ್ರಶ್ ಗಳ ಪರಿಚಯವೂ ಇರಲಿಲ್ಲ. ಆ ಕಾಲಕ್ಕೆ ವಿದ್ಯಾವಂತರಾಗಿದ್ದ ಸೋದರ ಮಾವ ಒಬ್ಬರು ಕೋಲ್ಗೇಟ್ ಹಲ್ಲಿನ ಪುಡಿ ಬಳಸುವುದನ್ನು ಕಂಡಿದ್ದು ಅದು ನಮಗೆ ದಕ್ಕದ ಆಕರ್ಷಣೆಯ ಅಪರೂಪದ ವಸ್ತುವಾಗಿ ಉಳಿದಿತ್ತು.ನಮಗೋ ಬೆಳಗಿನ ಬಾಯಿ ಚೊಕ್ಕಟಕ್ಕೆ ಒಲೆಯೇ ಆಶ್ರಯತಾಣ. ಕಣ್ಣುಜ್ಜಿಕೊಳ್ಳುತ್ತಾ ಬಚ್ಚಲ ಒಲೆಯಲ್ಲಿ ಸೆಲೆಕ್ಟೆಡ್ ಮಸಿಕೆಂಡಗಳಿಗೆ ಸರ್ಚಿಂಗ್. ಅಲ್ಲೂ ವಿಭಿನ್ನ ವೆರೈಟಿಗಳು. ಕೆಲವು ಕರುಂ ಕರುಂ ಅಂತ ನೀಟಾಗಿ ನುಣ್ಣಗೆ ಹಲ್ಲುಜುವಿಕೆಗೆ ಸಹಕರಿಸಿದರೆ ಇನ್ನು ಕೆಲವು ಬಿಲ್ ಕುಲ್ ತುಂಡಾಗದೇ ಸ್ಟ್ರೈಕ್ ಮತ್ತೆ ಕೆಲವು ಕಮಟು ವಾಸನೆಯಿಂದ ಎಷ್ಟೊತ್ತಿಗೆ ಉಗಿತೀವಪ್ಪಾ ಅನ್ನುವಷ್ಟು ರೋಧನೆ ಕೊಡ್ತಿದ್ವು. ಒಟ್ನಲ್ಲಿ ಹಲ್ಲುಜ್ಜೋ ಶಾಸ್ತ್ರ ಮುಗೀಬೇಕಷ್ಟೆ.
ಸೌದೆಯಲ್ಲೂ ನಾನಾ ರೂಪ ನಾನಾ ವಿಧ. ಬಚ್ಚಲ ಒಲೆಗೆ ಕುಂಟೆ ಎಂಬ ಬೃಹತ್ ಸೌದೆಗಳಾದರೆ ಅಡುಗೆ ಒಲೆಗೆ ಸಣ್ಣ , ಮಧ್ಯಮ ಗಾತ್ರದ ಸೌದೆಗಳು ಕುಂಟೆ ಜೊತೆ ಬುರ್ ಎಂದು ಉರಿಯುವ ಸೌದೆಗಳದ್ದು ಕಾಂಬಿನೇಶನ್. ಸೌದೆ ಒಟ್ಟುವುದೂ ಕಲೆ ದಪ್ಪಭಾಗ ಮುಂದೆ ಚಿಕ್ಕವು ಹಿಂದೆ ಬರುವಂತೆ ಜೋಡಿಸಬೇಕು. ಮದುವೆಯಾಗಿ ಮನೆಗೆ ಬಂದ ಸೊಸೆ ಬಗ್ಗೆ ಅತ್ತೆಮ್ಮನ ಬಳಿ ಕೇಳೋ ಮೊದಲ ಪ್ರಶ್ನೆನೆ “ನಿನ್ ಸೊಸೆ ಹೊತ್ತಾರೆ ಬೇಗ ಎದ್ದು ಬೂದಿ ಮಗ್ದು ಬೆಂಕಿ ಒಟ್ತಾಳಾ” ಅಂತ ಮನೆಯ ಮೊದಲ ಕೆಲಸ ಕಲಿತರೆ ಅಲ್ಲಿಗೆ ಎಲ್ಲಾ ಕೆಲಸದ ಓ ನಾಮ ಕಲಿತಂತೆ ಸರಿ.ಸಾಮಾನ್ಯವಾಗಿ ಬೇಸಿಗೆಯ ಉಭಯಕುಶಲೋಪರಿಯಲ್ಲಿ “ಇನ್ನೂ ಸೌದಿ ಕಡಿದಿಲ್ಲ ಮಾರಾಯಾ, ನಿಮ್ದಾಯ್ತಾ” ಈ ಮಾತುಗಳಿಗೆ ಪ್ರಾಶಸ್ತ್ಯವಿತ್ತು. ಮನೆಯಲ್ಲೇನಾದರೂ ಸಾವುನೋವುಗಳು ಸಂಭವಿಸಿದಾಗ ಶೋಕದ ಸಂಕೇತವಾಗಿ ಒಲೆ ಉರಿಸುತ್ತಿರಲಿಲ್ಲ. ಮನೆ ಮುಂದೆ ಸೌದೆ ಜೋಡಿಸುತ್ತಿರಲಿಲ್ಲ. ಸೌದೆಗಾಗಿಯೇ ಒಂದು ಮನೆ ಇರಬೇಕಾಗಿತ್ತು. ಸೌದೆಮನೆಯಲ್ಲಿ ಸೌದೆ ಜೋಡಿಸುವುದು ಸೌಂದರ್ಯ ಪ್ರಜ್ಞೆಯ ಭಾಗವೇ ಆಗಿತ್ತು.
ಹೆಚ್ಚಿನ ನಮ್ಮ ಮಲೆನಾಡಿನ ಮನೆಗಳಲ್ಲಿ ಇಂದು ಒಲೆ ಅಪರೂಪ, ಇದ್ದರೂ ನೆಪಕ್ಕಷ್ಟೆ. ಎಲ್.ಪಿ.ಜಿ ಒಲೆಗಳ ಮೇಲೆಯೇ ಹೆಚ್ಚಿನ ಅವಲಂಬನೆ .ಒಲೆಯೂ ಇಲ್ಲ ಒಲೆಯ ಮೇಲೆ ಒಲವೂ ಇಲ್ಲ.. ಬೆಂಕಿ ಕಾಯಿಸೋ ವಿಷಯ ಎತ್ತಿದ್ರೆ ನಮ್ಮನ್ನ ಅನ್ಯಗ್ರಹಜೀವಿಗಳಂತೆ ನೋಡುವುದೂ ಉಂಟು.ಏನಾದರೇನು ಏನಿದ್ದರೇನು ಮಲೆನಾಡಿನ ಬದುಕಿನ ಬಾಲ್ಯವೇ ನಮ್ಮ ಜೀವದ್ರವ್ಯ.