Malenadu Mitra
ರಾಜ್ಯ ಶಿವಮೊಗ್ಗ

ಪುರದ ಪುಣ್ಯ ಮಳೆ ಹಿಂದೆ ಪೋಗುತ್ತಿದೆ…..ಮೊದಲ ಮಳೆಗೆ ಸ್ಮಾರ್ಟ್‌ ಸಿಟಿ ಅದ್ವಾನ, ಹೊಳೆಯಂತಾದ ರಸ್ತೆಗಳು, ಕಟ್ಟಿದ ಚರಂಡಿಗಳು

ಶಿವಮೊಗ್ಗ: ನಗರ ’ಸ್ಮಾರ್ಟ್ ಸಿಟಿ’ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಇಲ್ಲಿನ ಜನರ ಜೀವನ ಮಟ್ಟ ಸುಧಾರಣೆ ಹಾಗೂ ಸ್ವಚ್ಛಂದ ಪರಿಸರದ ಕನಸು ಮಾತ್ರ ಹುಸಿಯಾಗಿದೆ. ಇದರಿಂದ, ಪ್ರತಿ ನಿತ್ಯ ಜನ ಸಾಮಾನ್ಯರು ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.
ನಾಲ್ಕೈದು ದಿನಗಳಿಂದ ಸುರಿದ ಮಳೆಗೆ ಬಹುತೇಕ ಬಡಾವಣೆಗಳಲ್ಲಿ ನೀರು ನುಗ್ಗಿದೆ. ಒಳ ಚರಂಡಿಗಳಲ್ಲಿ ಸಾಗಬೇಕಿದ್ದ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇಲ್ಲಿ ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಸ್ಮಾರ್ಟ್ ಸಿಟಿ ಕಲ್ಪನೆಗಿಂತ ಮೊದಲು ನಗರ ಸ್ವಚ್ಛಂದವಾಗಿತ್ತು. ಪ್ರಸ್ತುತ, ಬೇಸಿಗೆ ಆರಂಭವಾದರೆ ಧೂಳು ಸೇವಿಸಬೇಕು. ಮಳೆಗಾಲದಲ್ಲಿ ಕೊಚ್ಚೆಯಲ್ಲಿ ಓಡಾಡಬೇಕು. ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣಗೊಂಡು ವರ್ಷ ಕಳೆದಿದೆ. ಆದರೆ, ಜನ ಸಾಮಾನ್ಯರಿಗೆ ಗೋಳು ಮಾತ್ರ ತಪ್ಪಿಲ್ಲ ಎನ್ನುವುದು ಸಾರ್ವಜನಿಕರ ದೂರು.
ಶಿವಮೊಗ್ಗ ನಗರದ ೬ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಪೂರ್ಣ ಹಾಗೂ ೯ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಭಾಗಶಃ ಅಭಿವೃದ್ಧಿ ಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿಶೇಷ ಅನುದಾನದ ಅಡಿ ಸುಮಾರು ೧ ಸಾವಿರ ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಆದರೆ, ನಗರದ ಬಹುತೇಕ ಕಡೆ ಕಾಮಗಾರಿ ಅವೈಜ್ಞಾನಿಕವಾಗಿದೆ. ಸಮಸ್ಯೆಗಳ ನಡುವೆಯೇ ಜನರು ದಿನ ದೂಡುತ್ತಿದ್ದಾರೆ. ಸ್ಮಾರ್ಟ್ ಸಿಟಿ ಪರಿಕಲ್ಪನೆಯಲ್ಲಿ ಸ್ವಚ್ಛತೆಗೆ ಶೇ೨೮, ಆರ್ಥಿಕತೆ ಶೇ೨೪, ಪರಿಸರ ಶೇ೨೩, ಅಂತರ್ಜಲ ಶೇ೨, ಸಾಮಾಜಿಕ ಸೇವೆ ಶೇ೨೩ ರಷ್ಟು ಒತ್ತು ನೀಡಬೇಕು. ಅದೇ ರೀತಿ, ಉತ್ಕೃಷ್ಟ ತಂತ್ರಜ್ಞಾನದೊಂದಿಗೆ ನಗರದ ವ್ಯಾಪ್ತಿಯ ನಾಗರಿಕರಿಗೆ ಯೋಗ್ಯವಾದ ಜೀವನ ಮಟ್ಟವನ್ನು ನೀಡುವುದು. ಸ್ವಚ್ಛ ಮತ್ತು ಸುಸ್ಥಿರ ಪರಿಸರ ಒದಗಿಸಬೇಕು. ಪ್ರಸ್ತುತ ಇದು ಕನಸಾಗಿ ಉಳಿದಿದೆ.

ನಗರಕ್ಕೆ ಸ್ಮಾರ್ಟ್ ಸಿಟಿ ಹಣೆ ಪಟ್ಟಿ ನೀಡಿದವರು ಯಾರು? ರಾಜಕೀಯ ಲಾಭಿಯಿಂದ, ಅಧಿಕಾರದ ದುರಾಸೆಗೆ ಜನರ ಬದುಕನ್ನು ನರಕದ ಕೂಪಕ್ಕೆ ದೂಡಲಾಗಿದೆ. ಇಲ್ಲಿ ಮಳೆ ಬಂದರೆ, ಮನೆಯಿಂದ ಹೊರಬರಲಾಗುತ್ತಿಲ್ಲ. ಇಲ್ಲಿನ ಬಹುತೇಕ ರಸ್ತೆಗಳು ಹಳ್ಳ-ಕೊಳ್ಳದ ರೀತಿ ಜಲಾವೃತವಾಗುತ್ತಿವೆ. ಮುಂಗಾರು ಪೂರ್ವದಲ್ಲಿಯೇ ಈ ಸ್ಥಿತಿ ಎದುರಾದರೆ, ಮುಂದಿನ ಮಳೆಗಾಲ ಎದುರಿಸುವುದು ಹೇಗೆ? ಎಂದು ಆಲ್ಕೊಳ ನಿವಾಸಿ ಉಮೇಶ್ ಪ್ರಶ್ನಿಸಿದರು.
ಕಳೆದ ವರ್ಷ ಗಾಂಧಿ ನಗರದಲ್ಲಿ ಅವೈಜ್ಞಾನಿಕವಾಗಿ ಯುಜಿ ಕೇಬಲ್ ಅಳವಡಿಕೆ ಹಾಗೂ ಕಂಟ್ರೋಲಿಂಗ್ ಫೀಡರ್ ಅವಾಂತರದಿಂದ ದುರ್ಘಟನೆಗಳು ನಡೆದ ಬಗ್ಗೆ ವರದಿ ಆಗಿತ್ತು. ಈ ಬಾರಿಯೂ ಮಳೆಯ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಆದ್ದರಿಂದ, ಈ ಬಾರಿ ಯಾವುದೇ ಅವಾಂತರಕ್ಕೆ ಅವಕಾಶ ನೀಡದಂತೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಇಲ್ಲಿನ ಸ್ಥಳೀಯ ನಿವಾಸಿ ಸತೀಶ್ ಒತ್ತಾಯಿಸಿದರು.

ನಾಗರಿಕರ ಸುರಕ್ಷತೆಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಭದ್ರತೆ ಒದಗಿಸಬೇಕು. ಆದರೆ, ಸಂಜೆಯ ವೇಳೆ ಮಕ್ಕಳನ್ನು ಶಾಲೆಯಿಂದ ಕರೆ ತರುವುದೇ ಸವಾಲಾಗಿದೆ. ನಗರ ವ್ಯಾಪ್ತಿಯ ಬಹುತೇಕ ರಸ್ತೆ ಇಕ್ಕೆಲಗಳಲ್ಲಿ ವಿದ್ಯುತ್ ಪರಿವರ್ತಕಗಳನ್ನು ನಿರ್ಮಿಸಲಾಗಿದೆ. ಮಳೆಗಾಲ ಆರಂಭಕ್ಕೂ ಮುನ್ನ ಇವುಗಳ ಗುಣಮಟ್ಟದ ಬಗ್ಗೆ ಸ್ಮಾರ್ಟ್ ಸಿಟಿ, ಮೆಸ್ಕಾಂ, ಜಲಮಂಡಳಿ ಅಧಿಕಾರಿಗಳು ಒಗ್ಗೂಡಿ ಪರಿಶೀಲಿಸಬೇಕು. ರಸ್ತೆಯ ಮೇಲೆ ನೀರು ಹರಿಯದಂತೆ ಯುಜಿಡಿ ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಸರಾಗಗೊಳಿಸಬೇಕು ಎಂದು ಹೊಸಮನೆ ನಿವಾಸಿ ಪುಷ್ಪಾವತಿ ಆಗ್ರಹಿಸಿದರು.

’ಸ್ಮಾರ್ಟ್ ಕಲ್ಪನೆ ಕಣ್ಮರೆ’

ಸ್ಮಾರ್ಟ್ ಸಿಟಿ ಪರಿಕಲ್ಪನೆಯಲ್ಲಿ ’ಇಂಟರ್ ನೆಟ್’ ಪ್ರಮುಖ ಪಾತ್ರವಹಿಸುತ್ತದೆ. ಅಂದರೆ, ಇಲ್ಲಿ ಸೆನ್ಸಾರ್, ಸೆಕ್ಯೂರಿಟಿ ಕ್ಯಾಮೆರ, ಸ್ಮಾರ್ಟ್ ಬೀದಿ ದೀಪಗಳು, ಸ್ಮಾರ್ಟ್ ಎನರ್ಜಿ ಮ್ಯಾನೆಜ್‌ಮೆಂಟ್ ಸಾಧನಗಳು ಸ್ವತಃ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮಾರ್ಥ್ಯ ಹೊಂದಿರುತ್ತವೆ. ಈ ಎಲ್ಲಾ ಸಾಧನಗಳು ಅಂತರ್ಜಾಲ (ಇಂಟರ್ ನೆಟ್) ಕೇಂದ್ರಿತವಾಗಿರುತ್ತವೆ. ಈ ಸಾಧನಗಳ ನಿರ್ವಹಣೆಗೆ ಯಾವುದೇ ಮಧ್ಯವರ್ತಿಗಳ ಪಾತ್ರ ಇರುವುದಿಲ್ಲ. ಈ ಸಾಧನಗಳು ಜನ ಸಾಮಾನ್ಯರೊಂದಿಗೆ ನೇರ ಸಂಪರ್ಕ ಹೊಂದಿರುತ್ತವೆ. ಆದರೆ, ಆ ರೀತಿಯ ಯಾವುದೇ ವ್ಯವಸ್ಥೆ ಶಿವಮೊಗ್ಗ ಸ್ಮಾರ್ಟ್ ಸಿಟಿ ಕಲ್ಪನೆಯಲ್ಲಿ ಕಾಣಲು ಸಿಗುವುದಿಲ್ಲ.

ಸ್ಮಾರ್ಟ್ ಕಲ್ಪನೆ:

ಸ್ಮಾರ್ಟ್ ಸಿಟಿ ವ್ಯಾಪಿಯಲ್ಲಿ ಅಪಘಾತಗಳು ನಡೆದರೆ, ಸೆನ್ಸಾರ್ ಸಹಾಯದಿಂದ ಕಂಟ್ರೋಲ್ ರೂಂಗೆ ಮಾಹಿತಿ ರವಾನಿಸಬೇಕು. ಬಳಿಕ ಘಟನೆ ನಡೆದ ಸ್ಥಳಕ್ಕೆ ತುರ್ತುವಾಹನ (ಆಂಬುಲೆನ್ಸ್) ಸೇವೆಯನ್ನು ಶೀಘ್ರ ಒದಗಿಸಬೇಕು. ಆದರೆ, ಸ್ಮಾರ್ಟ್ ಯೋಜನೆಯಲ್ಲಿ ಈ ರೀತಿಯ ಸವಲತ್ತು ತುರ್ತು ಸಂದರ್ಭದಲ್ಲಿ ಲಭ್ಯವಾಗುತ್ತಿಲ್ಲ.
ಉತ್ತಮ ಶಿಕ್ಷಣ ಮತ್ತು ಸವಲತ್ತು, ಕೈಗೆಟಕುವ ದರದಲ್ಲಿ ವಸತಿ, ಐಟಿ ಸಂಪರ್ಕ ಹಾಗೂ ಡಿಜಿಟಲೀಕರಣ, ಉತ್ತಮ ಆಡಳಿತ ಹಾಗೂ ಇ- ಆಡಳಿತ ಸೇವೆ, ಭೂಗತ ವಿದ್ಯುತ್ ಕೇಬಲ್ ಅಳವಡಿಕೆ, ಗುಣಮಟ್ಟದ ಸಾರಿಗೆ,  ಬಸ್ ತಂಗುದಾಣ, ಯೋಗ್ಯ ಕುಡಿಯುವ ನೀರು, ವಿದ್ಯುತ್ ಸರಬರಾಜು, ಘನ ತ್ಯಾಜ್ಯ ನಿರ್ವಹಣೆ, ಸುಂದರ ಪರಿಸರ, ಸುಸ್ಥಿರ ಆಸ್ಪತ್ರೆ ಸೇವೆಗೆ ಒತ್ತು ನೀಡಬೇಕು.


ನಗರ ವ್ಯಾಪ್ತಿಯಲ್ಲಿ ಮನೆ ನಿರ್ಮಾಣಕ್ಕೆ ರಸ್ತೆ ಬದಿಗಳಲ್ಲಿಯೇ ಕಲ್ಲು, ಜಲ್ಲಿ ಸೇರಿದಂತೆ ಗೃಹನಿರ್ಮಾಣಕ್ಕೆ ಬೇಕಾದ ವಸ್ತುಗಳನ್ನು ಸುರಿದಿದ್ದಾರೆ. ಇದರಿಂದ, ಮಳೆ ನೀರು ಹರಿದು ಚರಂಡಿ ಸೇರಲು ಅಡಚಣೆ ಉಂಟಾಗಿದೆ. ಇದನ್ನು ತೆರವುಗೊಳಿಸವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು- , ತ್ಯಾಗರಾಜ ಮಿತ್ಯಾಂತ, ನಗರ ನಿವಾಸಿ


ಪ್ರಕೃತಿ ವಿಕೋಪಕ್ಕೆ ತಡೆಯೊಡ್ಡಲು ಸಾಧ್ಯವಿಲ್ಲ. ರಸ್ತೆಯ ಮೇಲೆ ನೀರು ಹರಿದು ಸಾಗುವುದನ್ನು ತಗ್ಗಿಸಲು ಕ್ರಮಕೈಗೊಳ್ಳಲಾಗುತ್ತಿದೆ.-

ಬ್ರಿಜಿಟ್ ವರ್ಗೀಸ್, ಸಾರ್ವಜನಿಕ ಸಂಪರ್ಕ ಅಧಿಕಾರಿ, ಸ್ಮಾರ್ಟ್ ಸಿಟಿ

ಮಳೆಗಾಲ ಆರಂಭಗೊಂಡರೆ ನಗರದ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ರಸ್ತೆಯ ಮೇಲೆ ನೀರು ಹರಿದು ಸಾಗುತ್ತಿದೆ. ಇದು ಕಳೆದ ಹತ್ತಿಪ್ಪತ್ತು ವರ್ಷಗಳಿಂದ ನಡೆಯುತ್ತಿದೆ. ಇಲ್ಲಿ ರಾಜಕಾಲುವೆ ಒತ್ತುವರಿಗಳಿಂದ ಕೆಲವು ಕಡೆ ಸಮಸ್ಯೆ ಆಗಿದೆ. ಪರಿಶೀಲಿಸಲಾಗುತ್ತಿದೆ.

ಮಾಯಣ್ಣ ಗೌಡ, ಆಯುಕ್ತರು, ಮಹಾನಗರ ಪಾಲಿಕೆ.

Ad Widget

Related posts

Malenadu Mirror Desk

ಕುವೆಂಪು ವಿವಿ ಎಲ್ಲಾ ಪರೀಕ್ಷೆಗಳು ಮುಂದೂಡಿಕೆ

Malenadu Mirror Desk

ಹುಳಿ ಹಿಂಡುವ ಕೋಡಿ ಹಳ್ಳಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.