ಯಾವನ್ ರೀ ಸಿಂಡಿಕೇಟ್ ಮೀಟಿಂಗ್ ಮಾಡಬೇಡಿ ಅಂದೋರ್ ?, ನಿಮಗೆ ತಿಂಗಳ ಸಂಬಳ ಬರ್ತಿದೆ ಅದನ್ನು ನಿಲ್ಲಿಸಿದ್ರೆ ಗೊತ್ತಾಗುತ್ತೆ, ಬಡವರ ಹಸಿವು ಗೊತ್ತಿದೆಯೇ ನಿಮಗೆ ?, ಈ ರೀತಿಯ ಅವಾಜ್ ಯಾರದೂ ಅಂತೀರಾ ?. ಬೇರಾರೂ ಅಲ್ಲ ಶಿವಮೊಗ್ಗ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಅವರದು. ಸಹ್ಯಾದ್ರಿ ಕಾಲೇಜಿನ ಹೊರ ಗುತ್ತಿಗೆ ಆಧಾರಿತ ನೌಕರರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಕಾಲೇಜು ಆಡಳಿತಕ್ಕೆ ಈ ರೀತಿ ಕ್ಲಾಸ್ ತೆಗೆದುಕೊಂಡರು. ಕಳೆದ ನಾಲ್ಕು ತಿಂಗಳಿಂದ ಸಂಬಳ ಇಲ್ಲದ್ದನ್ನು ಪ್ರಶ್ನಿಸಿ ಗುತ್ತಿಗೆ ಆಧಾರಿತ ನೌಕರರ ಧರಣಿ ನಡೆಸುತ್ತಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಸಚಿವರು, ಜಿಲ್ಲಾಧಿಕಾರಿ ಸಮ್ಮುಖದಲ್ಲಿಯೇ ಆವಾಜ್ ಹಾಕಿ ಒಂದು ದಿನದಲ್ಲಿ ಸಮಸ್ಯೆ ಇತ್ಯರ್ಥವಾಗಬೇಕೆಂದು ಸೂಚನೆ ನೀಡಿದರು.
ಮ್ಯಾನ್‍ಪವರ್ ಏಜೆನ್ಸಿಯವರು ಬಾಕಿ ಇರುವ ಎರಡೂವರೆ ಕೋಟಿ ಬಾಕಿ, ಇಎಸ್.ಐ.ಪಿಎಫ್ ಎಲ್ಲವನ್ನೂ ಕೊಡಬೇಕು ಮತ್ತು ಕೂಡಲೇ ಆ ಏಜೆನ್ಸಿಯನ್ನು ಬದಲು ಮಾಡಬೇಕು. ಈ ಸಮಸ್ಯೆಯನ್ನು ಕುವೆಂಪು ವಿವಿ ಕುಲಪತಿ ಗಮನಕ್ಕೆ ತರಬೇಕು. ಸಿಂಡಿಕೇಟ್ ಮೀಟಿಂಗ್‍ನಲ್ಲಿ ಚರ್ಚೆ ಮಾಡಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸಚಿವ ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕರ್ನಾಟಕ ರಾಜ್ಯ ದಲಿತ ಯುವಸೇನೆ ಆಶ್ರಯದಲ್ಲಿ ಧರಣಿ ಆಯೋಜಿಸಲಾಗಿತ್ತು. ಸಂಘಟನೆ ರಾಜ್ಯಾಧ್ಯಕ್ಷ ಜಿ.ಎಸ್.ತಿಪ್ಪೇಸ್ವಾಮಿ, ಆರ್.ಶಂಕರ್, ರಿಜ್ವಾನ್ ಅಶ್ರಫ್ ಮತ್ತಿತರರು ಹಾಜರಿದ್ದರು.
previous post
next post