ಸಂಕ್ರಾಂತಿ ಬಳಿಕ ರಾಜ್ಯ ಸರಕಾರದಲ್ಲಿ ಮಹತ್ವದ ಬದಲಾವಣೆ ಎಂಬ ವದಂತಿಗಳಿರುವಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಇನ್ನೂ ಎರಡೂ ವರೆ ವರ್ಷ ನಾನೇ ಸಿಎಂ ಎಂದು ಹೇಳಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಾವೇ ನಂಬರ್ ಒನ್ ಎಂದು ಬಿಜೆಪಿ ಹೇಳಿಕೊಳ್ಳುತ್ತಿರುವ ಈ ಹೊತ್ತಿನಲ್ಲಿಯೇ ರಾಜ್ಯ ಬಿಜೆಪಿಯ ವಿಶೇಷ ಸಭೆಗೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರ ಸಜ್ಜಾಗಿದೆ.25 ವರ್ಷಗಳ ಬಳಿಕ ನಡೆಯುವ ಸಭೆಯಲ್ಲಿ ರಾಮ, ರಐತ ಮತ್ತು ಗೋವಿನ ವಿಚಾರಗಳು ಪ್ರಮುಖವಾಗಿ ಚರ್ಚೆಯಾಗಲಿವೆ. ಗ್ರಾಮ ಸ್ವರಾಜ್ ಆಂದೋಲನ ಮೂಲಕ ಪಂಚಾಯಿತಿ ಚುನಾವಣೆಗೆ ಹೋಗಿದ್ದ ಬಿಜೆಪಿ ಈಗ ಯಶಸ್ಸಿನ ಅಲೆಯಲ್ಲಿ ತೇಲುತ್ತಿದೆ. ನಳೀನ್ ಕುಮಾರ್ ಕಟೀಲ್ ಹಾಗೂ ಯಡಿಯೂರಪ್ಪ ಅವರನ್ನು ಗೋಹತ್ಯೆ ನಿಷೇಧ ಕಾಯಿದೆ ಜಾರಿ ಮಾಡಿದ್ದಕ್ಕಾಗಿ ಸಭೆಯಲ್ಲಿ ಸನ್ಮಾನಿಸುವ ಕಾರ್ಯಕ್ರಮವೂ ಇದೆ.
ವಿಶೇಷ ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರುಗಳು, ರಾಜ್ಯಸರಕಾರದ ಹಲವು ಸಚಿವರುಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು ಹಾಗೂ ಜಿಲ್ಲಾ ಅಧ್ಯಕ್ಷರುಗಳು ಭಾಗವಹಿಸಲಿದ್ದಾರೆ. ಯಡಿಯೂರಪ್ಪ ಕುಟುಂಬದ ಒಡೆತನದ ಪ್ರೇರಣಾ ಕನ್ವೆನ್ಶನ್ ಹಾಲ್‍ನಲ್ಲಿ ಸಭೆ ನಡೆಯಲಿದ್ದು, ಇಡೀ ಪ್ರಾಂಗಣ ಹಾಗೂ ಶಿವಮೊಗ್ಗ ನಗರದಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ.
ಎಲ್ಲೆಲ್ಲೂ ಕೇಸರಿ:
ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ ಮಹತ್ವದ ಸಭೆಗೆ ಶಿವಮೊಗ್ಗದ ಪ್ರಮುಖ ವೃತ್ತಗಳು ಹಾಗೂ ಸಭಾಂಗಣಕ್ಕೆ ಹೋಗುವ ಬಿ.ಹೆಚ್.ರಸ್ತೆಯನ್ನು ಸಂಪೂರ್ಣ ಕೇಸರಿಮಯ ಮಾಢಲಾಗಿದೆ. ಹಾದಿಯುದ್ದಕ್ಕೂ ಸ್ವಾಗತ ಕೋರುವ ಪ್ಲೆಕ್ಸ್‍ಗಳನ್ನು ಅಳವಡಿಸಿದ್ದು, ನಾಯಕರು ಹಾಗೂ ಸ್ವಾಗತ ಕೋರುವ ಸ್ಥಳೀಯ ನಾಯಕರುಗಳ ಭಾವಚಿತ್ರಗಳು ರಾರಾಜಿಸುತ್ತಿವೆ.

ಶಿವಮೊಗ್ಗ ಜಿಲ್ಲಾ ಘಟಕದ ಆತಿಥ್ಯದಲ್ಲಿ ಸಭೆ ನಡೆಯುವ ಕಾರಣ ಅತಿಥಿಗಳಿಗೆ ಎಲ್ಲೂ ವ್ಯತ್ಯಾಸವಾಗದಂತೆ ವ್ಯವಸ್ಥೆ ಮಾಡಲಾಗಿದೆ. ಪ್ರಮುಖ ಹೋಟೆಲ್‍ಗಳಲ್ಲಿ ವಿವಿಐಪಿಗಳಿಗಾಗಿ ರೂಂ ಬುಕ್ ಮಾಡಲಾಗಿದೆ. ವಿಶೇಷ ಸಭೆಯಲ್ಲಿ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ್ದ ಜಿಲ್ಲಾ ಉಸ್ತವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಮಲೆನಾಡಿನ ಜನರ ನಿರೀಕ್ಷೆ:
ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಸಾಕಷ್ಟು ಕೆಲಸಗಳು ಆಗುತ್ತಿವೆಯಾದರೂ ಅವು ರಸ್ತೆ, ಚರಂಡಿ, ವಿಮಾನ ನಿಲ್ದಾಣ ಹಾಗೂ ಕಟ್ಟಡಗಳ ನಿರ್ಮಾಣ ಅಗುತ್ತಿದೆ. ಆದರೆ ಇಲ್ಲಿನ ಪ್ರಮುಖ ಆರ್ಥಿಕ ಶಕ್ತಿಗಳಾದ ಭದ್ರಾವತಿಯ ವಿ.ಐಎಸ್‍ಎಲ್ ಹಾಗೂ ಎಂಪಿಎಂ ಕಾರ್ಖಾನೆಗಳ ಪುನಶ್ಚೇತನ ಆಗಿಲ್ಲ. ಈ ವಿಚಾರ ಕಳೆದ ಹಲವು ಚುನಾವಣೆಯಲ್ಲಿ ಚರ್ಚೆಯಾಗುತ್ತಿದ್ದರೂ, ನಿರ್ಣಾಯಕ ಘಟ್ಟಕ್ಕೆ ಬಂದಿಲ್ಲ.
ಮಲೆನಾಡನ್ನು ಕಾಡುವ ಕಸ್ತೂರಿ ರಂಗನ್ ವರದಿ ತೂಗುಗತ್ತಿ ಯಾವಾಗಲೂ ಆತಂಕ ಹುಟ್ಟಿಸುತ್ತಲೇ ಇದೆ. ಬಗರ್‍ಹುಕುಂ ಸಾಗುವಳಿ ಸಮಸ್ಯೆ ಕಳೆದ ಐದು ದಶಕಗಳಿಂದಲೂ ಜೀವಂತವಾಗಿಯೇ ಇದೆ. ಐವತ್ತರ ದಶಕದಲ್ಲಿ ನಾಡಿಗೆ ಬೆಳಕು ಕೊಡಲು ಕತ್ತಲಿಗೆ ತಳ್ಳಲ್ಪಟ್ಟ ಶರಾವತಿ ಸಂತ್ರಸ್ತರ ಇನ್ನೂ ಅತಂತ್ರರಾಗಿಯೇ ಇದ್ದಾರೆ. ಭೂಮಿಯ ಬೆಲೆ ಆಕಾಶಕ್ಕೆ ಹೋಗಿದ್ದರಿಂದ ಶಿವಮೊಗ್ಗ ನಗರದ ಬಡವರಿಗೆ ಆಶ್ರಯ ಮನೆ ಮತ್ತು ನಿವೇಶನ ಎಂಬುದು ಕನಸಾಗಿಯೇ ಉಳಿದಿವೆ. ಆರೋಗ್ಯಕ್ಕೆ ಹಾನಿಕರ ಎಂಬ ಅಂಶ ಮುಂದಿಟ್ಟುಕೊಂಡು ಅಡಕೆ ಮಾನ ಕಳೆಯುತ್ತಿರುವುದನ್ನು ನಿಲ್ಲಿಸಲು ಸರಕಾರಗಳು ಕೊಟ್ಟ ಭರವಸೆ ಹಾಗೇ ಇದೆ. ಈ ರೀತಿಯ ಪ್ರಮುಖ ಸಮಸ್ಯೆಗಳತ್ತ ಬಿಜೆಪಿಯ ವಿಶೇಷ ಸಭೆಯು ಗಮನ ಹರಿಸಬೇಕಾಗಿದೆ. ಪಕ್ಷ ಸಂಘಟನೆ, ಅಧಿಕಾರ, ಸೈದ್ಧಾಂತಿಕ ಸಂಗತಿಗಳೇ ಸಭೆಗೆ ಪ್ರಮುಖವಾಗಿದ್ದರೂ ಮಲೆನಾಡಿನ ಜನರ ಸಮಸ್ಯೆಗಳೂ ಧ್ವನಿಸಲಿ ಎಂಬುದು ಮಲೆನಾಡಿಗರ ನಿರೀಕ್ಷೆಯಾಗಿದೆ.


