ಸೊರಬ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ.ಎಂ.ಕೆ.ಭಟ್ ಅಭಿಮತ
ಕನ್ನಡ ಭಾಷೆ ನೆಲ ಜಲ ಸಮಸ್ಯೆಗಳು ಬಂದಾಗ ಸಮಸ್ತ ಕನ್ನಡಿಗರು ಪಕ್ಷಬೇಧ, ಧರ್ಮಬೇಧ ಮರೆತು ಒಂದಾಗಿ ಹೋರಾಟ ಮಾಡದೆ ನುಣುಚಿಕೊಳ್ಳುವ ಕನ್ನಡ ದ್ರೋಹಿಗಳಿಗೆ ಧಿಕ್ಕಾರ ಎಂದು ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಎಂ.ಕೆ.ಭಟ್‌ಆಕ್ರೋಶ ಹೊರಹಾಕಿದರು.
ಜಡೆ ಸಂಸ್ಥಾನ ಮಠದ ಆವರಣದಲ್ಲಿ ತಾಲೂಕು ಕಸಾಪ ಹಾಗೂ ಜಡೆ ಘಟಕದ ವತಿಯಿಂದ ಬುಧವಾರ ಏರ್ಪಡಿಸಿದ್ದ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಕನ್ನಡ ನಾಡಿನಲ್ಲಿ ಪ್ರತಿಯೊಬ್ಬರೂ ಕನ್ನಡ ಭಾಷೆ ಮಾತನಾಡಲು, ಬರೆಯಲು ಕಲಿಯಬೇಕು. ಸರಕಾರ ಕನ್ನಡ ಭಾಷೆ, ಜನರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುವಂತೆ ಕನ್ನಡಿಗರು ಹೋರಾಟ ನಡೆಸಬೇಕು. ನಾಡಿನ ಜನರಿಗೆ ಕನ್ನಡ ಭಾಷಾ ಮೀಸಲಾತಿ ಬೇಕೇ ವಿನಃ ಜಾತಿ ಮೀಸಲಾತಿ ಅಲ್ಲ. ಕನ್ನಡ ಉದ್ಯೋಗ ಒದಗಿಸಿ ಅನ್ನದ ಭಾಷೆಯಾಗುವಂತೆ ಕಟ್ಟಬೇಕು. ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಿಯೇ ಕೊಡಬೇಕು. ಮೆಡಿಕಲ್, ಎಂಜಿನಿಯರಿಂಗ್ ಹಾಗೂ ಉನ್ನತ ಶಿಕ್ಷಣ ವ್ಯಾಸಂಗಗಳಲ್ಲಿ ಹೆಚ್ಚಿನ ಮೀಸಲಾತಿ ನೀಡಬೇಕು. ಉದ್ಯೋಗದ ನಿರ್ಣಾಯಕ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದವರಿಗೆ ಹೆಚ್ಚುರಿ ೧೫ ಅಂಕಗಳನ್ನು ನೀಡಬೇಕು. ಆಡಳಿತ ಭಾಷೆ ಅಕ್ಷರಶಃ ಕಾರ್ಯರೂಪಕ್ಕೆ ಬಂದು ಕನ್ನಡ ನಿರ್ಲಕ್ಷಿಸುವವರಿಗೆ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.
ತಾಲೂಕು ಸಾಹಿತ್ಯ ಸಂಶೊಧನಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಕಾದಂಬರಿ ಬರೆದು ಚಲನಚಿತ್ರದ ಮೂಲಕ ಗಮನ ಸೆಳೆದ ನಡಹಳ್ಳಿ ರಂಗನಾಥ ಶರ್ಮ ಸೇರಿದಂತೆ ತಾಲೂಕಿ ಸಾಹಿತಿಗಳನ್ನು ನೆನಪಿಸಿಕೊಂಡ ಅವರು ಶೋಷಣೆ ಹಾಗೂ ಮೂಢನಬಿಕೆಗಳ ವಿರುದ್ಧ ಧ್ವನಿ ಎತ್ತಿದ ಬಂಡಾಯ ಸಾಹಿತ್ಯವನ್ನು ಒಪ್ಪಿಕೊಳ್ಳುತ್ತೇನೆ. ಜಾತಿ, ವರ್ಗರಹಿತವಾಗಿ ಉತ್ತಮ ಸಮಾಜ ನಿರ್ಮಾಣವಾಗಬೇಕು. ಜೀವನದ ಸಮಸ್ಯೆಗೆ ಸಾಹಿತ್ಯ ಸಂಜೀವಿನಿಯಾಗಿದೆ. ಸ್ಥಳೀಯವಾಗಿರುವ ನದಿ, ದೇವಸ್ಥಾನ, ಕೆರೆಕಟ್ಟೆಗಳು ಹಾಗೂ ಜನರನ್ನು ಗೌರವದಿಂದ ಕಾಣಬೇಕು. ಕುವೆಂಪು, ಬೇಂದ್ರೆ, ಕಾರಂತ ಈ ನೆಲೆದಲ್ಲಿ ಮತ್ತೆ ಜನಿಸಲು ಮಕ್ಕಳಿಗೆ ಸಾಹಿತ್ಯದ ಹುಚ್ಚು ಹತ್ತಿಸಬೇಕು. ಯಾರ ಮನೆಯಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ, ಸಂಸ್ಕಾರ ಸಿಗುವುದಿಲ್ಲವೋ ಆ ಮನೆಯಲ್ಲಿ ಭಯೋತ್ಪಾದಕರು ಜನಿಸುತ್ತಾರೆ. ಬಡವರಿಗೆ ಮದ್ಯ ಕುಡಿಸುವ ಮೂಲಕ ಅವರ ಮನೆ ಹಾಳು ಮಾಡಿ ಸರಕಾರ ನಡೆಸುವುದು ಸರಿಯಲ್ಲ. ರೈತರು ದೇಶದ ಬೆನ್ನೆಲುಬಾಗಿದ್ದು, ಸರಕಾರ ಅವರ ಬೆನ್ನು ಮೂಳೆ ಮುರಿಯುವ ಕೆಲಸ ಮಾಡಬಾರದು. ಜ್ಯೋತಿಷಿಗಳ ಮಾತುಕೇಳಿ ಭವಿಷ್ಯ ನಾಶಮಾಡಿಕೊಳ್ಳಬೇಡಿ ಎಂದ ಅವರು ಜಡೆ ಗ್ರಾಮದಲ್ಲಿ ಜಟಾಯು ಪಕ್ಷಿ ಹೆಣ್ಣಿನ ರಕ್ಷಣೆ ಮಾಡಿದಕ್ಕೆ ಹಾಗೂ ಜಟಾಯುಮುನಿ ತಪಸ್ಸು ಆಚರಿಸಿದ ಸ್ಥಳವಾಗಿದ್ದರಿಂದ ಜಡೆ ಎಂಬ ಹೆಸರು ಬಂದಿದೆ ಎಂದರು.
ಸಮ್ಮೇಳನವನ್ನು ಉದ್ಘಾಟಿಸಿದ ಶಾಸಕ ಕುಮಾರ್‌ಬಂಗಾರಪ್ಪ, ರಾಜಕೀಯ ಉದ್ದೇಶಕ್ಕೆ ನಾಡು-ನುಡಿ ಬಳಕೆ ಮಾಡಬಾರದು. ಕನ್ನಡದ ಮೊದಲ ರಾಜವಂಶಸ್ತರು ಆಳಿದ ಬನವಾಸಿಯಲ್ಲಿ ವಿಶ್ವವಿದ್ಯಾಲಯ ಆರಂಭಕ್ಕೆ ಸರಕಾರಕ್ಕೆ ಮನವಿ ಮಾಡಲಾಗುವುದು. ಸಾಹಿತ್ಯ ಸಮ್ಮೇಳನಗಳಿಂದ ನಾಡು-ನುಡಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತದೆ. ಮಾತೃಭಾಷೆ, ಮಾತೃಭೂಮಿ ಬಗ್ಗೆ ಎಲ್ಲರೂ ಅಭಿಮಾನ ಹೊಂದಿರಬೇಕು ಎಂದರು.
ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ಚಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಬಿ.ಶಂಕರಪ್ಪ ಅವರು ಆಶಯ ನುಡಿಗಳನ್ನಾಡಿದರು. ಸಮ್ಮೇಳನ ಸಂಚಾಲಕ ವಿಜೇಂದ್ರಕುಮಾರ್ ಮಾತನಾಡಿದರು.
ಜಿ.ಪಂ ಸದಸ್ಯ ಶಿವಲಿಂಗೇಗೌಡ ಅವರು ಸಮ್ಮೇಳನದ ಸರ್ವಾಧ್ಯಕ್ಷರ ನೇತೃತ್ವದ ತಾಯಿ ಭುವನೇಶ್ವರಿಯ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಜನಪದ ಕಲಾ ತಂಡಗಳಿಂದ ಜಡೆಯ ಈಶ್ವರ ಬಸವಣ್ಣ ದೇವಸ್ಥಾನದಿಂದ ಸಂಸ್ಥಾನ ಮಠದ ವರೆಗೆ ಸಾಂಗವಾಗಿ ನೆರವೇರಿತು.
ತಾ.ಪಂ ಸದಸ್ಯೆ ಅಂಜಲಿ ಸಂಜೀವ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದರು.
ಜಿಲ್ಲಾ ಕಸಾಪ ಕಾರ್ಯದರ್ಶಿ ರುದ್ರಮುನಿ ಎನ್. ಸಜ್ಜನ್ ಅವರು ಶಿಕ್ಷಕಿ ಶ್ರೀಮತಿ ಜೋಷಿ ಅವರ ’ಭಾವ ಅರಳಿದಾಗ’ ಕವನ ಸಂಕಲನ ಬಿಡುಗಡೆ ಮಾಡಿದರು.
ಜಡೆ ಹಿರೇಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಶಾಂತಪುರ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು.
ಶಿಕ್ಷಕ ಅಶೋಕ್ ತತ್ತೂರು ಮತ್ತು ತಂಡ ನಾಡಗೀತೆ ಹಾಗೂ ರೈತಗೀತೆ ಹಾಡಿದರು. ಜಡೆ ಕಸಾಪ ಅಧ್ಯಕ್ಷ ಮೃತ್ಯುಂಜಯಗೌಡ ಸ್ವಾಗತಿಸಿ, ಕಾರ್ಯದರ್ಶಿ ಎನ್ ಲಲಿತಾ ವಂದಿಸಿ, ಬಿಆರ್‌ಪಿ ಮಂಜಪ್ಪ ನಿರೂಪಿಸಿದರು.
ಕಸಾಪ ಅಧ್ಯಕ್ಷ ಮಧುರಾಯ್ ಜಿ.ಶೇಟ್ ಅಧ್ಯಕ್ಷತೆ ವಹಿಸಿದ್ದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸೂರ್ಯನಾರಾಯಣ ಹೆಗಡೆ, ನಿಕಟಪೂರ್ವ ಅಧ್ಯಕ್ಷ ಹಾಲೇಶ ನವುಲೆ, ಕೋಶಾಧ್ಯಕ್ಷ ಮಹೇಶ್ ಗೋಖಲೆ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಹುನವಳ್ಳಿ, ಉಳವಿ ಘಟಕದ ಅಧ್ಯಕ್ಷ ಶಿವಕುಮಾರ್, ಆನವಟ್ಟಿ ಘಟಕದ ಅಧ್ಯಕ್ಷ ಉಮೇಶ್ ಬಿಚ್ಚುಗತ್ತಿ, ರಾಜಶೇಖರ್ ಪಾಟೀಲ್, ಬೋರ್ಕೆ ಮಾಸ್ತರ್, ವಿಶ್ವನಾಥ ನಾಡಿಗೇರ, ಕಾಳಿಂಗರಾಜ್ ಇತರರಿದ್ದರು.