Malenadu Mitra
ರಾಜ್ಯ

ಕುವೆಂಪು ವಿವಿ ಆಡಳಿತ ಅಧ್ಯಾಪಕರ ಹಿತಾಸಕ್ತಿ ಕಾಯಲಿ

ಕುವೆಂಪು ವಿಶ್ವವಿದ್ಯಾಲಯದ ಅಧ್ಯಾಪಕರು ಮತ್ತು ಸಿಬ್ಬಂದಿಗಳ ಮೇಲೆ ಸುಳ್ಳು ದೂರು ದಾಖಲಿಸುವ ಪ್ರಕರಣಗಳು ನಡೆಯುತ್ತಿದ್ದು, ಅಧ್ಯಾಪಕರು ಹಾಗೂ ಸಿಬ್ಬಂದಿಯ ಹಿತ ಕಾಯಬೇಕೆಂದು ಕುವೆಂಪು ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘ ಮನವಿ ಮಾಡಿದೆ.


ಈ ಸಂಬಂಧ ವಿವಿ ಕುಲಸಚಿವರಿಗೆ ಮನವಿ ಸಲ್ಲಿಸಿರುವ ಸಂಘವು, ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರುಗಳು/ಸಿಬ್ಬಂದಿವರ್ಗದವರು ನಿಯಮಾನುಸಾರ ಪಾರದರ್ಶಕವಾಗಿ ನಿರ್ವಹಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಪೂರ್ಣ ಮತ್ತು ಸತ್ಯಕ್ಕೆ ದೂರವಾದ ಮಾಹಿತಿಯೊಂದಿಗೆ ಜೈಭೀಮ್ ಕನ್ನಡ ಜಾಗೃತಿ ಮತ್ತು ಎಸ್.ಸಿ.ಎಸ್.ಟಿ. ಅಸಂಘಟಿತ ಕಾರ್ಮಿಕರ ಅಭಿವೃದ್ಧಿ ಸಂಘ (ರಿ.), ಹೆಸರಿನ ಸಂಘಟನೆಯು ಕುಲಾಧಿಪತಿಗಳು, ಸರ್ಕಾರ, ಕುಲಪತಿಗಳು, ಪೊಲೀಸ್ ಇಲಾಖೆ ಹಾಗೂ ನ್ಯಾಯಾಲಯಕ್ಕೆ ವಿಶ್ವವಿದ್ಯಾಲಯದ ಇಬ್ಬರು ವಿಶ್ರಾಂತ ಕುಲಪತಿಗಳನ್ನೂ ಒಳಗೊಂಡಂತೆ ಸುಮಾರು ೩೫ ಜನ ಅಧ್ಯಾಪಕರು/ಸಿಬ್ಬಂದಿಗಳ ಮೇಲೆ ದೂರು ದಾಖಲಿಸಿರುತ್ತದೆ. ಕೆಲವು ಅಧ್ಯಾಪಕರು ಜಾಮೀನಿನ ಮೇಲೆ ಕರ್ತವ್ಯ ನಿರ್ವಹಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಇವರ ಮಾನಸಿಕ, ದೈಹಿಕ ಹಾಗೂ ಕೌಟುಂಬಿಕ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಉಂಟಾಗಿರುತ್ತದೆ. ಯಾವುದೋ ದುರುದ್ದೇಶ ಅಥವಾ ವೈಯಕ್ತಿಕ ದ್ವೇಷದಿಂದ ಅಧ್ಯಾಪಕರ/ಅಧಿಕಾರಿಗಳ ವಿರುದ್ದ ದೂರು ಸಲ್ಲಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.


ವಿಶ್ವವಿದ್ಯಾಲಯದ ಯಾವುದೇ ನೌಕರರ ಮೇಲೆ ಯಾವುದೇ ಸಂಘಟನೆಯು ಅಥವಾ ಸಾರ್ವಜನಿಕ ವಲಯದಿಂದ ದೂರುಗಳು ಬಂದಾಗ, ಆ ದೂರಿನ ಸತ್ಯಾಸತ್ಯತೆಯ ಬಗ್ಗೆ ವಿಶ್ವವಿದ್ಯಾಲಯಲ್ಲಿ ಲಭ್ಯವಿರುವ ಅಧಿಕೃತ ದಾಖಲೆಗಳನ್ನು ಪರಿಶೀಲಿಸಿ ನಿಯಮಾನುಸಾರ ಸೂಕ್ತನಿರ್ಣಯ ಕೈಗೊಂಡು, ಸದರಿ ದೂರನ್ನು ಇತ್ಯರ್ಥ ಮಾಡುವುದು ವಿಶ್ವವಿದ್ಯಾಲಯದ ಪ್ರಮುಖ ಕರ್ತವ್ಯವಾಗಿರುತ್ತದೆ. ವಿಶ್ವವಿದ್ಯಾಲಯದ ಅಧೀನದಲ್ಲಿ ಕರ್ತವ್ಯ ನಿರ್ವಹಿಸುವ ನೌಕರರನ್ನು ನಿಯಮಾನುಸಾರ ರಕ್ಷಿಸುವುದು ವಿಶ್ವವಿದ್ಯಾಲಯದ ಆಡಳಿತದ ಅತಿಮುಖ್ಯ ಕರ್ತವ್ಯವಾಗಿರುತ್ತದೆ. ಆದರೆ, ಪ್ರಸ್ತುತ ವಿಶ್ವವಿದ್ಯಾಲಯದ ಆಡಳಿತವು ತಮಗೂ ಈ ದೂರುಗಳಿಗೂ ಯಾವುದೇ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿದೆ. ವಿಶ್ವವಿದ್ಯಾಲಯದ ಆಡಳಿತವು ತನ್ನ ನೌಕರರನ್ನು ಕನಿಷ್ಠ ಸೌಜನ್ಯಕ್ಕಾದರೂ ವಿಚಾರಿಸುವ/ಸಂತೈಸುವ ವ್ಯವಧಾನವು ಇಲ್ಲದಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ, ಅದ್ಯಾಪಕರುಗಳು ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಸಂಪರ್ಕಿಸಿದಾಗಲೂ, ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸದೇ ನಿರ್ಲಕ್ಷ್ಯ ಧೋರಣೆಯನ್ನು ತೋರಿರುವುದು ಅತ್ಯಂತ ದುರ್ದೈವದ ಸಂಗತಿಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.


ವಿಶ್ವವಿದ್ಯಾಲಯವು ತನ್ನಲ್ಲಿ ಲಭ್ಯವಿರುವ ಅಧಿಕೃತ ಕಡತಗಳು/ದಾಖಲೆಗಳನ್ನು ಪರಿಶೀಲಿಸಿ, ರಾಜ್ಯಪಾಲರು, ಸರ್ಕಾರ, ಪೊಲೀಸ್ ಇಲಾಖೆಗೆ ನೈಜ ಮಾಹಿತಿಯನ್ನು ನೀಡಬೇಕು. ವಿಶ್ವವಿದ್ಯಾಲಯದ ಆಡಳಿತವು ಸದರಿ ಪ್ರಕರಣಗಳಿಗೆ ಸಂಬಂಧಿಸಿದಂತೆ, ಕಾನೂನು ತಜ್ಞರನ್ನು ನೇಮಿಸಿ ಅಧ್ಯಾಪಕರು/ಸಿಬ್ಬಂದಿಗಳ ವಿರುದ್ದ ದಾಖಲಾಗಿರುವ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕು. ವಿಶ್ವವಿದ್ಯಾಲಯದ ಅಧ್ಯಾಪಕರು/ಸಿಬ್ಬಂದಿಗಳ ವೈಯಕ್ತಿಕ, ಗೌಪ್ಯ ದಾಖಲೆ/ಮಾಹಿತಿಯನ್ನು ನಿಯಮಬಾಹಿರವಾಗಿ ಸಾರ್ವಜನಿಕರಿಗೆ ನೀಡುವುದನ್ನು ಸಂಘಟನೆ ಖಂಡಿಸುತ್ತದೆ. ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಮಾ.೨೩ ರೊಳಗೆ ಅಧ್ಯಾಪಕರು ಮತ್ತು ಸಿಬ್ಬಂದಿಗೆ ಪೂರಕವಾಗಿ ಕ್ರಮ ಕೈಗೊಳ್ಳಬೇಕೆಂದು ಸಂಘ ವಿವಿ ಆಡಳಿತವನ್ನು ಒತ್ತಾಯಿಸಿದೆ.

Ad Widget

Related posts

ಸಿಎಂಗೆ ಅಭಿನಂದನಾ ಸಮಾರಂಭ ಏನೆಲ್ಲಾ ವಿಶೇಷ ಗೊತ್ತಾ ?

Malenadu Mirror Desk

ಸಿಎಂ ನಿವಾಸಕ್ಕೆ ರಂಭಾಪುರಿ ಶ್ರೀಗಳ ಭೇಟಿ

Malenadu Mirror Desk

ಮಲೆನಾಡಿನ ನೋ ನೆಟ್‍ವರ್ಕ್, ನೋ ವೋಟಿಂಗ್ ಅಭಿಯಾನಕ್ಕೆ ಬೆಂಬಲ: ಬೇಳೂರು ಗೋಪಾಲಕೃಷ್ಣ

Malenadu Mirror Desk

2 comments

ramamurthy varthemane subraya March 17, 2021 at 5:42 am

ಕೆಲವು ಸಂಘಟನೆಗಳು ಸಂಘಟನೆಗಳೂ ಹೆಸರಲ್ಲಿ ಹಣ ದೋಚುವ ಕೆಲಸ ಮಾಡುತ್ತಿವೆ. ಇಂತಹ ಸಂಘಟನೆಗಳಲ್ಲಿ ಸಂಸ್ಥೆಯ ಒಳಗಿನ ದುಷ್ಟಶಕ್ತಿಗಳು ಕೂಡಾ ಕೈ ಜೋಡಿಸಿರುವ ಸಾಧ್ಯತೆ ಇದೆ. ಇಂತಹ ಸಂಘಟನೆಗಳು ವ್ಯವಸ್ಥೆಗೆ ಮಾರಕ. ಸಂಜೆಯಾದರೆ ಕುಡಿಯುವುದು ಮತ್ತೆ ನಾಳೆಗೆ ಹಣಕ್ಕಾಗಿ ಏನು ಮಾಡುವುದೆಂದು ಚರ್ಚಿಸುವುದು.ಇತ್ಯಾದಿ ಕಾರ್ಯಕ್ರಮಗಳೇ ಇವರ ಜೀವಾಳ. ಧಿಕ್ಕಾರ ಇಂತಹ ವ್ಯಕ್ತಿಗಳಿಗೆ

Reply
Malenadu Mirror Desk May 16, 2021 at 8:34 am

yes

Reply

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.