ಕೊರೊನಾ ರೋಗವನ್ನು ಹಿಮ್ಮೆಟ್ಟಿಸಲು ಅವಶ್ಯಕವಾಗಿರುವ ಕೋವಿಡ್ ಲಸಿಕೆಯನ್ನು ಎಲ್ಲ ಅರ್ಹರಿಗೂ ದೊರಕಿಸುವ ‘ಲಸಿಕಾ ಅಭಿಯಾನ’ ವನ್ನು ಈಗಾಗಲೇ ಕೈಗೊಳ್ಳಲಾಗಿದ್ದು, ರಾಜ್ಯವನ್ನು ಕೊರೊನಾಮುಕ್ತಗೊಳಿಸಲು ಎಲ್ಲರೂ ಒಗ್ಗೂಡಿ ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್.ಈಶ್ವರಪ್ಪ ಹೇಳಿದರು.
ಜಿಲ್ಲಾ ಪಂಚಾಯತ್ ವಿಡಿಯೋ ಕಾನ್ಫರೆನ್ಸ್ ಸಭಾಂಣದಲ್ಲಿ ಇಂದು ಸಚಿವರು ಧ್ವನಿ ಫೌಂಡೇಶನ್, ಬೆಂಗಳೂರು, ಜಿಲ್ಲಾ ಪಂಚಾಯತ್ ಹಾಗೂ ಚೈತನ್ಯ ರೂರಲ್ ಡೆವಲಪ್‍ಮೆಂಟ್ ಸೊಸೈಟಿಯ ಕೋವಿಡ್ ಜಿಲ್ಲಾ ನೋಡಲ್ ಏಜೆನ್ಸಿ ಇವರ ಸಹಯೋಗದಲ್ಲಿ ಕೋವಿಡ್ ಲಸಿಕೆ ಮಹತ್ವ ಮತ್ತು ಅದರ ಉಪಯೋಗ ಕುರಿತು ಎಲ್ಲರಿಗೂ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ತಯಾರಿಸಲಾಗಿರುವ ‘ಲಸಿಕೆ ಮೂಲಕ ಕೋವಿಡ್ 19 ನ್ನು ನಿಯಂತ್ರಿಸಲು ‘ಮಾರ್ಗದರ್ಶಿಕೆ’ ಯನ್ನು ಅನಾವರಣಗೊಳಿಸಿ ಮಾತನಾಡಿದರು.
ರಾಜ್ಯ ತುಂಬಾ ವ್ಯವಸ್ಥಿತವಾಗಿ ಎಲ್ಲರಿಗೂ ಲಸಿಕೆ ದೊರಕಿಸುವ ಅಭಿಯಾನವನ್ನು ಈಗಾಗಲೇ ಪ್ರಾರಂಭಿಸಿದೆ. ಜೂನ್ 21 ರಂದು ಸುಮಾರು 11 ಲಕ್ಷ ಜನರಿಗೆ ಒಂದೇ ದಿನ ಲಸಿಕೆ ಹಾಕುವ ಮೂಲಕ ದೊಡ್ಡ ಸಾಧನೆಯನ್ನೇ ಮಾಡಲಾಗಿದೆ. ಹೀಗೇ ಇಡೀ ರಾಜ್ಯದ ಜನತೆಗೆ ಲಸಿಕೆ ದೊರಕಬೇಕು ಹಾಗೂ ರಾಜ್ಯ ಕೊರೊನಾ ಮುಕ್ತವಾಗಬೇಕು ಎಂಬ ಸದುದ್ದೇಶದಿಂದ ಮಾರ್ಗದರ್ಶಿಕೆಯನ್ನು ಇಂದು ಲೋಕಾರ್ಪಣೆ ಮಾಡಿದ್ದೇನೆ. ಎಲ್ಲ ಜಿಲ್ಲೆಗಳಲ್ಲಿ ಈ ಮಾರ್ಗದರ್ಶಿಕೆಯನ್ನು ಗ್ರಾ.ಪಂ ಮೂಲಕ ಜನರಿಗೆ ತಲುಪಿಸಬೇಕು ಎಂದರು.
ಆರಂಭದಲ್ಲಿ ಲಸಿಕೆ ಬಗ್ಗೆ ಹಲವರಲ್ಲಿ ತಪ್ಪು ಕಲ್ಪನೆ ಇತ್ತು. ಈಗಲೂ ಕೆಲವರಲ್ಲಿ ಇದೆ. ಅದನ್ನು ಹೋಗಲಾಡಿಸುವ ಪ್ರಯತ್ನ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಮಾಡುತ್ತಿದೆ. ಜೊತೆಗೆ ಇತ್ತೀಚೆಗೆ ಲಸಿಕೆ ಬಗ್ಗೆ ಜಾಗೃತಿ ಕೂಡ ಹೆಚ್ಚಾಗಿದೆ. ಲಸಿಕೆ ಬೇಡಿಕೆ ಹೆಚ್ಚಿದೆ. ನಮ್ಮ ಪ್ರಧಾನಿಯವರು ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡುವ ಪಣ ತೊಟ್ಟಿದ್ದಾರೆ. ಲಸಿಕೆಯನ್ನೂ ಪೂರೈಸುತ್ತಿದ್ದಾರೆ.
ಕೊರೊನಾ ನಿಯಂತ್ರಣ ಕುರಿತು ಜನಜಾಗೃತಿ ಮತ್ತು ಎರಡನೇ ಅಲೆ ನಿಯಂತ್ರಣದಲ್ಲಿ ಕೇಂದ್ರ, ರಾಜ್ಯ ಸರ್ಕಾರ, ವಿವಿಧ ಇಲಾಖೆಗಳು ಗ್ರಾಮೀಣ ಭಾಗದಲ್ಲಿ ವಿಶೇಷವಾಗಿ ಗ್ರಾಮೀಣಾಭಿವೃದ್ದಿ ಇಲಾಖೆಯ ಸೇವೆಯನ್ನು ಮರೆಯುವಂತಿಲ್ಲ. ರಾಜ್ಯ, ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮೀಣ ಮಟ್ಟದ ಟಾಸ್ಕ್‍ಫೋರ್ಸ್ ಸಮಿತಿಗಳು ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಎನ್‍ಜಿಓಗಳು ಜನಜಾಗೃತಿಗೊಳಿಸುವಲ್ಲಿ ಮಾಡುತ್ತಿರುವ ಕೆಲಸ ಅತ್ಯುತ್ತಮವಾಗಿದೆ ಎಂದು ಶ್ಲಾಘಿಸಿದರು.
ಗ್ರಾಮ ಮಟ್ಟದಲ್ಲಿ ಲಸಿಕಾ ಅಭಿಯಾನ ಯಶಸ್ವಿಯಾಗಬೇಕು ಎಂಬ ಉದ್ದೇಶದಿಂದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಈ ಅಭಿಯಾನದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡಿದೆ. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಈ ಮಾರ್ಗದರ್ಶಿಯನ್ನು ಹೊರತಂದಿದ್ದು, ಇದರಲ್ಲಿ ರಾಜ್ಯ, ಜಿಲ್ಲೆ, ತಾಲ್ಲೂಕು ಹಾಗೂ ಗ್ರಾ.ಪಂ ಮಟ್ಟದ ಎಲ್ಲ ಅಧಿಕಾರಿಗಳು ಹಾಗೂ ಸ್ವಯಂ ಸೇವಕರ ಪಾತ್ರವನ್ನು ವಿವರಿಸಲಾಗಿದೆ.
ಈ ಮಾರ್ಗದರ್ಶಿಕೆಯಿಂದಾಗಿ ಜಿಲ್ಲಾಧಿಕಾರಿಯಿಂದ ಹಿಡಿದು ಗ್ರಾಮ ಪಂಚಾಯಿತಿ ಕಾರ್ಯದರ್ಶಿಯವರೆಗೆ ಎಲ್ಲರಿಗೂ ತಮ್ಮ ತಮ್ಮ ಜವಾಬ್ದಾರಿಗಳ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿ ಸಿಗುತ್ತದೆ. ಈ ಮಾರ್ಗದರ್ಶಿಕೆಯನ್ನು ಉಪಯೋಗಿಸಿಕೊಂಡು ಎಲ್ಲಾ ಮಟ್ಟದಲ್ಲಿಯೂ ಅಧಿಕಾರಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಇನ್ನೂ ಹೆಚ್ಚು ವ್ಯವಸ್ಥಿತವಾಗಿ ಕೆಲಸ ಮಾಡಿ ಲಸಿಕಾ ಅಭಿಯಾನವನ್ನು ಪೂರ್ಣಗೊಳಿಸಿ ಕೊರೊನಾದಿಂದ ರಾಜ್ಯ ಮುಕ್ತಿ ಪಡೆಯಲು ಸಹಾಯವಾಗಲಿದೆ ಎಂದು ಆಶಿಸುತ್ತೇನೆ ಎಂದರು.
ಈ ಮಾರ್ಗದರ್ಶಿ ತಯಾರಿಸಲು ಸಹಾಯ ಮಾಡಿದ ಧ್ವನಿ ಫೌಂಡೇಶನ್‍ಗೆ ಹಾಗೂ ಇವರೊಂದಿಗೆ ಕೈಜೋಡಿಸಿರುವ ಶಿವಮೊಗ್ಗ ಚೈತನ್ಯ ರೂರಲ್ ಡೆವಲಪ್‍ಮೆಂ ಸೊಸೈಟಿಗೆ ಅಭಿನಂದಿಸುತ್ತೇನೆ. ಇವು ಈಗಾಗಲೇ ಜಿಲ್ಲೆಯ ಎಲ್ಲಾ ಜೆಸಿಐ ಸಂಸ್ಥೆ ಹಾಗೂ ಇನ್ನಿತರೆ ಸಂಘ ಸಂಸ್ಥೆಗಳನ್ನು, ಎಲ್ಲಾ ಆಶಾ ಕಾರ್ಯಕರ್ತೆಯರು, ಪಿಡಿಓಗಳನ್ನು ಮಾರ್ಗದರ್ಶಿಯ ಪ್ರಕಾರ ಒಗ್ಗೂಡಿಸಿ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಲು ಪೂರ್ವಸಿದ್ದತೆ ಮಾಡಿಕೊಂಡು ಕೆಲಸ ಮಾಡುತ್ತಿರುವುದು ಸಂತೋಷದ ವಿಚಾರ. ನಾವೆಲ್ಲರೂ ಒಗ್ಗಟ್ಟಾಗಿ ಈ ಅಭಿಯಾನವನ್ನು ಯಶಸ್ವಿಗೊಳಿಸಿ ಕೊರೊನಾ ಮುಕ್ತ ರಾಜ್ಯವಾಗಿಸೋಣ ಎಂದು ಕರೆ ನೀಡಿದರು.
ಉಚಿತ ಲಿಸಿಕೆ ಮತ್ತು ಪಡಿತರ : ನಮ್ಮ ಪ್ರಧಾನಿಯವರು ದೇಶದ ಎಲ್ಲ ಅರ್ಹರಿಗೆ ಉಚಿತ ಲಸಿಕೆ ನೀಡುವ ಪಣ ತೊಟ್ಟಿದ್ದಾರೆ. ಹಾಗೂ ಕೋವಿಡ್ ಹಿನ್ನೆಲೆಯಲ್ಲಿ ಸುಮಾರು 80 ಕೋಟಿ ಜನರಿಗೆ ನವೆಂಬರ್ ಮಾಹೆವರೆಗೆ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಉಚಿತ ಪಡಿತರ ವಿತರಣೆ ಮಾಡುವ ಘೋಷಣೆ ಮಾಡಿದ್ದು, ಸರ್ಕಾರ ನಮ್ಮ ಜೊತೆ ಇದೆ ಅನ್ನುವ ಭಾವ ಜನರಲ್ಲಿ ಮೂಡಿದೆ.
2ನೇ ಅಲೆ ಯಶಸ್ವಿಯಾಗಿ ಎದುರಿಸಿದ್ದೇವೆ. ವಿಶ್ವದಲ್ಲೇ ನಮ್ಮ ದೇಶ ಎರಡನೇ ಅಲೆಯನ್ನು ಪರಿಣಾಮಕಾರಿ ಎದುರಿಸಲು ಪಣತೊಟ್ಟು ಯಶಸ್ವಿಯಾಗಿದೆ. ಅದೇ ರೀತಿಯಲ್ಲಿ ನಮ್ಮ ರಾಜ್ಯ ಕೂಡ ಎಲ್ಲರ ಸಹಕಾರದೊಂದಿಗೆ ಎರಡನೇ ಅಲೆಯನ್ನು ಯಶಸ್ವಿಯಾಗಿ ಎದುರಿಸಿದೆ ಎಂದರು.
ಕಾರ್ಯಕ್ರಮ ಆರಂಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸ್ವಾಗತಿಸಿದರು. ಧ್ವನಿ ಫೌಂಡೇಶನ್ ಕಾರ್ಯನಿರ್ವಾಹಕ ನಿರ್ದೇಶಕ ಗೋಪಿನಾಥ್ ಮಾರ್ಗದರ್ಶಿಕೆ ಕುರಿತಾದ ಪರಿಚಯಾತ್ಮಕ ಅಂಶಗಳ ಬಗ್ಗೆ ವಿವರಣೆ ನೀಡಿದರು. ಆರ್‍ಡಿಪಿಆರ್ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಕರ್ನಾಟಕ ಗ್ರಾಮ ಪಂಚಾಯಿತಿಗಳಲ್ಲಿ ಲಸಿಕೆ ಹಕುವ ಕುರಿತು ಮಾಹಿತಿ ನೀಡಿದರು.
ಇದೇ ವೇಳೆ ಕೊರೊನಾ ಲಸಿಕೆ ಕುರಿತು ಜಾಗೃತಿ ಮೂಡಿಸುವ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಜಿಲ್ಲಾ ಪಂಚಾಯತ್ ಸಿಇಓ ಎಂ.ಎಲ್.ವೈಶಾಲಿ, ಡಿಎಸ್ ಜಯಲಕ್ಷ್ಮಿ, ಡಿಹೆಚ್‍ಓ ಡಾ. ರಾಜೇಶ್ ಸುರಗಿಹಳ್ಳಿ, ಚೈತನ್ಯ ರೂರಲ್ ಡೆವಲಪ್‍ಮೆಂಟ್ ಸೊಸೈಟಿಯ ಸಿಇಓ ಬದ್ರೀಶ.ಬಿ.ಟಿ, ಇತರೆ ಅಧಿಕಾರಿಗಳು ಹಾಜರಿದ್ದರು.