ಆಧುನಿಕತೆಯ ಭರಾಟೆಯಲ್ಲಿ ಮಲೆನಾಡಿನ ಮೂಲ ಸಂಸ್ಕೃತಿಯಲ್ಲಿ ಪಲ್ಲಟಗಳಾಗುತ್ತಿದ್ದು, ನಮ್ಮ ಮಕ್ಕಳಿಗೆ ಸಂಬಂಧಗಳ ಮೌಲ್ಯದ ಬಗ್ಗೆ ಅರಿವು ಮೂಡಿಸಬೇಕು. ಕೃಷಿ ಕ್ಷೇತ್ರದಿಂದ ವಿಮುಖರಾಗುತ್ತಿರುವ ಯುವಜನರನ್ನು ಹಳ್ಳಿಗಳತ್ತ ಕರೆತರುವ ಅಗತ್ಯವಿದೆ ಎಂದು ಸಹ್ಯಾದ್ರಿ ಕಲಾ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಮೋಹನ್ ಚಂದ್ರಗುತ್ತಿ ಅಭಿಪ್ರಾಯಪಟ್ಟರು.
ಹೊಸನಗರ ತಾಲೂಕು ಹಾರೋಹಿತ್ತಲು ಗ್ರಾಮದಲ್ಲಿ ಮಳೀಮಠ ನಾರಾಯಣ ನಾಯ್ಕ ಅವರಿಗೆ ನಮನ ಸಲ್ಲಿಸುವ “ಸಕಾಲಿಕ ಶ್ರದ್ಧಾಂಜಲಿ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಳೀಮಠ್ ಕುಟುಂಬ ತಂದೆಯ ವೈಕುಂಠ ಸಮಾರಾಧನೆ ಕಾರ್ಯಕ್ರಮವನ್ನು ವಿಭಿನ್ನ ರೀತಿಯಲ್ಲಿ ಆಚರಿಸುತ್ತಿರುವುದು ವೈಚಾರಿಕ ನೆಲೆಯಲ್ಲಿ ಉತ್ತಮ ಬೆಳವಣಿಗೆ. ತಂದೆಗೆ ಶ್ರದ್ದಾಂಜಲಿ ಸಲ್ಲಿಸುವ ಸಂದರ್ಭದಲ್ಲಿ ಮಲೆನಾಡಿನ ಬಿಕ್ಕಟ್ಟುಗಳ ಬಗ್ಗೆ ಚಿಂತನ ಮಂಥನ ನಡೆಸುತ್ತಿರುವುದು ಒಂದು ಮಾದರಿ ಪ್ರಯೋಗ ಎಂದು ಹೇಳಿದರು.
ಉಪನ್ಯಾಸಕ ಡಾ.ನಾಗೇಶ್ ಬಿದರಗೋಡು ಮಾತನಾಡಿ, ಸಾವಿನ ನಂತರ ಯಾರು ಎಲ್ಲಿಗೆ ಹೋಗುತ್ತಾರೆ ಎಂಬ ವರದಿಯನ್ನು ಯಾರೂ ತಂದವರಿಲ್ಲ. ಆದರೆ ಇರುವ ಅವಧಿಯಲ್ಲಿ ನಮ್ಮ ಬದುಕನ್ನು ಸಾರ್ಥಕ್ಯಗೊಳಿಸಬೇಕು. ಬಂಧುತ್ವ ಎಂಬುದು ಒಂದು ಜಾತಿ, ಧರ್ಮ ಸೀಮೆ ಮೀರಿದ್ದು, ಜೀವನ ಪ್ರೀತಿಯಿಂದ ಸಮಾಜ ಕಟ್ಟುವ ಕೆಲಸ ಆಗಬೇಕು. ಅದಕ್ಕೆ ಇಂತಹ ಕಾರ್ಯಕ್ರಮಗಳು ಸಕಾಲಿಕ ಎಂದರು.
ಸಾಮಾಜಿಕ ಕಾರ್ಯಕರ್ತೆ ಹಾಗೂ ವ್ಯಕ್ತಿತ್ವ ವಿಕಸನ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಪೋಷಿಣಿ ಅವರು ಮಾತನಾಡಿ, ಮಲೆನಾಡಿನ ಮಕ್ಕಳು ದೊಡ್ಡ ನಗರಗಳಲ್ಲಿ ಕಡಿಮೆ ವೇತನಕ್ಕೆ ದುಡಿಯುವುದು ಶೋಚನೀಯವಾಗಿದೆ. ಮನೆಯ ಮಕ್ಕಳಿಗೆ ಜೀವನ ರೂಪಿಸಿಕೊಳ್ಳುವ ಶಿಕ್ಷಣವನ್ನು ನೀಡಬೇಕು. ಪೋಷಕರು ಮಕ್ಕಳೊಂದಿಗೆ ಸ್ನೇಹಿತರಂತೆ ಕುಳಿತು ಚರ್ಚಿಸಿ ಅವರ ಶಿಕ್ಷಣದ ಬಗ್ಗೆ ತಿಳಿದುಕೊಳ್ಳಬೇಕು. ಮಹಿಳೆಯರು ಆರೋಗ್ಯವಂತ ಮಕ್ಕಳನ್ನು ಹೆರುವುದು ಮಾತ್ರವಲ್ಲದೆ, ಅವರಲ್ಲಿ ಮಾನಸಿಕ ದೃಢತೆ ಬೆಳೆಸುವ ಸ್ಥೈರ್ಯವನ್ನು ನೀಡಬೇಕು. ನಮ್ಮ ಮಹಿಳೆಯರು ಹೊಲ ಗದ್ದೆಗಳಲ್ಲಿ ಕಳೆದು ಹೋಗದೆ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಬೇಕೆಂದು ಹೇಳಿದರು.
ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಶರಾವತಿ ಮುಳುಗಡೆ ಸಂತ್ರಸ್ಥ ಕುಟುಂಬಗಳು ಇಂದು ತಾವೂ ಉಳುಮೆಮಾಡುತ್ತಿರುವ ಭೂಮಿ ತಮ್ಮದಲ್ಲ ಎಂಬಂತಹ ವಿಶಿಷ್ಟ ಸಮಸ್ಯೆಯ ಸುಳಿಗೆ ಸಿಕ್ಕಿದ್ದಾರೆ. ಕಾನೂನಿನ ಸುಳಿಯಲ್ಲಿ ಸಿಕ್ಕಿರುವ ಈ ಜನರ ಸಮಸ್ಯೆಗೆ ಪರಿಹಾರವನ್ನು ಎಲ್ಲರೂ ಸೇರಿ ಕಂಡುಕೊಳ್ಳಬೇಕು ಈ ದಿಸೆಯಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು
ಮಾಜಿ ಶಾಸಕ ಡಾ.ಜಿ.ಡಿ.ನಾರಾಯಣಪ್ಪ ಮಾತನಾಡಿ, ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಆದರೆ ಹುಟ್ಟು ಸಾವುಗಳ ನಡುವೆ ನಾವು ಹೇಗೆ ಬದುಕಿದೆವು ಅನ್ನುವುದು ಮುಖ್ಯವಾಗುತ್ತದೆ. ಕೊರೊನ ಬಂದ ಮೇಲೆ ಮನುಷ್ಯ ಸಂಬಂಧಗಳ ಬೆಲೆ ಏನು ಎಂಬುದು ಜನರಿಗೆ ಗೊತ್ತಾಗುತ್ತಿದೆ. ಪಟ್ಟಣದ ಆಕರ್ಷಣೆಗೆ ಹೋದ ಯುವಜನರು ಈಗ ತಮ್ಮ ಊರು,ಕೇರಿಗಳತ್ತ ಮುಖಮಾಡುತ್ತಿದ್ದಾರೆ. ಮಳೀಮಠ ಕುಟುಂಬದವರು ನಮ್ಮೊಳಗಿನ ಸಮಸ್ಕೆಗಳ ಬಗ್ಗೆ ಬೆಳಕು ಚೆಲ್ಲುವ ಈ ರೀತಿಯ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ ಈ ಪರಂಪರೆ ಮುಂದುವರಿಯಬೇಕು ಎಂದು ಹೇಳಿದರು.
ಪತ್ರಕರ್ತ ನಾಗರಾಜ್ ನೇರಿಗೆ, ಮಲೆನಾಡಿನ ಭೂಮಿಯ ಸಮಸ್ಯೆ ಮತ್ತು ಸವಾಲುಗಳ ಕುರಿತು ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಅಣ್ಣಪ್ಪಮಳೀಮಠ್, ಹಳ್ಳಿಗಾಡಿನ ಮಕ್ಕಳು
ಇಂದು ಶಿಕ್ಷಣಕ್ಕಿಂತ ಶಿಕ್ಷಣೇತರ ಚಟುವಟಿಕೆಗಳ ಬಗ್ಗೆ ಹೆಚ್ಚು ಆಸಕ್ತರಾಗಿದ್ದಾರೆ. ಹಳ್ಳಿಗಳಲ್ಲಿ ಮದ್ಯಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಒಳ್ಳೆಯ ಮನಸುಗಳನ್ನು ಕಟ್ಟುವ ಕಾಯಕ ಆಗಬೇಕಿದೆ. ಈ ದಿಸೆಯಲ್ಲಿ ನಮ್ಮ ತಂದೆಯವರಿಗೆ ಶ್ರದ್ಧಾಂಜಲಿ ಸಲ್ಲಿಸುವ ನೆಪದಲ್ಲಿ ಈ ಕಾರ್ಯಕ್ರಮ ಆಯೋಸಿದ್ದೇವೆ. ಇಡೀ ನಮ್ಮ ಕುಟುಂಬ ಇದಕ್ಕೆ ಸಹಕಾರ ನೀಡಿದೆ ಎಂದು ಹೇಳಿದರು.
ಡಾ.ರಾಜೇಂದ್ರ ಟಿ.ತಗಡ್ಲಿ ಪ್ರಾರ್ಥಿಸಿದರು. ಡಾ.ಎಸ್.ವಿ.ಪುರುಷೋತ್ತಮ್ ಕಾರ್ಯಕ್ರಮ ನಿರೂಪಿಸಿದರು. ಪ್ರಮುಖರಾದ ಸುರೇಶ್ ಬಾಳೇಗುಂಡಿ, ಸುರೇಶ್ ಸ್ವಾಮಿರಾವ್, ಜಿ.ಡಿ.ಮಂಜುನಾಥ್, ವಕೀಲರಾದ ಕೆ.ಎಲ್ ಉಮೇಶ್, ಕೆರೆಹಳ್ಳಿ ರಾಮಪ್ಪ ಸೇರಿದಂತೆ ಅನೇಕ ಮುಖಂಡರು ಈ ಸಂದರ್ಭ ಹಾಜರಿದ್ದರು.
ಪೋಷಕರು ಮಕ್ಕಳೊಂದಿಗೆ ಸ್ನೇಹಿತರಂತೆ ಕುಳಿತು ಚರ್ಚಿಸಿ ಅವರ ಶಿಕ್ಷಣದ ಬಗ್ಗೆ ತಿಳಿದುಕೊಳ್ಳಬೇಕು. ಮಹಿಳೆಯರು ಆರೋಗ್ಯವಂತ ಮಕ್ಕಳನ್ನು ಹೆರುವುದು ಮಾತ್ರವಲ್ಲದೆ, ಅವರಲ್ಲಿ ಮಾನಸಿಕ ದೃಢತೆ ಬೆಳೆಸುವ ಸ್ಥೈರ್ಯವನ್ನು ನೀಡಬೇಕು.
ಪೋಷಿಣಿ , ಸಾಮಾಜಿಕ ಕಾರ್ಯಕರ್ತೆ