ಮಲೆನಾಡಿನಾದ್ಯಂತ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಈ ವರ್ಷದ ಎಲ್ಲ ಹಬ್ಬಗಳಿಗೂ ಕೊರೊನ ಕರಾಳ ಛಾಯೆ ಆವರಿಸಿದ್ದು, ಕೊರೊನ ಇಳಿಮುಖವಾಗುತ್ತಿದ್ದಂತೆ ಜನರು ಸಂಕ್ರಮಣ ಹಬ್ಬದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು, ಮಲೆನಾಡಿನ ಪ್ರಸಿದ್ಧ ಧಾರ್ಮಿಕ ಶ್ರದ್ಧಾಕೇಂದ್ರ ಸಿಗಂದೂರಿನಲ್ಲಿ ವಿಶೇಷ ಪೂಜೆ ಆರಂಭವಾಯಿತು. ಸಿಗಂದೂರಿನಲ್ಲಿ ಸಂಕ್ರಮಣ ಸಂದರ್ಭ ಪ್ರತಿ ವರ್ಷ ಅದ್ಧೂರಿ ಜಾತ್ರೆ ನಡೆಯುತಿತ್ತು. ಆದರೆ ಈ ಬಾರಿ ಸರಳವಾಗಿ ಪೂಜೆ ನೆರವೇರಿಸಲಾಯಿತು.
ಮುಂಜಾನೆ ಸಿಗಂದೂರು ಚೌಡೇಶ್ವರಿ ತಾಯಿಯ ಮೂಲ ನೆಲೆ ಸೀಗೆಕಣಿವೆಯಲ್ಲಿ ಪ್ರಥಮ ಪೂಜೆ ನೆರವೇರಿಸಲಾಯಿತು. ಧರ್ಮದಶೀ ಡಾ.ರಾಮಪ್ಪ ದಂಪತಿ ಚೌಡಮ್ಮ ದೇವಿಯ ಪೂಜೆ ಸಂದರ್ಭ ಉಪಸ್ಥಿತರಿದ್ದರು. ನಾಡಿಗೆ ಬಂದಿರುವ ಎಲ್ಲ ಜಾಡ್ಯಗಳು ದೂರವಾಗಲಿ ಮತ್ತು ನಾಡಿನ ಜನತೆಗೆ ಸನ್ಮಂಗಳ ಕರುಣಿಸು ಎಂದು ದೇವಿಯಲ್ಲಿ ಪ್ರಾರ್ಥಿಸಿ ಪೂಜೆ ಸಲ್ಲಿಸಲಾಯಿತು. ಜ್ಯೋತಿಯನ್ನ ರಥದ ಮೆರವಣಿಗೆ ಮೂಲಕ ಸಿಗಂದೂರಿಗೆ ತಂದು ಅಲ್ಲಿ ವಿವಿಧ ಪೂಜಾ ವಿದಿವಿಧಾನಗಳನ್ನು ನೆರವೇರಿಸಲಾಯಿತು. ಶುಕ್ರವಾರವೂ ದೇವಿ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಕೋವಿಡ್ ನಿಯಮಾವಳಿ ಪ್ರಕಾರ ಹೆಚ್ಚಿನ ಸಂಖ್ಯೆಯ ಭಕ್ತರಿಗೆ ನಿರ್ಬಂಧ ಇತ್ತಾದರೂ, ವಾರ್ಷಿಕ ದರ್ಶನಕ್ಕೆ ಭಕ್ತಸಾಗರ ಹರಿದುಬಂದಿತ್ತು. ಭಕ್ತರಿಗೆ ಅನ್ನ ಪ್ರಸಾದ, ದರ್ಶನ ಇತ್ಯಾದಿ ವ್ಯವಸ್ಥೆಗಳನ್ನು ಕರೂರು ಹೋಬಳಿ ಭಕ್ತ ಸಮೂಹ ಹಾಗೂ ಆಡಳಿತ ಮಂಡಳಿವತಿಯಿಂದ ಮಾಡಲಾಗಿತ್ತು. ಸ್ಥಳೀಯ ಕರೂರು ಸೀಮೆ ಭಕ್ತ ಸಮೂಹ ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಿತವಾಗಿ ಪಾಲ್ಗೊಂಡಿತ್ತ
ತಮಿಳು ಸಂಘದಿಂದ ಪೊಂಗಲ್:
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ತಮಿಳು ಸಂಘದ ಮುಖಂಡರೊಂದಿಗೆ ಸಂಕ್ರಮಣ ಹಾಗೂ ಪೊಂಗಲ್ ಹಬ್ಬವನ್ನು ಆಚರಿಸಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಇ.ಕಾಂತೇಶ್ ಮತ್ತಿತರರ ಮುಖಂಡರು ಹಾಜರಿದ್ದರು. ಶಿವಮೊಗ್ಗದ ಸ್ಟೈಲ್ ಡ್ಯಾನ್ಸ್ ಗ್ರೂಪ್ ಶಿವಮೊಗ್ಗದ ಮಹಿಳಾ ಪೊಲಿಸ್ ಠಾಣೆಯ ಸಿಬ್ಬಂದಿಯೊಂದಿಗೆ ಸಂಕ್ರಾಂತಿ ಆಚರಿಸಿದರು.
ನಗರದಲ್ಲಿ ಸಂಜೆ ಹೊತ್ತು ಮಕ್ಕಳು ಮತ್ತು ಮಹಿಳೆಯರು ನೆರೆಹೊರೆಯವರೊಂದಿಗೆ ಎಳ್ಳು-ಬೆಲ್ಲ ಕೊಟ್ಟು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿರುವ ದೃಶ್ಯ ಎಲ್ಲೆಡೆ ಕಂಡು ಬಂದಿತು.
ಗ್ರಾಮೀಣ ಸಂಕ್ರಮಣ:
ಗ್ರಾಮೀಣ ಜನರ ಪಾಲಿಗೆ ಸುಗ್ಗಿ ಸಂಭ್ರಮವೇ ಆಗಿರುವ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಬಯಲು ಸೀಮೆ ಭಾಗದ ಕೆಲವು ಪ್ರದೇಶಗಳಲ್ಲಿ ಹೋರಿಗಳಿಗೆ ಅಲಂಕಾರ ಮಾಡಿ ಕಿಚ್ಚು ಹಾಯಿಸುವ ಮೂಲಕ ಸುಗ್ಗಿ ಹಬ್ಬ ಆಚರಿಸಲಾಯಿತು. ಮಲೆನಾಡಿನಲ್ಲಿ ಎಲ್ಲ ಬೆಳೆ ಕಣ ಸೇರಿರುವುದರಿಂದ ಕಣದಲ್ಲಿ ರಾಶಿ ಪೂಜೆ ಮಾಡಲಾಯಿತು. ಊರಿನ ದೇವಾಲಯಕ್ಕೆ ಹೋಗಿ ದೇವರ ದರ್ಶನ ಮಾಡುತ್ತಿರುವ ದೃಶ್ಯ ಮಾಮೂಲಿಯಾಗಿತ್ತು.