Malenadu Mitra
ರಾಜ್ಯ ಶಿವಮೊಗ್ಗ

ಕುಡಿಯುವ ನೀರು ಸಮಸ್ಯೆ ಪರಿಹರಿಸಲು ಸಭೆ ಕರೆಯಿರಿ ಮಹಾನಗರ ಪಾಲಿಕೆ ಪ್ರತಿಪಕ್ಷ ಸದಸ್ಯರಿಂದ ಡಿಸಿಗೆ ಮನವಿ

ಶಿವಮೊಗ್ಗನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದ್ದು, ಇದರ ಪರಿಹಾರಕ್ಕೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಕರೆಯುವಂತೆ ಆಗ್ರಹಿಸಿ ಮಹಾನಗರಪಾಲಿಕೆ ವಿಪಕ್ಷದ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗ ನಗರದ 35 ವಾರ್ಡ್ ಗಳ ವ್ಯಾಪ್ತಿಯಲ್ಲಿ ಬರುವ ಹೊಸಮನೆ, ವಿದ್ಯಾನಗರ, ಚಿಕ್ಕಲ್, ಮಲವಗೊಪ್ಪ, ಸವಾಯಿ ಪಾಳ್ಯ, ಬಸವನಗುಡಿ, ಗುರುಪುರ, ಟ್ಯಾಂಕ್ ಮೊಹಲ್ಲಾ, ಟಿಪ್ಪು ನಗರ, ಶಾಂತಮ್ಮ ಲೇಔಟ್ ಸೇರಿದಂತೆ ಬಹುತೇಕ ಬಡಾವಣೆಗಳಲ್ಲಿ ಮೆಸ್ಕಾಂ ಹಾಗೂ ನಗರದ ನೀರು ಸರಬರಾಜು ಮಂಡಳಿ ಮತ್ತು ಪಾಲಿಕೆ ಅಧಿಕಾರಿಗಳ ಸಮನ್ವಯತೆ ಕೊರತೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಇದರಿಂದ ನಾಗರಿಕರು ತೀವ್ರ ತೊಂದರೆಗೀಡಾಗಿದ್ದಾರೆ ಎಂದು ದೂರಿದರು.
ನೀರಿನ ತೊಂದರೆ ಬಗ್ಗೆ ಮಹಾನಗರ ಪಾಲಿಕೆ ಹಾಗೂ ನಗರ ನೀರು ಸರಬರಾಜು ಮಂಡಳಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಸ್ತುತ ಬೇಸಿಗೆ ಅವಧಿಯಲ್ಲಿ ತುಂಗಾ ನದಿಯಲ್ಲಿ ನೀರಿನ ಹರಿಯುವಿಕೆ ಕೂಡ ಕಡಿಮೆಯಾಗಿದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಮಂಡಳಿ ಪಂಪ್ ಹೌಸ್ ಬಳಿ ತುಂಗಾ ನದಿಗೆ ಮರಳಿನ ಚೀಲದ ತಾತ್ಕಾಲಿಕ ಗೋಡೆ ನಿರ್ಮಿಸಿ ನದಿಯ ಮಧ್ಯಭಾಗದಿಂದ 50 ಹೆಚ್.ಪಿ. ಸಾಮರ್ಥ್ಯದ 2 ಪಂಪ್ ಸೆಟ್ ಅಳವಡಿಸಿ ನೀರು ಸರಬರಾಜು ವ್ಯವಸ್ಥೆ ಮಾಡುವುದು ವಿಳಂಬವಾಗಿದೆ. ಇದರಿಂದ ನಗರದ ಬಹುತೇಕ ಕಡೆಗಳಲ್ಲಿ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಗಳಿಗೆ ನೀರು ಸರಬರಾಜು ಆಗುತ್ತಿಲ್ಲ ಎಂದರು.
ನಗರದ ೩೫ ವಾರ್ಡ್ ಗಳಲ್ಲೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಅಗತ್ಯ ನೀರು ಸರಬರಾಜು ಮಾಡುವ ಟ್ಯಾಂಕರ್‌ಗಳು ಸಹ ಇಲ್ಲ. ನಾಗರಿಕರು ಕುಡಿಯುವ ನೀರಿಗಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮೆಸ್ಕಾನಿಂದ ಗಾಜನೂರು ಮುಖ್ಯ ಪಂಪ್ ಹೌಸ್ ಹಾಗೂ ಮಂಡ್ಲಿ ಪಂಪ್ ಹೌಸ್ ಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಯಾವುದೇ ಅಡಚಣೆ ಇಲ್ಲದೇ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ವಿಸ್ತೀರ್ಣಗೊಂಡಿರುವ ಕಾರಣ ಮತ್ತು ವಿಳಂಬವಾಗಿರುವ ನಿರಂತರ ಕುಡಿಯುವ ನೀರಿನ ಯೋಜನೆ ಹೊರವಲಯದ ಪ್ರದೇಶಗಳಿಗೆ ನಿರಂತರ ಒತ್ತಡಯುಕ್ತ ಹೊಸ ಕುಡಿಯುವ ನೀರಿನ ಕಾಮಗಾರಿ ಯೋಜನೆ ಸಮರ್ಪಕ ಅನುಷ್ಠಾನಕ್ಕಾಗಿ ಹಾಗೂ ಚಾಲನೆ ಮತ್ತು ನಿರ್ವಹಣೆಗಾಗಿ ಪ್ರತ್ಯೇಕ ಉಪ ವಿಭಾಗಗಳನ್ನು ಪ್ರಾರಂಭಿಸಿ ಕುಡಿಯುವ ನೀರಿನ ಸಮರ್ಪಕ ಸರಬರಾಜು ಮಾಡುವಂತೆ ಪಾಲಿಕೆ ನಿರ್ಣಯ ಕೈಗೊಂಡರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಮನವಿಯಲ್ಲಿ ದೂರಿದ್ದಾರೆ.
ಅಲ್ಲದೇ, ನಗರದಲ್ಲಿ ಕೆಲವೇ ದಿನಗಳಲ್ಲಿ ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವ ಇರುವ ಕಾರಣ ಹಾಗೂ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮರ್ಪಕ ಸರಬರಾಜು ಮಾಡಲು ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಲುವಾಗಿ ಕೂಡಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕರ್ನಾಟಕ ಕುಡಿಯುವ ನೀರು ಸರಬರಾಜು ಮಂಡಳಿ, ಮೆಸ್ಕಾಂ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳ ಸಭೆ ಕರೆದು ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು.
ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಬಿ.ಎ. ರಮೇಶ್ ಹೆಗ್ಡೆ, ಆರ್.ಸಿ. ನಾಯ್ಕ್, ಹೆಚ್.ಸಿ. ಯೋಗೇಶ್, ಮೆಹಖ್ ಷರೀಫ್, ಶಾಮೀರ್ ಖಾನ್, ರೇಖಾ ರಂಗನಾಥ್ ಮೊದಲಾದವರಿದ್ದರು.

Ad Widget

Related posts

ಸಕ್ರೆಬೈಲ್ ಸಮೀಪ ಅಪಘಾತ: ಸಾವು

Malenadu Mirror Desk

ಕರವೇ ಪುನರ್ರಚನೆ :ಪ್ರವೀಣ ಶೆಟ್ಟಿ

Malenadu Mirror Desk

ಹಿಜಾಬ್ ಪ್ರತಿಭಟನೆ ಯಥಾಸ್ಥಿತಿ , ಬೇಟಿ ಬಚಾವೊ ,ಬೇಟಿ ಪಡಾವೊ ಅಂತಿರಿ ಕಾಲೇಜಿಗೆ ಬಿಡುತ್ತಿಲ್ಲ: ವಿದ್ಯಾರ್ಥಿನಿಯರು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.